ಹೀರೋ ಅಳಿಯನಿಗಾಗಿ ಪುನೀತ್ ಕೋರಿಕೆ!

ರಾಜ್ ಕುಮಾರ್ ಫ್ಯಾಮಿಲಿ ಅಂದಮೇಲೆ ನಟನಾ ಚಾತುರ್ಯವೆಂಬುದು ರಕ್ತಗತವಾಗಿಯೇ ಬಂದಿರುತ್ತದೆ. ರಾಜ್‌ರಂಥಾ ಮೇರು ಕಲಾವಿದನ ಮೂವರು ಪುತ್ರರೂ ಕನ್ನಡ ಸಿನಿಮಾ ರಂಗದಲ್ಲಿ ನಾಯಕ ನಟರಾಗಿ ಜನಮನ ಗೆದ್ದಿದ್ದಾರೆ. ಇದೀಗ ರಾಜ್ ಕುಟುಂಬದ ಮೂರನೇ ತಲೆಮಾರಿನ ಆಗಮನವಾಗೋ ಸಮಯ. ಈ ತಲೆಮಾರೂ ಕೂಡಾ ನಟನೆಯನ್ನೇ ಮೂಲ ಆಸಕ್ತಿಯಾಗಿಸಿಕೊಂಡು ಹಂತ ಹಂತವಾಗಿ ಹಿರಿತೆರೆಗೆ ಪಾದಾರ್ಪಣೆ ಮಾಡುತ್ತಿದೆ. ರಾಘವೇಂದ್ರ ರಾಜ್‌ಕುಮಾರ್ ಪುತ್ರ ವಿನಯ್ ಈಗಾಗಲೇ ನಾಯಕನಾಗಿ ಎರಡ್ಮೂರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅದಾಗಲೇ ರಾಜ್ ಕುಟುಂಬದ ಮತ್ತೊಂದು ಕುಡಿ ನಾಯಕನಾಗಿ ಅಡಿಯಿರಿಸುತ್ತಿದೆ.


ರಾಜ್‌ಕುಮಾರ್ ಮೊಮ್ಮಗ, ರಾಮ್‌ಕುಮಾರ್ ಮಗ ಧೀರೇನ್ ರಾಮ್‌ಕುಮಾರ್ ಶಿವ ೧೪೩ ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾನೆಂದು ಈ ಹಿಂದೆಯೇ ಸುದ್ದಿಯಾಗಿತ್ತು. ಆದರೆ ಆ ಸಿನಿಮಾ ಬಗ್ಗೆ ಹೆಚ್ಚಿನ ಮಾಹಿತಿಗಳು ಜಾಹೀರಾಗಿರಲಿಲ್ಲ. ಇದೀಗ ಪ್ರೇಮಿಗಳ ದಿನಕ್ಕೆ ಕೊಡುಗೆಯೆಂಬಂತೆ ಶಿವ ೧೪೩ ಚಿತ್ರದ ಪೋಸ್ಟರ್ ರಿಲೀಸಾಗಿದೆ. ಅದರಲ್ಲಿ ಮಾನ್ವಿತಾ ಹರೀಶ್ ಮತ್ತು ಧೀರೇನ್ ಲಿಪ್ ಲಾಕ್ ಸನ್ನಿವೇಶವೂ ಇದೆ. ರೊಮ್ಯಾಂಟಿಕ್ ಮೂಡಿಗೆ ಜಾರಿಸೋ ಈ ಪೋಸ್ಟರ್‌ಗೆ ಸಾಮಾಜಿಕ ಜಾಲತಾಣದಲ್ಲಿಯೂ ಮೆಚ್ಚುಗೆ ಕೇಳಿ ಬರುತ್ತಿದೆ. ಶಿವ ೧೪೩ ಎಂಬ ಹೆಸರಿಒನ ಈ ಸಿನಿಮಾ ಪೋಸ್ಟರ್ ಪ್ರೇಮಿಗಳ ದಿನದಂದೇ ಬಿಡುಗಡೆಗೊಂಡಿರೋದರಿಂದ ಈ ಬಗ್ಗೆ ಹೆಚ್ಚಿನ ಕುತೂಹಲ ಮೂಡಿಕೊಂಡಿದೆ.


ಜಯಣ್ಣ ಫಿಲಂಸ್ ಬ್ಯಾನರಿನಡಿಯಲ್ಲಿ ನಿರ್ಮಾಣಗೊಳ್ಳುತ್ತಿರೋ ಈ ಸಿನಿಮಾ ಪೋಸ್ಟರ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರೋ ಪುನೀತ್ ರಾಜ್ ಕುಮಾರ್ ತಮ್ಮ ಕುಟುಂಬದ ಕುಡಿಯನ್ನು ಹರಸಿ ಬೆಳೆಸುವಂತೆ ಅಭಿಮಾನಿ ದೇವರುಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ. ಅನೀಲ್ ಕುಮಾರ್ ನಿರ್ದೇಶನದಲ್ಲಿ ಮೂಡಿ ಬರಲಿರೋ ಈ ಸಿನಿಮಾಗಾಗಿ ಧೀರೇನ್ ಸಾಕಷ್ಟು ತಯಾರಿ ಮಾಡಿಕೊಂಡೇ ಅಖಾಡಕ್ಕಿಳಿದಿದ್ದಾರೆ. ಅನಿಲ್ ಕುಮಾರ್ ಧೀರೇನ್ ಎಂಟ್ರಿಗೆ ತಕ್ಕುದಾದ ಪೊಗದಸ್ತಾಗಿರೋ ಕಥೆಯೊಂದಿಗೆ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.

LEAVE A REPLY

Please enter your comment!
Please enter your name here