ಬಿಜೆಪಿಗೆ ಡಿಕೆಶಿಯನ್ನು ಆಹ್ವಾನಿಸಿದರೇ ರೇಣುಕಾಚಾರ್ಯ?

[adning id="4492"]

ಶೋಧ ನ್ಯೂಸ್ ಡೆಸ್ಕ್: ಪರಸ್ಪರ ರಾಜಕೀಯ ವಿರೋಧಿಗಳು, ಒಬ್ಬರನ್ನೊಬ್ಬರು ಕಾಲೆಳೆಯುತ್ತಾ ಶರಂಪರ ಕಿತ್ತಾಡಿಕೊಳ್ಳುವವರು ಭೇಟಿಯಾದರೆ ಅದರ ಅಸಲಿ ಉದ್ದೇಶ ಅದೇನೇ ಇದ್ದರೂ ಆ ವಿದ್ಯಮಾನದ ಸುತ್ತ ಸಂಶಯಗಳೇಳುತ್ತವೆ. ಒಂದಷ್ಟು ಅಂತೆ ಕಂತೆಗಳೂ ಧಾರಾಳವಾಗಿಯೇ ಹುಟ್ಟಿಕೊಳ್ಳುತ್ತವೆ. ಮುಖ್ಯಮಂತ್ರಿ ಯಡಿಯೂರಪ್ಪನವರ ಕಾರ್ಯದರ್ಶಿ ಹೊನ್ನಾಳ್ಳಿ ರೇಣುಕಾಚಾರ್ಯ ಡಿ. ಕೆ ಶಿವಕುಮಾರ್ ಮನೆಗೆ ತೆರಳಿ ಮಾತುಕತೆ ನಡೆಸಿದ ವಿದ್ಯಮಾನವೂ ಅಂಥಾದ್ದೇ ರೂಮರ್‌ಗಳಿಗೆ ಕಾರಣವಾಗಿದೆ. ರೇಣುಕಾ ಈ ಬಗ್ಗೆ ಅದೇನೇ ಸಮಜಾಯಿಷಿ ನೀಡಿದರೂ ಕೂಡಾ ಇದರ ಸುತ್ತ ಸಂಶಯಗಳಂತೂ ಹುತ್ತಗಟ್ಟಿಕೊಂಡಿವೆ.


ಈಗ ಈ ಬಗ್ಗೆ ಅದೆಂಥಾ ಕುತೂಹಲ ಮೂಡಿಕೊಂಡಿದೆಯೆಂದರೆ ಇತರೆ ಬಿಜೆಪಿ ನಾಯಕರು ಸಾರ್ವಜನಿಕವಾಗಿ ಕಾಣಿಸಿಕೊಂಡಾಗಲೂ ಮಾಧ್ಯಮ ಮಂದಿಯ ಕಡೆಯಿಂದ ಈ ಬಗೆಗಿನ ಪ್ರಶ್ನಾವಳಿಗಳೇ ತೂರಿ ಬರಲಾರಂಭಿಸಿವೆ. ಅಂಥಾದ್ದೇ ಒಂದು ಪ್ರಶ್ನೆ ಸಿಟಿ ರವಿಗೆ ಎದುರಾದಾಗ ಅದಕ್ಕವರು ಕಾಮಿಡಿ ಧಾಟಿಯಲ್ಲಿಯೇ ಉತ್ತರ ರವಾನಿಸಿದ್ದಾರೆ. ಈಗ ಹೊರ ಜಗತ್ತಿನಲ್ಲಿ ಎಂಥಾ ವಿಚಾರಗಳು ಹರಿದಾಡುತ್ತಿವೆಯೋ ಅದಕ್ಕೆ ಹತ್ತಿರಾದ ಮಾತುಗಳನ್ನೇ ಆಡಿದ್ದಾರೆ. ‘ಈಗಾಗಲೇ ಅನೇಕ ಕಾಮಗ್ರೆಸ್ಸಿಗರು ಬಿಜೆಪಿ ಸೇರಿಕೊಂಡಿದ್ದಾರೆ. ಡಿಕೆ ಶಿವಕುಮಾರ್ ಅವರನ್ನೂ ಮನವೊಲಿಸಿ ಬಿಜೆಪಿಗೆ ಕರೆತರುವ ಸಂಬಂಧವಾಗಿ ಮಾತುಕತೆ ನಡೆಸಲು ರೇಣುಕಾಚಾರ್ಯ ಹೋಗಿದ್ದರು’ ಅನ್ನೋದು ರವಿ ಮಾತಿನ ಸಾರಾಂಶ.


ರೇಣುಕಾಚಾರ್ಯ ಡಿಕೆಶಿ ಇಡಿ ಸಂಕಟದಲ್ಲಿದ್ದ ಸಂದರ್ಭದಲ್ಲಿಯೂ ಅವರನ್ನು ತೀವ್ರವಾಗಿ ಟೀಕಿಸಿದ್ದರು. ಇಂಥಾ ರೇಣುಕಾಚಾರ್ಯ ಡಿಕೆಶಿಯನ್ನು ಏಖಾಏಕಿ ಅವರ ಮನೆಗೇ ತೆರಳಿ ಭೇಟಿ ಮಾಡುತ್ತಾರೆಂದರೆ ಅದರ ಬಗ್ಗೆ ರೂಮರುಗಳು ಹುಟ್ಟಿಕೊಳ್ಳೋದರಲ್ಲಿ ಯಾವ ಸಂದೇಹವೂ ಇಲ್ಲ. ಖುದ್ದು ರೇಣುಕಾಚಾರ್ಯರೇ ತಮ್ಮ ಸ್ವಕ್ಷೇತ್ರದಲ್ಲಿ ನಡೆಯಲಿರುವ ಕೃಷಿ ಮೇಳಕ್ಕೆ ಆಹ್ವಾನಿಸುವ ಸಲುವಾಗಿ ಡಿಕೆಶಿಯನ್ನು ಭೇಟಿಯಾಗಿದ್ದಾಗಿ ಆಣೆ ಪ್ರಮಾಣ ಮಾಡಿ ಹೇಳಿದರೂ ಯಾರೂ ಬಲವಾಗಿ ನಂಬಿ ಬಿಡುವಂಥಾ ಪರಿಸ್ಥಿತಿ ಇಲ್ಲ. ಡಿಕೆಶಿಯನ್ನು ಬಿಜೆಪಿಗೆ ಕರೆತರೋದೊಂದು ಜೋಕು. ಆದರೆ ಅದರ ಹಿಂದೆ ಸವದಿಯನ್ನು ಹಣಿಯುವ ಹುನ್ನಾರವಿರಬಹುದೆಂಬ ಗುಮಾನಿ ಎಲ್ಲರನ್ನೂ ಕಾಡುತ್ತಿದೆ.

[adning id="4492"]

LEAVE A REPLY

Please enter your comment!
Please enter your name here