ಗೋಡೆಗೆ ನೇಣು ಹಾಕಿಕೊಂಡಿರೋ ಗಡಿಯಾರಕ್ಕೂ ಈಗ ಮುನಿಸು!

[adning id="4492"]

ದ್ಯಾವ ಕ್ಷಣದಲ್ಲಿ ಕುಡಿ ನೋಟದಲ್ಲೇ ಒಂದು ಬೊಗಸೆ ಬೆರಗನ್ನು ಎದೆಗೆ ಸುರುವಿದೆಯೋ ಗೊತ್ತಿಲ್ಲ, ಇಲ್ಲೀಗ ನಿನ್ನ ಇಷಾರೆಯಿಲ್ಲದೆ ಏನಂದರೇನೂ ಘಟಿಸುತ್ತಿಲ್ಲ. ದಿನಾ ಬೆಳಗೆದ್ದು ನನ್ನ ಹೆಣಕ್ಕೆ ನಾನೇ ಶೃಂಗಾರ ಮಾಡಿಕೊಂಡಂತೆ, ಅನಿವಾರ್ಯ ಕರ್ಮವೇನೋ ಎಂಬಂತೆ ಬದುಕುತ್ತಿದ್ದವ ನಾನು. ಆ ಕಾಲದ ನನ್ನದೇ ಮುಸುಡಿ ಕಣ್ಣೆದುರು ಬಂದರೂ ಈ ಕ್ಷಣ ವಾಕರಿಕೆ ಬಂದಂತಾಗುತ್ತೆ. ಅಂಥಾ ಬರಡು ಬೆಂಗಾಡಿನಂಥಾ ಬದುಕಿನ ಮಧ್ಯದಲ್ಲಿ ಯಾವ ಆಸೆ, ನಿರೀಕ್ಷೆಗಳೂ ಇಲ್ಲದ ಬಕ್ಕಾಬೋಳು ಮರದಂತಿತ್ತು ಈ ಜೀವ. ಯಾವ ಮಾಯಕದಲ್ಲಿಯೂ ಅದರ ನಿಸ್ಸಾರ ಕೊಂಬೆ ಕೋವೆಗಳಿಗೆ ನಿನ್ನ ಕುಡಿನೋಟದ ಚಿಗುರು ಮೆತ್ತಿಕೊಂಡಿತು. ಇದೀಗ ನಂಗೇ ಅಚ್ಚರಿಯಾಗುವಂತೆ ಮನಸಿನ ತುಂಬಾ ಅಗೋಚರ ಆಹ್ಲಾದದ ಹೂ ಬಿಟ್ಟಿದೆ!


ಇದೆಲ್ಲವೂ ನಿನ್ನದೇ ಮಾಯೆ. ಅಷ್ಟಕ್ಕೂ ನಿನ್ನ ಕಣ್ಣೋಟದಿಂದಲೇ ಮೈತುಂಬಾ ಹೂ ಮೂಡಿಸಿಕೊಂಡ ಜೀವವೊಂದು ನಿನಗಾಗಿ ಕಾಯುತ್ತಿರಬಹುದೆಂಬ ಕಲ್ಪನೆಯಾದರೂ ನಿನಗಿದ್ದೀತಾ ಅಂತ ಕೆಲ ಬಾರಿ ನನ್ನನ್ನು ನಾನೇ ಕೇಳಿಕೊಳ್ಳುತ್ತೇನೆ. ತೀರಾ ವಾಸ್ತವವಾದಿಯಾದರೆ ಇದೀಗ ತಾನೇ ಮೊಳಕೆಯೊಡೆದಂತಿರೋ ಭರವಸೆಗಳೂ ಸರ್ವನಾಶವಾದಾವೆಂಬ ಭಯದಿಂದ ಮೂರ್ಖತನವನ್ನೇ ಮುದ್ದು ಮಾಡುತ್ತೇನೆ. ನಿನ್ನ ಇರುವಿಕೆಯಿರುವ ಪ್ರತಿಯೊಂದೂ ನನ್ನ ಪಾಲಿಗೆ ಅಚ್ಚರಿಯೇ. ಅಂಥಾದ್ದರಲ್ಲಿ ನಿನಗೆಂದೇ ಸಾಕಿಕೊಂಡ ಈ ಭ್ರಮೆಗಳೇನು ನಂಗೆ ಭಾರವೆನಿಸೋದಿಲ್ಲ.


ಕೆಲವೊಮ್ಮೆ ನೀನೊಬ್ಬಳು ಈ ರೀತಿ ಅಚಾನಕ್ಕಾಗಿ ಈ ಬದುಕಿಗೆ ಅಡಿಯಿರಿಸಬಾರದಿತ್ತು ಅನ್ನಿಸುತ್ತೆ. ಇದ್ಯಾತರ ಪಡಿಪಾಟಲು, ಇದ್ಯಾತರ ಕಾಯುವ ಸಂಕಟ, ಭ್ರಮೆ ಮತ್ತು ವಾಸ್ತವಗಳ ಹಾವುಏಣಿಯಾಟ ಅನ್ನಿಸಿ ಹಳಹಳಿಸುತ್ತೇನೆ. ಹಾಗೆ ಕಳ್ಳ ಹಾದಿಯಿಂದ ನಿನ್ನ ನೆನಪುಗಳಿಂದ ಬಿಡಿಸಿಕೊಂಡಂತೆ ದೂರ ನಿಲ್ಲಲೆತ್ನಿಸುತ್ತೇನೆ. ಹೀಗೆ ನಿನ್ನ ನೆನಪುಗಳಾಚೆ ನಿಂತ ಪ್ರತೀ ಕ್ಷಣವೂ ಎದೆಗಿರಿದಂತಾಗುತ್ತೆ. ಗೋಡೆಗೆ ನೇಣು ಹಾಕಿಕೊಂಡಂತಿರೋ ಗಡಿಯಾರಕ್ಕೂ ನನ್ನ ಮೇಲೆಂಥಾ ಸಿಟ್ಟೋ… ಜಪ್ಪಯ್ಯ ಅಂದರೂ ಕದಲದ ಮುಳ್ಳುಗಳು ಎದೆಯ ಮಿದುವಿಗೆ ನಾಟಿದಂತಾಗುತ್ತದೆ. ಈ ಬೈಗು, ಈ ಬೆಳಗು, ಕತ್ತಲೂ ಸೇರಿದಂತೆ ಕಾಲದ ಪ್ರತೀ ಕದಲಿಕೆಗಳೂ ನನ್ನನ್ನು ಹೊರಗುಳಿಸಿಯೇ ಮುಂದೆ ಸಾಗುತ್ತಿದೆಯೇನೋ ಎಂಬಂಥ ವಿಷಣ್ಣ ಭಾವ… ಇಲ್ಲ, ನೀನೆಂಬೋ ಮಾಯೆಯ ಆಚೆ ನಿಂತರೆ ಬಹುಶಃ ನನ್ನುಸಿರೂ ನಿಂತೀತೇನೋ…


ಹೀಗೊಂದು ಜ್ಞಾನೋದಯವಾಗ ಬಳಿಕ ನಾನು ನೀನೇ ಆದಂತೆ ಬದುಕಲು ಶುರುವಿಟ್ಟಿದ್ದೇನೆ. ಜಡತ್ವವೆಂಬುದರ ಪೊರೆ ಕಳಚಿಕೊಂಡು ಪಾದರಸದ ಪಂಥ ಸೇರಿದ್ದೇನೆ. ಈಗೀಗ ಈ ಬದುಕು ಅದೆಂಥಾ ಕಷ್ಟ ಕೋಟಲೆ, ಹತಾಶೆ, ದುಖಃ ದುಮ್ಮಾನಗಳ ಪಂಥಾಹ್ವಾನ ನೀಡಿದರೂ ಎದೆಗೊಟ್ಟು ಎದುರುಗೊಳ್ಳುವ, ಸಲೀಸಾಗಿ ಜೈಸಿಕೊಳ್ಳುವ ಕಸುವು ತುಂಬಿಕೊಂಡಂತಾಗಿದೆ. ಈಗೀಗ ವಿನಾ ಕಾರಣ ಅವಮಾನದ ಮುಳ್ಳು ನೆತ್ತಿಗೆ ಗೀರಿದಾಗಲೂ ಕಣ್ಣಾಲಿಗಳು ತುಂಬಿ ಬರುವುದಿಲ್ಲ. ಅಲ್ಲೆಲ್ಲೋ ಕತ್ತಲ ಕಟಾಂಜನ ಸೇರಿಕೊಂಡು ಬಿಕ್ಕಳಿಸುವುದೂ ಇಲ್ಲ. ಅವಮಾನಗಳ ಗಾಯವನ್ನೇ ಬೆಳಕಿನ ಕಣ್ಣಾಗಿಸಿಕೊಂಡು ಯಾನ ಹೊರಟಿದ್ದೇನೆ. ಇಂಥಾ ಗಾಯಗಳನ್ನೇ ಗೆಲುವಾಗಿ ಪಳಗಿಸಿಕೊಳ್ಳೋ ಕಲೆ ಕಲಿಸಿದ ನಿನಗೊಂದು ಶಾಶ್ವತ ಸಲಾಮು!


ಈ ಪ್ರೇಮವೆಂಬೋ ಮದಿರೆಯ ಮತ್ತಿಗೆ ಇಂಥಾ ತಾಕತ್ತಿದೆ ಅಂತ ನಿನ್ನಾಣೆಗೂ ನಂಗೆ ಗೊತ್ತಿರಲಿಲ್ಲ. ಅದ್ಯಾವತ್ತೋ ಗೋರಿ ಸೇರಿದ್ದ ಕನಸುಗಳಿಗೂ ಈಗ ರೆಕ್ಕೆ ಬಂದಿರೋ ಸೂಚನೆ. ಒಟ್ಟಾರೆಯಾಗಿ ನನಗೆ ನನ್ನನ್ನೇ ಹೊಸದಾಗಿ ಪರಿಚಯಿಸಿದ ನಿನ್ನ ಮುಂದೆ ಎಂಥಾ ಹೊಗಳಿಕೆಯೂ ಸವಕಲಾಗುತ್ತವೆ. ಮಾತುಗಳೆಲ್ಲ ಬರಗೆಟ್ಟ ಕ್ಷಣದಲ್ಲಿ ಹೊಳೆದ ಚೆಂದದ ಕವಿತೆಗಳಂತೆ ಎದೆ ಸೋಕಿ ಮಾಯವಾಗುತ್ತವೆ. ಈ ಬದುಕಿನ ಯಾವುದಾದರೊಂದು ತಿರುವಲ್ಲಿ ಒಂದು ಕ್ಷಣದ ಮಟ್ಟಿಗಾದರೂ ಸಿಕ್ಕೀಯಾದರೆ ಹೂ ಮುತ್ತೊಂದರ ಕಾಣಿಕೆ ಸಲ್ಲಿಸಿ ಕೃತಾರ್ಥನಾದೇನು..!


ನನ್ನ ಜೋಪಡಿಯ ಮುಂದೆ ಮುದುರಿ ಮಲಗಿದ್ದ ಮಧುರ ಮುಂಜಾವುಗಳನ್ನೆಲ್ಲ ಮತ್ತೆ ಮರಳಿಸಿದವಳೇ… ನಿನ್ನ ದಯೆಯಿಂದಲೇ ಈಗ ಸತ್ತ ಸಂಜೆಗಳಿಗೂ ಜೀವ ಬಂದಿದೆ. ಗೋಧೂಳಿಯ ಬಯಲ ತುಂಬೆಲ್ಲಾ ಅದೆಂಥಾದ್ದೋ ಭಂಡ ಭರವಸೆಗಳ ಗೊರಸಿನ ಗುರುತು ಸ್ಪಷ್ಟವಾಗಿಯೇ ಮೂಡಿಕೊಂಡಿದೆ. ಮುಳ್ಳು ಮೂಡಿದಂತಿದ್ದ ಹಾದಿಯ ತುಂಬೆಲ್ಲಾ ಜೀವನಪ್ರೇಮದ ಹೂ ಪಕಳೆ. ಅಲ್ಲೆಲ್ಲೋ ಕತ್ತಲ ಕಮರಿಯಲ್ಲಿ ಅನಾಮಿಕ ಹೆಣವೂ ಆಗದೆ ಕೊನೆಗೊಳ್ಳುತ್ತಿದ್ದ ಈ ಬದುಕಿನ ದಿಕ್ಕನ್ನು ಇದ್ಯಾವ ದಾರಿಯತ್ತ ಬದಲಿಸಿಬಿಟ್ಟೆಯೇ ಹುಡುಗಿ…


ನಿನ್ನಿಂದಲೇ ಇಷ್ಟೆಲ್ಲ ದಕ್ಕಿಸಿಕೊಂಡೂ ನಿನ್ನ ಬದುಕಿನ ಶಹರದಲ್ಲಿ ಅನಾಮಿಕ ದಾರಿಹೋಕನಂತೆ ಬದುಕುವುದು ಸಂಕಟವೂ ಹೌದು, ಸಂತಸವೂ ಹೌದು. ಆದರೆ ಈ ಹಾದಿಯ ಪ್ರತೀ ಹೆಜ್ಜೆಗಳೂ ನಿನ್ನ ಪುಟ್ಟ ಪಾದಗಳ ಜೊತೆ ಬೇಡುತ್ತಿವೆ. ಈ ಯಾನದ ನಡುವಲ್ಲೆಲ್ಲೋ ಕತ್ತಲು ಕವಿಯಿತಾದರೆ ಅಲ್ಲಿಂದಾಚೆ ಹೋಗಲು ನಿನ್ನ ಕಣ್ಣ ಲಾಂದ್ರವೇ ಹೊತ್ತಿಕೊಳ್ಳಬೇಕು. ಜೀವವೇ… ಹೆಚ್ಚು ಯೋಚಿಸದೇ ಖಾಯಮ್ಮಾಗಿ ಜೊತೆಯಾಗಿಬಿಡು. ಇರುವ ಇದೊಂದೇ ಜನುಮಕ್ಕೆ ಮತ್ತೇನು ಬೇಕು…
-ನಿನ್ನವನು…

[adning id="4492"]

LEAVE A REPLY

Please enter your comment!
Please enter your name here