ಸ್ವರ್ಗದ ಮಡುವಲ್ಲಿದ್ದರೂ ಎದೆಯೆಂಬುದು ವಿಷಾದದ ಕಡಲು!

[adning id="4492"]

ವತ್ತು ಬೆಳಗ್ಗಿನಿಂದಲೇ ಭಾರೀ ಮಳೆ. ಇನ್ನೂ ಹನಿ ಕಡಿದಿಲ್ಲ. ಆಗಲೇ ಮತ್ತೊಂದು ದೊಡ್ಡ ಮಳೆ ಸುರಿಯುವ ಮುನ್ಸೂಚನೆ. ‘ಇವತ್ತೊಂದಿನಾನಾದ್ರ್ರೂ ಮಳೆ ಬರ‍್ದಿದ್ರೆ ಸಾಕಿತ್ತು’ ಅಂತ ಅಮ್ಮ ತನಗೆ ತಾನೇ ಗೊಣಗಿಕೊಳ್ತಿದ್ದಾಳೆ. ಈ ಮಲೆನಾಡಿನ ಮಳೆಯ ದಿನಗಳೇ ಹಾಗೆ. ಅಲ್ಲೊಂದು ನಿರೀಕ್ಷೆಯಿರುತ್ತೆ. ಮನಸ್ಸು ಕೂಡಾ ಅಷ್ಟೇ; ಗಂಟೆಗಟ್ಟಲೇ ಬಿಟ್ಟೂ ಬಿಡದೆ ಸುರಿದ ಮಳೆಯ ಬಳಿಕದ ನಿರಭ್ರ ಅಕಾಶದಂತೆ, ಇದ್ದಕ್ಕಿದ್ದಂತೆ ಹನಿ ನಿಂತಾದ ಮೇಲಿನ ಅದ್ಭುತ ನೀರವದಂತೆ, ದೂರದ ಗುಡ್ಡದ ನೆತ್ತಿ ಹತ್ತಿದ ಮೋಡ ದಿಗಂತವನ್ನೆಲ್ಲ ಆವರಿಸಿದಂತೆ… ಪ್ರಕೃತಿಯ ಪಲ್ಲಟಗಳಿಗೆ ತಕ್ಕುನಾಗಿ ಬದಲಾಗುತ್ತಲೇ ಇರುತ್ತದೆ. ಇವೆಲ್ಲದರ ಮಧ್ಯೆ ಥಂಡಿ ಹಿಡಿದ ವಾತಾವರಣದಲ್ಲಿ ನಿನ್ನ ನೆನಪು ಅತಿಯಾಗಿ ಕಾಡುತ್ತಿದೆ. ಯಾವತ್ತು ನಿನ್ನನ್ನು ನೋಡಿಯೇನೋ ಎಂಬ ಹಂಬಲ ಅತಿಯಾಗಿದೆ.


ಈ ಶೀತಲ ವಾತಾವರಣ, ಥಂಡಿ ಥಂಡಿ ಸಂಜೆ, ವರ್ಷವಿಡೀ ತಹತಹಿಸಿ ನಿನ್ನ ನೋಡೋ ದಿನ ಹತ್ತಿರಾದ ಸಂತಸ, ರೇಡಿಯೋದ ಒಡಲಿಂದ ಹಠಾತ್ತನೆ ತೂರಿ ಬರುವ ಹಾಡು ಮತ್ತು ನಮ್ಮನೆ ತೋಟದ ಬೀಜವನ್ನೇ ಒಣಗಿಸಿ, ಹದಗೊಳಿಸಿ ಮಾಡಿದ ಪುಡಿಯ ಬಿಸ್ಸಿಬಿಸಿ ಕಾಫಿ… ಜೊತೆಗೆ ನೀನೊಬ್ಬಳಿದ್ದಿದ್ದರೆ ಸ್ವರ್ಗಕ್ಕೆ ತಂತಾನೇ ಕಿಚ್ಚು ಹೊತ್ತಿಕೊಳ್ಳುತ್ತಿತ್ತು. ಇಲ್ಲಿ ಅಂಥಾ ಅದ್ಭುತ ವಾತಾವರಣವಿದೆ. ಆದರೆ ಅಂಥಾ ಧರೆಯ ಮೇಲಿನ ಜೀವಂತ ಸ್ವರ್ಗದ ಮಡುವಲ್ಲಿ ಕಾಲು ಚಾಚಿಕೂತಿದ್ದರೂ ಎದೆಯೆಂಬುದು ವಿಷಾದದ ಕಡಲು.

ಹೆಚ್ಚೂಕಮ್ಮಿ ಹತ್ತೊಂಬತ್ತು ಮಳೆಗಾಲಗಳನ್ನು ಹೀಗೆ, ಇದಕ್ಕಿಂತಲೂ ಲವಲವಿಕೆಯಿಂದ ಇದೇ ವಾತಾವರಣದಲ್ಲಿ ಕಳೆದಿದ್ದೇನೆ. ಆ ವಾತಾವರಣದ ಪ್ರತೀ ಕದಲಿಕೆಗಳೂ ನನಗೆ ಪರಿಚಿತ. ದೂರದ ಕಾಡೊಳಗೆಲ್ಲಿಯೋ ಸಿಹಿ ಮಾವಿನ ಮರದಿಂದ ತೊಟ್ಟು ಕಳಚಿ ಬಿದ್ದ ಮಾವಿನ ಹಣ್ಣಿನ ಸದ್ದೂ ನನಗೆ ಕೇಳುತ್ತೆ. ಕಣ್ಣಿಗೆ ಕಾಣಿಸದಂತೆ ಮೊಳಕೆಯೊಡೆಯುವ ಅಣಬೆಯ ಸುಳಿವೂ ಸಿಗುತ್ತೆ. ಹೀಗೆ ಮಳೆಗಾಲದ ಅಷ್ಟೂ ಸಂಭ್ರಮಗಳು ನನಗೆ ಚಿರಪರಿಚಿತ. ಆದರೆ ಅದರಲ್ಲೊಂದು ಮಳೆಗಾಲ ಮಾತ್ರ ಎಲ್ಲಕ್ಕಿಂತಲೂ ಮುಖ್ಯವಾದದ್ದು. ಯಾಕೆಂದರೆ, ಆ ಮಳೆಗಾಲದ ತುಂಬಾ ಜೊತೆಯಾಗಿ ನೀನಿದ್ದೆ. ಅದೆಲ್ಲ ಬೆಂಗಳೂರಿನ ಗಲ್ಲಿಗಳಲ್ಲಿನ ರಣ ಬಿಸಿಲಿನ ನಡುವೆ ಅಡ್ಡಾಡುವಾಗ ನೆನಪಾದರೂ ಮನಸು ಮಲೆನಾಡು. ಒದ್ದೊದ್ದೆ ನೆನಪುಗಳು ಎದೆ ತುಂಬಿದಂತಾಗಿ ಜೀವ ತೇವಗೊಂಡಂತಾಗುತ್ತೆ. ಆ ದಿನಗಳ ಸಂಭ್ರಮ, ಓಡಾಡಿದ ಜಾಗ, ತಲ್ಲಣಗಳೆಲ್ಲವೂ ಕಾಡುತ್ತವೆ. ಹಾಗೆ ಊರಿಗೆ ಓಡಿ ನಮ್ಮಿಬ್ಬರ ಪ್ರೀತಿಗೆ ಸಾಕ್ಷಿಯಾದ ಜಾಗಗಳನ್ನೆಲ್ಲ ದಿಕ್ಕುದೆಸೆಯಿಲ್ಲದೆ ಅಡ್ಡಾಡಬೇಕೆನಿಸುತ್ತೆ. ಆ ನಿರ್ಜೀವ ಜಾಗಗಳಲ್ಲಿ ಹಸುರಾಗಿರೋ ಸಂಗತಿಗಳ ತಲೆ ನೇವರಿಸಿ ಮುದ್ದು ಮಾಡಬೇಕೆನಿಸುತ್ತೆ.

ಈಗ ನೀನು ಇದ್ದಕ್ಕಿದ್ದಂತೆ ಸಣ್ಣ ಸೂಚನೆಯನ್ನೇ ಕೊಡದೆ ನಿಂತ ವರ್ಷಧಾರೆಯಂತೆ ನಡೆದು ಬಿಟ್ಟಿದ್ದೀಯ. ಹಾಗೆ ನೀ ಹೋದ ನಂತರದ ನನ್ನೆಲ್ಲ ಪಡಿಪಾಟಲುಗಳನ್ನು ನಿನ್ನ ಮುಂದೆ ಹೇಳಿಕೊಂಡು ಪ್ರಯೋಜನವೂ ಇಲ್ಲ. ಆದರೆ ಅದೇನೇ ಕೆಲಸವಿದ್ದರೂ ಪ್ರತೀ ಮಳೆಗಾಲಕ್ಕೂ ಊರಿಗೆ ಓಡೋಡಿ ಬರುತ್ತೇನೆ. ಹೀಗೆಯೇ ಆ ಥಂಡಿ ಪರಿಸರದಲ್ಲಿ ನೆನಪುಗಳ ಮೂಟೆ ಬಿಚ್ಚಿಟ್ಟ್ಟು, ಹಾಡುಗಳನ್ನು ಹರಡಿಕೊಂಡು ಮೈಮರೆತು ಕೂತು ಬಿಡುತ್ತೇನೆ. ಆದರೆ ಈಗೊಂದಷ್ಟು ವರ್ಷಗಳಿಂದ ಗೌರಿ ಹಬ್ಬದ ಹಿಂಚು ಮುಂಚಲ್ಲೇ ಬರಲು ಶುರುವಿಟ್ಟಿದ್ದೇನೆ. ಗಣಪತಿ- ಗೌರಿಯರ ಮೇಲಿನ ಭಕ್ತಿಯಿಂದಲ್ಲ; ನೀನಾಗ ತೌರಿಗೆ ಬರಬಹುದೆಂಬ ನಿರೀಕ್ಷೆಯಿಂದ..

ಒಂದು ಬಾರಿ ನಿನ್ನನ್ನು ಕಣ್ತುಂಬಿಕೊಳ್ಳಬೇಕೆಂಬ ಆಸೆಯಷ್ಟೆ. ಪಾಪಿ, ನೀನು ಇದುವರೆಗೆ ಆ ಖುಷಿಯನ್ನೂ ನಂಗೆ ಸಿಕ್ಕಲು ಬಿಡಲಿಲ್ಲ. ಆದರೆ ನಿನ್ನನ್ನ, ನಿನ್ನ ನೆನಪುಗಳನ್ನ, ಈ ಹಾಳು ಜಾಗಗಳನ್ನು ಮರೆತೇ ಬಿಡಬೇಕಂತ ಸಾವಿರ ಸರ್ಕಸ್ಸು ನಡೆಸುತ್ತೇನೆ. ಹಾಗೆ ಅರೆಕ್ಷಣ ನೀನು ಮರೆತು ಹೋದಂತಾದರೆ ಈ ಬದುಕಿಗೆ ಯಾವ ರುಚಿಯೂ ಇಲ್ಲ ಅನ್ನಿಸುತ್ತೆ. ಖಾಲಿ ಖಾಲಿ ಭಾವ ಕಾಡುತ್ತೆ. ಅಂತಿಮವಾಗಿ ಮರೆಯುವ ಸರ್ಕಸ್ಸುಗಳೆಲ್ಲವೂ ನಿನ್ನ ನೆನಪಿನೆದುರು ಮಂಡಿಯೂರಿ ಸೋತು ಶರಣಾಗುತ್ತವೆ.

ಈಗ ನಿನ್ನ ಹಿಂದೆಯೇ ಹೊರಟು ಹೋದಂತಿರುವ ನನ್ನ ಲವಲವಿಕೆ, ಭರವಸೆ, ಗೆಲ್ಲುವ ಛಲಗಳನ್ನೆಲ್ಲ ಮತ್ತೆ ನನ್ನತ್ತ ಸೆಳೆಯುವ ಪ್ರಯತ್ನದಲ್ಲಿ ಬ್ಯುಸಿಯಾಗಿದ್ದೇನೆ. ತುಂಬಾ ನೊಂದುಕೊಳ್ಳುತ್ತೇನೆ, ತಬ್ಬಲಿಯಂತಾಗುತ್ತೇನೆಂದು ಗೊತ್ತಿದ್ದರೂ ಸಣ್ಣ ಸುಳಿವನ್ನೂ ಕೊಡದೆ ಹೊರಟು ಹೋದೆಯಲ್ಲ? ಅಂಥಾ ನೀನೇ ತಿರುಗಿ ನೋಡುವಂತೆ, ಅಚ್ಚರಿ ಪಡುವಂತೆ ಬೆಳೆದು ನಿಲ್ಲುತ್ತೇನೆ. ಆಗ ನಿನ್ನ ಕಣ್ಣುಗಳಲ್ಲಿ ಅಚ್ಚರಿಯೊಂದು ಫಳಗುಟ್ಟಿದರೆ ಈ ಬದುಕು ಸಾರ್ಥಕ.

ನನಗೇನು, ಈಗ ದುಃಖ ಅಭ್ಯಾಸವಾಗಿದೆ. ನಾನೇನು ಒಬ್ಬಂಟಿಯಲ್ಲ. ಜೊತೆಗೆ ಜಗಜಿತ್‌ಸಿಂಗ್‌ರ ಗಜಲುಗಳಿವೆ, ಸಿ.ಅಶ್ವತ್ಥ್‌ರ ಮಧುರ ಭಾವಗೀತೆಗಳಿದ್ದಾವೆ. ಶ್ರೇಯಾ ಘೋಶಾಲ್ ಮುದ ನೀಡುತ್ತಾಳೆ… ಮತ್ತೂ ಬೇಸರಾದರೆ ಸಾವಿರ ಪುಸ್ತಕಗಳೂ ಇದ್ದಾವೆ. ಅದ್ಯಾವುದರಿಂದಲೂ ಬೇಸರ ನೀಗಲಿಲ್ಲ ಅಂತಿಟ್ಕೊ, ಜನುಮಕ್ಕಾಗುವಷ್ಟು ಕೆಲಸಗಳಿವೆ. ಹಾಗಂತ ನಿನ್ನ ಮೇಲೆ ನನಗೇನೂ ಸಿಟ್ಟಿಲ್ಲ, ದ್ವೇಷವೂ ಇಲ್ಲ. ಅದೆಲ್ಲ ಇರೋದು ನನ್ನ ಮೇಲೆಯೇ!

ಇಷ್ಟೆಲ್ಲಾ ತಳಮಳಗಳನ್ನಿಟ್ಟುಕೊಂಡರೂ ಕುಸಿಯದೇ ಮುಂದುವರೆಯುತ್ತಿದ್ದೇನೆ. ಮುಂದೆಂದಾದರೊಮ್ಮೆ ಈ ಬದುಕಿನ ಹಾದಿಯಲ್ಲಿ ನೀ ಎದುರುಗೊಳ್ಳಬಹುದೆಂಬ ನಿರೀಕ್ಷೆಗಳೂ ಇತ್ತಿತ್ತಲಾಗಿ ಸತ್ತಿವೆ. ಉಳಿದಿರೋದು ನೆನಪು ಮಾತ್ರ. ಅಂಥಾ ಸಾವಿರ ನೆನಪುಗಳನ್ನಾದರೂ ನನಗಾಗಿ ಬಿಟ್ಟು ಹೋದ ನಿನ್ನ ಬದುಕು ಹಸನಾಗಿರಲೆಂದೇ ಸದಾ ಬಯಸುತ್ತೇನೆ.
                                                                       -ನಿನ್ನವನು

[adning id="4492"]

LEAVE A REPLY

Please enter your comment!
Please enter your name here