ಈ ಸುಡು ಮೌನದೊಳಗೆ ಸಾವಿರ ಮಾತುಗಳ ಸದ್ದಿದೆ ಗೊತ್ತೇನೇ…

[adning id="4492"]

ನಿನ್ನ ಮುದ್ದು ಮುದ್ದಾದ ಉಗುರಿಗೆ ಹಚ್ಚಿದ ಪಾಲೀಷಿನ ಚಹರೆ ಬದಲಾದಷ್ಟೇ ಸಲೀಸಾಗಿ ವರ್ಷಗಳು ಉರುಳಿ ಹೋಗುತ್ತಿವೆ. ನಿನ್ನೆಡೆಗಿನ ನಿರೀಕ್ಷೆಗೆ, ನಿನ್ನನ್ನು ಸೇರುವ ಹಂಬಲಿಕೆಗೆ  ಜಮೆಯಾದ ಎಷ್ಟನೆಯ ವರ್ಷವೋ ಇದು? ನಿಖರವಾದ ಲೆಕ್ಕ ಸಿಕ್ಕರೆ ಪಕ್ಕಾ ಹುಚ್ಚನಾದೇನು. ಹೊರಳಿಕೊಂಡ ವರುಷಗಳೆಲ್ಲಾ ನಿನಗೆ ನನ್ನನ್ನ ಹತ್ತಿರಾಗಿಸುತ್ತಿದೆ ಅಂತಲೇ ಥ್ರಿಲ್ ಆಗುತ್ತಿದ್ದ ಕಾಲವೊಂದಿತ್ತು. ಆದರೀಗ ಸುಲಭಕ್ಕೆ ಸೇರಲಾಗದಂಥಾ ಕಂದಕ ಸೃಷ್ಟಿಯಾಗುತ್ತಿದೆ ಎಂಬಂಥಾ ಧಾವಂತ. ನಿನ್ನೂರಿನ ರಸ್ತೆ ಉದ್ದಾನುದ್ದ ಬೆಳೆದುಕೊಂಡಿದೆಯೇನೋ ಎಂಬ ಗುಮಾನಿ. ನಿನ್ನಲ್ಲಿಗೆ ತಲುಪಿಕೊಳ್ಳುವ ರಸ್ತೆಗಳೆಲ್ಲ ಗೊಂದಲಗಳ ಚಕ್ರವ್ಯೂಹ. ನನ್ನ ಬಡಪಾಯಿ ಪ್ರೀತಿ ಅದರೊಳಗೇ ಉಸಿರು ಚೆಲ್ಲುವ ಅಭಿಮನ್ಯುವಿನಂತಾಯ್ತಾ ಅಂತೊಂದು ದಟ್ಟ ಸಂದೇಹ!


ನಿನ್ನೊಲವಿನ ಧ್ಯಾನದಲ್ಲಿಯೇ ಚದುರಿ ಚೆಲ್ಲಾಪಿಲ್ಲಿಯಾದ ನನ್ನ ಕ್ಷಣಗಳೆಲ್ಲ ವರ್ಷವೊಂದರ ಹೊಸಿಲಾಚೆ ಕಾಲಿಡುವಾಗ ಕಾಡುತ್ತವೆ. ಅವುಗಳಲ್ಲಿ ಖುಷಿಯೆಷ್ಟು, ನಿರೀಕ್ಷೆಗಳೆಷ್ಟು, ಆಸೆ, ನಿರಾಸೆ… ಇವೆಲ್ಲವೂ ಇವೆ. ಆದರೆ ನಿನ್ನ ಸೇರೋ ಹಂಬಲಲಿಕೆಯ ಹಸೀ ಹಸೀ ಪದರುಗಳೇ ಅಂಥಾ ಬಹುತೇಕ ಕ್ಷಣಗಳಿಗೆ ಮೆತ್ತಿಕೊಂಡಿರೋದನ್ನ ಕಂಡು ಪುಳಕಿತನಾಗುತ್ತೇನೆ. ಈ ಬಾರಿಯೂ ಕೂಡಾ ಹಳೇ ವರ್ಷಕ್ಕೆ ಟಾಟಾ ಹೇಳಿ ಒಂದು ದಿವ್ಯ ನಂಬುಗೆಯನ್ನ ಎದೆಯೊಳಗಿಟ್ಟುಕೊಂಡೇ ಹೊಸಾ ವರ್ಷವನ್ನ ಎದುರುಗೊಂಡಿದ್ದೇನೆ.


ಬಹುಶಃ ಈ ಇಷ್ಟು ವರ್ಷಗಳಲ್ಲಿ ನಾನಿಲ್ಲಿ ನಿನ್ನನ್ನೇ ಧ್ಯಾನಿಸುತ್ತಿರುವ ಸಂದರ್ಭದಲ್ಲಿ ನಿನ್ನ ಜಗತ್ತಿನ ಚಹರೆಯೇ ಬೇರೆಯದ್ದಿದ್ದಿರ ಬಹುದೇನೋ. ನನ್ನ ಪಾಲಿಗೆ ಅಪರಿಚಿತವಾದ, ನಾನೆಂದೂ ಧ್ಯಾನಿಸದ ಹೈಟೆಕ್ಕು ತಾಣಗಳಲ್ಲಿ ನಿನ್ನ ಸಂಭ್ರಮ ಮೆರವಣಿಗೆ ಹೊರಡುತ್ತಿತ್ತೇನೋ. ಅದೇ ಗಮ್ಮತ್ತಿನಲ್ಲಿ ಮರಳಿ ನಿದ್ದೆ ಹೋದವಳಿಗೆ ಹೊಸಾ ಸಂವತ್ಸರ ಮಾರನೇ ದಿನದ ಮುಂಜಾವದಲ್ಲಿಯೇ ಕಣ್ತೆರೆದಿತ್ತೇನೊ… ಆದರಿಲ್ಲಿ ನನ್ನ ಪಾಲಿಗೆ ಇತ್ತೀಚಿನ ವರ್ಷಗಳು ಎಲ್ಲೆಲ್ಲೋ ಮುಗಿದು ಹೋಗಿವೆ. ಮತ್ತೆಲ್ಲಿಯೋ ಅರಳಿಕೊಂಡಿವೆ. ಹೆಸರು ಗೊತ್ತಿಲ್ಲದ ಬಾರಿನ ಪಕ್ಕದ ಇಕ್ಕಟ್ಟು ಓಣಿಯಲ್ಲಿ ನಿಂತು ಸಿಗರೇಟು ಸುಡುವಾಗ, ಕಲಾಸಿಪಾಳ್ಯದ ಕಾಕಾ ಹೋಟೆಲಿನಲ್ಲಿ ಮಕಾನ್ ಟೀ ಹೀರುವಾಗ, ಈವತ್ತು ಬಿದ್ದುಕೊಳ್ಳಲೊಂದು ಜಾಗ ಸಿಕ್ಕರೆ ಸಾಕೆಂಬೋ ಹುಡುಕಾಟದಲ್ಲಿರುವಾಗ, ಜ್ವರ ಏರಿ ಕ್ಲಿನಿಕ್ಕಿನ ಕೊಳಕು ಬೆಡ್ಡಿನ ಮೇಲೆ ಮೈಚಾಚಿ ದೇಹಕ್ಕೆ ಗ್ಲುಕೋಸಿನ ಹನಿ ಹೀರಿಕೊಳ್ಳುವಾಗ… ಹೀಗೆ ಗೊತ್ತು ಗುರಿಯಿಲ್ಲದಂತೆ ಹಳೇ ವರ್ಷ ಸರಿದು ಹೋಗಿದೆ. ಇಂತಾ ಧಾವಂತಗಳ ನಡುವೆಯೇ ಹೊಸಾ ಸೂರ‍್ಯೋದಯವನ್ನ ಎದುರುಗೊಂಡಿದ್ದೇನೆ.


ನಿಖರವಾಗಿ ಹೇಳಬೇಕೆಂದರೆ, ಇಂಥಾ ಯಾತನೆಗಳೆಲ್ಲವೂ ಸಹನೀಯವಾಗಿದ್ದು ನಿನ್ನಿಂದ. ನೀನು ನನ್ನ ಪಾಲಿನ ಶಾಶ್ವತವಾದ ಗಮ್ಯ. ಬದುಕು ಅದೆಷ್ಟೇ ಸತಾಯಿಸಿದರೂ ನಿನ್ನತ್ತ ಹೀಗೆ ಒಂದೊಂದೇ ಹೆಜ್ಜೆ ಮುಂದಿಟ್ಟು ಧಾವಿಸಿ ಬರೋದರಲ್ಲಿಯೂ ಒಂದು ಸುಖವಿದೆ. ಸುತ್ತಿಕೊಂಡ ಸಂಕಟಗಳನ್ನೆಲ್ಲ ನೀನೆಂಬೋ ಮಾಯಕದಿಂದಲೇ ನೀಗಿಕೊಂಡು ನಡೆಯೋದರಲ್ಲಿಯೂ ಸೊಗಸಿದೆ. ಆದರೆ ಇಂಥಾ ಗೊತ್ತುಗುರಿ ಇಲ್ಲದ ನಿರೀಕ್ಷೆಗಳ ನಡುವೆ ಇನ್ನೆಷ್ಟು ವರ್ಷ ಸರಿದು, ಸವೆದು ಹೋಗಬೇಕಿದೆಯೋ ಗೊತ್ತಿಲ್ಲ. ಹೀಗೆ ಒಂದೊಂದೇ ಹೆಜ್ಜೆ ನಡೆಯುತ್ತಾ ನಿನ್ನನ್ನು ಸೇರಿ ಹೊಸಾ ವರ್ಷವೊಂದಕ್ಕೆ ಚಿಯರ‍್ಸ್ ಹೇಳೋ ದಿವ್ಯ ಕ್ಷಣ ನನ್ನ ಬದುಕಲ್ಲಿ ಸಾವಿರ ಸೂರ್ಯಾಸ್ಥಗಳ ಸಂಭ್ರಮವನ್ನ ಒಮ್ಮೆಲೇ ಸ್ಫುರಿಸುತ್ತದೆ. ಅಂಥಾದ್ದೊಂದು ಕ್ಷಣಕ್ಕಾಗಿಯೇ ಉಸಿರು ಬಿಗಿ ಹಿಡಿದು ಕಾಯುತ್ತಲೇ ಇದ್ದೇನೆ.


ನೀನು ಬೇಕೆನಿಸಿದಷ್ಟೂ ನಾನು ಮೌನಿಯಾಗುತ್ತೇನೆ. ಎದೆಯೊಳಗೆಲ್ಲೋ ನಿನ್ನ ಮೂಗಿನ ನತ್ತು ಹೊಳೆದಂತಾಗುತ್ತೆ. ಅಲ್ಲಿಯೇ ನಿನ್ನ ಕಾಲ್ಗೆಜ್ಜೆಯ ಸದ್ದು. ಹೀಗೆ ನನ್ನೊಳಗೇ ನೀನಿರುವಾಗ ಮಾತುಗಳಿಗೆ ಅರ್ಥವಿಲ್ಲ ಅನ್ನಿಸುತ್ತೆ. ಗಾಢ ಮೌನ ಹೊದ್ದು ಕೂರುತ್ತೇನೆ. ಇದೊಂದು ರೀತಿಯಲ್ಲಿ ಸುಡು ಮೌನವೂ ಹೌದು. ಸುತ್ತಲ ಜಗತ್ತಿಗೆ ಈ ಬಗ್ಗೆ ಅದೇನನ್ನಿಸುತ್ತೋ ಗೊತ್ತಿಲ್ಲ. ಅದನ್ನು ತಿಳಿದುಕೊಳ್ಳುವ ಯಾವ ಕುತೂಹಲವೂ ನಂಗಿಲ್ಲ.


ಆದರೆ… ಈ ಸುಡು ಮೌನದೊಳಗೂ ಸಾವಿರ ಮಾತುಗಳ ಸದ್ದಿದೆ. ಅದು ನಿಂಗೊಬ್ಬಳಿಗೆ ಮಾತ್ರ ಕೇಳಿಸಿದರೆ ಸಾಕು. ಈಗ ಎದುರುಗೊಂಡಿರುವ ವರ್ಷದಲ್ಲಾದರೂ ಆ ಕ್ಷಣ ಬಂದೇ ಬಂದೀತೆಂಬ ಉತ್ಕಟ ನಿರೀಕ್ಷೆಯೊಂದಿಗೇ ಬದುಕಿದ್ದೇನೆ. ನನಗಾಗಿಯೇ ಸಿಕ್ಕುಬಿಡುವ ಔದಾರ್ಯ ನಿನ್ನದಾಗಲಿ…

[adning id="4492"]

LEAVE A REPLY

Please enter your comment!
Please enter your name here