ಬಣ ಬಡಿದಾಟದ ನಡುವೆ ಕೆಪಿಸಿಸಿ ಅನಾಥ!

ಶೋಧ ನ್ಯೂಸ್ ಡೆಸ್ಕ್: ಒಂದೆಡೆ ಆಡಳಿತಾರೂಢ ಬಿಜೆಪಿಯಲ್ಲಿ ಖಾತೆ ಹಂಚಿಕೆ ಮತ್ತು ಅದರಿಂದ ಉತ್ಪತ್ತಿಯಾದ ಭಿನ್ನಮತ ಹೊಗೆಯಾಡುತ್ತಿದೆ. ಸಿಎಂ ಯಡಿಯೂರಪ್ಪ ಯಾವ ದಿಕ್ಕಿನಿಂದ ಸ್ವಪಕ್ಷೀಯರನ್ನು ಸಮಾಧಾನಗೊಳಿಸಬೇಕು, ಯಾರಿಗೆ ಯಾವ ಖಾತೆ ಕೊಟ್ಟು ಥಂಡ ಹೊಡೆಸಬೇಕೆಂಬುದೇ ಗೊತ್ತಾಗದಂಥಾ ಅಯೋಮಯ ಸ್ಥಿತಿಗಿಳಿದಿದ್ದಾರೆ. ಇದೇ ಹೊತ್ತಿನಲ್ಲಿ ವಿರೋಧ ಪಕ್ಷವಾದ ಕಾಣಂಗ್ರೆಸ್‌ನೊಳಗೆ ಅಧ್ಯಕ್ಷ ಗಾದಿಯ ದಳ್ಳೂರಿ ಮೇರೆ ಮೀರಿಕೊಂಡಿದೆ. ಕಳೆದ ಉಪಚುನಾವಣಾ ಫಲಿತಾಂಶದ ನಂತರದಲ್ಲಿ ಖಾಲಿ ಬಿದ್ದಿರುವ ಕೆಪಿಸಿಸಿ ಅಧ್ಯಕ್ಷ ಗಾದಿಗಾಗಿ ರಣ ಕದನವೇ ಕಾಂಗ್ರೆಸ್‌ನಲ್ಲಿ ನಡೆಯುತ್ತಿದೆ.


ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ನಡುವೆ ಮುಸುಕಿನ ಗುದ್ದಾಟಕ್ಕೆ ಕಾರಣವಾಗಿರುವ ಈ ಕದನದಲ್ಲಿ ಹೆಚ್ ಕೆ ಪಾಟೀಲ್ ಸೇರಿದಂತೆ ಅನೇಕರು ಮಂಕಾಗಿ ಕೂತಿದ್ದಾರೆ. ಕೆಪಿಸಿಸಿ ಗಾದಿ ಎಂಬುದು ಈ ಬಾರಿ ಡಿಕೆಶಿ ಪಾಲಿಗೆ ಅತ್ಯಂತ ಪ್ರತಿಷ್ಠೆಯ ವಿಚಾರ. ಇಡಿ ವಿಚಾರಣೆ ಮತ್ತು ಕೇಂದ್ರ ಸರ್ಕಾರ ತನ್ನ ಮೇಲೆ ಪ್ರಹಾರ ನಡೆಸಲು ಪ್ರಯತ್ನಿಸುತ್ತಿರೋದರಿಂದ ಕಂಗೆಟ್ಟಿರೋ ಡಿಕೆಶಿಗೆ ಬಲ ಪ್ರದರ್ಶನ ಮಾಡಲು, ಪಕ್ಷದಲ್ಲಿ ತನ್ನ ಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಳ್ಳಲು ಕೆಪಿಸಿಸಿ ಅಧ್ಯಕ್ಷ ಗಾದಿ ಅನಿವಾರ್ಯ ಎಂಬಂತಾಗಿದೆ. ಆದರೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮುಂದೆಯೂ ಅಂಥಾದ್ದೇ ಅನಿವಾರ್ಯತೆ ಇದ್ದೇ ಇದೆ.


ಅತ್ತ ಸಿದ್ದರಾಮಯ್ಯ ಹೈಕಮಾಂಡ್ ಮೇಲೆ ಒತ್ತಡ ಹಾಕಿ ಡಿಕೆಶಿಗೆ ಅಧ್ಯಕ್ಷಗಿರಿ ತಪ್ಪಿಸಲು ಪ್ರಯತ್ನಿಸುತ್ತಿರುವಾಗಲೇ ಇತ್ತ ಡಿಕೆಶಿ ಕೂಡಾ ಪಟ್ಟು ಬಿಡದೆ ಹೋರಾಟ ನಡೆಸುತ್ತಾ ಬಂದಿದ್ದಾರೆ. ಈ ಕಿತ್ತಾಟವೀಗ ಸೋತು ಸುಣ್ಣವಾಗಿರೋ ಕಾಂಗ್ರೆಸ್ ಹೈಕಮಾಂಡಿಗೂ ನುಂಗಲಾರದ ತುಪ್ಪದಂತಾಗಿದೆ. ಹೀಗಿರುವಾಗಲೇ ತಿಂಗಳಿಂದೀಚೆಗೆ ಖಾಲಿ ಇರೋ ಕೆಪಿಸಿಸಿ ಅಧ್ಯಕ್ಷ ಗಾದಿಗೆ ಕೂಡಲೆ ನೇಮಕ ಮಾಡಿ ಪಕ್ಷ ಸಂಘಟನೆಗೆ ಅನುವು ಮಾಡಿಕೊಡುವಂತೆ ಕೆಲ ಕಾಂಗ್ರೆಸ್ ನಾಯಕರು ಗರಂ ಆಗಿದ್ದಾರೆನ್ನಲಾಗಿದೆ. ಒಟ್ಟಾರೆಯಾಗಿ ಈ ಬಾರಿ ಕೆಪಿಸಿಸಿ ಪಟ್ಟ ಯಾರಿಗೆ ಒಲಿಯಲಿದೆ ಅನ್ನೋ ಕುತೂಹಲಕ್ಕೆ ಸದ್ಯದಲ್ಲಿಯೇ ತೆರೆ ಬೀಳಲಿದೆ.

LEAVE A REPLY

Please enter your comment!
Please enter your name here