ಬೆಳುದಿಂಗಳೇ ಐ ಲವ್ ಯು!

ಬೆಳದಿಂಗಳಂಥವಳೇ,
ನಿನ್ನೆದುರು ನಿಂತು ಆಡಲೇಬೇಕೆಂದುಕೊಂಡಿದ್ದ ಸಾವಿರ ಮಾತುಗಳು ಈ ಕ್ಷಣಕ್ಕೂ ಎದೆಯೊಳಗೆ ಕಿಕ್ಕಿರಿದಿವೆ. ಎಲ್ಲ, ಎಲ್ಲವನ್ನೂ ನಿನ್ನ ಕಣ್ಣ ಪಾಪೆಗಳಲ್ಲಿ ದೃಷ್ಟಿನೆಟ್ಟು ಹೇಳಿಬಿಡಬೇಕಂತ ಅದೆಷ್ಟು ಸರ್ಕಸ್ಸು ನಡೆಸಿದ್ದೆ ಗೊತ್ತೇನೇ ಹುಡುಗಿ? ನಿನ್ನ ಮುಂದೆಲ್ಲವನ್ನೂ ಹೇಳಿ ನಿರಾಳವಾಗುವ ರಿಹರ್ಸಲ್ಲಿಗೆ ಸಿಕ್ಕು ಅದೆಷ್ಟು ರಾತ್ರಿಗಳು ನಿದ್ದೆಯಿರದೆ ಕರಗಿ ಹೋದವೋ… ಆದರೂ ಅಕಸ್ಮಾತಾಗೊಮ್ಮೆ ನೀನೆದುರು ಬಂದಾಗ ಹದಗೊಂಡು ಹುರುಪಿನಲ್ಲಿದ್ದ ಮಾತುಗಳೆಲ್ಲ ಮಂಕು ಮಂಕು. ಆ ಘಳಿಗೆ ನಮ್ಮಿಬ್ಬರ ನಡುವೆ ನೆಲೆನಿಂತ ಮೌನವೇ ನನ್ನೆಲ್ಲಾ ಮಾತುಗಳನ್ನು ನಿನ್ನೆದೆಗೆ ತಲುಪಿಸಿಬಿಡುತ್ತದೆ ಎಂಬಂಥಾ ಮಧುರವಾದ ಭ್ರಾಂತು. ಆದರೀಗ ಬದುಕಿನ ಹೊಡೆತಕ್ಕೆ ಸಿಕ್ಕು ನಿನ್ನ ಬೆಳುದಿಂಗಳಂಥಾ ನಗು, ತುಟಿಯಂಚಿನ ತುಂಟತನ, ಕಣ್ಣಸನ್ನೆಯ ಕೀಟಲೆಗಳಿಂದೆಲ್ಲ ದೂರ ಬಂದು ನಿಂತಿದ್ದೇನೆ. ಮನಸ್ಸು ಮಾತ್ರ ಮತ್ತೆ ಮತ್ತೆ ನಿನ್ನ ನೆನಪುಗಳೆದುರು ಮಂಡಿಯೂರುತ್ತಿದೆ. ಈಗ ನನ್ನ ಮುಂದೆ ಬೇರ‍್ಯಾವ ದಾರಿಗಳೂ ಉಳಿದಿಲ್ಲ; ಅಕ್ಷರಗಳ ಮೂಲಕ ನಿನ್ನನ್ನು ತಲುಪುವ ಹೊರತಾಗಿ…

ನಿನ್ನ ಮನೆಯ ಬಾಲ್ಕನಿಯಿಂದ ಮೆಟ್ಟಿಲಿಳಿದು ಬರುವಾಗ ನೀ ನನ್ನೆಡೆಗೊಂದು ಕಿರುನೋಟ ಸೂಸಿದೆಯಲ್ಲಾ, ಆ ಕ್ಷಣದಿಂದ ಮನಸ್ಸು ಕಳೆದು ಹೋಗಿದೆ. ಮಲೆನಾಡಿನ ಹಳ್ಳಿಮೂಲೆಯೊಂದರಿಂದ ಬಂದು ಬೆಂಗಳೂರಿನ ಬಿಡಾರ ಸೇರಿಕೊಂಡವನು ನಾನು. ಮೊದಲ ಬಾರಿ ಈ ನೆಲಕ್ಕೆ ಕಾಲಿರಿಸಿ ಮೆಜೆಸ್ಟಿಕ್ಕಿನ ಪ್ಲೈಓವರಿನ ಮೇಲೆ ನಿಂತು ದಿಟ್ಟಿಸಿದಾಗ ಬೆಂಗಳೂರೆಂಬುದು ಗಗನಚುಂಬಿ ಕಟ್ಟಡಗಳ ಸುಂದರ ಗೋರಿಯಂತೆ ಕಾಣಿಸಿ ಕಂಗಾಲಾಗಿದ್ದೆ. ಇಲ್ಲಿ ಬದುಕೋದು ಹೇಗೆ ಅಂತ ತಲ್ಲಣಿಸಿದ್ದೆ. ಆದರೆ ಬೆಂಗಳೂರು ರಮಣೀಯವಾಗಿ ಕಾಣಿಸಿದ್ದು, ಸೋಲಿನ ಹೊಡೆತಕ್ಕೆ ಸಿಕ್ಕು ಕಂಗಾಲಾಗಿದ್ದ ಮನಸ್ಸಿಗೆ ಬದುಕುವುದಕ್ಕೂ ಒಂದು ಕಾರಣವಿದೆ ಅನ್ನಿಸಿದ್ದು ನಿನ್ನ ಮನೆಯೆದುರಿನ ಫುಟ್ಪಾತು ಸೇರಿಕೊಂಡಾಗಲೆ. ಅದರೆದುರಿನ ಬಾಲ್ಕನಿಯಲ್ಲೇ ನೀನಿದ್ದೆ; ಬೆಳದಿಂಗಳಂಥಾ ನಗುವಿನ ಒಡತಿ!

ಆ ನಂತರದ್ದೆಲ್ಲ ನಿನಗೇ ಗೊತ್ತಿದೆ ಅಂದುಕೊಳ್ಳುತ್ತೇನೆ. ಅಲ್ಲಿಂದಾಚೆಗೆ ನನ್ನ ಬದುಕಿನ ಟೈಂ ಟೇಬಲ್ಲೇ ಬದಲಾಗಿ ಹೋಗಿತ್ತು. ದಿನಕ್ಕೆರಡು ಬಾರಿ ನಿನ್ನ ಮುಖ ನೋಡದಿದ್ದರೆ, ನಿನ್ನ ಕಣ್ಣ ಕೀಟಲೆ, ತುಟಿಯಂಚಿನ ಕಿರುನಗುವನ್ನು ಎದೆತುಂಬಿಕೊಳ್ಳದಿದ್ದರೆ ಜೀವ ನಿತ್ರಾಣ. ‘ದುಡ್ಡು ಕಣೋ ದುಡ್ಡು. ಅದೊಂದಿದ್ರೆ ಎಂಥಾ ಹುಡುಗೀರೂ ಬೀಳ್ತಾರೆ’ ಅಂತ ಗೆಳೆಯರೊಂದಿಷ್ಟು ಮಂದಿ ಆಡಿಕೊಳ್ಳುತ್ತಿದ್ದುದನ್ನು ಕೇಳಿದ್ದೆ. ಬೆಂಗಳೂರಿಗೆ ಬಂದ ಮೇಲಂತೂ ಪಡ್ಡೆ ಹುಡುಗರ ನಡುವೆ ಅದೇ ಫಿಲಾಸಫಿ ಭಾಷೆ ಬದಲಿಸಿಕೊಂಡು ಹರಿದಾಡುತ್ತಿರುವುದನ್ನು ಗಮನಿಸಿದ್ದೆ. ಅಂಥಾದ್ದರಲ್ಲಿ  ನನ್ನಲ್ಲಿ ಅದ್ಯಾವ ಸೆಳೆತವಿದ್ದರಬಹುದು ನಿಂಗೆ. ಆ ಮುಗುಳ್ನಗೆ, ಕಣ್ಣ ಸನ್ನೆಗಳಲ್ಲಿ ಪ್ರೀತಿ ಇರಬಹುದಾ ಅಥವಾ ಅದೆಲ್ಲ ಟೈಂಪಾಸಿನ ಸುಳ್ಳೇ ಕನವರಿಕೆಗಳಾ… ಹೀಗೆ ನಿನ್ನನ್ನು ಕಂಡ ಮೊದಲ ದಿನದಿಂದಲೇ ಎದೆಯೊಳಗೆ ಪ್ರಶ್ನೆಗಳ ಗುದ್ದಾಟ.

ಬಂಧವೊಂದನ್ನು ದುಡ್ಡಿನ ಮೂಲಕವೇ, ಐಶ್ವರ್ಯ ಅಂತಸ್ತುಗಳ ಮೂಲಕವೇ ಅಳೆಯೋದಾದರೆ ನನಗೂ ನಿನಗೂ ಯಾವ ಕೋನದಿಂದಲೂ ಮ್ಯಾಚ್ ಆಗುವುದಿಲ್ಲ. ನೀನು ಬಡತನ ಬಿಸಿ ಕಿರುಬೆರಳಿಗೂ ಸೋಕದಂತೆ ಬೆಳೆದವಳು. ನನಗೋ, ಬಡತನ ಬೆನ್ನಿಗೆ ಹುಟ್ಟಿದ ಬಂಧು. ಆದರೆ ಹುಡುಗಿ, ಬಡತನ-ಶ್ರೀಮಂತಿಕೆಗಳ ತಕ್ಕಡಿಗೆ ಪ್ರೀತಿಸೋ ಮನಸ್ಸಿನಲ್ಲಿ ಜಾಗವಿಲ್ಲ. ನೀನು ಮೊದಲ ಬಾರಿ ಕಣ್ಣೆದುರು ಬಂದು ನಗು ಸೂಸಿದಾಗ ನನಗೆ ನಿನ್ನ ಹಿನ್ನೆಲೆಯೂ ಗೊತ್ತಿರಲಿಲ್ಲ. ಆದರೆ ಆ ಕ್ಷಣವೇ ಮನಸ್ಸನ್ನು ನಿಂಗ್‌ನಿಂಗೇ ಕೊಟ್ಟುಬಿಟ್ಟಿದ್ದೆ. ನಿನ್ನದೊಂದು ಆಪ್ಯಾಯ ನೋಟದೆದುರು ಬಡತನದ ಬೇಗೆಯೆಲ್ಲಾ ಕರಗಿ ಹೋಗುತ್ತಿತ್ತು. ನಿನ್ನ ಮುಗುಳ್ನಗೆಯ ಬೆಳದಿಂಗಳಲ್ಲಿ  ಸಂಕಟಗಳೆಲ್ಲಾ ಕರಗಿ ಮನಸ್ಸು ಹಗುರಾದಂತೆನಿಸುತ್ತಿತ್ತು. ಅಷ್ಟು ಹೊತ್ತಿಗೆ ಎಷ್ಟು ತಿಂಗಳು ಸರಿದು ಹೋಗಿದ್ದವೋ ಗೊತ್ತಿಲ್ಲ. ಮನದ ತುಂಬಾ ನೀನೇ ಆವರಿಸಿಕೊಂಡಿದ್ದೆ. ನೀನು ನನ್ನವಳೇ ಆಗಿ ಹೋಗಿದ್ದೆ.

ಆದರೆ ನನ್ನ ನಿನ್ನ ನಡುವೆ ಒಂದೇ ಒಂದು ಮಾತೂ ಕದಲಿರಲಿಲ್ಲ. ಇವತ್ತು ಹೇಳೇಬೀಡಬೇಕು ಅಂತೊಂದು ಪ್ರತಿಜ್ಞೆಯಿಂದಲೇ ದಿನಾ ಹಾಸಿಗೆಯಿಂದೇಳುತ್ತಿದ್ದೆ. ನೀನೆದುರು ಕಾಣಿಸಿದಾಗ ಎಲ್ಲವೂ ಮೌನ ಮೌನ. ಅದಕ್ಕೆ ನನ್ನ ಆಗಿನ ಸ್ಥಿತಿ, ಕೀಳರಿಮೆಗಳೇ ಕಾರಣವಿದ್ದಿರಬಹುದೇನೋ. ಅಂಗಿಯ ಮೊಣಕೈ ಹರಿದಿದ್ದನ್ನು ನೀನೆಲ್ಲಿ ನೋಡಿ ಬಿಡುತ್ತೀಯೋ, ಅಸಹ್ಯಪಟ್ಟುಕೊಂಡು ನಾಳಿನಿಂದ ಮುಖ ತಿರುಗಿಸಿಕೊಂಡರೆ ಗತಿಯೇನು, ಚಪ್ಪಲಿಯ ಕಿತ್ತುಹೋದ ಉಂಗುಷ್ಟ ನಿನಗೆ ಕಾಣಿಸಿತಾ… ತಲೆಯೊಳಗೆ ಬರೀ ಇಂಥಾದ್ದೇ ಹುಳ. ಒಂದು ಸಾರಿ ನೀ ನನ್ನತ್ತ ನೋಡಿದ ಲೆಕ್ಕ ಕಡಿತಗೊಂಡರೂ ಇದು ಅದರದ್ದೇ ಪರಿಣಾಮವಿರಬೇಕೆಂಬ ಆತಂಕ. ಆದರೂ ಸಹ ನಿನ್ನ ಕಣ್ಣುಗಳಲ್ಲಿ ಅದೇ ಮಿಂಚು, ತುಟಿಯಂಚಲ್ಲಿ ಅದೇ ಮಂದಹಾಸ ಮಿರುಗತ್ತಿತ್ತಲ್ಲಾ… ಅದರಲ್ಲಿ ನಿಜಕ್ಕೂ ಪ್ರೀತಿ ಇತ್ತಾ, ಅದಿಲ್ಲದಿದ್ದರೆ ಯಾಕೆ ಆ ಪರಿ ಕಣ್ಣಲ್ಲೇ ಕಾಡಿಸುತ್ತಿದ್ದೆ… ಪ್ರತಿ ಪ್ರಶ್ನೆಗಳಿಗೂ ನಾನು ನಿರುತ್ತರ.

ನಾನೆಂಥಾ ದಡ್ಡನಿರಬೇಕು ನೋಡು. ನೀನು ಹೋಗುತ್ತಿರುವುದು ಯಾವ ಕಾಲೇಜಿಗೆ, ಓದುತ್ತಿರುವುದು ಏನೆಂಬುದು ಒತ್ತಟ್ಟಿಗಿರಲಿ, ತಿಂಗಳುಗಳೇ ಕಳೆದರೂ ನಿನ್ನ ಹೆಸರೂ ಸಹ ನನಗೆ ಗೊತ್ತಿರಲಿಲ್ಲ. ಹೆಸರು ಗೊತ್ತಾಗುವಷ್ಟರಲ್ಲೇ  ನಿನ್ನೊಂದಿಗೆ ನನ್ನ ಉಸಿರು ಬೆರತು ಹೋಗಿತ್ತು. ಇದೆಲ್ಲದರ ನಡುವೆಯೇ ಒಂದು ಪ್ರೇಮಿಗಳ ದಿನ ಸರಿದು ಹೋದರೂ ಎದೆಯೊಳಗಿನ ಪ್ರೀತಿಯನ್ನು ನಿನ್ನ ಮುಂದೆ ಹೇಳಿಕೊಳ್ಳಲಾಗಿರಲಿಲ್ಲ.

ಬದುಕು ಎಂತೆಂಥಾ ಸಂದಿಗ್ಧಗಳನ್ನು ಸೃಷ್ಟಿಸುತ್ತದೆಯೆಂದರೆ, ಇನ್ನೇನು ಏನಾದರಾಗಲಿ ಪ್ರಪೋಸ್ ಮಾಡೇ ಬಿಡಬೇಕೆಂಬಷ್ಟರಲ್ಲಿ ಅದ್ಯಾವುದೋ ವಂಚನೆಯ ಎಳೆ ಇಡೀ ಬದುಕನ್ನೇ ಎತ್ತಿ ವಗಾಯಿಸಿತ್ತು. ನಿನಗೊಂದು ಮಾತು ಹೇಳಲೂ ಅವಕಾಶವಿಲ್ಲದಂತೆ ನಿನ್ನ ಏರಿಯಾದಿಂದ ಮತ್ತೆಲ್ಲಿಗೋ ಹೋಗಲೇಬೇಕಾಯ್ತು.  ಆ ಕ್ಷಣ ಮಹಾಮೋಸವೊಂದು ಬದುಕನ್ನೇ ಬಳಿದುಕೊಂಡು ಹೋದಂತಾ ಸ್ಥಿತಿ. ಸಾವಿರ ಕನಸುಗಳ ಕಳೇಬರದ ನಡುವೆ ಪರದೇಸಿಯಂತೆ ನಾ ನಿಂತಿದ್ದೆ. ನನ್ನ ಬದುಕಿನ ಜೀವಂತ ಕನಸಿನಂತಿದ್ದ ನಿನಗೊಂದು ಮಾತೂ ಹೇಳದೆ ಹೊರಟು ಬಂದೆ. ಎದೆಯೊಳಗೆ ದುಃಖದ ಸಾಗರ. ಅದು ಬದುಕು ಹಾಳಾಗಿದ್ದಕ್ಕೋ, ನಿನ್ನನ್ನು ಅಗಲಿರಬೇಕಾದುದಕ್ಕೋ ಗೊತ್ತಿಲ್ಲ. ಆದರೆ ಆ ದಿನ ಕಡೆಯ ಬಾರಿ ನೀ ನನ್ನತ್ತ ನೋಡಿದೆಯಲ್ಲಾ, ಆ ನೋಟ ಇನ್ನೂ ಎದೆಯಲ್ಲಿ ಹಸಿರಾಗಿದೆ ಕಣೇ ಹುಡುಗಿ. ಈಗ ಜೀವನವೆಂಬುದು ಗುರಿಯ ನೇರಕ್ಕೆ ಬಂದು ನಿಂತಿದೆ. ಕಣ್ಣೆದುರಿಗೆ ನೀನಿಲ್ಲವೆಂಬ ಕೊರಗನ್ನು ಹೊರತು ಪಡಿಸಿದರೆ ಎಲ್ಲವೂ ಚೆಂದಗಿದೆ. ಆದರೆ ಜೀವವೇ, ನೀ ಸಿಗದೇ ಹೋದರೆ ಎಲ್ಲ ಚೆಂದಗಿದ್ದರೂ ನಾ ನೆಮ್ಮದಿಯಿಂದಿರಲು ಸಾಧ್ಯವಿಲ್ಲ.

ಸರಿಯಾಗಿ ನೆಲೆ ಕಂಡುಕೊಂಡ ದಿನವೇ ನಿನ್ನೆದುರು ಪ್ರೀತಿ ಹೇಳಬೇಕಂತ ಆಗಾಗ ಅನ್ನಿಸುತ್ತಿದ್ದುದುಂಟು. ಆದುದರಿಂದಲೇ ಈ ಎರಡು ವರ್ಷಗಳಲ್ಲಿ ಯಾವತ್ತೂ ನಿನ್ನ ಮುಂದೆ ಕಾಣಿಸಿಕೊಳ್ಳದೆ ಅವುಡುಗಚ್ಚಿಕೊಂಡು ಬದುಕುತ್ತಿದ್ದೇನೆ. ಇದೀಗ ತಾನೇ ತಾನಾಗಿ ಆ ಕಾಲ ಕೂಡಿ ಬಂದಿದೆ. ಫೆಬ್ರವರಿ ಹದಿನಾಲ್ಕರ ಹೊತ್ತಿಗಾಗಲೇ ಈ ಪತ್ರ ನಿನ್ನ ಕೈಲಿರುತ್ತದೆ. ಆ ಕ್ಷಣ ನಿನ್ನ ಕಣ್ಣಲ್ಲಿ ಮೂಡಬಹುದಾದ ಸೆಳೆಮಿಂಚು, ಕೆನ್ನೆಗಳಲ್ಲಿನ ರಂಗು ಕಲ್ಪಿಸಿಕೊಂಡೇ ಪುಳಕಿತನಾಗುತ್ತೇನೆ. ಬಹುಶಃ ನೀನು ಅದೊಂದು ರೀತಿ ಶಾಕ್ ಆಗಿರುತ್ತಿ. ಆದರೆ ಹುಡುಗಿ, ದಯವಿಟ್ಟು ನನಗೆ ತಿರಸ್ಕಾರದ ಶಾಕು ಕೊಡಬೇಡ.

ಇಷ್ಟು ಕಾಲ ಎದೆಯೊಳಗೆ ಬಚ್ಚಿಟ್ಟುಕೊಂಡಿದ್ದನ್ನೀಗ ಧೈರ್ಯವಾಗಿ ಹೇಳುತ್ತಿದ್ದೇನೆ; ನನ್ನ ಮುದ್ದು ಬೆಳುದಿಂಗಳೇ ಐ ಲವ್ ಯು….
-ಫುಟ್ಪಾತು ಹುಡುಗ

LEAVE A REPLY

Please enter your comment!
Please enter your name here