ಆನೆಬಲ: ಹಳ್ಳಿ ಬದುಕಿನ ಹಸನಾದ ಕಥೆಯ ಚೆಂದದ ಚಿತ್ರ!

ಸ್ಟಾರ್ ನಟರು ಮುಖ್ಯಭೂಮಿಕೆಯಲ್ಲಿದ್ದರೆ ಪ್ರಚಾರವೆಂಬುದು ತಂತಾನೇ ಸಿಗುತ್ತದೆ. ಆದರೆ ಒಂದು ಸಿನಿನಾದ ತುಂಬ ಹೊಸಬರೇ ಇದ್ದರೂ ಕಂಟೆಂಟು ಗಟ್ಟಿಯಾಗಿದೆ ಎಂಬ ಸುಳಿವು ಸಿಕ್ಕರೆ ಕನ್ನಡದ ಪ್ರೇಕ್ಷಕರು ಯಾವತ್ತಿಗೂ ಕೈಬಿಟ್ಟ ಉದಾಹರಣೆಗಳಿಲ್ಲ. ಇಂಥಾ ಸಿನಿಮಾಗಳ ಪ್ರಚಾರಕ್ಕು ಕೂಡಾ ಯಾವುದೇ ರೀತಿಯಿಂದಲೂ ತತ್ವಾರವಾಗುವುದಿಲ್ಲ. ಇದಕ್ಕೆಲ್ಲ ಸೂಕ್ತ ಉದಾಹರಣೆಯಂತೆಯೇ ಸಾಗಿ ಬಂದಿದ್ದ ಆನೆಬಲ ಚಿತ್ರವಿಂದು ತೆರೆಗಂಡಿದೆ. ನೋಡುಗರನ್ನೆಲ್ಲ ಪಕ್ಕಾ ಹಳ್ಳಿ ಜಗತ್ತಿನಲ್ಲಿ ಸುತ್ತಾಡಿಸಿ, ಅಲ್ಲಿನ ಸಂಸ್ಕೃತಿ, ಭಾಷಾ ಸೊಗಡಿನ ಮೂಲಕ ಮುದಗೊಳಿಸುತ್ತಲೇ ಚೆಂದದ ಕಥೆಯೊಂದಿಗೆ ಸಂತೃಪ್ತಗೊಳಿಸಿದೆ. ಈ ಮೂಲಕ ಇದೊಂದು ಅಪರೂಪದ ಹಳ್ಳಿ ಘಮಲಿನ ದೃಷ್ಯ ಕಾವ್ಯವಾಗಿ ದಾಖಲಾಗುತ್ತದೆ.


ಇದು ಸಂಪೂರ್ಣವಾಗಿ ಹಳ್ಳಿ ವಾತಾವರಣದಲ್ಲಿಯೇ ಘಟಿಸುವ ಕಥಾನಕದ ಚಿತ್ರ. ಅದ್ಯಾವ ನಗರದ ಜಂಜಾಟದಲ್ಲಿ ಕಳೆದು ಹೋದವರೂ ಕೂಡಾ ತಂತಮ್ಮ ಹಳ್ಳಿಯ ನೆನಪುಗಳನ್ನು ನೇವರಿಸಿಕೊಳ್ಳುವಂತೆ ಮಾಡೋ ದೃಷ್ಯದಿಂದಲೇ ಈ ಚಿತ್ರ ಆರಂಭವಾಗುತ್ತದೆ. ಆ ನಂತರದ ಕಥೆಯ ಗಾಲಿ ಹಳ್ಳಿ ಬದುವನ್ನು ದಾಟಿ ಆಚೀಚೆ ಹೋಗುವುದಿಲ್ಲ. ಇಲ್ಲಿನ ಕಥೆಗೆ ಹಳ್ಳಿ ದೃಷ್ಯಗಳಾಚೆಗಿನ ಚಲನೆ ಬೇಕಿತ್ತೆಂದು ಅನ್ನಿಸುವುದೂ ಇಲ್ಲ. ಇಲ್ಲಿ ಯಾವುದೇ ಬಿಲ್ಡಪ್ಪುಗಳಿಲ್ಲ. ಆದರೆ ಆಯಾ ಸನ್ನಿವೇಷಗಳೇ ಅದೆಲ್ಲವನ್ನೂ ಒದಗಿಸುವಂಥಾ ಕಲಾತ್ಮಕ ಹಾದಿಯಲ್ಲಿ ನಿರ್ದೇಶಕರು ಈ ಸಿನಿಮಾವನ್ನು ರೂಪಿಸಿದ್ದಾರೆ. ಇಂಥಾ ಸಹಜ ಸ್ಥಿತಿಯೂ ಕೂಡಾ ಆನೆಬಲದ ನಿಜವಾದ ಬಲದಂತೆ ಕಾಣಿಸುತ್ತದೆ.


ಸಾಗರ್ ಇಲ್ಲಿ ಹಳ್ಳಿ ಹುಡುಗ ಶಿವು ಎಂಬ ಪಾತ್ರದಲ್ಲಿ ನಟಿಸಿದ್ದಾರೆ. ಇಲ್ಲಿ ಹತ್ತಾರು ಪಾತ್ರಗಳು ಕದಲುತ್ತಿರುತ್ತವಾದರೂ ಶಿವು ಎಂಬೋ ಪಾತ್ರ ಅದೆಲ್ಲದರ ಕೇಂದ್ರಬಿಂದುವಿನಂಥಾದ್ದು. ಹಳ್ಳಿ ಸೀಮೆಯಲ್ಲಿ ನಡೆಯೋ ರಾಗಿಮುದ್ದೆ ಊಟದ ಸ್ಪರ್ಧೆ ಇಒಡೀ ಕಥೆಯ ಜೀವಾಳ. ಆ ನಂತರದ ಘಟನಾವಳಿಗಳೆಲ್ಲವೂ ರಾಗಿಮುದ್ದೆಗೆ ಅಂಟಿಕೊಂಡಂತೆ ಕಾಣುತ್ತವೆ. ಅಂಥಾ ರಾಗಿಮುದ್ದೆ ಊಟದ ಸ್ಪರ್ಧೆಯಲ್ಲೊಂದು ಅಚಾತುರ್ಯ ಸಂಭವಿಸುತ್ತೆ. ಅದರಿಂದ ಕಸಿವಿಸಿಗೀಡಾದ ಮನಸುಗಳನ್ನೆಲ್ಲ ಶಿವು ಹೇಗೆ ಬೆಸೆಯುತ್ತಾನೆಂಬುದರ ಸುತ್ತ ಹಲವಾರು ಕೊಂಬೆ ಕೋವೆಗಳ ಕಥೆ ಗಿರಕಿ ಹೊಡೆಯುತ್ತದೆ. ಆದರೆ ಕಥೆಯ ಓಘ ಎಲ್ಲಿಯೂ ಏಕತಾನತೆ ಹುಟ್ಟಿಸದಂತೆ ನಿರ್ದೇಶಕರು ಎಚ್ಚರವಹಿಸಿದ್ದಾರೆ. ಅದರಲ್ಲಿಯೇ ನಿರ್ದೇಶಕ ಸೊನಗಹಳ್ಳಿ ರಾಜು ಅವರ ಗೆಲುವೂ ಅಡಗಿದೆ.


ಹಳ್ಳಿ ವಾತಾವರಣದ ಅಷ್ಟೂ ಮೋದಗಳನ್ನು ಪ್ರೇಕ್ಷಕರ ಬೊಗಸೆ ತುಂಬುವಂತೆ ಈ ಚಿತ್ರ ಮೂಡಿ ಬಂದಿದೆ. ಇಲ್ಲಿ ನಾಯಕನ ಮುದ್ದಾದ ಲವ್ ಸ್ಟೋರಿ ಕೂಡಾ ಇದೆ. ಅದನ್ನೂ ಕೂಡಾ ನಿರ್ದೇಶಕರು ಚೆಂದಗೆ ಕಟ್ಟಿಕೊಟ್ಟಿದ್ದಾರೆ. ಇಲ್ಲಿ ಪ್ರಧಾನವಾಗಿ ನಾಯಕ ಮತ್ತು ನಾಯಕ ಪಾತ್ರಗಳ ಪ್ರೌಢ ನಟನೆ ಎದ್ದು ಕಾಣಿಸುತ್ತದೆ. ನಟನೆಯ ಬಗ್ಗೆ ಗೊತ್ತಿಲ್ಲದವರ ಪಾತ್ರಗಳನ್ನೂ ಕೂಡಾ ನಿರ್ದೇಶಕರು ಅಷ್ಟೇ ಪರಿನಾಮಕಾರಿಯಾಗಿ ನಿಭಾಯಿಸಿದ್ದಾರೆ. ನಿರ್ಮಾಪಕ ವೇಣುಗೋಪಾಲ್ ಅಡಕಿಮಾರನಹಳ್ಳಿಯವ ನಿರ್ಮಾಣದ ಶ್ರಮ ಕೂಡಾ ಈ ಚಿತ್ರ ಅದ್ದೂರಿಯಾಗಿ, ಪರಿಣಾಮಕಾರಿಯಾಗಿ ಮೂಡಿಬರಲು ಕಾರಣವಾಗಿದೆ.


ನಿರ್ದೇಶಕ ರಾಜು ಸೊನಗಹಳ್ಳಿ ಇಲ್ಲಿ ಪ್ರತೀ ಪಾತ್ರಗಳನ್ನೂ ನೆನಪಲ್ಲುಳಿಯುವಂತೆ ರೂಪಿಸಿದ್ದಾರೆ. ಅದನ್ನು ನಿಭಾಯಿಸಿರುವ ಕಲಾವಿದರದ್ದೂ ಕೂಡಾ ಮೆಚ್ಚಿಕೊಳ್ಳುವಂಥಾ ನಟನೆ. ಇನ್ನುಳಿದಂತೆ ಪೂರ್ಣಚಂದ್ರ ತೇಜಸ್ವಿಯವರ ಸಂಗೀತ ಮತ್ತೆ ಗೆದ್ದಿದೆ. ಅದು ಆನೆ ಬಲದ ನಿಜವಾದ ಬಲದಂತೆಯೂ ಕಾಣಿಸುತ್ತದೆ. ಕ್ಯಾಮೆರಾ ವರ್ಕ್, ಸಂಕಲನ ಸೇರಿದಂತೆ ಎಲ್ಲದರಲ್ಲಿಯೂ ತಾಜಾತನವಿದೆ. ಈ ಎಲ್ಲ ಅಂಶಗಳೊಂದಿಗೆ ಈ ಚಿತ್ರ ಈ ವರ್ಷದ ವಿಶಿಷ್ಟ ಸಿನಿಮಾವಾಗಿ ನೆಲೆ ಕಂಡುಕೊಂಡಿದೆ. ಎಲ್ಲ ಜಂಜಾಟಗಳಿಂದ ತಪ್ಪಿಸಿಕೊಂಡು ನಿಸೂರಾಗಲು ಈ ಸಿನಿಮಾವನ್ನೊಮ್ಮೆ ನೋಡಬೇಕಿದೆ.

ರೇಟಿಂಗ್:3.5/5

LEAVE A REPLY

Please enter your comment!
Please enter your name here