ನಶೆ ನೆನಪು ಮತ್ತು ಮಾರನೇ ದಿನದ ಘೋರ ಮುಂಜಾವು!

[adning id="4492"]

ಮರೀಚಿಕೆ…
ನ್ನು ಸಾಕು ಈ ವಿರಹದ ಸಾನಿಧ್ಯ. ಇದರ ಉರಿಯಲ್ಲಿ ಅದೆಷ್ಟು ವರ್ಷ ಸವೆಸಿದೆ, ಅದೆಷ್ಟು ಮರುಗಿದೆ, ಕಣ್ಣೀರುಗರೆದೆ, ದೈನೇಸಿಯಂತಾದೆ… ಅದು ಕಗ್ಗತ್ತಲ ಕರಾಳ ನೆನಪು. ಆ ಲೆಕ್ಕ ಮತ್ತೆ ನೆನಪುಗಳ ಉರುಳಿಗೆ ಕೊರಳೊಡ್ಡುವಂತೆ ಮಾಡುತ್ತೆ. ಬೆಳಕು ಭಯ ಹುಟ್ಟಿಸುತ್ತೆ. ಕತ್ತಲೆಂಬುದು ಮತ್ತೆ ಆಲಿಂಗಿಸಿಕೊಳ್ಳುತ್ತೆ. ನಿನ್ನೆ ಮಧ್ಯರಾತ್ರಿ ತಡಕಾಡಲೂ ತ್ರಾಣವಿಲ್ಲದೇ ಉಳಿದಿರಬಹುದಾದ ಕಾಲು ಬಾಟಲಿ ನಶೆಯ ದ್ರವ ಮತ್ತೆ ಬೇಕೆನಿಸುತ್ತೆ. ನಿನ್ನ ನೆನಪು ಮತ್ತು ಅದರ ಜೊತೆಗೇ ಹತ್ತಿಕೊಂಡ ಈ ನಶೆಯ ದೆಸೆಯಿಂದ ನನ್ನಿಡೀ ಬದುಕೇ ನವೆದು ಹೋಗಿದೆ. ಈ ಅವಧಿಯ ತುಂಬ ನನ್ನವರಿಗೇ ನಾ ಕೊಟ್ಟ ಸಂಕಟದ ಇನಾಮು ನೆನಪಾದರೆ ಸಾಯುವಷ್ಟು ಸಂಕಟ, ನನ್ನ ಮೇಲೆಯೇ ನಂಗೆ ಅಸಾಧ್ಯ ಸಿಟ್ಟು. ಸತ್ತೇ ಹೋಗುತ್ತಿನೇನೋ ಎಂಬ ಭಯ…

ಈ ಪ್ರೀತಿ ಎಂಬೋ ಮಾಯೆ ಬದುಕಿಸುತ್ತೆ ಎಂಬ ಬಗ್ಗೆ ಕೇಳಿದ್ದೇನೆ. ಅಲ್ಲಿಲ್ಲಿ ಓದಿಕೊಂಡಿದ್ದೇನೆ. ಆದರೀಗ ಈ ಪ್ರೀತಿಯೇ ಕ್ಷಣ ಕ್ಷಣವೂ ಕೊಲ್ಲುವ ವಿಕಟ ಸತ್ಯಕ್ಕೆ ನಾನೇ ಸಜೀವ ಸಾಕ್ಷಿಯಂತೆ ನಿಂತಿರೋದು ವಿಧಿಯಾಟವಾ, ನಿನ್ನ ದಿವ್ಯ ತಾತ್ಸಾರವಾ ಗೊತ್ತಿಲ್ಲ. ಅದು ಹಾಳಿ ಬೀಳಲಿ. ಇಂಥಾ ಪ್ರಶ್ನೆಗಳ ಗಜಿಬಿಜಿಗಳ ನಡುವೆಯೇ ಈ ಬದುಕು ಮಲೆತು ನಾರಲಾರಂಭಿಸಿದೆ. ಅಷ್ಟಕ್ಕೂ ನೀ ಯಾವತ್ತು ಉತ್ತರವಾಗಿದ್ದೆ ಹೇಳು? ನೀನೆಂದರೆ ನನ್ನ ಪಾಲಿಗೆ ಶಾಶ್ವತ ಪ್ರಶ್ನೆ. ಅದ್ಯಾವ ನಶಾಮುಕ್ತಿ ಕೇಂದ್ರದಲ್ಲಿಯೂ ಮದ್ದಿಲ್ಲದ ಭಯಾನಕ ನಶೆ. ಇಡೀ ಜೀವನವೇ ಅದ್ಯಾವನೋ ಕುಡಿದೆಸೆದ ಖಾಲಿ ಶೀಷೆಯಂತಾಗಿರೋದು ಅದರ ಬಲದಿಂದಲೇ ಅಲ್ಲವೇನೇ ಹುಡುಗಿ?

ಯಾಕೋ ನೀನಿಲ್ಲದ, ನೀ ಬರುತ್ತಿಯೆಂಬೋ ಭ್ರಮೆಯಲ್ಲಿಯೇ ಕಳೆದ ಇಷ್ಟೂ ವರ್ಷಗಳಿಗೆ ನಿನ್ನ ನೆನಪು, ಈ ನಶೆ, ಮಾರನೇ ಮುಂಜಾವಿನ ಸಂಕಟ, ಅವಮಾನಗಳೆಲ್ಲವೂ ಆಪ್ಯಾಯವಾದಂತಿತ್ತು. ಅದೆಲ್ಲವೂ ನನ್ನ ಪಾಲಿಗೆ ಉಸಿರಾಟದಷ್ಟೇ ಉತ್ಕಟ. ಆದುದರಿಂದಲೇ ಹತ್ತಿರದವರ ಕಣ್ಣೀರೂ ನನ್ನನ್ನು ಕರಗಿಸಲಿಲ್ಲ. ಈ ಕತ್ತಲ ಕೂಪ ಹೆದರಿಸಲಿಲ್ಲ. ಈ ನಶೆಯ ಮಂಪರಂತೂ ಇಳಿದ ನೆನಪಿಲ್ಲ. ಈ ಕತ್ತಲ ಕಟಾಂಜನವಿದೆಯಲ್ಲಾ? ಇದರಾಚೆಗೊಂದು ಭವಿಷ್ಯ ನಂಗಾಗಿ ಕಾಯುತ್ತಿದೆ ಅನ್ನೋದು ಒತ್ತಟ್ಟಿಗಿರಲಿ, ಇಲ್ಲಿಂದಾಚೆಗೂ ಒಂದು ಬದುಕಿದ್ದೀತೆಂಬ ಕಲ್ಪನೆಯನ್ನೂ ಈ ಹಾಳು ನಶೆ ಮಂಕು ಮಾಡಿ ಹಾಕಿತ್ತು.

ಬಹುಶಃ ಈ ಕತ್ತಲ ಕೋಣೆಯಾಚೆಗೆ ಕಾಲಿಡದೆ ಯಾರಪ್ಪನದ್ದೋ ಕಾಲವಾಗಿರಬಹುದು. ಹೋಗಬೇಕನ್ನಿಸಿರಲೂ ಇಲ್ಲ ಬಿಡು. ಆದರೆ ಈವತ್ಯಾಕೋ ನನ್ನದೇ ಪೂರ್ವಾಶ್ರಮದ ಪುಣ್ಯದ ಫಲದಿಂದ ಬೆಳಗ್ಗೆ ಏಳೇಳುತ್ತಲೇ ಎಚ್ಚರ. ಪಕ್ಕದ ಕೊಟ್ಟಿಗೆಯಲ್ಲಿ ಅಮ್ಮ ಹಾಲು ಕರೆಯೋ ಸದ್ದು. ಅರೇ ನಂಗಿಷ್ಟು ಬೇಗನೆ ಎಚ್ಚರಾಗಿದೆಯಲ್ಲಾ ಅಂತ ನಂಗೇ ಅಚ್ಚರಿ. ನಂಗೇ ಅರಿವಿಲ್ಲದಂತೆ ರೂಮಿಂದ ಹೊರಬಂದು ಅಪ್ರಜ್ಞಾಪೂರ್ವಕವಾಗಿ ಹಜಾರ ದಾಟಿ ಅಂಗಳಕ್ಕೆ ಬಂದು ನಿಂತರೆ ಎದುರಾದದ್ದು ಅಮ್ಮ. ಅವಳ ಕಣ್ಣಲ್ಲಿ ಕಡೆಗೂ ಬೆಳಕಿಗೆ ಬಂದು ನಿಂತನಲ್ಲಾ ಎಂಬ ಖುಷಿ, ಕಣ್ಣೀರು…

ನಿಂಗೊತ್ತಾ, ಇಷ್ಟು ವರ್ಷದಲ್ಲಿ ಮನೆಯವರ ಬಗೆಗಿರಲಿ, ನನ್ನ ಬಗ್ಗೆಯೂ ನಾ ಆಲೋಚಿಸಿಲ್ಲ. ನಿನ್ನನ್ನೇ ಧ್ಯಾನಿಸುತ್ತಾ ನೀನೇ ಆಗಿ ಹೋಗಿದ್ದೆನೇನೋ. ಆದರೆ ಈ ಶುಭ್ರ ಬೆಳಗಿನಲ್ಲೆ ಕತ್ತಲ ಗುಡಾಣದಂಥಾ ಎದೆಯೊಳಗೆ ಅದೆಂಥಾದ್ದೋ ಸುಡುಗಾಡು ಜ್ಞಾನೋದಯ. ಈ ನಶೆಯಾಚೆ, ಈ ಕತ್ತಲಾಚೆ ಮತ್ತು ನಿನ್ನ ನೆನಪುಗಳಾಚೆಗೆ ನಡೆದು ಹೋಗಬೇಕೆಂಬ ತೀವ್ರ ಹಂಬಲ… ಅದೇ ಬಲದಿಂದ ಮಧ್ಯಾಹ್ನ ಊಟದ ಹೊತ್ತಾದರೂ ಸ್ನಾನಕ್ಕೆ ಹೋಗದೆ ಸತಾಯಿಸುತ್ತಿದ್ದವನು ನಾನೇ ನಾನಾಗಿ ಸ್ನಾನ ಮುಗಿಸಿ ಬಂದೆ. ಇಡೀ ಮನೆಯಲ್ಲಿ ಅದೇನೋ ಬದಲಾವಣೆ ಆಗುತ್ತಿದೆ ಎಂಬ ಖುಷಿ. ಎಲ್ಲರ ಕಣ್ಣುಗಳಲ್ಲಿಯೂ ಸಂಭ್ರಮ. ಈ ಜೀವಗಳೆಲ್ಲ ಇಷ್ಟು ವರ್ಷ ಅದೆಷ್ಟು ನೊಂದವೋ ಅಂತ ಮೊದಲ ಸಲ ನಿನ್ನ ಹೊರತಾಗಿ ಕಣ್ಣು ಹನಿಗೂಡಿತು.

ಅರೇ ನನ್ನ ಜೀವದಂತಿದ್ದ ಈ ಪುಸ್ತಕಗಳತ್ತ, ನನ್ನನ್ನೇ ಮರೆತು ಕೂತು ಬರೆಯುತ್ತಿದ್ದ ಈ ಟೇಬಲ್ಲಿನತ್ತ ಬಾರದೆ ಅದ್ಯಾವ ಕಾಲವಾಯಿತೋ. ಮೊದಲ ಸಲ ಧೂಳು ಕೊಡವಿ ಈ ಪತ್ರ ಬರೆಯುತ್ತಿದ್ದೇನೆ. ಬಹುಶಃ ಮುಂದ್ಯಾವತ್ತೂ ಈ ಪರಿ ಹಲುಬಾಡಿ ನಿಂಗೆ ಪತ್ರ ಬರೆಯೋದಿಲ್ಲ. ಯಾಕೆಂದರೆ, ಈವತ್ತಿಂದ, ಈ ಕ್ಷಣದಿಂದ ಈ ಕತ್ತಲಿಂದ ಕಳಚಿಕೊಂಡು ಬೆಳಕಿನ ಯಾತ್ರೆ ಹೊರಡುತ್ತೇನೆ. ಖಂಡಿತಾ ನಿನ್ನನ್ನಾಗಲಿ, ನಿನ್ನ ನೆನಪುಗಳನ್ನಾಗಲೀ ಅಪ್ಪಿತಪ್ಪಿಯೂ ಮರೆಯಲೆತ್ನಿಸೋದಿಲ್ಲ. ಅವುಗಳನ್ನ ಮುದ್ದು ಮಾಡುತ್ತಲೇ ಬದುಕುತ್ತೇನೆ.

ಅಷ್ಟಕ್ಕೂ ನಾನು ಈ ಕತ್ತಲ ಕೂಪದಲ್ಲಿಯೇ ಉಸಿರು ಚೆಲ್ಲಿದೆ ಅಂತಿಟ್ಟುಕೊ, ನಿನ್ನ ಪಾಲಿಗದು ಯಾರೋ ಅನಾಮಿಕನ ಸಾವು. ಅದರಿಂದ ನಾ ಸಾಧಿಸೋದೇನಿದೆ ಹೇಳು. ಅದಕ್ಕಾಗಿಯೇ ಈ ಕತ್ತಲ ಕೂಪದಿಂದೆದ್ದು ಹೊರಟಿದ್ದೇನೆ. ಆ ಲೋಕದತ್ತ ತಿರುಗಿ ನೋಡಲೂ ತ್ರಾಣವಿಲ್ಲ. ಯಾಕೆಂದರೆ ಆ ನಶೆಯ ಹಾದಿಯ ಕೊನೆಯಲ್ಲಿ ನನ್ನದೇ ಹೆಣ ಕಾಣಿಸುತ್ತಿದೆ!

[adning id="4492"]

LEAVE A REPLY

Please enter your comment!
Please enter your name here