ಮುಂದಿನ ತಿಂಗಳು ಸಿನಿಮಾ ಮಂದಿರಗಳಲ್ಲಿ ಘೀಳಿಡಲಿದೆ ಸಲಗ!

ದುನಿಯಾ ವಿಜಯ್ ಮೊದಲ ಸಲ ನಿರ್ದೇಶನಕ್ಕೆ ಕೈಯಿಟ್ಟಿರೋ ಚಿತ್ರ ಸಲಗ. ಸೂರಿ ನಿರ್ದೇಶನದ ದುನಿಯಾದಿಂದ ಆರಂಭವಾಗಿ ಇದುವರೆಗೂ ಹಲವಾರು ಚಿತ್ರಗಳಲ್ಲಿ, ಥರ ಥರದ ಪಾತ್ರಗಳಲ್ಲಿ ನಾಯಕನಾಗಿ ಮಿಂಚುತ್ತಾ ಬಂದಿದ್ದ ವಿಜಯ್ ಪಾಲಿಗಿದು ಹೊಸಾ ಹೆಜ್ಜೆ. ಆದರೆ ಆರಂಭಿಕ ಹಂತದಿಂದ ಇಲ್ಲಿಯವರೆಗೂ ಸಲಗ ಹೊಸತನದೊಂದಿಗೇ ಘೀಳಿಡುತ್ತಾ ಸಾಗಿ ಬಂದಿದೆ. ಹಂತ ಹಂತವಾಗಿ ಫೋಟೋ, ಪೋಸ್ಟರ್‌ಗಳನ್ನು ಲಾಂಚ್ ಮಾಡುತ್ತಾ ಕುತೂಹಲ ಕಾಯ್ದಿಟ್ಟುಕೊಳ್ಳುತ್ತಿರೋ ವಿಜಯ್ ಸದಾ ಕಾಲವೂ ಸಲಗ ಅಬ್ಬರಿಸಿ ಘೀಳಿಡುವಂತೆ ನೋಡಿಕೊಂಡು ಬಂದಿದ್ದಾರೆ. ಹೋಗೊಂದು ಕ್ರೇಜ್ ಸೃಷ್ಟಿಸಿರೋ ಈ ಚಿತ್ರವನ್ನು ನೋಡಲು ಪ್ರೇಕ್ಷಕರೆಲ್ಲ ಕಾದು ಕೂತಿದ್ದಾರೆ. ಆದರೆ ಯಾವತ್ತು ಸಲಗ ಬಿಡುಗಡೆಯಾಗುತ್ತದೆ ಅನ್ನೋದು ಮಾತ್ರ ಜಾಹೀರಾಗಿರಲಿಲ್ಲ. ಇದೀಗ ಸಲಗ ಪ್ರೇಕ್ಷಕರ ಮುಂದೆ ಆಗಮಿಸಲು ಮುಹೂರ್ತ ನಿಗಧಿಯಾಗಿದೆ.


ಮುಂದಿನ ತಿಂಗಳು ಇಪ್ಪತ್ತೇಳನೇ ತಾರೀಕಿನಂದು ಸಲಗ ಸಿನಿಮಾ ಮಂದಿರಗಳಲ್ಲಿ ಘೀಳಿಡಲಿದೆ. ವಿಜಯ್ ಅಂದುಕೊಂಡಿದ್ದಕ್ಕಿಂತಲೂ ವೇಗವಾಗಿಯೇ ಸಲಗ ಚಿತ್ರೀಕರಣವನ್ನು ಮುಗಿಸಿಕೊಂಡಿದ್ದಾರೆ. ಈಗ ಬಾಕಿ ಉಳಿದುಕೊಂಡಿರೋದು ಕೆಲವೇ ಕೆಲ ,ಕೆಲಸ ಕಾರ್ಯಗಳು ಮಾತ್ರ. ಇದರಲ್ಲಿಯೂ ವಿಶೇಷತೆ ಇರಬೇಕೆಂದು ಬಯಸಿರೋ ವಿಜಿ ಮೈನವಿರೇಳಿಸುವಂಥಾ ಸಾಹಸ ಸನ್ನಿವೇಶಗಳಿಗೂ ನೀಲ ನಕ್ಷೆ ರೆಡಿ ಮಾಡಿಕೊಂಡು ಅದರಂತೆಯೇ ದೃಷ್ಯ ಕಟ್ಟಿದ್ದಾರೆ. ಅಂದಹಾಗೆ ಇದು ಕನ್ನಡ ಚಿತ್ರರಂಗದ ಅದ್ದೂರಿ ಚಿತ್ರಗಳ ನಿರ್ಮಾಪಕ ಕೆ ಪಿ ಶ್ರೀಕಾಂತ್ ನಿರ್ಮಾಣ ಮಾಡಿರುವ ಚಿತ್ರ. ಶ್ರೀಕಾಂತ್ ಅವರ ನಿರ್ಮಾಣ, ವಿಜ ನಿರ್ದೇಶನ ಮತ್ತು ನಟನೆಯ ಮೂಲಕವೇ ಸಲಗ ಸೃಷ್ಟಿಸಿರೋ ಕ್ರೇಜ್ ಕಡಿಮೆಯದ್ದೇನಲ್ಲ.


ದುನಿಯಾ ವಿಜಯ್ ಪಾಲಿಗೆ ಇದು ಹೊಸಾ ಯಾನ. ಇದುವರೆಗೂ ನಾಯಕ ನಟನಾಗಿದ್ದ ಅವರೀಗ ಸಲಗ ಮೂಲಕ ನಿರ್ದೇಶಕನಾಗಿಯೂ ಛಾಪು ಮೂಡಿಸುವ, ಭರಪೂರ ಗೆಲುವು ದಾಖಲಿಸುವ ಆಕಾಂಕ್ಷೆಯೊಂದಿಗೆ ಹೆಜ್ಜೆಯಿಡುತ್ತಿದ್ದಾರೆ. ಹಾಗಂತ ಅವರೇನು ಏಕಾಏಕಿ ನಿರ್ದೇಶಕನಾಗಿ ಅಖಾಡಕ್ಕಿಳಿದಿಲ್ಲ. ಇದರ ಹಿಂದೆ ಅದೆಷ್ಟೋ ತಿಂಗಳ ಪೂರ್ವ ತಯಾರಿಯಿದೆ. ನಿರ್ದೇಶನದ ಬಗ್ಗೆ ಇಂಚಿಂಚು ಅರಿತುಕೊಂಡು, ಕಥೆಯನ್ನು ಒಪ್ಪ ಓರಣ ಮಾಡಿಕೊಂಡು ಸಮರ್ಥವಾದ ತಂಡದೊಂದಿಗೇ ಅವರು ಎಂಟ್ರಿ ಕೊಟ್ಟಿದ್ದಾರೆ. ಈ ವರೆಗೂ ನಿಚ್ಚಳ ಗೆಲುವನ್ನು, ಸಾಕಷ್ಟು ಏಳುಬೀಳುಗಳನ್ನೂ ಕಂಡಿರುವ ವಿಜಯ್ ಪಾಲಿಗೆ ಸಲಗ ಅದ್ದೂರಿ ಗೆಲುವನ್ನೇ ದಯಪಾಲಿಸುತ್ತದೆ ಎಂಬ ನಂಬಿಕೆ ಸಿನಿಮಾ ಪ್ರೇಮಿಗಳಲ್ಲಿಯೇ ಇದೀಗ ನೆಲೆ ನಿಂತಿದೆ.


ಅಷ್ಟಕ್ಕೂ ಕೆ. ಶ್ರೀಕಾಂತ್‌ರಂಥಾ ಕಲೆಯ ಬಗ್ಗೆ ಕಾಳಜಿಯಿರೋ ಕನಸುಗಾರ ನಿರ್ಮಾಪಕರ ಸಾಥ್ ಸಿಕ್ಕಿದೆ ಎಂದ ಮೇಲೆ ಸಲಗ ಅದ್ದೂರಿಯಾಗಿಯೇ ಮೂಡಿ ಬರುತ್ತದೆ ಅನ್ನೋದರಲ್ಲಿ ಯಾವ ಸಂಶಯವೂ ಇಲ್ಲ. ದಶಕಗಳ ಕಾಲ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದುಕೊಂಡು ಇದೀಗ ಅದ್ದೂರಿ ಚಿತ್ರಗಳ ನಿರ್ಮಾಪಕರೆಂದೇ ಹೆಸರಾಗಿರುವ ಶ್ರೀಕಾಂತ್ ಸಲಗವನ್ನೂ ಕೂಡಾ ತಮ್ಮ ಎಂದಿನ ಶ್ರದ್ಧೆ ಮತ್ತು ಪ್ರೀತಿಯಿಂದಲೇ ನಿರ್ಮಾಣ ಮಾಡುತ್ತಿದ್ದಾರೆ. ಟಗರು ಎಂಬ ಭಿನ್ನ ಬಗೆಯ ಸೂಪರ್ ಹಿಟ್ ಚಿತ್ರವೇ ಶ್ರೀಕಾಂತ್ ಅವರ ಟೇಸ್ಟು ಎಂಥಾದ್ದೆಂಬುದಕ್ಕೆ ಸ್ಪಷ್ಟ ಸಾಕ್ಷಿ. ನಿರ್ಮಾಪಕ ಎಂದರೆ ಕಾಸು ಸುರಿಯೋದು ಮಾತ್ರವೇ ಅಲ್ಲ, ನಿರ್ಮಾಣ ಮಾಡೋ ಚಿತ್ರವನ್ನು ಪ್ರತೀ ಹಂತದಲ್ಲಿಯೂ ಕಣ್ಣಲ್ಲಿ ಕಣ್ಣಿಟ್ಟು ರೂಪಿಸೋದೆಂಬುದನ್ನು ನಂಬಿ ಅದಕ್ಕೆ ತಕ್ಕುದಾಗಿ ಸಾಗಿ ಬಂದಿರೋ ಶ್ರೀಕಾಂತ್ ಪಾಲಿಗೆ ಸಲಗ ಹೊಸಾ ಕನಸಿನಂಥಾ ಚಿತ್ರ.

LEAVE A REPLY

Please enter your comment!
Please enter your name here