ದಯವಿಟ್ಟು ನೆನಪಾಗಬೇಡ ಹುಡುಗಾ; ಇಲ್ಲಿ ಕಣ್ಣೀರಿಗೂ ನಿಷೇಧವಿದೆ!

ಹೇಗಿದ್ದಿ ಅಂತ ಕೇಳೋದಿಲ್ಲ. ಹಾಗಂತ ಎದುರು ನಿಂತು ಕೇಳಿದರೆ ಕಪಾಳಕ್ಕೆ ಬಾರಿಸಿಬಿಡುವಷ್ಟು ಸಿಟ್ಟಿರಬಹುದು ನಿಂಗೆ ನನ್ನ ಮೇಲೆ. ಇದು ನನ್ನ ಪತ್ರ ಅಂತ ಗೊತ್ತಾದೇಟಿಗೆ ಹರಿದು ಬಿಸಾಡಲು ಮುಂದಾಗಿರುತ್ತಿ. ಹಾಗೆ ಮಾಡಿದರೆ ನನ್ನ ಮೇಲಾಣೆ. ಯಾಕೆಂದರೆ, ನಿನ್ನ ಕಣ್ಣಲ್ಲಿ ಈ ಕ್ಷಣ ನನ್ನ ಚಿತ್ರ ‘ಮೋಸಗಾತಿ’ ಎಂಬ ಲೇಬಲ್ಲು ಅಂಟಿಸಿಕೊಂಡು ನೆಲೆ ನಿಂತಿದೆಯಲ್ಲಾ? ಅದಕ್ಕೆ ಕಾರಣವಾದ ನನ್ನ ಪರಿಸ್ಥಿತಿಗಳನ್ನ ಒಂದೇ ಒಂದು ಸಲ ಕೇಳಿಸಿಕೊಂಡು ಬಿಡು. ನನ್ನ ಪ್ರತೀ ಮಾತುಗಳೂ ನಿನಗೀಗ ಮೋಸಗಾತಿಯ ಪ್ರಲಾಪದಂತೆ, ಸುಳ್ಳೇ ಸಬೂಬಿನಂತೆ ಕಂಡರೂ ಪರವಾಗಿಲ್ಲ, ಸತ್ತ ಮಾತುಗಳನ್ನೆಲ್ಲ ಹೀಗೆ ನಿನಗೆ ತಲುಪಿಸುತ್ತಿದ್ದೇನೆ; ಅನ್ಯಾಯವಾಗಿ ನಿನ್ನ ಬದುಕು ಸ್ಮಶಾನವಾಗದಿರಲೆಂಬ ಅಭಿಲಾಷೆಯೊಂದಿಗೆ…


ಪ್ರೀತಿಸಿದವನಿಗೆ ಬೆನ್ನು ತಿರುಗಿಸಿ ಬೇರೆಯವನೊಂದಿಗೆ ಬದುಕು ಕಟ್ಟಿಕೊಂಡ ಹುಡುಗಿ ತಿರುಗಿ ನೋಡುವುದಿಲ್ಲ ಅಂತ ಎಲ್ಲೋ ಓದಿದ ನೆನಪು. ಆದರದು ಹೆಣ್ಣಿನ ಮನಸನ್ನು ಅರ್ಥೈಸಿಕೊಳ್ಳದವರ ಹಳಹಳಿಕೆ ಅಂತಲೇ ನನಗೀಗ ಅನ್ನಿಸುತ್ತಿದೆ. ತಿರುಗಿ ನೋಡದಿರುವುದು ಮನಸು ಕಲ್ಲುಗಟ್ಟಿದ ಕುರುಹಲ್ಲ; ಎಲ್ಲಿ ಕರಗಿ ಬಿಡುತ್ತೀನೋ ಎಂಬ ಆತಂಕ ಹಾಗೆ ಮಾಡಿಸಿರುತ್ತೆ. ಹಾಗೊಂದು ವೇಳೆ ಭಾವುಕತೆಯಿಂದ ಕರಗಿ ಬಿಟ್ಟರೆ ನಂಬಿಕೆಗಳು ಸಾಯುತ್ತವೆ, ಹಲವರ ಜೀವನ ನಿತ್ಯ ಸೂತಕವಾಗುತ್ತದೆ. ಪ್ರೀತಿಯನ್ನ ತಿರಸ್ಕರಿಸಿ ಮತ್ಯಾರೊಂದಿಗೋ ಸಪ್ತಪದಿ ತುಳಿಯುವ ಹುಡುಗಿ ಯಾರಲ್ಲಿಯೂ ಹೇಳಿಕೊಳ್ಳಲಾರದಂಥಾ ಹಿಂಸೆ ಅನುಭವಿಸಿರುತ್ತಾಳೆ. ಅದನ್ನ ಹತ್ತಿಕ್ಕಿ ತುಟಿಕಚ್ಚಿ ಹೊಸಾ ಬದುಕಿಗೆ ಕಾಲಿರಿಸುವ ಹೆಜ್ಜೆ ನಿನ್ನ ಹಾಗೆ ನೋವುಂಡವರಿಗೆ ಕಠೋರ ವರ್ತನೆಯಾಗಿ ಕಾಣಿಸೋದು ತಪ್ಪಲ್ಲ ಬಿಡು.


ನಾನೂ ಕೂಡಾ ಅದೇ ರೀತಿ ಕಂಡಿರಬಹುದಲ್ವಾ ನಿಂಗೆ? ಶ್ರೀಮಂತಿಕೆಯ ಆಸೆಯಿಂದಲೇ ಬಿಟ್ಟು ಹೋಗಿದ್ದಾಳೆ ಅಂತ ಅದೆಷ್ಟು ಬೈದುಕೊಂಡಿದ್ದೀಯೋ… ಮನೆಯವರ ಮಾತಿಗೆ ಕಟ್ಟುಬಿದ್ದು ಎದ್ದು ಹೋದಳು ಅಂತ ಅದೆಷ್ಟು ಆಕ್ರೋಶಗೊಂಡಿದ್ದೀಯೋ… ಯಾವ ಭಾವನೆಯೂ ಇಲ್ಲದೇ ಗಂಡನ ಜೊತೆ, ಆತನ ಮನೆಯವರ ಜೊತೆ ಹಾಯಾಗಿದ್ದಾಳೆ ಅಂತಲೂ ಅಂದುಕೊಂಡಿರುತ್ತೀಯ. ಒಂದು ಸಂಬಂಧವನ್ನ ಒಪ್ಪಿಕೊಂಡಿದ್ದಾಳೆಂದ ಮೇಲೆ ಖುಷಿಯಾಗಿರದೆ ಏನು ದಾಡಿ ಅನ್ನೋದು ನಿನ್ನಂಥಾ ಹುಡುಗರೆಲ್ಲರ ಲೆಕ್ಕಾಚಾರ. ನಿನಗೆ ನಾನು ಕೊಟ್ಟಿರೋ ನೋವಿನ ಮುಂದೆ ಅದೆಲ್ಲ ಏನೇನೂ ಅಲ್ಲ.


ಆದರೆ ಹುಡುಗಾ, ನಾನಿಲ್ಲಿ ನೀನಂದುಕೊಂಡಷ್ಟು ಸಲೀಸಾಗಿ ಬದುಕುತ್ತಿಲ್ಲ. ಮನೆಯವರ ಮಾತಿಗೆ, ನಿರ್ಧಾರಗಳಿಗೆ ತಲೆ ಕೊಡಲೇ ಬೇಕಾದ ಸಂದರ್ಭ ಬಂದಾಗ ಅದು ಹೇಗೋ ಮನಸು ಗಟ್ಟಿಮಾಡಿಕೊಂಡಿದ್ದೆ. ಅಷ್ಟಕ್ಕೂ ನಾನಾಗಿಯೇ ಶ್ರೀಮಂತಿಕೆಯನ್ನೋ, ಸುಖವನ್ನೋ ಅರಸಿಕೊಂಡು ಹೋಗಿಲ್ಲ, ಆ ಕಾರಣದಿಂದ ನಿನ್ನನ್ನು ದೂರ ಮಾಡುತ್ತಿಲ್ಲ. ನಿನಗೇ ಗೊತ್ತಲ, ನಮ್ಮದೇ ಗುಂಪಿನಲ್ಲಿದ್ದ ಹುಡುಗ- ಹುಡುಗಿಯರನೇಕರ ವಿಚಾರಗಳು? ಪ್ರೀತಿಯನ್ನ ಕಸದಂತೆ ಎಸೆದು ಬೇರೆಯಾದವರು ಏನೂ ನಡೆದೇ ಇಲ್ಲವೆಂಬಂತೆ ಓಡಾಡೋದನ್ನ ಕಂಡು ನಾವು ಅದೆಷ್ಟು ಸಲ ಕಂಗಾಲಾಗಿಲ್ಲ, ಚರ್ಚೆ ನಡೆಸಿಲ್ಲ. ಅಂಥಾದ್ದರಲ್ಲಿ ವಿವರಿಸಲಾಗದ ಸಂದಿಗ್ಧಕ್ಕೆ ಸಿಲುಕಿ ನಿನ್ನಿಂದ ದೂರಾಗುತ್ತಿದ್ದೇನೆ ನಾನು. ಇದರಿಂದ ನಿನಗೆ ಸಾಯುವಷ್ಟು ನೋವಾಗಬಹುದು. ಆದರೆ ಇದು ನಾನು ಮಾಡಿದ ಪಾಪವಾಗಲಾರದು- ಹೀಗೆ ಏನೇನೋ ಸಮಾಧಾನ ಮಾಡಿಕೊಂಡು ನಿನ್ನ ಜೀವನದಿಂದ ಹೊರನಡೆದು ಬರಬೇಕಾದರೆ ನಾನೆಷ್ಟು ಸಂಕಟ ಪಟ್ಟಿರಬಹುದು, ಕ್ಷಣ ಕ್ಷಣವೂ ಅದು ಹೇಗೆ ಕೊರಗಿ ಮರುಗಿರಬಹುದಂತ ಒಂದೇ ಒಂದು ಸಲ ಆಲೋಚಿಸಿ ನೋಡು.


ಅಂಥಾ ಸಂಕಟವನ್ನ ಎದೆಯೊಳಗೆ ಅವುಸಿಟ್ಟುಕೊಂಡು ಬೇರೆಯವರ ಖುಷಿಗಾಗಿ ಮಂದಹಾಸ ತಂದುಕೊಳ್ಳುತ್ತಾ ಕಾಲಿಟ್ಟ ಮನೆಯಲ್ಲಿ ಬದುಕಲಾರಂಭಿಸಿದ್ದೇನೆ. ಆದರೆ ಕೂತಲ್ಲಿ ನಿಂತಲ್ಲಿ ನಿನ್ನ ನೆನಪು ಮುತ್ತಿಕೊಂಡು ಕಂಗಾಲಾಗುತ್ತೇನೆ. ಗಂಡನ ಮನೆಯ ಗೇಟು ತೆರೆದುಕೊಂಡ ಸದ್ದಾದರೂ ಹುಚ್ಚಿಯಂತೆ ಹೊರಗೋಡಿ ಬರುತ್ತೇನೆ. ಅಲ್ಲೆಲ್ಲೋ ನೀನು ಬಂದು ನಿಂತಿರಬಹುದೆಂಬ ಭ್ರಮೆ, ಭಯ. ಹೀಗೆ ನೀನು ನೆನಪಾದಾಗ ನನ್ನಲ್ಲಾಗುವ ಬದಲಾವಣೆಯನ್ನ ಇವನು ಬೇಗನೆ ಪತ್ತೆಹಚ್ಚುತ್ತಾನೆ. ಪ್ರೀತಿಯಿಂದ ನನ್ನನ್ನು ಎದೆಗಾನಿಸಿಕೊಳ್ಳುತ್ತಾನೆ. ಹಾಗೆ ಗಂಡನ ಎದೆಗೊರಗಿ ನಿಂತಾಗಲೂ ನೀನು ನೆನಪಾದಾಗ ಅಷ್ಟೂ ಹೊತ್ತಿನ ಸಂಯಮ ಮೀರಿ ದುಖಃದ ಕಟ್ಟೆಯೊಡೆಯುತ್ತದೆ. ಅವನು ಮನೆಯವರ ನೆನಪಾಗಿದೆಯೆಂದುಕೊಂಡು ತವರಿಗೆ ಹೋಗಿ ಬರುವ ಭರವಸೆ ನೀಡುತ್ತಾನೆ. ಥರ ಥರದಲ್ಲಿ ಸಂತೈಸಲು ಪ್ರಯತ್ನಿಸುತ್ತಾನೆ.


ಹೀಗೆ ನಾನು ಸಪ್ಪಗಿರೋ ಸುದ್ದಿ ಮನೆ ತುಂಬಾ ಹಬ್ಬುತ್ತದೆ. ಒಬ್ಬೊಬ್ಬರೂ ಒಂದೊಂದು ರೀತಿಯಲ್ಲಿ ಸಮಾಧಾನಿಸ್ತಾರೆ. ಆದರೆ ಅವರೆಲ್ಲ ಮುದ್ದು ಮಾಡಿದಷ್ಟೂ ನಿನ್ನ ನೆನಪು ಮತ್ತಷ್ಟು ಒತ್ತರಿಸಿಕೊಂಡು ಬರುತ್ತೆ. ಯಾಕೋ ಗೊತ್ತಿಲ್ಲ, ಅದೇನೇ ಪ್ರಯತ್ನ ಪಟ್ಟರೂ ನನ್ನನ್ನು ಜೀವಕಿಂತಲೂ ಹೆಚ್ಚಾಗಿ ಹಚ್ಚಿಕೊಂಡಿದ್ದ ನಿನಗೆ ಮಹಾ ಮೋಸ ಮಾಡಿದೆನೆಂಬ ಭಾವನೆ ಜೀವ ತಿನ್ನುತ್ತೆ. ತುತ್ತು ಬಾಯಿಗಿಡೋವಾಗೆಲ್ಲಾ ನನ್ನ ಮೇಲಿನ ಮುನಿಸಿಗೆ ನೀನೆಲ್ಲಿ ಊಟ ಬಿಟ್ಟು ನರಳುತ್ತಿದ್ದೀಯೋ ಅಂತ ಕಸಿವಿಸಿಯಾಗುತ್ತೆ. ಕೆಲವೊಮ್ಮೆ ಒಂದು ಸಲ ನಿನ್ನನ್ನು ಮಾತಾಡಿಸಿ ಎಲ್ಲ ಹೇಳಿಕೊಂಡು, ಸಾಧ್ಯವಾದರೆ ಒಂದಷ್ಟು ಭರವಸೆ ಹುಟ್ಟಿಸಿ ಬರಬೇಕನಿಸುತ್ತೆ. ಮರುಕ್ಷಣವೇ ಬದುಕು ಕಿತ್ತುಕೊಂಡವಳೇ ನೀನು, ಅದೇನು ಭರವಸೆ ಹುಟ್ಟಿಸುತ್ತೀಯೆಂದು ಮನಸು ಅಣಕಿಸುತ್ತೆ. ಎಡೆಬಿಡದೇ ತೂರಿ ಬರುವ ನೆನಪುಗಳಿಂದ, ಪಾಪಪ್ರಜ್ಞೆಯಿಂದ ತಪ್ಪಿಸಿಕೊಳ್ಳುವ ಹಾದಿಗಳೇ ನನಗೆ ಕಾಣಿಸುತ್ತಿಲ್ಲ.


ಆದರೂ ಈ ಮನೆಯವರ ಒಳ್ಳೆತನಕ್ಕೆ, ನನ್ನವರ ನಂಬಿಕೆಗಾದರೂ ಎಲ್ಲ ಭಾವನೆಗಳನ್ನ ಅಲ್ಲಲ್ಲಿಯೇ ಅಮುಕಿಕೊಂಡು ಬದುಕಲೇಬೇಕಿದೆ. ಆದರೆ ಅದು ಚೂರಾದರೂ ಸಹನೀಯವಾಗಿರಬೇಕೆಂದರೆ ನೀನು ಮೊದಲಿನಂತಾಗಲು ಪ್ರಯತ್ನಿಸಬೇಕು. ನೀನಲ್ಲ್ಲಿ ಖುಷಿಯಾಗಿದ್ದರೆ ನಾನಿಲ್ಲಿ ನೋವು ನುಂಗಿಕೊಂಡೂ ಹಾಯಾಗಿರುತ್ತೇನೆ. ನನ್ನನ್ನು ಮೋಸಗಾತಿ ಅಂದುಕೋ, ಬದುಕು ಕಿತ್ತುಕೊಂಡ ಪಾಪಿ ಅಂತಾದರೂ ಅಂದುಕೋ. ಆದರೆ ಯಾವ ಕಾರಣಕ್ಕೂ ಕುಸಿದು ಕೂರಬೇಡ. ಕೊರಗಬೇಡ. ಜೊತೆಗಿದ್ದ ಕೆಲವೇ ಕೆಲ ಕ್ಷಣಗಳಲ್ಲಿ ಏನು ಬೇಕು ಕೇಳು ಅಂತ ಪದೇ ಪದೆ ನೀ ನನ್ನ ಪೀಡಿಸುತ್ತಿದ್ದೆ. ಆದರ ನನಗೆ ನಿನ್ನೊಂದಿಗೆ ತುಸು ಕಾಲ ಕಳೆಯೋದರಿಂದ್ಲೇ ಎಲ್ಲ ಸಿಕ್ಕಂತಾಗುತ್ತಿತ್ತು. ಆದರಿಂದಲೇ ಏನನ್ನೂ ಕೇಳಿರಲಿಲ್ಲ. ಆದರೀಗ ಮನದುಂಬಿ ಕೇಳುತ್ತಿದ್ದೇನೆ; ದಯವಿಟ್ಟು ಬದುಕಲ್ಲೆಂದಾದರೂ ನಾನು ಸಿಗುತ್ತೇನೆಂಬ ಆಸೆ ಬಿಟ್ಟು ಬದುಕು ಕಟ್ಟಿಕೊ.

ಇವನು ತುಂಬಾ ಒಳ್ಳೆಯವನಂತೆ ಕಾಣಿಸುತ್ತಿದ್ದಾನೆ. ಅವನಿಗೂ ವಂಚನೆ ಮಾಡುತ್ತಾ, ನನ್ನನ್ನೂ ನರಳಿಸುತ್ತಾ ಬದುಕೋದು ನಂಗಿಷ್ಟವಿಲ್ಲ.
ನಾನು ಹೀಗೆಯೇ ಆಯಸ್ಸು ಇದ್ದಷ್ಟು ದಿನ ಉಸಿರಾಡುತ್ತೇನೆ. ಆದರ‍್ಯಾಕೋ ಇಲ್ಲ್ಲಿನವರ ಪ್ರೀತಿ, ಕಕ್ಕುಲಾತಿಗಳೇ ಉಸಿರುಗಟ್ಟಿಸುತ್ತಿವೆ. ನನ್ನ ಕಣ್ಣಲ್ಲಿ ತೆಳುವಾಗಿ ಕಣ್ಣೀರ ಪೊರೆ ಕಂಡರೂ ಎಲ್ಲರೂ ಕಂಗಾಲಾಗುತ್ತಾರೆ. ಪರಿ ಪರಿಯಾಗಿ ವಿಚಾರಿಸಿಕೊಳ್ಳುತ್ತಾರೆ. ನಂಗೆ ಸಿಟ್ಟು ಬರುವಷ್ಟು ಸಲ ನಾನು ಅತ್ತದ್ದು ಯಾಕೆಂಬ ಬಗ್ಗೆ ಕಾರಣ ಕೇಳುತ್ತಾರೆ. ಅವರಿಗೆಲ್ಲ ತಮ್ಮಿಂದಲೇ ಹುಡುಗಿಗೇನೋ ನೋವಾಗಿರಬಹುದೆಂಬ ಭಯ. ಇಂಥಾ ಪರಿಸ್ಥಿತಿಯ ನಡುವೆ ಇಲ್ಲಿ ಕಣ್ಣೀರಿಗೂ ನಿಷೇಧವಿದೆ. ಆದುದರಿಂದಲೇ ಹೇಳುತ್ತಿದ್ದೇನೆ ಹುಡುಗಾ… ದಯವಿಟ್ಟು ನೆನಪಾಗಬೇಡ.

LEAVE A REPLY

Please enter your comment!
Please enter your name here