ದೆಹಲಿ ಫಲಿತಾಂಶದ ಬಳಿಕ ಚಾಣಕ್ಯನಿಗೆ ಜ್ಞಾನೋದಯ!

ಅಭಿವೃದ್ಧಿಯ ಹೊರತಾಗಿ ಮತ್ಯಾವುದೂ ಶಾಶ್ವತವಲ್ಲ!
ನೆ ನಡೆದಿದ್ದೇ ದಾರಿ ಎಂಬಂತೆ ಮುಂದುವರೆದರೆ ಕಾಲವೇ ಎಡವಿ ಬೀಳುವಂತೆ ಮಾಡುತ್ತದೆಂಬುದಕ್ಕೆ ಸಾಕಷ್ಟು ಜ್ವಲಂತ ನಿರ್ದೇಶನಗಳಿದ್ದಾವೆ. ರಾಜಕೀಯವಾಗಿ ಹೇಳೋದಾದರೆ ದೆಹಲಿ ವಿಧಾನಸಭಾ ಫಲಿತಾಂಶ ಬಿಜೆಪಿ ಪಕ್ಷವನ್ನು ಹಾಗೆಯೇ ಎಡವಿ ಬೀಳುವಂತೆ ಮಾಡಿದೆ. ಆಡಳಿತ ವೈಖರಿಯನ್ನು ಪ್ರಶ್ನಿಸಿದರೆ, ಅದರ ನಾಯಕರನ್ನು ಟೀಕಿಸಿದರೆ ಅದೇ ದೇಶದ್ರೋಹವೆಂಬಂಥಾ ಸರ್ವಾಧಿಕಾರಿ ಧೋರಣೆ ಸೋಲಿನ ಕಮರಿಯನ್ನಲ್ಲದೆ ಮತ್ತೇನನ್ನೂ ಸೃಷ್ಟಿಸಲು ಸಾಧ್ಯವಿಲ್ಲ ಎಂಬುದನ್ನೂ ಈ ಫಲಿತಾಂಶವೇ ಸಾಬೀತುಪಡಿಸಿದೆ. ಗುಬ್ಬಚ್ಚಿಯಂಥಾ ಕೇಜ್ರಿವಾಲ್ ಬಿಜೆಪಿ, ಕಾಂಗ್ರೆಸ್‌ನಂಥಾ ರಾಷ್ಟ್ರೀಯ ಪಕ್ಷಗಳಿಗೆ ಸೆಡ್ಡುಹೊಡೆದು ಗೆದ್ದಿದ್ದೇ ಈಗ ಆ ಪಕ್ಷಗಳ ನಾಯಕರೆಲ್ಲ ಆತ್ಮವಿಮರ್ಶೆಗೆ ಒಡ್ಡಿಕೊಳ್ಳುವಂತೆ ಮಾಡಿದೆ.


ಚುನಾವಣಾ ಪಟ್ಟುಗಳೂ ಸೇರಿದಂತೆ ಎಲ್ಲದರಲ್ಲಿಯೂ ಚಾಣಕ್ಯ ಅನ್ನಿಸಿಕೊಂಡಿರುವವರು ಕೇಂದ್ರ ಸಚಿವ ಅಮಿತ್ ಶಾ. ಆದರೆ ಅವರ ಚಾಣಕ್ಯ ವಿದ್ಯೆಗಳೂ ಕೇಜ್ರಿವಾಲ್ ಜನಪರತೆಯ ಮುಂದೆ ಮಂಡಿಯೂರಬೇಕಾಗಿ ಬಂದಿದೆ. ಇದೇ ಸೋಲಿನ ನೆರಳಲ್ಲಿ ಅಮಿತ್ ಶಾಗೆ ಜ್ಞಾನೋದಯವಾದಂತಿದೆ. ಈ ದಿಸೆಯಲ್ಲಿ ಟೌಮ್ಸ್ ನೌ ವಿಚಾರ ಸಂಕಿರ್ಣದಲ್ಲಿ ಪಾಲ್ಗೊಂಡಿದ್ದ ಶಾ ದೆಹಲಿ ಸೋಲಿನ ಬಗ್ಗೆ ಆತ್ಮವಿಮರ್ಶೆ ಮಾಡಿಕೊಂಡಿದ್ದಾರೆ. ತೀರಾ ಮುಕ್ತವಾಗಿ ತಮ್ಮ ಪಕ್ಷದ ನಾಯಕರು ಮಾಡಿದ ತಪ್ಪುಗಳೇನು? ಅದುವೇ ಫಲಿತಾಂಶದ ಮೇಲೆ ಹೇಗೆಲ್ಲ ಪರಿಣಾಮ ಬೀರಿತೆಂಬುದರ ಬಗ್ಗೆ ಮಾತಾಡಿದ್ದಾರೆ. ಆ ಮಾತುಗಳಲ್ಲಿಯೇ ದೆಹಲಿ ಚುನಾವಣಾ ಫಲಿತಾಂಶ ಬಿಜೆಪಿಯನ್ನು ಅದೆಷ್ಟು ಕಂಗೆಡಿಸಿ ಹಾಕಿದೆ ಎಂಬುದರ ಸಂಕೇತದಂತೆಯೂ ಕಾಣಿಸುತ್ತದೆ.


ಪಕ್ಷದ ನಾಯಕರು ನೀಡುತ್ತಾ ಬಂದಿದ್ದ ದ್ವೇಷತುಂಬಿದ ಹೇಳಿಕೆಗಳೇ ದೆಹಲಿಯಲ್ಲಿ ಬಿಜೆಪಿ ಸೋಲಲು ಕಾರಣವೆಂದು ಶಾ ನಿಖರ್ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ದೆಹಲಿ ಚುನಾವಣೆಯನ್ನು ಕೆಲ ನಾಯಕರು ಪಾಕಿಸ್ತಾನ ಮತ್ತು ಭಾರತ ಕ್ರಿಕೆಟ್ ಪಂದ್ಯಾಟಕ್ಕೆ ಹೋಲಿಸಿ ಮಾತಾಡಿದ್ದರು. ಕೆಲವರು ಗೋಲಿ ಮಾರೋ ಅಂತ ಅಬ್ಬರಿಸಿದ್ದರು. ಇಂಥಾ ವರ್ತನೆಗಳೇ ರಾಷ್ಟ್ರ ರಾಜಧಾನಿಯಲ್ಲಿ ಕಮಲ ಮುದುಡುವಂತೆ ಮಾಡಿದೆ ಎಂದೂ ಅಮಿತ್ ಶಾ ಹೇಳಿಕೊಂಡಿದ್ದಾರೆ. ಈ ಮೂಲಕ ಮೊದಲ ಸಲ ಅಮಿತ್ ಶಾ ಗೆಲುವಿನ ಉನ್ಮಾದದ ಆಚೆ ನಿಂತು ವಾಸ್ತವಕ್ಕೆ ಮುಖಾಮುಖಿಯಾದಂತೆ ಕಂಡಿದ್ದಾರೆ. ಬಹಶಃ ದೆಹಲಿ ಮರ್ಮಾಘಾತವೆಂಬುದು ಬಿಜೆಪಿ ನಾಯಕರನ್ನೆಲ್ಲ ಇಂಥಾದ್ದೇ ನಿಮಷಕ್ಕೊಡ್ಡಿಕೊಳ್ಳುವಂತೆ ಮಾಡಿದ್ದಿರಬಹುದು.


ಆನಸಾಮಾನ್ಯರಿಉಗೆ ಬೇಕಾಗಿರೋದು ಮೂಲಭೂತ ಸೌಕರ್ಯಗಳಷ್ಟೆ. ಯಾರು ಅಭಿವೃದ್ಧಿ ಪರವಾಗಿರುತ್ತಾರೋ, ಯಾರು ಪ್ರಾಮಾಣಿಕವಾಗಿ ಒಂದಷ್ಟು ಅಭಿವೃದ್ಧಿಗೆ ಶ್ರಮಿಸುತ್ತಾರೋ ಅಂಥವರನ್ನೇ ಜನ ಆರಿಸುತ್ತಾರೆಂಬುದಕ್ಕೂ ದೆಹಲಿ ಚುನಾವಣಾ ಫಲಿತಾಂಶ ಸಾಕ್ಷಿಯಂತಿದೆ. ಅದು ಪ್ರಜಾಪ್ರಭುತ್ವದ ಉಳಿವಿನ ದೃಷ್ಟಿಯಿಂದ ಆಶಾವಾದದ ಬೆಳವಣಿಗೆಯೂ ಹೌದು. ಆದರೆ ಬಿಜೆಪಿ ನಾಯಕರು ಮಾತ್ರ ಹಿಂದೂ ಧರ್ಮದ ವಾರಸೂದಾರರಂತೆ, ಅದನ್ನು ಗುತ್ತಿಗೆ ಪಡೆದುಕೊಂಡವರಂತೆ, ತಾವು ಮಾತ್ರವೇ ಅಪ್ರತಿಮ ದೇಶ ಭಕ್ತರೆಂಬಂತೆ ಪೋಸು ಕೊಡುತ್ತಾ ಬರುತ್ತಿದ್ದಾರೆ. ಬಾಯಿ ಬಿಟ್ಟರೆ ಧರ್ಮದ ಅಮಲೇ ರುದ್ರತಾಂಡವವಾಡೋದನ್ನು ನೋಡಿ ಜನರಿಗೂ ತಲೆ ಚಿಟ್ಟು ಹಿಡಿದಿದೆ. ತೀರಾ ಅಡುಗೆ ಅನಿಲದಂಥಾ ನಿತ್ಯೋಪಯೋಗಿ ವಸ್ತುಗಳ ಬೆಲೆ ಏರಿಕೆಯನ್ನೂ ಕೂಡಾ ದೇಶಭಕ್ತಿಯೊಂದಿಗೆ ಬೆರೆಸಿ ಯಾಮಾರಿಸುವ ಮನಸ್ಥಿತಿಯನ್ನು ಅರ್ಥ ಮಾಡಿಕೊಳ್ಳದಷ್ಟು ಮುಟ್ಠಾಳರು ಈ ದೇಶದಲ್ಲಿಲ್ಲ.


ನಿಖರವಾಗಿ ಹೇಳಬೇಕೆಂದರೆ, ಜಾತಿ ಧರ್ಮಗಳ ಅಫೀಮು ಆ ಕ್ಷಣದಲ್ಲಿ ಆಕರ್ಷಕವಾಗಿ ಕಾಣಿಸಿ ಒಂದಷ್ಟು ಫಾಯಿದೆಯನ್ನೂ ತಂದು ಕೊಡಬಹುದು. ಆದರೆ ಆಡಳಿತಾತ್ಮಕವಾಗಿ ಅಭಿವೃದ್ಧಿಯೊಂದನ್ನು ಹೊರತು ಪಡಿಸಿ ಬೇರ‍್ಯಾವುದೂ ಶಾಶ್ವತವಲ್ಲ. ಹಾಗೊಂದು ವೇಳೆ ಈ ಮಾತು ಸುಳ್ಳಾಗಿದ್ದರೆ ದೆಹಲಿಯೆಂಬೋ ರಾಷ್ಟ್ರದ ರಾಜಧಾನಿಯಲ್ಲಿ ಕೇಜ್ರಿವಾಲರ ಪೊರಕೆಯ ಕಡ್ಡಿಗಳೂ ಸಿಗದಂತೆ ಆಮ್ ಆದ್ಮಿ ಪಕ್ಷ ಗುಡಿಸಿ ಗುಂಡಾಂತರವಾಗುತ್ತಿತ್ತು. ಇದೆಲ್ಲ ಏನೇ ಇದ್ದರೂ ಅಮಿತ್ ಶಾರ ಆತ್ಮ ವಿಮರ್ಶೆಯನ್ನು ಒಪ್ಪಿಕೊಳ್ಳಲೇಬೇಕು. ಅದನ್ನು  ಬರೀ ಒಂದು ಸಂವಾದದ ಸರಕಾಗಿಸದೆ ಗಂಭೀರವಾಗಿ ಪರಿಗಣಿಸದಿದ್ದರೆ ದೆಹಲಿ ಫಲಿತಾಂಶ ದೇಶವ್ಯಾಪಿಯಾಗೋ ದಿನ ದೂರವಿಲ್ಲ. ಯಾಕೆಂದರೆ ಆರು ದಶಕಗಳ ಕಾಲ ಆನೆಯಂತೆಯೇ ಘೀಳಿಟ್ಟು ಸಾಗಿ ಬಂದಿರುವ ಕಾಂಗ್ರೆಸ್ ಪಕ್ಷವೀಗ ಒಂದು ಸೀಟು ಗೆಲ್ಲುವ ಯೋಗ್ಯತೆಯೂ ಇಲ್ಲದಂತೆ ನೆಲ ಕಚ್ಚಿದೆ!

LEAVE A REPLY

Please enter your comment!
Please enter your name here