ಬೀದರ್ ಹುಡುಗನ ಮಹಾ ಕನಸು ಮೌನಂ!

[adning id="4492"]

ಯಾವುದೇ ಸಿನಿಮಾಗಳು ತೆರೆಗಂಡಾಗಲೂ ಅದರ ಹಿಂದೆ ಅದೆಷ್ಟೋ ಗಾವುದ ಸಾಗಿ ಬಂದ ಕನಸಿನಂಥಾ ಹಾದಿಯೊಂದಿರುತ್ತದೆ. ಬಹುತೇಕರು ಕನಸೊಂದು ಸಾಕಾರಗೊಳ್ಳುವ ಘಳಿಗೆಗೆ ಮುಖಾಮುಖಿಯಾಗುತ್ತಲೇ ಆ ಹಾದಿಯತ್ತಲೊಮ್ಮೆ ತಿರುಗಿ ನೋಡುತ್ತಾರೆ. ಹಾಗೆ ಮತ್ತೊಮ್ಮೆ ಮನನವಾಗೋ ಸಂಗತಿಗಳೇ ಯಾರದ್ದೋ ಎಳೇಯ ಹೆಜ್ಜೆಗಳಿಗೆ ಕಸುವು ತುಂಬಬಹುದು. ಮತ್ಯಾರದ್ದೋ ಮನಸಲ್ಲಿ ಕನಸೊಂದರ ಗುಂಗೀಹುಳ ಗಿರಕಿ ಹೊಡೆಯುವಂತೆ ಮಾಡಲೂ ಬಹುದು. ಈ ಕಾರಣದಿಂದಲೇ ಗುರಿಯ ನೇರಕ್ಕೆ ಬಂದು ನಿಂತವರೆಲ್ಲರ ಬದುಕಿನ ಬಗ್ಗೆ ಎಲ್ಲರಿಗೂ ಕುತೂಹಲವಿರುತ್ತದೆ. ನಾಳೆ ರಾಜ್ಯಾದ್ಯಂತ ತೆರೆಗಾಣಲಿರುವ ಮೌನಂ ಚಿತ್ರದ ಮೂಲಕ ತನ್ನ ಜೀವಮಾನದ ಕನಸನ್ನು ನನಸು ಮಾಡಿಕೊಳ್ಳುತ್ತಿರೋ ನಿರ್ದೇಶಕ ರಾಜ್ ಪಂಡಿತ್ ಕೂಡಾ ತಾವೇ ನಡೆದು ಬಂದ ಹಾದಿಯತ್ತಲೊಮ್ಮೆ ಹೊರಳಿಕೊಂಡು ಮುದಗೊಂಡಿದ್ದಾರೆ.


ಮಯೂರಿ ಮತ್ತು ಬಾಲಾಜಿ ಶರ್ಮಾ ನಾಯಕ ನಾಯಕಿಯರಾಗಿ ನಟಿಸಿರುವ ಮೌನಂ ಈಗಾಗಲೇ ಬಹುನಿರೀಕ್ಷಿತ ಚಿತ್ರವಾಗಿ ದಾಖಲಾಗಿದೆ. ಟ್ರೇಲರ್ ಮೂಲಕ ಸಖತ್ ಕ್ರೇಜ್ ಸೃಷ್ಟಿಸಿರುವ ಈ ಚಿತ್ರ ಕನ್ನಡ ಚಿತ್ರರಂಗದಲ್ಲೊಂದು ಮೈಲಿಗಲ್ಲು ಸೃಷ್ಟಿಸುತ್ತದೆಂಬ ನಂಬಿಕೆ ಹುಟ್ಟಿಕೊಂಡಿದೆ. ಯಾವ ನಿರ್ದೇಶಕರ ಪಾಲಿಗಾದರೂ ಮೊದಲ ಚಿತ್ರದಲ್ಲಿಯೇ ಇಂಥಾ ಸಕಾರಾತ್ಮಕ ವಾತಾವರಣ ಮೂಡಿಕೊಂಡರೆ ಅದಕ್ಕಿಂತಲೂ ಬೇರೆ ಖುಷಿ ಸಿಗಲು ಸಾಧ್ಯವಿಲ್ಲ. ಇದೀಗ ಬಿಡುಗಡೆಯ ಅಂಚಿನಲ್ಲಿ ಅಷ್ಟದಿಕ್ಕುಗಳಿಂದಲೂ ಸದಭಿಪ್ರಾಯಗಳೇ ಕೇಳಿ ಬರುತ್ತಿರೋದರಿಂದ ನಿರ್ದೇಶಕ ರಾಜ್ ಪಂಡಿತ್ ಅವರಲ್ಲಿಯೂ ಅಂಥಾದ್ದೇ ಖುಷಿ ಮನಮಾಡಿಕೊಂಡಿದೆ.


ಹೀಗೆ ಚೊಚ್ಚಲ ನಿರ್ದೇಶನದಲ್ಲಿಯೇ ಸಂಕೀರ್ಣವಾದ ಕಥೆಯನ್ನು ಕಮರ್ಶಿಯಲ್ ಚೌಕಟ್ಟಿನಲ್ಲಿ ಹೇಳೋ ಸಾಹಸ ಮಾಡಿರುವ ರಾಜ್ ಪಂಡಿತ್ ಪಾಲಿಗೆ ಬೀದರ್ ತವರು ನೆಲ. ಅಲ್ಲಿನ ಮಾಳೇಗಾಂವ್ ಎಂಬ ಹಳ್ಳಿಯಲ್ಲಿ ಹುಟ್ಟಿ ಬೆಳೆದ ರಾಜ್ ಪಂಡಿತ್ ಪಾಲಿಗೆ ಬುದ್ಧಿ ಬಲಿತಾಗಿನಿಂದಲೂ ಸಿನಿಮಾ ವ್ಯಾಮೋಹ. ಸಾಮಾನ್ಯವಾಗಿ ಹೈಸ್ಕೂಲು ದಿನಗಳಲ್ಲಿಯೇ ಮುಂದೇನಾಗಬೇಕೆಂಬ ಕನಸು ಮೊಳೆತಿರುತ್ತದೆಯಾದರೂ ಅದನ್ನೇ ಜತನದಿಂದ ಕಾಯ್ದುಕೊಂಡು ಬಂದು ಆಚೀಚೆ ಹೆಜ್ಜೆ ಕದಲಿಸದವರು ಕಡಿಮೆ. ಆದರೆ ರಾಜ್ ಮಾತ್ರ ಹೈಸ್ಕೂಲು ದಿನಗಳಲ್ಲಿಯೇ ಆದರೆ ಸಿನಿಮಾ ನಿರ್ದೇಶಕನೇ ಆಗಬೇಕೆಂಬ ಅಚಲ ತೀರ್ಮಾನಕ್ಕೆ ಬಂದಿದ್ದರು. ಆ ನಂತರ ಏನೇ ಅಡೆತಡೆಗಳು ಬಂದರೂ ತಮಗೇ ಗೊತ್ತಿಲ್ಲದಂತೆ ಕನಸಿನ ಸಾಕಾರಕ್ಕೆ ಅಣಿಗೊಳ್ಳಲಾರಂಭಿಸಿದ್ದರು.


ಹಾಗೆ ಕಾಲೇಜು ಮೆಟ್ಟಿಲೇರಿದ ರಾಜ್ ಪಂಡಿತ್‌ಗೆ ಅಕಾಡೆಮಿಕ್ ಓದು ಏನೆಂದರೆ ಏನೂ ಹಿಡಿಸುತ್ತಿರಲಿಲ್ಲ. ಓದನ್ನು ಅರ್ಧಕ್ಕೆ ನಿಲ್ಲಿಸೋಣವೆಂದರೆ ಮನೆ ಮಂದಿ ಹಿಡಿದು ಬಡಿದಾರೆಂಬ ಭಯ. ಹಾಗೂ ಹೀಗೂ ಕಾಲೇಜು ವಾತಾವರಣಕ್ಕೆ ಒಗ್ಗಿಕೊಳ್ಳಲಾರಂಭಿಸಿದ್ದ ರಾಜ್ ಪಂಡಿತ್ ಅಲ್ಲಿಯೂ ಸಾಂಸ್ಕೃತಿಕ ವಾತಾವರಣವನ್ನೇ ಹೆಚ್ಚಾಗಿ ನೆಚ್ಚಿಕೊಂಡು ನಿರಾಳವಾಗಲಾರಂಭಿಸಿದ್ದರು. ಅದೇ ಕಾಲದಲ್ಲಿ ಜಿಲ್ಲಾ ಮಟ್ಟದ ಅಂತರ್ ಕಾಲೇಜು ನಾಟಕ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಅವಕಾಶವೂ ರಾಜ್ ಪಾಲಿಗೆ ಕೂಡಿ ಬಂದಿತ್ತು. ಹಾಗೊಂದು ಅವಕಾಶ ಸಿಕ್ಕಾಗ ಚೆಂದದ್ದೊಂದು ನಾಟಕ ಬರೆದು ನಿರ್ದೇಶನ ಮಾಡಿದ್ದ ರಾಜ್ ಮೊದಲ ಬಹುಮಾನವನ್ನು ಬಾಚಿಕೊಂಡಿದ್ದರು. ಆ ನಾಟಕವನ್ನು ನೋಡಿದ್ದವರೆಲ್ಲರೂ ಇದು ರಾಜ್ಯಮಟ್ಟದ ಸ್ಪರ್ಧೆಯನ್ನೂ ಜಯಿಸಿಕೊಳ್ಳುವಂಥಾ ಕಂಟೆಂಟು ಹೊಂದಿಗೆ ಎಂದು ಮನಸಾರೆ ಮೆಚ್ಚಿಕೊಂಡಿದ್ದರಂತೆ. ರಾಜ್ ಪಂಡಿತ್ ಅವರೊಳಗೆ ನಿರ್ದೇಶಕನಾಗೋ ಹಂಬಲ ಮತ್ತಷ್ಟು ಗಟ್ಟಿಯಾಗಿದ್ದ ಆವಾಗಿನಿಂದಲೇ.


ಹಾಗೆ ಹೇಗೋ ಕಾಲೇಜು ಮುಗಿಸಿಕೊಂಡ ಘಳಿಗೆಯಲ್ಲಿ ಎದುರಾದದ್ದು ಬದುಕಿನ ಪ್ರಶ್ನೆ. ಮನೆ ಮಂದಿಯ ಮರ್ಜಿಗೆ ಬಿದ್ದು ಮುಂದಡಿ ಇಡಬೇಕಾದ ಸಂದರ್ಭದಲ್ಲಿಯೂ ರಾಜ್ ಪಂಡಿತ್ ನಿರ್ದೇಶಕನಾಗೋ ಹಾದಿಯನ್ನೇ ಆಯ್ಕೆ ಮಾಡಿಕೊಂಡಿದ್ದರು. ಮನೆಯವರಿಗೆ ಅದಿಷ್ಟವಿಲ್ಲದೇ ಹೋದರೂ ಸೀದಾ ಬೆಂಗಳೂರಿನ ಬಸ್ಸು ಹತ್ತಿ ಬಂದವರ ಮುಂದೆ ನೈಜ ಬದುಕಿನ ಬ್ರಹ್ಮಾಂಡ ದರ್ಶನವಾಗಿತ್ತು. ಗಾಂಧಿನಗರದ ಗೆರೆದಾಟಿ ಒಳಬರುವಲ್ಲಿಂದ ಹಿಡಿದು ಆ ನಂತರ ಆರ್ ಚಂದ್ರು ಅವರಂಥಾ ನಿರ್ದೇಶಕರೊಂದಿಗೆ ಅವಕಾಶ ಗಿಟ್ಟಿಸಿಕೊಳ್ಳುವವರೆಗೂ ಪಟ್ಟ ಪಡಿಪಾಟಲುಗಳ ಕಥೆಯೇ ದೊಡ್ಡದಿದೆ.


ಹಾಗೆ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ರಾಜ್ ಪಂಡಿತ್ ಮೊದಲನೆಯದ್ದಾಗಿ ಆರ್ ಚಂದ್ರು ನಿರ್ದೇಶನದ ತಾಜ್‌ಮಹಲ್ ಚಿತ್ರಕ್ಕೆ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿದ್ದರು. ಆ ನಂತರದಲ್ಲಿಯೂ ಸಾಕಷ್ಟು ನಿರ್ದೇಶಕರ ಜೊತೆ ಕಾರ್ಯನಿರ್ವಹಿಸಿ ಅನುಭವ ಗಿಟ್ಟಿಸಿಕೊಂಡಿದ್ದ ಅವರು ನಂತರ ಕಿರುಚಿತ್ರಗಳನ್ನು ರೂಪಿಸಿ ಹದಗೊಳ್ಳಲು ತೀರ್ಮಾನಿಸಿದ್ದರು. ಆ ಹಾದಿಯಲ್ಲಿ ಎದುರಾದ ಹತಾಶೆ, ಅವಮಾನಗಳನ್ನೆಲ್ಲ ಜೈಸಿಕೊಂಡು ಬಂದ ಪರಿಣಾಮವಾಗಿಯೇ ಮೌನಂ ಎಂಬ ಸೈಕಾಲಾಜಿಕಲ್ ಕಥೆಯೊಂದು ಅಣಿಗೊಳ್ಳಲು ಅನುವಾಗಿತ್ತು. ಹಾಗೆ ರೂಪುಗೊಂಡ ಈ ಚಿತ್ರವೀಗ ರಾಜ್ ಪಂಡಿತ್ ಜೀವಿತದ ಮಹಾ ಕನಸಿನಂತೆ ಪ್ರೇಕ್ಷಕರ ಮುಂದೆ ಬರಲು ತಯಾರಾಗಿದೆ. ಇನ್ನೊಂದು ರಾತ್ರಿ ಕಳೆದರೆ ಮೌನಂ ನಿಮ್ಮೆಲ್ಲರೆದುರು ತೆರೆದುಕೊಳ್ಳಲಿದೆ.

[adning id="4492"]

LEAVE A REPLY

Please enter your comment!
Please enter your name here