ಈಗ ಎಲ್ಲವೂ ಇದೆ; ನೀನೊಬ್ಬಳನ್ನು ಹೊರತು ಪಡಿಸಿ!

ಹ್ಯಾಗಿದ್ದಿ ಅಂತ ಖಂಡಿತಾ ಕೇಳೋದಿಲ್ಲ. ಯಾಕೆಂದರೆ, ನೀನು ಚೆನ್ನಾಗಿಯೇ ಇರುತ್ತಿ. ಇರಬೇಕು. ತೀರಾ ನೀ ನನ್ನನ್ನು ಬೆರಳ ತುದಿಗಂಟಿದ ಅಸಹ್ಯಕ್ಕಿಂತಲೂ ಕಡೆಯಾಗಿ ಎಸೆದು ಹೋದೆಯಲ್ಲ? ಆ ಕ್ಷಣವೂ ನಿನಗೆ ನಾನು ಕೇಡು ಬಯಸಲಿಲ್ಲ. ಅಪರಿಚಿತರ ನಡುವೆ ಕಂಗೆಟ್ಟು ನಿಂತ ಮಗುವಿಗೆ ತನ್ನನ್ನು ಒಬ್ಬಂಟಿಯಾಗಿ ಬಿಟ್ಟು ಹೋದ ಅಮ್ಮನೆಡೆಗೊಂದು ಸಿಟ್ಟು ಮೂಡಬಹುದು ನೋಡು, ಆಗ ನಿನ್ನ ಮೇಲೆ ನನಗಿದ್ದದ್ದು ಅಂಥಾದ್ದೇ ಸಿಟ್ಟು. ನಿನ್ನ ತಿರಸ್ಕಾರದಿಂದಾದ ಸಂಕಟವನ್ನು ನರನಾಡಿಗಳಿಗೆ ತುಂಬಿಕೊಂಡು ಕತ್ತಲಲ್ಲಿ ಕುಸಿದು ಕೂತ ಘಳಿಗೆಯಲ್ಲಿಯೂ ನಿನ್ನ ಬದುಕನ್ನು ಬೆಳಕಿನಲ್ಲಿಯೇ ಧೇನಿಸಿದ್ದೇನೆ. ಈ ಕ್ಷಣವೂ ಅದನ್ನೇ ಬಯಸುತ್ತೇನೆ; ನೀನು ಸುಖವಾಗಿರಬೇಕು, ನೆಮ್ಮದಿಯಿಂದಿರಬೇಕು.


ಮೊದ ಮೊದಲು ನೀನಿರದ ಈ ಜೀವನವನ್ನು ಊಹಿಸಿಕೊಂಡರೂ ಉಸಿರುಗಟ್ಟಿದಂತಾಗುತ್ತಿತ್ತು. ಆದರೆ ಕಾಲ ಎಲ್ಲದಕ್ಕೂ ಒಗ್ಗಿಕೊಂಡು ಹೋಗುವಂತೆ ಮಾಡುತ್ತದೆ. ಆದುದರಿಂದಲೇ ನಿನ್ನೊಂದಿಗೆ ಕಳೆದ, ನಿನ್ನ ಕುರಿತು ಸಾವಿರ ಕನಸು ಕಟ್ಟಿಕೊಂಡು ಬದುಕಿದ ಕ್ಷಣಗಳನ್ನು ನೆನೆಯುತ್ತಾ, ಅದೆಲ್ಲವೂ ಸುಳ್ಳಾದ ದುಃಖವನ್ನು ಎದೆಯಲ್ಲಿಟ್ಟುಕೊಂಡು ನಡೆಯುತ್ತಿದ್ದೇನೆ. ಮೈಯ ಕಸುವು ತೀರುವವರೆಗೆ, ದಾರಿ ಕೊನೆಯಾಗುವವರೆಗೆ ನಡೆಯುತ್ತಲೇ ಇರುತ್ತೇನೆ. ಹಾಗೆ ಉಸಿರು ನಿಂತಾದ ಮೇಲೆಯೂ ನನ್ನದೆಯಲ್ಲಿ ನಿನ್ನ ನೆನಪಿನ, ನಿನ್ನೆಡೆಗಿನ ಪ್ರೀತಿಯ ಪಸೆಯಿರುತ್ತದೆ.


ಧೋ ಅಂತ ಸುರಿದ ಮಳೆ ಇದ್ದಕ್ಕಿದ್ದ ಹಾಗೆ ನಿಂತು ಹೋದಂತೆ ಎದ್ದು ನಡೆದೆಯಲ್ಲ ನೀನು? ಆ ಘಳಿಗೆಯಲ್ಲಿ ದಿಕ್ಕೆಟ್ಟು ಕೂತಾಗ ನಿನ್ನ ನೆನಪು, ನೀ ಸಿಗದ ನಿರಾಸೆಗಳೆಲ್ಲವೂ ಒಟ್ಟೊಟ್ಟಿಗೇ ಅಮರಿಕೊಂಡು ಕಂಗಾಲು ಮಾಡಿ ಬಿಡುತ್ತಿದ್ದವು. ಬರಬರುತ್ತಾ ಅದು ಸಂಕಟವಾಗಿ ಆವರಿಸಿಕೊಳ್ಳಲಾರಂಭಿಸಿತ್ತು. ಕ್ರಮೇಣ ನಾನು ಆ ಸಂಕಟದ ನೆತ್ತಿ ಸವರಿ ಮುದ್ದು ಮಾಡುವುದನ್ನು ಬೇಕಂತಲೇ ಕಲಿತುಕೊಂಡೆ. ಆ ಬಳಿಕ ನೆನಪು, ನಿರಾಸೆ, ಹತಾಶೆ ಹಾಗೂ ಕರುಳು ಕೊರೆಯುವ ನೋವುಗಳೆಲ್ಲವೂ ಅದೊಂದು ರೀತಿಯಲ್ಲಿ ಸುಖ ಹುಟ್ಟಿಸಲು ಶುರುವಿಟ್ಟವು. ಬೆಳಕೇ ಬೇಡವೆನ್ನಿಸಿತ್ತು. ಆವತ್ತಿನಿಂದ ನಾನು ಕತ್ತಲ ಕೂಸು. ಹೆಚ್ಚೂ ಕಡಿಮೆ ವರ್ಷದವರೆಗೆ ಅದೇ ಸ್ಥಿತಿಯಲ್ಲಿದ್ದೆ. ಬಹುಶಃ ಇನ್ನೊಂದಷ್ಟು ಸಮಯ ಹಾಗೆಯೇ ಇದ್ದಿದ್ದರೆ ಈ ಪತ್ರ ಬರೆಯೋದಕ್ಕೆ ನಾನೇ ಇರುತ್ತಿರಲಿಲ್ಲವೇನೋ…


ಕತ್ತಲಲ್ಲಿ ಕೂತು ನಿನ್ನ ನೆನಪುಗಳನ್ನೆಲ್ಲ ಗುಡ್ಡೆ ಹಾಕಿಕೊಂದು ಮುದ್ದಾಡಿ, ಕಣ್ಣೀರುಗರೆದು ಸುಸ್ತಾದ ಬದುಕು ಮೆಲ್ಲಗೆ ಬೋರು ಹೊಡೆಸಲಾರಂಭಿಸಿತು ನೋಡು? ನಾನು ಎದ್ದು ಕೂತದ್ದು ಆವಾಗಲೆ. ಆದರೆ ಯಾರಿಗಾಗಿ ಎದ್ದು ನಿಲ್ಲಬೇಕು, ಇನ್ಯಾರಿಗಾಗಿ ನಡೆದಾಡಬೇಕು, ಇನ್ಯಾತಕ್ಕಾಗಿ ಈ ಬದುಕಿನೊಂದಿಗೆ ಬಡಿದಾಡಬೇಕು ನೀನೇ ಇಲ್ಲದ ಮೇಲೆ ಅಂತೊಂದು ಹತಾಶೆ ಬೆರತ ವೈರಾಗ್ಯ ಮತ್ತೆ ಮತ್ತೆ ಕೈ ಜಗ್ಗಿ ಕುಕ್ಕರಿಸುವಂತೆ ಮಾಡಿತ್ತು. ಆಗ ನಿನ್ನ ಮೇಲೆ ಬೇಕೆಂತಲೇ ಸಿಟ್ಟು ಮಾಡಿಕೊಳ್ಳುವ ಉಪಾಯ ಕಲಿತುಕೊಂಡೆ. ಬೆಳಕಿಗೆ ಬಂದು ನಿಂತೆ. ನಿನ್ನ ತಿರಸ್ಕಾರ, ಸಂಕಟದಾಚೆಗೂ ಒಂದು ಬದುಕು ಅಲ್ಲಿ ನನಗಾಗಿ ಅರಸಿದಂತೆ ನಿಂತಿತ್ತು.


ಅದರ ಜೊತೆಗೂಡಿ ಹೊರಟವನು ಇದೀಗ ಎಲ್ಲಿಗೋ ತಲುಪಿಕೊಂಡಿದ್ದೇನೆ. ಹತ್ತಿರದವರು ‘ಅಂತೂ ಸರಿಯಾದನಲ್ಲಾ’ ಅಂತ ನಿಟ್ಟುಸಿರು ಬಿಡುತ್ತಿದ್ದಾರೆ. ದೂರದಿಂದ ನೋಡುವವರು ಹುಡುಗ ನೆಲೆ ನಿಂತ ಅಂತ ಸಂತಸ ಪಡುತ್ತಿದ್ದಾರೆ. ಯಾವುದೋ ಅಗೋಚರ ಮಾಯೆಯ ನಿಯಂತ್ರಣಕ್ಕೊಳಪಟ್ಟವನಂತೆ ನಡೆಯುತ್ತಿರುವ ನನ್ನೆದೆಯಲ್ಲಿ ನಿಗಿನಿಗಿಸುತ್ತಿರುವ ಸಂಕಟ ಮಾತ್ರ ಯಾರೊಬ್ಬರಿಗೂ ಅರ್ಥವಾಗುತ್ತಿಲ್ಲ. ಅರ್ಥವಾದರೂ ಅದೇನು ಪ್ರಯೋಜನವಿದೆ ಹೇಳು.


ದಿನಾ ಮುಂಜಾನೆ ನಿರೀಕ್ಷೆಗಳೇ ಇಲ್ಲದೆ ಹೂ ಅರಳುತ್ತವೆ. ಮನೆಯೆದುರಿನ ಕಟ್ಟೆಯಲ್ಲಿ ಸೊಂಪಾಗಿ ಬೆಳೆದ ತುಳಸಿ ನಿರುದ್ದೇಶಪೂರಿತವಾಗಿ ಪರಿಮಳ ಚೆಲ್ಲುತ್ತದೆ.  ಥೇಟು ಅದರಂತೆಯೇ ನಿರೀಕ್ಷೆಗಳಿಲ್ಲದೆ ಬದುಕುವುದನ್ನು ರೂಢಿ ಮಾಡಿಕೊಂಡಿದ್ದೇನೆ. ಈ ಯಾನದಲ್ಲಿ ನಾನು ಬಯಸದಿದ್ದದ್ದೂ ಸಿಕ್ಕಿದೆ. ಹಣ, ಹೆಸರು, ಮಾನ-ಮಾರ್ಯಾದೆಗಳು (ಇವೆರಡು ಮೊದಲಿಂದ್ಲೂ ಇದ್ದವು!) ಸೇರಿದಂತೆ ಈಗ ಎಲ್ಲವೂ ಇವೆ. ನೀನ್ನೊಬ್ಬಳನ್ನು ಹೊರತು ಪಡಿಸಿ.


ಇಂಥಾ ಪರಿಸ್ಥಿತಿಯಲ್ಲಿ ಕೂತು ಈ ಘಳಿಗೆಯಲ್ಲಿ ನೀನಿದ್ದಿದ್ದರೆ ಎಷ್ಟು ಚೆಂದಗಿರುತ್ತಿತ್ತೆಂದು ಹಲುಬುತ್ತೇನೆ. ಒಳಗೊಳಗೇ ನರಳುತ್ತೇನೆ. ಉಸಿರುಗಟ್ಟಿ ಒದ್ದಾಡುತ್ತೇನೆ. ಈ ಜನುಮದಲ್ಲೆಂದೂ ಸಿಗದಂತಾಗಿ ಹೋದ ನಿನಗಾಗಿ ಜೀವವೇ ಆವಿಯಾಗಿ ಅನಂತದಲ್ಲೆಲ್ಲೋ ಅಂತರ್ಧಾನ ಹೊಂದುವಂತೆ ತಹ ತಹಿಸುತ್ತೇನೆ. ಮೊದಲು ಹೀಗಾದಾಗೆಲ್ಲ ಭೋರಿಟ್ಟು ಅತ್ತು ಬಿಡುತ್ತಿದ್ದೆ. ಆದರೀಗ ಅಳುವುದಿಲ್ಲ, ಕಣ್ಣೀರು ಖಾಲಿಯಾಗಿ ಬಹಳಾ ಸಮಯವಾಗಿದೆ!
ಇರಲಿ, ನಾನು ಹೀಗೆಯೇ ಬದುಕುತ್ತೇನೆ. ಆದರೆ ಜೀವವೇ… ನಿನ್ನ ಕಣ್ಣುಗಳಲ್ಲಿ ಅಪ್ಪ್ಪಿತಪ್ಪಿಯೂ ಕಣ್ಣೀರನ್ನು, ನೋವನ್ನು ಕಲ್ಪಿಸಿಕೊಳ್ಳಲಾರೆ.

LEAVE A REPLY

Please enter your comment!
Please enter your name here