ವಿಡಿಯೋ ಸಾಂಗ್ ಮೂಲಕ ಮಿಂಚಿದ ಕೊಡೆಮುರುಗ!

ಸುಬ್ರಮಣ್ಯ ಪ್ರಸಾದ್ ನಿರ್ದೇಶನದ ಕೊಡೆಮುರುಗ ಚಿತ್ರವೀಗ ಬಿಡುಗಡೆಗೆ ಸನ್ನದ್ಧವಾಗಿದೆ. ಯಾವ ಸ್ಟಾರ್‌ಗಿರಿಯ ಹಂಗೂ ಇಲ್ಲದೆ ಕೇವಲ ವಿಶಿಷ್ಟ ಕಂಟೆಂಟಿನ ನಂಬಿಕೆ ಹುಟ್ಟಿಸುತ್ತಲೇ ಈ ಚಿತ್ರ ಪ್ರೇಕ್ಷಕರೆಲ್ಲರ ಆಸಕ್ತಿ ಸೆಳೆದುಕೊಂಡಿರೋದೇ ನಿಜಕ್ಕೂ ಅಚ್ಚರಿಯಂಥ ಬೆಳವಣಿಗೆ. ಇತ್ತೀಚೆಗಷ್ಟೇ ಕೊಡೆಮುರುಗ ಟ್ರೇಲರ್ ಮೂಲಕ ಮಿರುಗಿದ್ದ. ಅದಾಗಿ ಒಂದಷ್ಟು ದಿನಗಳಲ್ಲಿಯೇ ಕೊಳಿ ಕಾಲಿಗೆ ಗೆಜ್ಜೆ ಕಟ್ಟುವ ಮಜವಾದ ಹಾಡೊಂದರ ಮೂಲಕ ಕಚಗುಳಿಯಿಟ್ಟಿದ್ದ. ಇದೀಗ ಕೊಡೆಮುರುಗ ಮತ್ತೊಂದು ಹಾಡಿನೊಂದಿಗೆ ರೊಮ್ಯಾಂಟಿಕ್ ಮೂಡಿಗೆ ಜಾರಿದ್ದಾರೆ.


ಯೋಗರಾಜ ಭಟ್ ಬರೆದಿರೋ ಸಾಹಿತ್ಯವಿರುವ ವಿಡಿಯೋ ಸಾಂಗ್ ಇದೀಗ ಬಿಡುಗಡೆಗೊಂಡಿದೆ. ಇದರಲ್ಲಿ ಕೊಡೆಮುರುಗ ಜಾಲಿ ಮೂಡಿನಲ್ಲಿ ಕುಣಿದು ಕುಪ್ಪಳಿಸಿರೋ ರೀತಿ, ಆ ದೃಷ್ಯಾವಳಿ ಮತ್ತು ಅದರ ಮೂಲಕವೇ ಕಾಮಿಡಿ ಕಿಕ್ಕೇರಿಸಿರೋ ಪರಿ ಕಂಡು ನೋಡುಗರೆಲ್ಲ ಖುಷಿಗೊಂಡಿದ್ದಾರೆ. ಮುರು ನಾನು ಮುರುಗಿ ನೀನು, ನಿನ್ನ ಹೆಸರು ಏನೇ ಸಿಂಡ್ರೆಲಾ ಅಂತ ಶುರುವಾಗೋ ಈ ಹಾಡು ಯೋಗರಾಜ  ಭಟ್ಟರ ಮಜವಾದ ಸಾಲುಗಳೊಂದಿಗೆ ಎಂಥವರೂ ಮುದಗೊಳ್ಳುವಂತೆ ಮೂಡಿ ಬಂದಿದೆ. ವಿಜಯ್ ಪ್ರಕಾಶ್ ಮತ್ತು ಶಾಸ್ವತಿ ಕಶ್ಯಪ್ ಹಾಡಿರೋ ಈ ಸಾಂಗಿಗೆ ಎಂ.ಎಸ್ ತ್ಯಾಗರಾಜ ಸಂಗೀತ ಸಂಯೋಜನೆ ಮಾಡಿದ್ದಾರೆ.


ಯೋಗರಾಜ ಭಟ್ ಸಾಹಿತ್ಯ ಮತ್ತು ವಿಜಯ ಪ್ರಕಾಶ್ ಧ್ವನಿಯ ಕಾಂಬಿನೇಷನ್ನು ಸೋತ ಉದಾಹರಣೆಗಳೇ ಇಲ್ಲ. ಆ ಹಿಟ್ ಲಿಸ್ಟಿಗೆ ಈ ಹಾಡೂ ಕೂಡಾ ಸೇರಿಕೊಂಡಿದೆ. ಬಿಡುಗಡೆಯಾಗಿ ಘಂಟೆಗಳು ಕಳೆಯೋದರೊಳಗಾಗಿಯೇ ಈ ವಿಡಿಯೋ ಸಾಂಗಿಗೆ ಹೆಚ್ಚಿನ ವೀಕ್ಷಣೆ ಸಿಕ್ಕಿದೆ. ಅದಕ್ಕೆ ತಕ್ಕುದಾದ ಮೆಚ್ಚುಗೆಗಳೂ ಹರಿದು ಬರುತ್ತಿವೆ. ಅದಕ್ಕಿಮತಲೂ ಮುಖ್ಯ ಸಂಗತಿಯೆಂದರೆ, ಈ ವಿಡಿಯೋ ಸಾಂಗ್ ಸಾಮಾಜಿಕ ಜಾಲತಾಣಗಳಲ್ಲಿಯೂ ವೈರಲ್ ಆಗೋ ಹಂತದಲ್ಲಿದೆ. ಒಟ್ಟಾರೆಯಾಗಿ ಕೊಡೆಮುರುಗ ಈಗ ಭಿನ್ನಾತಿಭಿನ್ನವಾದ ಹಾಡುಗಳ ಮೂಲಕ ಸದ್ದು ಮಾಡುತ್ತಿದ್ದಾನೆ. ಈ ಸಿನಿಮಾ ಪ್ರೇಕ್ಷಕರ ಮುಂದೆ ಅವತರಿಸೋ ಕ್ಷಣಗಳೂ ಹತ್ತಿರಾಗುತ್ತಿವೆ.

LEAVE A REPLY

Please enter your comment!
Please enter your name here