ಕಪ್ಪತಗುಡ್ಡದ ಮೇಲೆ ಕಣ್ಣಿಟ್ಟರೇ ಅರಣ್ಯ ಸಚಿವ ಆನಂದ್ ಸಿಂಗ್?

[adning id="4492"]

ಶೋಧ ನ್ಯೂಸ್ ಡೆಸ್ಕ್: ದಶಕಗಳ ಹಿಂದೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಬಳ್ಳಾರಿಯಲ್ಲಿ ಅಕ್ರಮ ಗಣಿಗಾರಿಕೆಯ ಸದ್ದು ಮೊರೆದಿತ್ತು. ಅದೆ ಹುದುಲಲ್ಲಿ ಯಡಿಯೂರಪ್ಪ ಸಂಕಷ್ಟಕ್ಕೆ ಸಿಲುಕಿ ರಾಜಕೀಯವಾಗಿ ಅವಸಾನದ ಹಂತ ತಲುಪಿದ್ದೀಗ ಇತಿಹಾಸ. ಆ ನಂತರದಲ್ಲಿ ರಾಜಕೀಯವಾಗಿ ಮತ್ತೆ ಚಾರ್ಮ್ ಮೂಡಿಸಿಕೊಂಡಿದ್ದ ಯಡ್ಡಿ ಈಗ ಮತ್ತೊಮ್ಮೆ ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ. ಇದೀಗ ಮತ್ತೊಮ್ಮೆ ಅಕ್ರಮ ಗಣಿಗಾರಿಕೆಯ ಬಗ್ಗೆ ಸುದ್ದಿಗಳು ಭುಗಿಲೇಳಲಾರಂಭಿಸಿವೆ. ಕಾಂಗ್ರೆಸ್‌ಗೆ ಕೈಕೊಟ್ಟು ಬಂದಿರೋ ಆನಂದ್ ಸಿಂಗ್ ಇದೀಗ ಅರಣ್ಯ ಸಚಿವನಾಗಿದ್ದಾರೆ. ಹೀಗೆ ಸಚಿವಗಿರಿ ಪಡೆದುಕೊಂಡು ದಿನ ಕಳೆಯೋದರೊಳಗಾಗಿ ಗದಗ ಸೀಮೆಯ ಕಪ್ಪತಗುಡ್ಡದತ್ತ ಅವರ ವಕ್ರದೃಷ್ಟಿ ನೆಟ್ಟುಕೊಂಡಿದೆಯಾ? ಹೀಗೊಂದು ಅನುಮಾನ ಇದೀಗ ಉತ್ತರ ಕರ್ನಾಟಕವನ್ನು ಆವರಿಸಿಕೊಂಡಿದೆ.


ಹೀಗೆ ನೂತನ ಸಚಿವ ಆನಂದ್ ಸಿಂಗ್ ಬಗ್ಗೆ ಘನ ಗಂಭೀರವಾದ ಗುಮಾನಿ ಮೂಡುವಂತೆ ಮಾಡಿರೋದು ಸಾಮಾಜಿಕ ಹೋರಾಟಗಾರ ಎಸ್ ಆರ್ ಹಿರೇಮಠ್. ಅವರೀಗ ಗದಗದಲ್ಲಿ ಪತ್ರಿಕಾ ಗೋಷ್ಠಿ ನಡೆಸಿ ಕಪ್ಪತಗುಡ್ಡಕ್ಕೆ ಕಂಟಕ ಎದುರಾಗಿರುವ ಬಗ್ಗೆ ಮಾತಾಡಿದ್ದಾರೆ. ನೂತನ ಅರಣ್ಯ ಸಚಿವ ಆನಂದ್ ಸಿಂಗ್ ಅಲ್ಲಿ ಗಣಿಗಾರಿಕೆ ನಡೆಸಲು ಮುಂದಾಗಿದ್ದಾರೆಂದು ಆರೋಪಿಸಿದ್ದಾರೆ. ಹಾಗೊಂದು ವೇಳೆ ಅವರು ಗಣಿಗಾರಿಕೆ ಸೇರಿದಂತೆ ಯಾವುದೇ ಉದ್ದೇಶದಿಮದ ಕಪ್ಪತಗುಡ್ಡಕ್ಕೆ ಕಣ್ಣು ಹಾಕಿದರೂ ಸಾರ್ವಜನಿಕರೊಂದಿಗೆ ಉಗ್ರ ಹೋರಾಟ ನಡೆಸೋದಾಗಿಯೂ ಎಚ್ಚರಿಕೆ ನೀಡಿದ್ದಾರೆ. ಇದರೊಂದಿಗೆ ವರ್ಷಾಂತರಗಳ ಹಿಂದೆ ಗದಗ ಸೀಮೆಯ ಜನರ ನಿದ್ದೆಗೆಡಿಸಿದ್ದ ಗಣಿಗಾರಿಕೆಯ ಭೂತ ಮತ್ತೊಮ್ಮೆ ತಲೆಯೆತ್ತಿದೆ.


ದಶಕಗಳಷ್ಟು ಹಿಂದೆಯೇ ಕಪ್ಪತಗುಡ್ಡದ ಒಡಲು ಬಗೆಯುವ ಹುನ್ನಾರಕ್ಕೆ ರಾಜಕಾರಣಿಗಳು ಕುಮ್ಮಕ್ಕು ನೀಡಿದ್ದರು. ಬಲ್ಡೋಟಾ, ಫೋಸ್ಕೋ ಮುಂತಾದ ಕಂಪೆನಿಗಳು ಈ ಗುಡ್ಡ ಬಗೆಯಲು ತುದಿಗಾಲಲ್ಲಿ ನಿಂತಿದ್ದವು. ಆದರೆ ಆ ಕಾಲಕ್ಕೆ ತೋಂಟದಾರ್ಯ ಶ್ರೀಗಳು ಹೋರಾಟಗಾರರೊಂದಿಗೆ ಸೇರಿ ಜನರನ್ನು ಒಗ್ಗೂಡಿಸಿ ಆ ಕಂಟಕದಿಂದ ಕಪ್ಪತಗುಡ್ಡವನ್ನು ಪಾರುಗಾಣಿಸಿದ್ದರು. ಇದೀಗ ಪಟ್ಟಭದ್ರ ಹಿತಾಸಕ್ತಿಗಳು ಅರಣ್ಯ ಸಚಿವನನ್ನು ದಾಳವಾಗಿಸಿಕೊಂಡು ಕಪ್ಪತಗುಡ್ಡ ಬಗೆಯಲು ಹೊಂಚು ಹಾಕಿವೆ. ಇದೆಲ್ಲವನ್ನೂ ಇಲ್ಲಿಗೇ ನಿಲ್ಲಿಸಿದರೆ ಸರಿ, ಇಲ್ಲದೇ ಹೋದರೆ ಮತ್ತೊಮ್ಮೆ ಹೋರಾಟಕ್ಕಿಳಿಯುವುದಾಗಿಯೂ ಎಸ್ ಆರ್ ಹಿರೇಮಠ್ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಇದರ ಬೆನ್ನಿಗೇ ಕಪ್ಪತಗುಡ್ಡ ಉಳಿಸುವ ಹೋರಾಟವೊಂದಕ್ಕೆ ಈ ಭಾಗದ ಜನ ಸಜ್ಜುಗೊಳ್ಳಲಾರಂಭಿಸಿದ್ದಾರೆ.

[adning id="4492"]

LEAVE A REPLY

Please enter your comment!
Please enter your name here