ಹೊಸಬರ ಹುರುಪಿನ ಆನೆಬಲ!

ಹಳ್ಳಿ ಬದುಕಿಗೆ ಫ್ರೇಮು ಹಾಕಿದಂಥಾ ಸುಂದರ ಚಿತ್ರ!
ಸಿದ್ಧಸೂತ್ರzಗಳ ಗುಂಗಿಗೆ ಬಿದ್ದು ಮತ್ತದೇ ಚರ್ವಿತಚರ್ವಣ ಕಥೆ ಹೊಸೆಯೋ ಕಸುಬು ಸದಾ ಚಾಲ್ತಿಯಲ್ಲಿರುತ್ತದೆ. ಅದ್ಯಾರಯದ್ದೋ ಇಮೇಜು, ಪುನರಾವರ್ತನೆಯಾಗೋ ಹೋರೊಯಿಸಂ ಮತ್ತು ಬಿಲ್ಡಪ್ಪುಗಳು… ಇದನ್ನೆಲ್ಲ ಕಂಡು ಸುಸ್ತೆದ್ದು ಹೋದ ಪ್ರೇಕ್ಷಕರ ಮುಂದೆ ಹಾಯೆನಿಸುವಂಥಾ ಭಿನ್ನ ಕಥಾನಕಗಳು ಆಗಾಗ ಅವತರಿಸುತ್ತಿರುತ್ತವೆ. ಈ ವಾರ ಬಿಡುಗಡೆಗೊಳ್ಳುತ್ತಿರೋ ಆನೆಬಲ ಚಿತ್ರ ಅದೇ ಬಗೆಯಲ್ಲಿ ಮೂಡಿ ಬಂದಿರುವಂಥಾದ್ದು. ಏನೇ ಮಾಡಿದರೂ ಅದು ವಿಶಿಷ್ಟವಾಗಿಯೇ ಇರಬೇಕೆಂಬ ಹಂಬಲದ ಮನಸುಗಳೆಲ್ಲ ಒಟ್ಟುಗೂಡಿ ಅಣಿಗೊಳಿಸಿರುವ ಆನೆಬಲ ಈಗಾಗಲೆ ಟ್ರೇಲರ್ ಹಾಗೂ ಹಾಡುಗಳಿಂದ ಜನಮನ ಸೆಳೆದಿದೆ. ಅಂಥಾ ಅಪಾರ ನಿರೀಕ್ಷೆಗಳ ಮೆರವಣಿಗೆಯ ನಡುವೆ ಈ ಚಿತ್ರ ಚಿತ್ರಮಂದಿರದತ್ತ ಮುಖ ಮಾಡಿ ನಿಂತಿದೆ.


ಈಗಾಗಲೇ ಹತ್ತಾರು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಕಾರ್ಯ ನಿರ್ವಹಿಸಿರುವ ರಾಜು ಸೊನಗವಳ್ಳಿ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈ ಕಥೆಗಾಗಿ ಎರಡು ವರ್ಷಗಳಿಗೂ ಹೆಚ್ಚು ಕಾಲದಿಂದ ತಯಾರಿ ಮಾಡಿಕೊಂಡು ಹಳ್ಳಿಯ ಸೂಕ್ಷ್ಮಗಳಿಂದ ಮೈ ಕೈ ತುಂಬಿಕೊಂಡಿರೋ ಆನೆಬಲವನ್ನವರು ರೂಪಿಸಿದ್ದಾರೆ. ವೇಣುಗೋಪಾಲ್ ಅಡಕಿಮಾರನಹಳ್ಳಿ ಸೇರಿದಂತೆ ಭಿನ್ನ ಅಭಿರುಚಿಯ ತಂಡವೇ ಸಿಕ್ಕಿರೋದರಿಂದ ಅಂದುಕೊಂಡಂತೆಯೇ ರಾಜು ಈ ಸಿನಿಮಾವನ್ನು ರೂಪಿಸಿದ ತೃಪ್ತ ಭಾವವನ್ನು ಹೊಂದಿದ್ದಾರೆ. ಕಣ್ಣೋಟಕ್ಕೆ ಚಿಕ್ಕದಾಗಿ ಕಂಡರೂ ಆಚಾರ ವಿಚಾರದಲ್ಲಿ, ಸಾಂಸ್ಕೃತಿಯ ವೈಭವದಲ್ಲಿ ಮತ್ತು ಜಾನಪದ ಶ್ರೀಮಂತಿಕೆಯಲ್ಲಿ ಹಳ್ಳಿ ಎಂಬುದು ಸಮುದ್ರವಿದ್ದಂತೆ. ಅದರಲ್ಲಿ ಹಾಯಾಗಿ ವಿಹರಿಸಿ ಮುದಗೊಳ್ಳಲು ಒಂದು ದಿನವಷ್ಟೇ ಬಾಕಿ ಉಳಿದುಕೊಂಡಿದೆ.


ಸಿನಿಮಾ ಅಂದರೆ ಕೆಲ ಸೀಮಿತ ಚೌಕಟ್ಟುಗಳು ಕಣ್ಣೆದುರು ನಿಲ್ಲುತ್ತವೆ. ಆದರೆ ಆನೆಬಲ ಅದೆಲ್ಲವನ್ನೂ ಮೀರಿಕೊಂಡು ರೂಪುಗೊಂಡಿರೋ ಚಿತ್ರ ಎಂಬ ಭರವಸೆ ಚಿತ್ರತಂಡದಲ್ಲಿದೆ. ಇಲ್ಲಿ ನಾಯಕನದ್ದು ಪಾದರಸದಂಥಾ ವ್ಯಕ್ತಿತ್ವವಿರೋ ಪಾತ್ರ. ವಯೋಸಹಜ ಕೀಟಲೆ, ತಂಟೆ ತಕರಾರುಗಳೊಂದಿಗೇ ಇಡೀ ಹಳ್ಳಿಯನ್ನು ಮತ್ತೆ ಕಟ್ಟುವಂಥಾ ಸ್ಫೂರ್ತಿದಾಯಕ ಚಹರೆಯೂ ಈ ಪಾತ್ರಕ್ಕಿದೆಯಂತೆ. ಎಲ್ಲರೂ ನಗರ ಸೇರಿಕೊಂಡು ಹಳ್ಳಿಗಳನ್ನು ಸ್ಮಶಾಣದಂತಾಗಿಸುತ್ತಿರೋ ಈ ಕಾಲಘಟ್ಟದಲ್ಲಿ ಮತ್ತೆ ಹಳ್ಳಿಗಳತ್ತ ಮನಸು ವಾಲುವಂಥಾ ಮನ್ವಂತರವೊಂದಕ್ಕೆ ನಾಂಧಿ ಹಾಡುವಷ್ಟರ ಮಟ್ಟಿಗೆ ಈ ಚಿತ್ರ ಪರಿಣಾಮಕಾರಿಯಾಗಿ ಮೂಡಿ ಬಂದಿದೆಯಂತೆ. ಒಟ್ಟಾರೆಯಾಗಿ ಇದು ಮಾಮೂಲು ಜಾಡಿನಾಚೆ ಸಿದ್ಧಗೊಂಡಿರೋ ಚಿತ್ರವೆಂಬುದು ಎಲ್ಲರಿಗೂ ಸ್ಪಷ್ಟವಾಗಿದೆ. ಎಲ್ಲ ವರ್ಗದ ಪ್ರೇಕ್ಷಕರೂ ಆನೆಬಲವನ್ನು ಕಣ್ತುಂಬಿಕೊಳ್ಳುವ ಕಾತರದಿಂದಿದ್ದಾರೆ.

LEAVE A REPLY

Please enter your comment!
Please enter your name here