ಜಗ್ಗಿ ಜಗನ್ನಾಥ್: ಡೈಲಾಗ್‌ಗಳಲ್ಲೇ ಕೆಂಡ ಸುರಿದ ಸಾಯಿ ಕುಮಾರ್!

ಓಂ ಸಾಯಿಪ್ರಕಾಶ್ ನಿರ್ದೇಶನದ ಜಗ್ಗಿ ಜಗನ್ನಾಥ್ ಚಿತ್ರ ಈ ವಾರ ಬಿಡುಗಡೆಗೊಳ್ಳುತ್ತಿದೆ. ಆಯಾ ಕಾಲಕ್ಕೆ ತಕ್ಕಂತೆ ಅಪ್‌ಡೇಟ್ ಆಗುತ್ತಾ, ಆಯಾ ಕಾಲಘಟ್ಟದ ಪ್ರೇಕ್ಷಕರ ಅಭಿರುಚಿಗಳೇನೆಂಬುದನ್ನು ಮನನ ಮಾಡಿಕೊಂಡು ಮುಂದುವರೆಯುವವರು ಸದಾ ಕಾಲಕ್ಕೂ ಸಲ್ಲುತ್ತಾರೆ. ಕೌಟುಂಬಿಕ ಚಿತ್ರಗಳಿಗೆ ಪ್ರಸಿದ್ಧಿ ಪಡೆದುಕೊಂಡಿರುವ ನಿರ್ದೇಶಕ ಓಂ ಸಾಯಿ ಪ್ರಕಾಶ್ ಕೂಡಾ ಇದೀಗ ಅಂಥಾದ್ದೊಂದು ಬದಲಾವಣೆಗೆ ಒಗ್ಗಿಕೊಂಡಿದ್ದಾರೆ. ಅದೇನು ಅಂತಿಂಥಾ ಬದಲಾವಣೆಯಲ್ಲ. ಜಗ್ಗಿ ಜಗನ್ನಾಥ್ ಚಿತ್ರದ ಟ್ರೇಲರ್ ನೋಡಿದ ಎಲ್ಲರೂ ಹೌಹಾರುವಷ್ಟು ಓಂ ಸಾಯಿಪ್ರಕಾಶ್ ಬದಲಾಗಿದ್ದಾರೆ. ಈ ಬದಲಾವಣೆಗೆ ನಟ ಸಾಯಿಪ್ರಕಾಶ್ ಖಡಕ್ ಪಾತ್ರವೊಂದರ ಮೂಲಕ ಸರಿಯಾಗಿಯೇ ಸಾಥ್ ಕೊಟ್ಟಿದ್ದಾರೆ.


ಸಾಯಿಕುಮಾರ್ ಇತ್ತೀಚಿನ ದಿನಗಳಲ್ಲಿ ರೆಗ್ಯುಲರ್ ಜಾಡಿನಾಚೆಗೆ ಹೊಸಾ ಥರದ ಪಾತ್ರಗಳಿಗೆ ತೆರೆದುಕೊಂಡಿದ್ದರು. ಆ ನಂತರದಲ್ಲಿ ಅವರಿಗೆ ಆ ಬಗೆಯದ್ದೇ ಪಾತ್ರಗಳು ಒಲಿದು ಬರಲಾರಂಭಿಸಿದ್ದವು. ಅವರು ಯಾವ ಹಾದಿಯತ್ತ ಹೊರಳಿಕೊಂಡರೂ ಅಲ್ಲೊಂದು ಮೈಲಿಗಲ್ಲು ನಿರ್ಮಿಸುವ ಛಾತಿ ಹೊಂದಿರುವ ನಟ. ಆದರೆ ಅವರ ಅಭಿಮಾನಿ ಬಳಗ ಪೊಲೀಸ್ ಸ್ಟೋರಿ ಥರದ ಖಡಕ್ ಡೈಲಾಗು, ಹಾವಭಾವಗಳನ್ನೆಲ್ಲ ಮಿಸ್ ಮಾಡಿಕೊಳ್ಳುತ್ತಿದ್ದರು. ಅಂಥವರಿಗೆಲ್ಲ ಜಗ್ಗಿ ಜಗನ್ನಾಥ್ ಚಿತ್ರದಲ್ಲಿ ಸಾಯಿಕುಮಾರ್ ಅಬ್ಬರಿಸಿರೋ ರೀತಿ ಹಬ್ಬದಂತಿದೆ.


ಇದೊಂದು ಭೂಗತ ಜಗತ್ತಿನ ಕಥೆಯಿರೋ ಚಿತ್ರ. ಸಾಯಿಕುಮಾರ್ ಇಲ್ಲಿ ಖಡಕ್ ಪೊಲೀಸ್ ಅಧಿಕಾರಿಯಾಗಿ ನಟಿಸಿದ್ದಾರೆ. ಎರಡು ಶೇಡ್‌ಗಳಿರೋ ಪಾತ್ರವನ್ನುವರು ನಿಭಾಯಿಸಿದ್ದಾರಂತೆ. ಭೂಗತಕ್ಕಿಳಿದು ಮೆರೆಯೋ ಮಂದಿಗೆ ಸರಿ ದಾರಿ ತೋರಿಸೋ ಅವರ ಪಾತ್ರವೇ ಇಡೀ ಸಿನಿಮಾದ ಪ್ರಧಾನ ಆಕರ್ಷಣೆಯಂತೆ. ಬಹು ಕಾಲದ ನಂತರ ಇಂಥಾದ್ದೊಂದು ಪಾತ್ರ ತನಗಾಗಿ ಸೃಷ್ಟಿಯಾಗಿದ್ದರ ಬಗ್ಗೆ ಸಾಯಿಕುಮಾರ್ ಅವರಲ್ಲೊಂದು ಖುಷಿಯಿದೆ. ಅಂದಹಾಗೆ ನಿರ್ದೇಶಕ ಓಂ ಸಾಯಿಪ್ರಕಾಶ್ ಅವರಿಲ್ಲಿ ವಿಶಿಷ್ಟವಾದ ಕಥೆಗೆ ದೃಷ್ಯರೂಪ ನೀಡಿದ್ದಾರೆ. ಇಲ್ಲಿ ಸಾಮಾನ್ಯರಲ್ಲಿ ಸಾಮಾನ್ಯನಂತಿರೋ ಹುಡುಗನೋರ್ವ ಅಘೋರಿಯಾಗುವಂಥಾ ರೋಚಕ ಕಥೆಯೂ ಇದೆ. ಅದೆಲ್ಲವೂ ಇನ್ನೊಂದು ದಿನದೊಪ್ಪತ್ತಿನಲ್ಲಿಯೇ ನಿಮ್ಮ ಮುಂದೆ ತೆರೆದುಕೊಳ್ಳಲಿದೆ.

LEAVE A REPLY

Please enter your comment!
Please enter your name here