ಮೋದಿಗಿಂತ ರಮೇಶ್ ಜಾರಕಿಹೊಳಿ ಪವರ್‌ಫುಲ್ಲಾ?

ಪ್ರಶ್ನೆ ಕೇಳಿದರೆ ಯಾರೇ ಆದರೂ ನಗಬಾರದ ಕಡೆಗಳಲ್ಲೆಲ್ಲ ನಕ್ಕು ಬಿಡುತ್ತಾರೆ. ಕಾಂಗ್ರೆಸ್ ಪಕ್ಷದಲ್ಲಿರುವಾಗ ಅಸ್ತಿತ್ವ ಉಳಿಸಿಕೊಳ್ಳಲು ತಿಣುಕಾಡಿ, ಅಲ್ಲಿ ಕೇಳೋರು ಗತಿಯಿಲ್ಲ ಎಂಬಂತಾದಾಗ ಬಜೆಪಿ ಸೇರಿ ಕಡೆಗೂ ಸಚಿವಗಿರಿ ದಕ್ಕಿಸಿಕೊಂಡಿರುವವರು ರಮೇಶ್ ಜಾರಕಿಹೊಳಿ. ಇಂಥಾ ರಮೇಶ್ ಬಿಜೆಪಿ ಸೇರಿಕೊಂಡಾಕ್ಷಣ ಮೋದಿ ಮತ್ತು ಅಮಿತ್ ಶಾಗಿಂತಲೂ ಪವರ‍್ಫುಲ್ ಆಗಿ ಹೋದನಾ? ಅಂತ ಪ್ರಶ್ನಿಸಿರುವವರು ಬೇರ‍್ಯಾರು ಅಲ್ಲ; ರಮೇಶ್ ಜಾರಕಿಹೊಳಿ ಸಹೋದರ ಸತೀಶ್ ಜಾರಕಿಹೊಳಿ. ಕೆಲ ದಿನಗಳ ಹಿಂದಷ್ಟೇ ರಮೇಶ್ ತನ್ನ ಸಹೋದರ ಸತೀಶ್ ಜಾರಕಿಹೊಳಿ ಬಗ್ಗೆ ಒಂದಷ್ಟು ಮಾತಾಡಿದ್ದರು. ಅದಕ್ಕೆ ಪ್ರತಿಕ್ರಿಯೆ ನೀಡಿರೋ ಸತೀಶ್ ಈ ಥರದ್ದೊಂದು ಅಚ್ಚರಿಯ ಪ್ರಶ್ನೆಯನ್ನೆಸೆದಿದ್ದಾರೆ.


ರಮೇಶ್ ಜಾರಕಿಹೊಳಿ ಈ ಹಿಂದೆ ಸತೀಶ್ ಇಪ್ಪತ್ತು ವರ್ಷದಲ್ಲಿ ಮಾಡಲಾಗದ್ದನ್ನು ಐದೇ ವರ್ಷದಲ್ಲಿ ಮಾಡಿದ್ದಾಗಿ ಹೇಳಿಕೊಂಡಿದ್ದರು. ಇದೆಲ್ಲ ಏನೇ ಇದ್ದರೂ ಅಣ್ಣ ತಮ್ಮಂದಿರು ಯಾವತ್ತಿದ್ದರೂ ಒಂದೇ ಅಂದಿದ್ದ ರಮೇಶ್, ತ್ನ್ ನ ಸಹೋದರ ಸತೀಶ್ ವ್ಯವಧಾನದಿಂದಿದ್ದರೆ ಮುಖ್ಯಮಂತ್ರಿಯಾಗೋ ಯೋಗವಿದೆ ಎಂದೂ ತೇಪೆ ಹಚ್ಚಿದ್ದರು. ಇದೀಗ ಅದಕ್ಕೆ ಸತೀಶ್ ಪ್ರತಿಕ್ರಿಯಿಸಿದ್ದಾರೆ. ಬೇರೆ ಪಕ್ಷದಲ್ಲಿದ್ದುಕೊಂಡು ಮತ್ತೊಂದು ಪಕ್ಷದ ಶಾಸಕನ ಬಗ್ಗೆ ಹೀಗೆಲ್ಲ ಮಾತಾಡೋದು ತಪ್ಪು. ಬಿಜೆಪಿ ನಾಯಕರು ರಮೇಶ್ ಜಾರಕಿಹೊಳಿಯನ್ನು ಹದ್ದುಬಸ್ತಲ್ಲಿಡಬೇಕಿದೆ. ಅವನೇನು ಮೋದಿ ಮತ್ತು ಅಮಿತ್ ಶಾಗಿಂತಲೂ ಪವರ‍್ಫುಲ್ ಆಗಬಿಟ್ಟನಾ ಅಂತ ಝಾಡಿಸಿದ್ದಾರೆ.


ರಮೇಶ್ ಮತ್ತು ಸತೀಶ್ ಜಾರಕಿಹೊಳಿ ಒಂದೇ ಪಕ್ಷದಲ್ಲಿದ್ದಾಗಲೂ ಆಗಾಗ ಹಾವು ಮುಂಗುಸಿಗಳಂತೆ ಕಿತ್ತಾಡುತ್ತಲೇ ಬಂದಿದ್ದರು. ಸತೀಶ್ ಒಂದಷ್ಟು ಪ್ರಗತಿಪರ ಧೋರಣೆಯಿಂದ ಸದ್ದು ಮಾಡಿದರೆ, ರಮೇಶ್ ಸಾಹುಕಾರನದ್ದು ಸದಾ ಸ್ವ ಅಭಿವೃದ್ದಿಯದ್ದೇ ಚಿಂತೆ ಅಂತ ಬಲ್ಲವರು ಹೇಳುತ್ತಾರೆ. ಹೀಗೆ ಸಹೋದರರಾಗಿದ್ದುಕೊಂಡೇ ಕಾಳಗ ನಡೆಸುತ್ತಾ ಬಂದಿದ್ದವರೀಗ ಪರಸ್ಪರ ವಿರುದ್ಧ ದಿಕ್ಕಿನಂಥಾ ಪಕ್ಷಗಳಲ್ಲಿದ್ದಾರೆ. ಇನ್ನು ಮುಂದೆ ರಮೇಶ್ ಜಾರಕಿಹೊಳಿ ಕಡೆಯಿಂದ ಕ್ಷೇತ್ರ ಅಭಿವೃದ್ದಿಯಾಗುತ್ತದೋ ಇಲ್ಲವೋ ಗೊತ್ತಿಲ್ಲ. ಆದರೆ ಕ್ಷೇತ್ರದ ಜನರಿಗೆ ಅಣ್ಣ ತಮ್ಮಂದಿರ ಕಿತ್ತಾಟ, ಕಾಳಗ ನೋಡುವ ಭಾಗ್ಯವಂತೂ ಸಿಕ್ಕೇ ಸಿಗುತ್ತದೆ.

LEAVE A REPLY

Please enter your comment!
Please enter your name here