ಗೆಲುವಿನ ಶಿಕಾರಿಯ ಭರವಸೆ ಹೊತ್ತು ಬಂದ ಟ್ರೇಲರ್!

ಕಾದಂಬರಿಕಾರನೊಬ್ಬನ ಬದುಕಿನ ಸುತ್ತ್ತಾ…
ಗಾಗಲೇ ಪ್ರತಿಭಾವಂತ ನಟನಾಗಿ ಗುರುತಿಸಿಕೊಂಡು ಬಹು ಬೇಡಿಕೆ ಪಡೆದುಕೊಂಡಿರುವವರು ಪ್ರಮೋದ್ ಶೆಟ್ಟಿ. ಕಿರಿಕ್ ಪಾರ್ಟಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಸೇರಿದಂತೆ ಅವನೇ ಶ್ರೀಮನ್ನಾರಾಯಣ ಚಿತ್ರದವರೆಗೂ ಪ್ರಮೋದ್ ನಿರ್ವಹಿಸಿರೋ ಪಾತ್ರಗಳು ಪ್ರೇಕ್ಷಕರ ಮೆಚ್ಚುಗೆ ಗಿಟ್ಟಿಸಿಕೊಂಡಿವೆ. ಅವರು ರಂಗಭೂಮಿಯಲ್ಲಿಯೇ ಹದಗೊಂಡು ನಟನಾಗಿ ರೂಪುಗೊಂಡಿರೋ ಪ್ರತಿಭೆ. ಕಮರ್ಶಿಯಲ್ ಜಾಡಿನ ಸಿನಿಮಾಗಳ ಮೂಲಕ ಗೆದ್ದರೂ ಕೂಡಾ ಹೊಸಾ ಅಲೆಯ, ಪ್ರಯೋಗಾತ್ಮಕ ಚಿತ್ರಗಳತ್ತ ಸದಾ ಅವರ ಒಲವಿದ್ದೇ ಇದೆ. ಅದೇ ಪ್ರೀತಿಯೊಂದಿಗೀಗ ಪ್ರಮೋದ್ ಶೆಟ್ಟಿ ಒಂದು ಶಿಕಾರಿಯ ಕಥೆ ಎಂಬ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದಾರೆ. ಇದೀಗ ಒಂದು ಶಿಕಾರಿಯ ಕಥೆಯ ಟ್ರೇಲರ್ ಬಿಡುಗಡೆಗೊಂಡಿದೆ.


ಒಂದು ಶಿಕಾರಿಯ ಕಥೆ ಮೂಲಕ ಪ್ರಮೋದ್ ಶೆಟ್ಟಿ ಕರಾವಳಿ ಸೀಮೆಯ ಪ್ರತಿಭೆ ಸಚಿನ್ ಶೆಟ್ಟಿಗೆ ಬೆಂಬಲ ನೀಡಿದ್ದಾರೆ. ಅತ್ಯಂತ ಸೂಕ್ಷ್ಮ ಕಥಾನಕವನ್ನೊಳಗೊಂಡಿರೋ ಈ ಕಥೆ ಬೆಳಕು ಕಾಣುವಲ್ಲಿಯೂ ಕೂಡಾ ಪ್ರಮೋದ್ ಪ್ರಧಾನ ಆಸಕ್ತಿ ತೋರಿಸಿದ್ದಾರೆ. ಕುಂದಾಪುರ ಸೀಮೆಯಿಂದ ಬಂದು ಆ ಭಾಗದಲ್ಲಿ ಘಟಿಸುವಂಥಾ ಕಥೆ ಹೊಸೆದಿರೋ ಸಚಿನ್ ಶೆಟ್ಟಿ ಮಜಬೂತಾದ ದೃಷ್ಯಕಾವ್ಯವನ್ನೇ ಅಣಿಗೊಳಿಸಿದ್ದಾರೆಂಬುದಕ್ಕೆ ಈಗ ಬಿಡುಗಡೆಯಾಗಿರುವ ಟ್ರೇಲರ್ ತುಂಬಾ ಸಾಕ್ಷಿಗಳು ಸಿಕ್ಕಿವೆ. ಕಡಲಿನ ಅಗಾಧ ಹರವಿನೊಂದಿಗೆ ತೆರೆದುಕೊಳ್ಳೋ ದೃಷ್ಯಾವಳಿಗಳು ಅದರ ಗರ್ಭದಷ್ಟೇ ನಿಗೂಢವಾದ ಕಥೆಯ ಹೊಳಹುಗಳನ್ನು ಹೊಮ್ಮಿಸಿವೆ. ಈ ಮೂಲಕ ಒಂದು ಶಿಕಾರಿಯ ಕಥೆಯದ್ದು ಈ ವರ್ಷದ ಪ್ರಾಮಿಸಿಂಗ್ ಟ್ರೇಲರ್ ಎಂಬ ಮೆಚ್ಚುಗೆಗಳೂ ಕೇಳಿ ಬರುತ್ತಿವೆ.


ಇದು ಐವತ್ತರ ಆಜೂಬಾಜಿನ ಕಾದಂಬರಿಕಾರನೊಬ್ಬನ ಸುತ್ತ ನಡೆಯೋ ಕಥೆಯನ್ನೊಳಗೊಂಡಿರುವ ಚಿತ್ರ. ಕಾದಂಬರಿಕಾರನಾಗಿ ಪ್ರಸಿದ್ಶಧಿ ಪಡೆದು ಹೆಂಡತಿಯಿಂದಲೂ ದೂರಾಗಿ ಕಡಲ ತಡಿಯಲ್ಲಿ ಒಬ್ಬಂಟಿಯಾಗಿ ಬದುಕೋ ವ್ಯಕ್ತಿಯ ಸುತ್ತಲಿನ ರೋಚಕ ಕಥೆ ಇಲ್ಲಿದೆ. ಇಲ್ಲಿರೋದು ಬರೀ ಶಿಕಾರಿಯಲ್ಲ; ಅದು ಭಾವನೆಗಳ ಶಿಕಾರಿ, ಮನೋ ವ್ಯಾಕುಲಗಳ ಶಿಕಾರಿ ಎಂಬ ಸುಳಿವು ಈ ಟ್ರೇಲರ್ ಮೂಲಕ ಸ್ಪಷ್ಟವಾಗಿಯೇ ರವಾನೆಯಾಗಿದೆ. ಕಾದಂಬರಿಕಾರನಾಗಿ ಕಲ್ಪನಾ ಜಗತ್ತಿನಲ್ಲಿಯೇ ವಿಹರಿಸುವ, ಏಕಾಕಿತನವನ್ನು ಇಷ್ಟಪಡುವ ವ್ಯಕ್ತಿ ಬಂದೂಕು ಹಿಡಿಯ ಬೇಕಾಗಿ ಬಂದಾಗ ಆಗುವ ಸ್ಥತ್ಯಂತರಗಳ ಕಥಾ ಎಳೆ ಇಲ್ಲಿದೆ.


ನಿರ್ದೇಶಕ ಸಚಿನ್ ಶೆಟ್ಟಿ ಮೊದಲ ಪ್ರಯತ್ನದಲ್ಲಿಯೇ ಮಜವಾದ ಕಥೆಯೊಂದನ್ನು ಮುಟ್ಟಿದ್ದಾರೆಂಬುದರಲ್ಲಿ ಯಾವ ಅನುಮಾನವೂ ಉಳಿದಿಲ್ಲ. ಪ್ರತೀ ಕ್ಷಣವೂ ಕುತೂಹಲದ ಉತ್ತುಂಗಕ್ಕೇರಿಸುವ, ನಾನಾ ಚಿತ್ರವಿಚಿತ್ರ ತಿರುವುಗಳಿರೋ ಈ ಚಿತ್ರ ಈ ವರ್ಷದ ಸೂಪರ್ ಹಿಟ್ ಆಗಿ ದಾಖಲಾಗುವ ಎಲ್ಲ ಲಕ್ಷಣಗಳೂ ಕಾಣಿಸಲಾರಂಭಿಸಿವೆ. ಯಕ್ಷಗಾನ ಸೇರಿದಂತೆ ಥ್ರಿಲ್ಲರ್ ಕಥೆಯೊಂದಿಗೆ ಕರಾವಳಿ ಸಂಸ್ಕೃತಿಯನ್ನೂ ಬೆರೆಸಿ ಸಚಿನ್ ದೃಷ್ಯ ಕಟ್ಟಿದ್ದಾರೆ. ಇಂಥಾ ಗಟ್ಟಿ ಕಥಾನಕವನ್ನೊಳಗೊಂಡಿರೋ ಈ ಚಿತ್ರದ ಟ್ರೇಲರ್ ಭರ್ಜರಿ ಗೆಲುವಿನ ಶಿಕಾರಿಯ ಭರವಸೆಯೊಂದಿಗೇ ಮೂಡಿ ಬಂದಿದೆ. ಇದನ್ನು ಯಾರೇ ನೋಡಿದರೂ ಕೂಡಾ ಸಿನಿಮಾವನ್ನು ನೋಡಲೇ ಬೇಕೆಂಬ ಕಾತರ ಮೂಡಿಕೊಳ್ಳದಿರಲು ಸಾಧ್ಯವೇ ಇಲ್ಲ. ಈ ಸಿನಿಮಾದೊಂದಿಗೆ ಪ್ರಮೋದ್ ಶೆಟ್ಟಿ ನಾಯಕನಾಗಿ ಬಡ್ತಿ ಹೊಂದಿದ್ದರೆ, ಸಿರಿ ಪ್ರಹ್ಲಾದ್, ಎಂ.ಕೆ ಮಠ, ಅಭಿಮನ್ಯು ಪ್ರಜ್ವಲ್, ಪ್ರಸಾದ್ ಚೆರ್ಕಾಡಿ ಮುಂತಾದವರು ಸಾಥ್ ಕೊಟ್ಟಿದ್ದಾರೆ. ಈ ಚಿತ್ರ ಇದೇ ಮಾರ್ಚ್ ೬ರಂದು ತೆರೆಗಾಣಲಿದೆ.

LEAVE A REPLY

Please enter your comment!
Please enter your name here