ಪಾಕಿಸ್ತಾನ ಪರ ಘೋಷಣೆ: ಅರೆಬೆಂದ ಮಡಿಕೆ ಅಂದರ್!

ಎಂತೆಂಥಾ ಹೋರಾಟಗಳೆಲ್ಲ ಕೂಗುಮಾರಿಗಳ ದೆಸೆಯಿಂದ ಹಳ್ಳ ಹಿಡಿದ ಸಾಕಷ್ಟು ಉದಾಹರಣೆಗಳಿದ್ದಾವೆ. ಬಾಯಿ ಬಡುಕರೇ ಹೋರಾಟವೊಂದರ ಮುನ್ನೆಲೆಗೆ ಬಂದಾಗ ಅದರ ಮೂಲ ಆಶಯಗಳು ಮರೆಯಾಗಿ ಜನರಿಗೆ ಏನನ್ನು ಮನನ ಮಾಡಿಸಬೇಕೋ ಅದನ್ನು ಮಾಡಲಾಗದಂಥಾ ದುಃಸ್ಥಿತಿಯೂ ಎದುರಾಗಿ ಬಿಡುತ್ತದೆ. ರಾಜ್ಯದ ವಿಚಾರದಲ್ಲಿ ನೋಡೋದಾದರೆ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಹೋರಾಟದಲ್ಲಿಯೂ ಅಂಥಾದ್ದೊಂದು ಕಂಟಕ ದಟ್ಟವಾಗಿಯೇ ಕಾಣಿಸಲಾರಂಭಿಸಿದೆ. ಇದೀಗ ಈ ಹೋರಾಟದಲ್ಲಿ ಅರಚಾಡುತ್ತಲೇ ಪ್ರಚಲಿತಕ್ಕೆ ಬಂದಿದ್ದ ಅರೆಬೆಂದ ಮಡಿಕೆಯಂಥ ಎಳೇ ಕೂಗುಮಾರಿಯೊಂದು ಅಂದರ್ ಆಗಿದೆ!
ಇಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಟಿಪ್ಪು ಸಲ್ತಾನ್ ಯುನೈಟೆಡ್ ಫ್ರಂಟ್ ಸಂಘಟನೆ ಹಮ್ಮಿಕೊಂಡಿದ್ದ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆಯ ಸಂದರ್ಭದಲ್ಲಿ ಇಂಥಾದ್ದೊಂದು ಗಂಭೀರ ಘಟನೆ ನಡೆದಿದೆ. ಈಗ್ಗೆ ಹಲವಾರು ದಿನಗಳಿಂದ ಪೌರತ್ವ ತಿದ್ದುಪಡಿ ಕಾಯ್ದೆಯ ಮುಂಚೂಣಿ ಹೋರಾಟಗಾರ್ತಿಯಂತೆ ಭಾಷಣ ಮಾಡುತ್ತಾ ಬಂದಿದ್ದ ಅಮೂಲ್ಯಾ ಎಂಬಾಕೆ ಈ ಪ್ರತಿಭಟನೆಯಲ್ಲಿಯೂ ಭಾಗವಹಿಸಿದ್ದಳು. ಅಸಾದುದ್ದೀನ್ ಓವೈಸಿ ಕೂಡಾ ಹಾಜರಿದ್ದ ಈ ವೇದಿಕೆಯಲ್ಲಿ ಈ ಕಾಯ್ದೆಯ ವಿರುದ್ಧದ ಕೂಗು ಮೊರೆಯುತ್ತಿದ್ದ ವೇಳೆಯಲ್ಲಿಯೇ ಕೂಗುಮಾರಿಯಂಥಾ ಅಮೂಲ್ಯಾ ಮೈಕೆತ್ತಿಕೊಂಡಿದ್ದಾಳೆ. ಮಾತು ಆರಂಭಿಸುವ ಮುನ್ನವೇ ಪಾಕಿಸ್ಥಾನ್ ಜಿಂದಾಬಾದ್ ಅಂದಿದ್ದಾಳೆ.
ಅಮೂಲ್ಯ ಪಾಕಿಸ್ತಾನ ಪರ ಘೋಷಣೆ ಕೂಗುತ್ತಿದ್ದಂತೆಯೇ ಪೊಲೀಸ್ ಅಧಿಕಾರಿಗಳು ವೇದಿಕೆಗೆ ನುಗ್ಗಿ ಅಮೂಲ್ಯಾಳನ್ನು ಬಂಧಿಸಿದ್ದಾರೆ. ಈ ಹುಡುಗಿ ಅಮೂಲ್ಯಾ ಪಾಕಿಸ್ಥಾನದ ಪರವಾಗಿ ಘೋಷಣೆ ಕೂಗುವ ಹುಂಬತನ ಪ್ರದರ್ಶಿಸಿದಾಗ ಅಸಾದುದ್ದೀನ್ ಓವೈಸಿಯಂಥಾ ಅತಿರೇಕದ ಆಸಾಮಿಯೇ ಅವಕ್ಕಾಗಿದ್ದರು. ತಕ್ಷಣವೇ ಅಮೂಲ್ಯಾ ಪಾಕಿಸ್ಥಾನದ ಪರವಾಗಿ ಘೋಷಣೆ ಕೂಗಿದ್ದು ತಪ್ಪು ಎಂದೂ ಅನೌನ್ಸ್ ಮಾಡಿದರಾದರೂ ಮಾಡಿದ ಹುಂಬತನಕ್ಕೆ ಅಮೂಲ್ಯಾ ಬಂಧನದ ಪ್ರತಿಫಲವನ್ನೇ ಪಡೆದುಕೊಂಡಿದ್ದಳು. ಇದು ಕೇವಲ ಅಮೂಲ್ಯಾಳ ತಪ್ಪಲ್ಲ. ಇಂಥಾದ್ದೊಂದು ಗಂಭೀರ ವಿಚಾರದ ಪ್ರತಿಭಟನೆಗಳಲ್ಲಿ ಇಂಥಾ ಎಳಸುಗಳನ್ನು ಮುಂದೆ ಬಿಟ್ಟು ಮಾತಾಡಿಸುವ ಮತಿಗೆಟ್ಟವರ ತಪ್ಪಿನ ಬಾಬತ್ತು ಕೂಡಾ ಈ ಪ್ರಕರಣದಲ್ಲಿ ಬಹಳಷ್ಟಿದೆ.

ಒಂದು ಕಾಯ್ದೆ, ಕಾನೂನು ಬಂದಾಗ ಅದನ್ನು ಎಲ್ಲರೂ ಕಣ್ಣುಮುಚ್ಚಿ ಒಪ್ಪಿಕೊಳ್ಳಬಹುದೆಂದೇನೂ ಇಲ್ಲ. ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಯಾವುದೇ ಪಕ್ಷಗಳು ಅಧಿಕಾರದಲ್ಲಿದ್ದರೂ ಈ ಮಾತು ಖಂಡಿತಾ ಅನ್ವಯಿಸುತ್ತದೆ. ಅಂಥಾದ್ದೊಂದು ಪ್ರಜಾತಾಂತ್ರಿಕ ಹಕ್ಕಿನ ಭಾಗವಾಗಿಯೇ ಇಂದು ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧವೂ ಹೋರಾಟಗಳು ನಡೆಯುತ್ತಿವೆ. ಇದೇನು ಮಕ್ಕಳಾಟವಲ್ಲ. ಈ ಹೋರಾಟದಲ್ಲಿ ಸದರಿ ಕಾನೂನಿನ ಇಂಚಿಂಚು ಅರಿವಿರುವ, ಆಡುವ ಪ್ರತೀ ಮಾತುಗಳು ಎಂಥಾ ಪರಿಣಾಮ ಬೀರುತ್ತದೆಂಬಂಥ ಖಬರಿರುವವರನ್ನೇ ಮಾತಾಡಲು ಬಿಡುವುದು ನಿಜಕ್ಕೂ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಗೌರವ ಕೊಡುವಂಥಾ ಬೆಳವಣಿಗೆ.

ಆದರೆ ಅದೇಕೋ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಹೋರಾಟದ ಮುನ್ನೆಲೆಯಲ್ಲಿ ಈ ಹುಂಬ ಹುಡುಗಿ ಅಮೂಲ್ಯಾ ಒದರಾಡುತ್ತಾ ಬರುತ್ತಿದ್ದಾಳೆ. ಈ ಅರೆಬೆಂದ ಮಡಿಕೆಗಳ ಹಣೇಬರಹವೇ ಅಷ್ಟು; ಅವು ಚಪ್ಪಾಳೆಗಳಿಂದ ಉಕ್ಕೇರುತ್ತವೆ. ಯಾರೋ ಆಡಿದ ಪ್ರೋತ್ಸಾಹದ ಮಾತುಗಳನ್ನೇ ಮೆರೆದಾಡಲು ಸಿಕ್ಕ ಗ್ರೀನ್‌ಸಿಗ್ನಲ್ ಎಂಬಂತೆ ಭ್ರಮಿಸುತ್ತವೆ. ಅಮೂಲ್ಯ ಎಂಬ ಹುಂಬ ಹುಡುಗಿಯ ವಿಚಾರದಲ್ಲಾಗಿರುವುದೂ ಅದೇ. ಓತಾಪ್ರೋತವಾಗಿ ಮಾತಾಡುವ ಈಕೆಯನ್ನು ಅದ್ಯಾರೋ ತಲೆಮಾಸಿದವರು ಕರ್ನಾಟಕ ಕಂಡ ದಿಟ್ಟ ಪತ್ರಕರ್ತೆ ಗೌರಿ ಲಂಕೇಶರಿಗೆ ಹೋಲಿಸಿ ಮಾತಾಡಿದ್ದರು. ಆ ಅವಿವೇಕಿಗಳಿಗೆ ಬಾಬ್‌ಕಟ್ ಮಾಡಿಕೊಂಡವರೆಲ್ಲ ಗೌರಿ ಲಂಕೇಶ್ ಆಗಲು ಸಾಧ್ಯವಿಲ್ಲ ಎಂಬ ಕನಿಷ್ಠ ಖಬರೂ ಇದ್ದಂತಿಲ್ಲ. ಯಾವಾಗ ಇಂಥಾ ಹೋಲಿಕೆ, ಒಂದು ವರ್ಗದ ಹೊಗಳಿಕೆ ಸಿಕ್ಕಿತೋ, ಅಮೂಲ್ಯಾ ಎಂಬ ಎಳಸು ಹುಡುಗಿ ತಾನಾಡಿದ್ದೇ ಮಾತೆಂಬಂಥಾ ಧೋರಣೆಯತ್ತ ಬಂದು ನಿಂತಿತ್ತು. ಅದಕ್ಕ್ಯಾವ ಇನಾಮು ಸಿಗಬೇಕೋ ಅದೀಗ ಸಿಕ್ಕಿದೆ.

ದೇಶಭಕ್ತಿ ಎಂಬುದೀಗ ಯಾರದ್ದೋ ಗುತ್ತಿಗೆಯ ಸರಕಾದಂತಾಗಿದೆ. ಆ ವಾತಾವರಣ ಅದೆಂಥಾದ್ದೇ ಇದ್ದರೂ ದೇಶಪ್ರೇಮವೆಂಬುದು ಪ್ರತಿಯೊಬ್ಬರ ಮೊದಲ ಆದ್ಯತೆಯಾಗಬೇಕಿದೆ. ನಮ್ಮ ವಿರೋಧ, ತಕರಾರುಗಳೆಲ್ಲವೂ ನಮ್ಮ ನಮ್ಮಲ್ಲೇ. ಯಾರ ವಿರುದ್ಧ ಅಸಹನೆಗಳಿದ್ದರೆ ಅದೇನೇ ಹತ್ತಿಕ್ಕಿದರೂ ಹೊರ ಹಾಕುವ ಮಾರ್ಗಗಳಿವೆ. ಹಾಗಂತ ಅಂಥಾ ವಿರೋಧಗಳಿಗೆಪಾಕಿಸ್ತಾನದ ಪದತಲಕ್ಕೆ ಶರಣಾಗುವಂಥಾ ಘೋಷಣೆ ಕೂಗುವ ಷಂಡತನವನ್ನು ಯಾವ ಭಾರತೀಯನೂ ಒಪ್ಪಿಕೊಳ್ಳುವುದಿಲ್ಲ. ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಹೋರಾಟ ಘನತೆ ಉಳಿಸಿಕೊಳ್ಳಬೇಕೆಂದರೆ ಅಮೂಲ್ಯಳಂತ ಬಾಯಿಬಡುಕರನ್ನು ದೂರವಿಡಬೇಕಿದೆ. ಅದಾಗದಿದ್ದರೆ ಜನಸಾಮಾನ್ಯರ ಕಣ್ಣಲ್ಲಿ ಈ ಪ್ರತಿಭಟನೆಗಳೆಲ್ಲವೂ ಅಸಹ್ಯವಾಗಿಯಷ್ಟೇ ಉಳಿದು ಬಿಡುತ್ತದೆ. ಇದೆಲ್ಲ ಏನೇ ಇದ್ದರೂ ಅಮೂಲ್ಯ ಹೀಗೆ ಪಾಕಿಸ್ಥಾನದ ಪರವಾಗಿ ಘೋಷಣೆ ಕೂಗಿರುವುದು ಅಕ್ಷಮ್ಯ. ಈಕೆಯ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಿದರೆ ಪ್ರಚಾರಕ್ಕಾಗಿ ಇಡೀ ದೇಶದ ಭಾವನೆಗೆ ಘಾಸಿ ಮಾಡುವಂಥಾ ದುಷ್ಟ ಮನಸ್ಥಿತಿಗಳ ಸದ್ದಡಗಿಸಿದಂತಾಗುತ್ತದೆ.

LEAVE A REPLY

Please enter your comment!
Please enter your name here