ಚಮಕ್ ಜೋಡಿಯ ಸಖತ್ ರೀ ಎಂಟ್ರಿ!

ಒಂದು ಯಶಸ್ವೀ ಚಿತ್ರ ನೀಡಿದ ನಿರ್ದೇಶಕ ಮತ್ತು ನಾಯಕ ಮತ್ತೊಂದು ಚಿತ್ರದ ಮೂಲಕ ಆಗಮಿಸುತ್ತಿದ್ದಾರೆಂದಾಕ್ಷಣ ಅದರತ್ತ ಎಲ್ಲರ ಗಮನ ಕೇಂದ್ರೀಕರಿಸುತ್ತದೆ. ಅದೇ ರೀತಿ ಈ ಹಿಂದೆ ಚಮಕ್ ಅಂತೊಂದು ಯಶಸ್ವೀ ಚಿತ್ರ ಕೊಟ್ಟಿದ್ದ ಸಿಂಪಲ್ ಸುನಿ ಮತ್ತು ಗೋಲ್ಡನ್ ಸ್ಟಾರ್ ಗಣೇಶ್ ಮತ್ತೆ ಜೊತೆಯಾಗೊಂದು ಸಿನಿಮಾ ಮಾಡುತ್ತಾರೆಂಬ ಮಾತು ಈಗೊಂದಷ್ಟು ತಿಂಗಳುಗಳಿಂದ ಕೇಳಿ ಬರುತ್ತಿತ್ತು. ಅತ್ತ ಅವತಾರ್ ಪುರುಷ ಚಿತ್ರದಲ್ಲಿ ಬ್ಯುಸಿಯಾಗಿದ್ದ ಸುನಿ ಆ ಒತ್ತಡದ ನಡುವೆಯೂ ಗಣೇಶ್‌ಗಾಗಿ ಮಾಡುತ್ತಿರೋ ಸಿನಿಮಾಗಾಗಿ ಸಂಪೂರ್ಣ ತಯಾರಿ ಮಾಡಿಕೊಂಡಿದ್ದಾರೆ. ಇದಕ್ಕೀಗ ಶೀರ್ಷಿಕೆಯೂ ನಿಗಧಿಯಾಗಿದೆ.


ಗಣೇಶ್ ಮತ್ತು ಸಿಂಪಲ್ ಸುನಿ ಮತ್ತೊಮ್ಮೆ ಒಟ್ಟಾಗಿ ಸಿನಿಮಾ ಮಾಡುತ್ತಾರೆಂಬ ಸುದ್ದಿ ಕೇಳಿದಾಕ್ಷಣವೇ ಇದರ ಶೀರ್ಷಿಕೆ ಏನೆಂಬುದರ ಸುತ್ತ ಚರ್ಚೆಗಳು ಆರಂಭವಾಗಿದ್ದವು. ಇದೀಗ ಇದಕ್ಕೆ ಸಖತ್ ಎಂಬ ನಾಮಕರಣವಾಗಿದೆ. ಈ ಹಿಂದೆ ಚಮಕ್ ಚಿತ್ರದಲ್ಲಿ ಕುಟುಂಬ ಸಮೇತರಾಗಿ ನೋಡಿ ಎಂಜಾಯ್ ಮಾಡುವಂಥಾ ಕಥೆಯೊಂದನ್ನು ಸುನಿ ಹೇಳಿದ್ದರು. ಹಲವಾರು ವರ್ಷಗಳಿಂದಲೂ ಗಣೇಶ್‌ಗೊಂದು ಸಿನಿಮಾ ಮಾಡಬೇಕೆಂಬ ಹಂಬಲ ಹೊಂದಿದ್ದ ಸುನಿ, ಅವರಿಗೊಪ್ಪುವಂಥಾ ಕಥೆಯೊಂದಿಗೆ ಅಭಿಮಾನಿಗಳು ಸೇರಿದಂತೆ ಎಲ್ಲರನ್ನು ಖುಷಿಗೊಳಿಸಿದ್ದರು.


ಈ ಸಖತ್ ಎಂಬ ಶೀರ್ಷಿಕೆಯೂ ಕೂಡಾ ಪಕ್ಕಾ ಮನರಂಜನಾತ್ಮಕ ಕಥೆಯ ಸುಳಿವು ಕೊಡುತ್ತಿದೆ. ಯಾರಿಗೇ ಆದರೂ ಕಚಗುಳಿ ಇಡುವಂಥಾ ಸಂಭಾಷಣೆಗಳೊಂದಿಗೆ ದೃಷ್ಯ ಕಟ್ಟೋದರಲ್ಲಿ ಸುನಿ ಸಿದ್ಧಹಸ್ತರು. ಅದರಲ್ಲಿಯೂ ಗಣೇಶ್‌ಗಾಗಿ ಅವರು ನಿರ್ದೇಶನ ಮಾಡಿದ್ದ ಚಮಕ್ ನೋಡಿ ಗಣೇಶ್ ಅಭಿಮಾನಿಗಳೆಲ್ಲ ಖುಷಿಗೊಂಡಿದ್ದರು. ಇದೀಗ ಈ ಜೋಡಿ ಸಖತ್ ಮೂಲಕ ಮತ್ತೆ ಒಂದಾಗುತ್ತಿದೆ. ಈ ಚಿತ್ರವನ್ನು ಈ ಹಿಂದೆ ಭರಾಟೆ ಎಂಬ ಸೂಪರ್ ಹಿಟ್ ಚಿತ್ರ ನಿರ್ಮಾಣ ಮಾಡಿದ್ದ ಸುಪ್ರೀತ್ ನಿರ್ಮಾಣ ಮಾಡುತ್ತಿದ್ದಾರೆ. ಸುಪ್ರೀತ್ ಈ ಕಥೆಯ ಸೊಗಸಿಗೆ ಮನಸೋತೇ ಸಖತ್‌ಗೆ ನಿರ್ಮಾಪಕರಾಗಿ ಸಾಥ್ ನೀಡಿದ್ದಾರಂತೆ.

LEAVE A REPLY

Please enter your comment!
Please enter your name here