ಅಹಲ್ಯೆಯಾಗಲಾರೆ ಹುಡುಗಾ ಶಾಕುಂತಲೆಯಾದೇನು!

[adning id="4492"]

ಮುತ್ತಿಕೊಂಡು ಕಾಡಿ ಕಂಗೆಡಿಸೋ ನೆನಪುಗಳಿಂದ ತಪ್ಪಿಸಿಕೊಳ್ಳುವುದಕ್ಕೂ ನಿಮಗೆ ಭಗವಂತ ರಾಜಾರೋಷದ ರಾಜಮಾರ್ಗಗಳನ್ನೇ ಸೃಷ್ಟಿಸಿಟ್ಟಿದ್ದಾನೆ. ಸೀದಾ ಹೋಗಿ ಇರಿಕ್ಕು ಗಲ್ಲಿಗಳಲ್ಲೊಂದು ಬೇಕರಿ ಹುಡುಕಿ ಒಂದರ್ಧ ಟೀ ಜೊತೆಗೊಂದು ಸಿಗರೇಟು ಸುಟ್ಟರೂ ನಿಮ್ಮ ವಿರಹಕ್ಕೆ, ಬೇಗುದಿಗಳಿಗೆ ತಾತ್ಕಾಲಿಕವಾದೊಂದು ರಿಲೀಫು. ನಾವು ಹುಡುಗೀರ ಹಣೇಬರ ನೋಡು… ಸುಮ್ಮನೆ ಪ್ರೀತಿಸಿದ ಜೀವದ ನೆನಪಾಗಿ ಮಂಕು ಮಂಕಾದರೂ ಮನೆಮಂದಿಯೆಲ್ಲರ ತನಿಖೆ ಎದುರಿಸಬೇಕು. ಸೈರಿಸಿಕೊಳ್ಳಲಾರದೆ ಕಣ್ಣಾಲಿಗಳು ತುಂಬಿಬಂದರೂ ದುಗುಡವೆಲ್ಲ ಖಾಲಿಯಾಗೋವಂತೆ ಅತ್ತು ಬಿಡುವ ಸ್ವಾತಂತ್ರ್ಯವೂ ಇಲ್ಲ. ಇಂಥಾ ಎಲ್ಲಾ ಪಡಿಪಾಟಲುಗಳನ್ನೂ ನನ್ನತ್ತ ಎಸೆದು ಹೋದ ನಿಂಗೆ ಬಹುಶಃ ನನ್ನೀ ಪರದಾಟಗಳ ಬಗ್ಗೆ ಕಲ್ಪನೆಯೂ ಇರಲಿಕ್ಕಿಲ್ಲ. ಈ ವಿರಹ ನೀಗಿಕೊಳ್ಳುವ ವಿಚಾರದಲ್ಲಿ ನಿನ್ನ ಗಂಡು ಜನುಮವೇ ಬೆಟರು ಮಹರಾಯಾ!

ನೀನೀಗ ಎಲ್ಲಿದ್ದಿ, ಹ್ಯಾಗಿದ್ದಿ ಎಂಬುದಿರಲಿ. ನಿನ್ನ ಹೆಸರೇನೆಂಬುದೂ ಖಾತರಿಯಿಲ್ಲ. ಆದರೂ ಈ ಜೀವ ನಿನ್ನ ಗೈರು ಹಾಜರಿಯಿಂದ ಕಂಗಾಲಾಗಿದೆಯೆಂದರೆ ನಾನು ಪ್ರೀತೀಲಿ ಬಿದ್ದಿರೋದಕ್ಕೆ ಬೇರ‍್ಯಾವ ಸಾಕ್ಷಿಗಳೂ ಬೇಡ ಅನ್ನಿಸುತ್ತೆ. ಈ ಪ್ರೀತಿ, ಭಾವುಕ ತೊಳಲಾಟಗಳನ್ನೆಲ್ಲ ಆಡಿಕೊಂಡು ಓಡಾಡುತ್ತಿದ್ದವಳು ನಾನು. ಹೊರ ಜಗತ್ತಿಗೆ ಪ್ರಾಕ್ಟಿಕಲ್ ಹುಡುಗಿ. ನಾನಾದರೂ ಅದೇ ಭ್ರಮೆಯಲ್ಲಿಯೇ ಓಡಾಡುತ್ತಿದ್ದೆ. ಆದರೆ ನನ್ನೊಳಗೂ ಒಂದು ನವಿರು ಭಾವಗಳ ಝರಿ ಹರಿಯುತ್ತಿದೆ ಎಂಬ ಅರಿವಾಗಿದ್ದೇ ನೀ ಕಣ್ಣೆದುರು ಸುಳಿದಾಡಿದ ನಂತರ. ಈಗ ನನಗೆ ನಾನೇ ಹೊಸಬಳಾಗಿ ಕಾಣುತ್ತಿದ್ದೇನೆ. ನನ್ನ ಗಾಬರಿ, ನಿರೀಕ್ಷೆ, ತಲ್ಲಣಗಳನ್ನು ಕಂಡು ವರ್ಷಾಂತರಗಳಿಂದ ಜೊತೆಯಾಗಿರೋ ಗೆಳತಿಯರೇ ಕಂಗಾಲಾಗಿದ್ದಾರೆ. ಪ್ರೀತಿಯ ಜೊತೆ ಜೊತೆಗೇ ಇಡೀ ಜೀವದ ತುಂಬಾ ಹೊಸಾ ಕಣ್ಣುಗಳೂ ಮೂಡುತ್ತವಂತ ನಂಗೊತ್ತಾಗಿದ್ದೇ ಈಗೀಗ.

ನೈಂಟೀನ್ ಫಾರ್ಟಿಸೆವೆನ್ ಮೂಡಲ್ಲಿ ಲವ್ ಮಾಡ್ತಿದೀಯಲ್ಲೇ ಅಂತ ಫ್ರೆಂಡ್ಸೆಲ್ಲ ಆಗಾಗ ಕಿಚಾಯಿಸ್ತಾರೆ. ನಂಗಂತೂ ಒಂದೂ ಅರ್ಥವಾಗುತ್ತಿಲ್ಲ. ಈ ಜನಜಾತ್ರೆಯ ಗಲ್ಲಿಗಳಲ್ಲೆಲ್ಲೋ ಹಠಾತ್ತನೆ ನೀನೆದುರಾದೀಯೆಂಬೋ ನಿರೀಕ್ಷೆಯಿಂದ, ಅಂಥಾದ್ದೊಂದು ಪವಾಡ ಆದಷ್ಟು ಬೇಗನೆ ನಡೆದು ಬಿಡಲೆಂಬ ಹಂಬಲದಿಂದ ನಿಂಗಾಗೇ ಹುಡುಕುತ್ತಿದ್ದೇನೆ. ನಿನ್ನ ಬಳಿ ಒಂದೂ ಮಾತೂ ಆಡದೇ ಇರಬಹುದು. ಆದರೆ ನಂಗೊತ್ತು… ಇನ್ನೊಂದೆರಡು ದಿನ ಕಳೆದಿದ್ದರೂ ನನ್ನೆದುರು ಬಂದು ನಿಂತು ನೀ ಖಂಡಿತಾ ಪ್ರೀತಿ ಹೇಳಿಕೊಳ್ಳುತ್ತಿದ್ದೆ. ನೀನು ಪ್ರತೀ ಸಾರ್ತಿ ಎದುರಾದಾಗಲೂ ಫ್ರೆಂಡ್ಸೆಲ್ಲಾ ‘ಈವತ್ತು ಏನಾದ್ರೂ ಹೇಳ್ತಾನೆ ಕಣೇ’ ಅಂತ ದಿಗಿಲು ಹುಟ್ಟಿಸುತ್ತಿದ್ದರು. ನಾನು ದಿಗಿಲು ಬಚ್ಚಿಟ್ಟುಕೊಂಡೇ ಆ ಕ್ಷಣಕ್ಕಾಗಿ ಕಾಯುತ್ತಿದ್ದೆ. ಆದರೆ ನಾ ಬಯಸಿದ ಆ ಮಧುರ ಕ್ಷಣ ನಿನ್ನ ಸಮೇತ ಮಾಯವಾದರೆ ಬೇಜಾರಾಗದೇ ಇರುತ್ತಾ ಹೇಳು?

ಅದೆಲ್ಲಿ ಹೋಗಿದ್ದೀಯೋ ಅದೇನೂ ಕಥೆಯೋ ನಂಗೊತ್ತಿಲ್ಲ. ಆದರೆ ನೀನು ಆದಷ್ಟು ಬೇಗನೆ ನನ್ನೆದುರು ಬಂದೇ ಬರುತ್ತಿ. ಮತ್ತೆ ಕಣ್ಣಲ್ಲೇ ಕಿಚಾಯಿಸಿ ಎಲ್ಲವನ್ನೂ ಹೇಳಿ ಬಿಡುತ್ತಿಯಂತ ಈ ಜೀವ ಪದೇ ಪದೇ ಹೇಳುತ್ತೆ. ಆ ಕ್ಷಣ ಆದಷ್ಟು ಬೇಗ ಬರಲಿ ಅಂತ ಹೆಜ್ಜೆ ಹೆಜ್ಜೆಗೂ ಬೇಡಿಕೊಳ್ಳುತ್ತೇನೆ. ಈಗೀಗಂತೂ ನನ್ನ ಅವಸ್ಥೆ ನೋಡಲಾಗದೆ ಗೆಳತೀರೆಲ್ಲಾ ನಿನ್ನ ಹುಡುಕೋ ಕೆಲಸಕ್ಕಿಳಿದಿದ್ದಾರೆ. ಮನೆಯಿಂದ ಯಾವ ಕೆಲಸಕ್ಕಾಗಿ ಹೊರ ಹೋದರೂ ಅವರೆಲ್ಲರ ಪ್ರಧಾನ ಉದ್ದೇಶ ನಿನ್ನನ್ನು ಪತ್ತೆಹಚ್ಚಿ ನನ್ನನ್ನು ಮೊದಲಿನಂತೆ ನೋಡೋದೇ… ಅವರಿಗೆಲ್ಲಾ ಇಂಥಾ ಗೊತ್ತು ಗುರಿಯಿಲ್ಲದ ಹಂಬಲಿಕೆಯೇ ಯಾವ ಅನಾಹುತ ಸೃಷ್ಟಿಸಿಬಿಡುತ್ತದೋ ಎಂಬ ಭಯ. ಆದರೆ ಹುಡುಗಾ ನಿನ್ನ ನೆನಪು, ನಿರೀಕ್ಷೆಗಳ ನೆರಳೊಂದಿದ್ದರೂ ಸಾಕು, ಬದುಕಿಗಂಟಿಕೊಳ್ಳುವ ಎಲ್ಲ ದುಃಖ ದುಮ್ಮಾನಗಳನ್ನೂ ಮೀರಿ ಖುಷಿಯಾಗಿರುತ್ತೇನೆ.

ನಿಂಗೊತ್ತಾ… ನಿನ್ನದೊಂದು ತುಂಟ ನೋಟಕ್ಕಾಗಿ ಹೀಗೆ ಉಸಿರನ್ನೇ ಹಾಸಿಕೊಂಡು ಕಾಯೋದರಲ್ಲಿಯೂ ಒಂದು ಸುಖವಿದೆ. ಇಂಥಾ ಗಾಢ ನಿರೀಕ್ಷೆಗಳನ್ನು ಅದೆಷ್ಟು ವರುಷಗಳು ಸವರಿಕೊಂಡು ಹೋದರೂ ಕೂಡಾ ಅದರ ಅರಿವೇ ಆಗುವುದಿಲ್ಲವೇನೋ… ಹಾಗಂತ ನಾನು ಅಹಲ್ಯೆ ಆಗಲಾರೆ. ಆದರೆ ಈ ಜನುಮ ಪೂರ್ತಿ ಶಬರಿಯ ನಂಬಿಕೆ ಬೆರೆತ ಕಾತರವನ್ನೇ ಎದೆ ತುಂಬಿಕೊಂಡುಯ ಶಾಕುಂತಲೆಯಾದೇನು. ಆದರೆ ಹುಡುಗ ನೀ ಬಂದೇ ಬರುತ್ತೀಯೆಂಬ ನಿರೀಕ್ಷೆಯಲ್ಲಿ ನನ್ನಿಡೀ ಬದುಕನ್ನು ಶೃಂಗರಿಸಿಕೊಳ್ಳುತ್ತಾ ಬದುಕುವುದರಲ್ಲಿಯೂ ಸುಖವಿದೆ…

                                        -ನಿನ್ನವಳು

[adning id="4492"]

LEAVE A REPLY

Please enter your comment!
Please enter your name here