ದೆಹಲಿಯಲ್ಲಿ ನಡೆಯಲಿಲ್ಲ ‘ಕತ್ತಿ’ ವರಸೆ!

ಶೋಧ ನ್ಯೂಸ್ ಡೆಸ್ಕ್: ಸುಮ್ಮನಿರೋ ಹೊತ್ತಿನಲ್ಲಿ ದೌಲತ್ತಿನ ಮಾತಾಡಿದರೆ ಆಗಬಾರದ್ದೇ ಆಗುತ್ತದೆ ಅನ್ನೋದಕ್ಕೆ ಬಹುಶಃ ಸಚಿವ ಸ್ಥಾನ ಸಿಗದೆ ಕಂಗಾಲು ಸ್ಥಿತಿ ತಲುಪಿರೋ ಉಮೇಶ್ ಕತ್ತಿಗಿಂತಲೂ ಬೇರೆ ಉದಾಹರಣ ಬೇಕಿಲ್ಲವೇನೋ. ಬಿಜೆಪಿಯಲ್ಲಿ ಒಂದು ಸ್ಥಾನದ ಮೇಲೆ ಹತ್ತಾರು ಕಣ್ಣುಗಳಿವೆ. ಅದರಲ್ಲಿಯೂ ಸಿಎಂ ಸ್ಥಾನವಂತೂ ಯಾರಿಗೂ ಅಷ್ಟು ಸಲೀಸಾಗಿ ದಕ್ಕುವಂಥಾದ್ದಲ್ಲ. ಪ್ರತಿಯೊಬ್ಬರಿಗೂ ಸಿಎಂ ಆಗೋ ಆಸೆ ಇದ್ದರೂ ಅದನ್ನು ಬಹಿರಂಗವಾಗಿ ಯಾರೂ ಹೇಳಿಕೊಳ್ಳೋದಿಲ್ಲ. ಆ ಸರತಿಯಲ್ಲಿರುವವರ ಆಟ ಮುಗಿಯೋವರೆಗೆ ಕಾಯದೆ ಬೇರೆ ವಿಧಿಯಿಲ್ಲ. ಅಂಥಾದ್ದರಲ್ಲಿ ಒಂದು ಕ್ಷೇತ್ರವನ್ನೇ ನೆಟ್ಟಗೆ ಸಂಭಾಳಿಸಲಾಗದ ಉಮೇಶ್ ಕತ್ತಿ ನಂಗೆ ಸಿಎಂ ಸ್ಥಾನ ಬೇಕು ಎಂಬರ್ಥದ ವರಸೆ ತೋರಿಸುತ್ತಾರೆಂದರೆ ಯಡಿಯೂರಪ್ಪನಿಗೆ ಪಿತ್ಥ ಕೆರಳದಿರುತ್ತದಾ?


ಉಮೇಶ್ ಕತ್ತಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಕ್ಷಭಣದಿಂದಲೂ ಸಚಿವ ಸ್ಥಾನಕ್ಕಾಗಿ ಭಾರೀ ಹರತಾಳ ನಡೆಸಿದ್ದರು. ಆದರೆ ಅದು ಸಿಕ್ಕಿರಲಿಲ್ಲ. ಹಾಗಂತ ಸುಮ್ಮನಿರೋ ಜಾಯಮಾನವೂ ಅವರದ್ದಲ್ಲ. ಈ  ಬಾರಿ ಮುಖ್ಯಮಂತ್ರಿಗಳು ಸಂಪುಟ ವಿಸ್ತರಣೆಗೆ ಮುಂದಾಗುತ್ತಲೇ ಕತ್ತಿ ಸಾಹೇಬರು ಮತ್ತೆ ಲಾಬಿ ಶುರುವಿಟ್ಟಿದ್ದರು. ಒಂದು ಮೂಲದ ಪ್ರಕಾರ ಎಲ್ಲವೂ ಸರಿಯಾಗಿದ್ದಿದ್ದರೆ ಹಿರಿಯ ನಾಯಕ ಕತ್ತಿಗೆ ಸಚಿವ ಸ್ಥಾನ ಸಿಗುತ್ತಿತ್ತಂತೆ. ಆದರೆ ನಾನು ಸಿಎಂ ಮೆಟೀರಿಯಲ್ ಎಂಬಂತೆ ಉಮೇಶ್ ಕತ್ತಿ ಕಾಲರು ನೀವಿಕೊಂಡಿದ್ದರಲ್ಲಾ? ಅದೇ ಅವರ ಪಾಲಿಗೆ ಗುನ್ನವಾಗಿ ಮರಳಿದೆ!


ಹೀಗೆ ಅದೇನೇ ಹರಸಾಹಸ ಪಟ್ಟರೂ ಉಮೇಶ್ ಕತ್ತಿ ಪಾಲಿಗೆ ಸಚಿವ ಸ್ಥಾನ ಮರೀಚಿಕೆಯಾಗಿದೆ. ಇದರಿಂದ ಕಂಗಾಲಾದ ಕತ್ತಿ ಇಂದು ಅಮಿತ್ ಶಾರನ್ನು ಭೇಟಿಯಾಗಲು ದೆಹಲಿಯತ್ತ ಯಾತ್ರೆ ಹೋಗಿದ್ದರು. ಅಲ್ಲಿ ಕರ್ನಾಟಕ ಭವನದಲ್ಲಿ ಬೆಳಗ್ಗೆಯಿಂದ ಸಂಜೆಯವರೆಗೆ ಕಾದರೂ ಅಮಿತ್ ಶಾ ಭೇಟಿ ಮಾತ್ರ ಸಾಧ್ಯವಾಗಿಲ್ಲವಂತೆ. ನಂತರ ಮಾಧ್ಯಮದ ಮಂದಿ ಅಟಕಾಯಿಸಿಕೊಂಡಾಗ ಏನೇನೋ ಸಬೂಬು ಹೇಳಿ ನುಣುಚಿಕೊಂಡಿದ್ದ ಕತ್ತಿ ಕಡೆಗೂ ನಿರಾಸೆಯಿಂದ ಮರಳಿದ್ದಾರೆ. ಅಂತೂ ಸಂಭಾವ್ಯ ಸಿಎಂ ಮೆಟೀರಿಯಲ್ಲಿಗೆ ಕೇಂದ್ರ ಗೃಹ ಸಚಿವರ ದರ್ಶನ ಭಾಗ್ಯವೂ ದಕ್ಕದಿರೋದು ನಿಜಕ್ಕೂ ದೌರ್ಭಾಗ್ಯ!

LEAVE A REPLY

Please enter your comment!
Please enter your name here