ಮರೆಯಬೇಕೆನ್ನಿಸಿದರೆ ಮತ್ತಷ್ಟು ನೆನಪಾಗುತ್ತಿ!

[adning id="4492"]

ಗಿಜಿಗಿಜಿ ಜನ, ಗಜಿಬಿಜಿಯ ಬದುಕು, ಹೊಟ್ಟೆ ತುಂಬಿದವರ ದೌಲತ್ತು, ಹಸಿದವರ ದೈನ್ಯದ ಲೋಕದಲ್ಲಿ ಪ್ರೀತಿಯನ್ನು ಮಾತ್ರ ಅರಸಿ ಅಲೆಯುವುದರಲ್ಲಿಯೂ ಒಂದು ಸುಖವಿದೆ. ಇದೊಂಥರಾ ವಿಚಿತ್ರ ಸನ್ನಿವೇಶ. ಬಹುಶಃ ಪಾಪಿ ಭಗವಂತ ಇಂಥಾದ್ದೊಂದು ಇಕ್ಕಟ್ಟಿನ ಸ್ಥಿತಿಯನ್ನ ನನಗೆಂದೇ ಸೃಷ್ಟಿಸಿ ಭೂಮಿಗೆಸೆದಿದ್ದಾನೋ ಏನೋ. ನೀನಿರೋ ಜಾಗ ನಿಖರವಾಗಿ ಗೊತ್ತು, ನೀನು ತಿರುಗಾಡೋ ಜಾಗಗಳೆಲ್ಲವೂ ಹೆಚ್ಚೂ ಕಡಿಮೆ ನಂಗೆ ಪರಿಚಿತ. ಆದರೆ ಇಲ್ಲೆಲ್ಲೋ ನೀನಿರುತ್ತಿಯೆಂದು ಭ್ರಮಿಸುತ್ತಾ, ಆ ಸಂತಸವನ್ನೇ ಸುಖಿಸುತ್ತಾ ಅಲೆದಾಡುತ್ತೇನೆ. ನನ್ನೊಳಗಿನ ಸಕಲ ತಲ್ಲಣಗಳೂ ಈ ಹಾದಿಯ ತುಂಬಾ ಸವೆದು ಹೋದಂತೆ ಸುಳ್ಳೇ ನಿರಾಳವಾಗುತ್ತೇನೆ.


ಈ ಹಾಳು ಪ್ರೀತಿಗೆ ಆಸೆಯಷ್ಟೇ ಗೊತ್ತು. ಅದು ಯಾವ ಮುಹೂರ್ತದಲ್ಲಿ ಯಾರತ್ತ ನೆಡುತ್ತದೆಯೋ ಬಲ್ಲವರ‍್ಯಾರು. ಆದರಿದಕ್ಕೆ ಈ ಜಾತಿ, ಆಸ್ತಿ, ಅಂತಸ್ತುಗಳ ಗಂಧಗಾಳಿಯೂ ಇರೋದಿಲ್ಲ. ಹಾಗಿಲ್ಲದೇ ಹೋಗಿದ್ದರೆ ನೀನ್ಯಾಕೆ ಹಾಗೆ ಹಠಾತ್ತನೆ ನನ್ನೆದುರು ಕಾಣಿಸಿಕೊಳ್ಳುತ್ತಿದ್ದೆ, ಆ ಕ್ಷಣದಲ್ಲಿಯೇ ನೀನೇ ನನ್ನವಳು ಅಂತ ಯಾಕಾದರೂ ಅನ್ನಿಸುತ್ತಿತ್ತು? ನಿನ್ನ ಸೆಳೆತದ ಅಮಲಲ್ಲಿ ವಾಸ್ತವಕ್ಕೆ ಕುರುಡಾದೆ. ಎದೆಯೊಳಗೆ ಪ್ರೀತಿಯ ಅಗ್ಗಿಷ್ಠಿಕೆ ಧಗಧಗಿಸಲಾರಂಭಿಸಿತ್ತು. ಆಲೋಚಿಸೋ ಶಕ್ತಿ, ವಾಸ್ತವವನ್ನ ಒರೆಗೆ ಹಚ್ಚೋ ಕಸುವೆಲ್ಲಾ ಆ ಅಗ್ಗಿಷ್ಠಿಕೆಗೆ ಬಿದ್ದು ಸುಟ್ಟು ಹೋದಂತಾಗಿತ್ತು. ನೀನಾದರೂ ಈ ಭಿಕಾರಿಯನ್ನ ಅದೇಕೆ ಆಪರಿ ಕಾಡಿಸಿದೆಯೋ… ಅದೂ ಸಹ ಆಟವಾಡಿಸೋ ಹುಡುಗಾಟಿಕೆಯಾಗಿತ್ತೋ ಗೊತ್ತಿಲ್ಲ. ಆದರೆ ನಾ ಮಾತ್ರ ಪ್ರತೀ ಕ್ಷಣವೂ ನಿನ್ನಲ್ಲಿ ಕರಗಿ ಹೋಗುತ್ತಿದ್ದೆ.


ಆದರೆ ಹುಡುಗೀ, ಅದೊಂದು ಸಲ ನಿನ್ನೆದುರು ಎಲ್ಲವನ್ನೂ ಒದರಿ ಬಿಡಬೇಕೆಂಬ ಹುಚ್ಚು ಹತ್ತಿ ಹೊರಟವನು ಅದ್ಯಾಕೋ ಮೊದಲ ಸಲ ಬಹಳ ದಿನಗಳ ನಂತರ ನನ್ನೊಂದಿಗೆ ನಾನೇ ಮಾತಾಡಿಕೊಂಡಿದೆ. ನಿನ್ನನ್ನು ಪ್ರೀತಿಸುವ, ನಿನ್ನ ಮುಂದೆ ಅದನ್ನು ಹೇಳಿಕೊಳ್ಳುವ ಯಾವ ಯೋಗ್ಯತೆ ನನಗಿದೆ. ಅಷ್ಟಕ್ಕೂ ಈ ಬಡತನವೆಂಬುದು ನಿನ್ನ ಅಂಗಾಲ ಮಿದುವಿಗೂ ಸೋಕಿಲ್ಲವೇನೋ. ಆದರೆ ನಾನು ಮೈತುಂಬಾ ಬಡತನದ ಬಾಸುಂಡೆ ಹೊತ್ತುಕೊಂಡವನು. ಇದ್ದಕ್ಕಿದ್ದಂತೆ ಅದನ್ನೆಲ್ಲ ನಿವಾರಿಸಿಕೊಂಡು ಕೈತುಂಬಾ ಕಾಸು ಮಾಡಿ ಕಾರಲ್ಲಿ ಬಂದು ಪೋಸು ಕೊಡೋದಕ್ಕೆ ನಾನು ಹೀರೋನೂ ಅಲ್ಲ, ಈ ಬದುಕು ಸಿನಿಮಾವೂ ಅಲ್ಲ!


ಈ ಬಡತನದ ತಲ್ಲಣಗಳಿಂದ ಹೊರಬಂದು ಅರ್ಹನಾಗಿ ನಿನ್ನೆದಿರು ಬಂದು ನಿಲ್ಲುವುದು ಸಾಧ್ಯವೇ ಇಲ್ಲ ಅಂತ ಹೇಳಲಾರೆ. ಅಂಥಾ ನಿರಾಶಾವಾದಿಯೂ ನಾನಲ್ಲ. ಅದಕ್ಕೆ ಅದೆಷ್ಟು ಕಾಲ ಬೇಕಾದೀತೋ. ಇಂಥಾ ಸ್ಥಿತಿಯಿಟ್ಟುಕೊಂಡು ನಿನ್ನಂಥವಳ ಮುಂದೆ ಹೇಗೆ ಪ್ರೀತಿ ಹೇಳಲಾದೀತು? ಅಕಸ್ಮಾತಾಗಿ ಒಪ್ಪಿದೆ ಅಂತಿಟ್ಟುಕೋ, ನಾನೇ ನಾನಾಗಿ ಇಷ್ಟದ ಜೀವವನ್ನ ಕಷ್ಟದ ತಿರುಗಣಿಗೆ ಬೀಳಿಸಿದಂತಾಗೋದಿಲ್ಲವಾ? ಹೀಗೆ ಒಂದಿಡೀ ರಾತ್ರಿ ಆಲೋಚಿಸಿ ಬೆಳಕು ಹರಿಯೋ ಮುನ್ನವೇ ನಿನ್ನ ಏರಿಯಾದಿಂದ ಶಾಶ್ವತವೆಂಬಂತೆ ಹೊರಟು ಬಂದಿದ್ದೆ.


ಆವತ್ತಿನಿಂದ ಈವತ್ತಿನ ವರೆಗೂ ಇದೇ ಕಥೆ. ಆಗಾಗ ನಿಂಗೆ ನನ್ನ ಮೇಲೆ ನಿಜಕ್ಕೂ ಪ್ರೀತಿಯಿತ್ತೇನೋ, ನಾನೇ ಈ ರೀತಿ ಯೋಚಿಸಿ ತಪ್ಪು ಮಾಡಿದೆನೇನೋ ಅಂತ ಮರುಕ ಹುಟ್ಟುತ್ತೆ. ಆ ಕ್ಷಣದಲ್ಲಿ ಮೊನಚಾದ ಮುಳ್ಳು ಎದೆಗೆ ಗೀರಿದಂತಾಗುತ್ತೆ. ಆ ಕ್ಷಣದಲ್ಲಿ ದಿಕ್ಕುದೆಸೆಯಿಲ್ಲದಂತೆ ಹುಚ್ಚೆದ್ದು ಅಲೆಯುತ್ತೇನೆ. ಅಲ್ಲೆಲ್ಲೋ ಗುರುತಿರದ ಬೀದಿಯಲ್ಲಿ ನಿಂತು ನಿನಗಾಗಿ ಆಸೆಗಣ್ಣಿಂದ ಅರಸುತ್ತೇನೆ. ಅಲ್ಲೇ ಮಣಿದು ಕೂತು ಕಣ್ಣೀರಾಗುತ್ತೇನೆ.


ಹೀಗೆಲ್ಲಾ ಅದೆಷ್ಟು ಸಾರಿ ಕಂಗಾಲಾಗಿದ್ದೇನೋ ಗೊತ್ತಿಲ್ಲ. ಇದು ನನ್ನ ಪಾಲಿಗೆ ನಿರಂತರ ಶಾಪ. ಈವತ್ತೂ ಅದೇಕೋ ಕೆಲಸ ಮುಗಿಸಿ ಆಫೀಸಿಂದ ವಾಪಾಸಾಗುವಾಗ ಯಾಕೋ ನೀ ವಿಪರೀತ ನೆನಪಾದೆ. ನಾನ್ಯಾರೆಂಬುದನ್ನೂ ಮರೆತು ಹುಚ್ಚನಂತೆ ಅಲೆದಾಡಿದೆ. ನಿನ್ನನ್ನೊಮ್ಮೆ ನೋಡದೇ ಹೋದರೆ ಸತ್ತೇ ಹೋಗುತ್ತೇನೇನೋ ಅನ್ನೋ ಭಾವನೆ ಹೆಜ್ಜೆ ಹೆಜ್ಜೆಗೂ ಹೆಡೆಯೆತ್ತಿ ನಿಲ್ಲುತ್ತಿತ್ತು. ಹೀಗೆ ನಡೆಯುತ್ತಾ ಅದ್ಯಾವ ಏರಿಯಾಕ್ಕೆ ಬಂದಿದ್ದೆನೋ ಗೊತ್ತಿಲ್ಲ. ಅಲ್ಲೇ ಬಾಜಿನಲ್ಲಿದ್ದ ಕಾಕಾ ಹೋಟೆಲು ಹೊಕ್ಕು ಅರ್ಧ ಟೀ ಕುಡಿಯುತ್ತಾ ಸಿಗರೇಟಿಗೆ ಬೆಂಕಿ ಸೋಕಿಸಿದರೆ ಮನಸೊಳಗೆ ನಿನ್ನದೇ ಮರ್ಮರ.


ಈವತ್ತು ಪರಿಸ್ಥಿತಿ ಸುಧಾರಿಸಿದೆ. ಕಷ್ಟ ಪಟ್ಟಿದ್ದರ ಫಲವಾಗಿ ಹಣ, ಆಸ್ತಿ, ಅಂತಸ್ತು ಎಲ್ಲವೂ ಇದೆ. ಆದರೆ ನಿನ್ನ ಮುಂದೆ ಬಂದು ನಿಂತು ಎಲ್ಲವನ್ನೂ ಹೇಳೋದಕ್ಕೆ ಕಾಲ ಮಿಂಚಿ ಹೋಗಿದೆ. ಸಿಹಿಯಲ್ಲೇ ಬಿದ್ದರೂ ಸವಿಯಲಾರದ ನೊಣಕ್ಕೂ, ಎಲ್ಲ ಇದ್ದರೂ ನಿನ್ನನ್ನು ಸೇರಲಾರದ ನನ್ನ ಈ ಪ್ರೀತಿಗೂ ಯಾವ ಅಂತರೂ ಇದ್ದಂತೆ ಕಾಣಿಸೋದಿಲ್ಲ.
ಅದ್ಯಾಕೋ, ಮರೆಯಬೇಕೆನ್ನಿಸಿದಷ್ಟೂ ನೀ ನೆನಪಾಗುತ್ತಿ. ಜೀವ ಹೋಗುವಂತೆ ಕಾಡುತ್ತಿ. ಈ ದೌರ್ಭಾಗ್ಯ ಬಹುಶಃ ಈ ಉಸಿರಿನೊಂದಿಗೇ ನಿಲ್ಲಬಹುದೇನೋ.
ನಿನ್ನವನು
ನಿರ್ಭಾಗ್ಯ ಪ್ರೇಮಿ 

[adning id="4492"]

LEAVE A REPLY

Please enter your comment!
Please enter your name here