ಕಾಣದಂತೆ ಮಾಯವಾದವನ ಲಿರಿಕಲ್ ಹಾಡಿನ ಮೋಡಿ!

ಮಳೆ ನಿಂತರೂ ಕಡಿಯದ ಹನಿಯಂಥಾ ಹಾಡು!
ರಾಜ್ ಪತ್ತಿಪಾಟಿ ನಿರ್ದೇಶನದ ಕಾಣದಂತೆ ಮಾಯವಾದನು ಚಿತ್ರವೀಗ ರಾಜ್ಯಾದ್ಯಂತ ಯಶಸ್ವೀ ಪ್ರದರ್ಶನ ಕಾಣುತ್ತಿದೆ. ವಾರದ ಹಿಂದೆ ಬಿಡುಗಡೆಗೊಂಡಿದ್ದ ಈ ಸಿನಿಮಾಗೆ ಭರ್ಜರಿಯಾದ ಓಪನಿಂಗ್ ಸಿಕ್ಕಿತ್ತು. ಯಾರನ್ನೇ ಆದೆರೂ ಕಾಡುವ ಕಥೆ, ಅದಕ್ಕೆ ಅಂಟಿಕೊಂಡಂತಿರೋ ಸೊಗಸಾದ ಅಂಶಗಳು ಮತ್ತು ಎಲ್ಲ ವರ್ಗದ ಪ್ರೇಕ್ಷಕರಿಗೂ ಹಿಡಿಸುವಂತೆ ಅದು ರೂಪುಗೊಂಡಿರೋ ರೀತಿಗಳೇ ಕಾಣದಂತೆ ಮಾಯವಾದವನ ಯಶಸ್ಸಿನ ಸೂತ್ರಗಳಾಗಿಯೂ ಬಿಂಬಿತವಾಗಿವೆ. ಇಂಥಾ ಜನರಿಗಿಷ್ಟವಾಗೋ ಚಿತ್ರಗಳು ಮಳೆ ನಿಂತಾದ ನಂತರವೂ ಕಡಿಯದ ಹನಿಗಳಂತೆ ನಾನಾ ಸ್ವರೂಪದಲ್ಲಿ ಪ್ರೇಕ್ಷಕರನ್ನು ಸೆಳೆಯುತ್ತವೆ. ಈ ಮಾತಿಗೆ ಸಾಕ್ಷಿಯೆಂಬಂತೆ ಇದೀಗ ಈ ಸಿನಿಮಾದ ವಿಡಿಯೋ ಸಾಂಗ್ ಒಂದು ಸುದ್ದಿ ಕೇಂದ್ರದಲ್ಲಿದೆ.


ಇದು ಇಡೀ ಕಥೆಯ ಸಾರವನ್ನು ಧ್ವನಿಸುವಂಥಾ ಹಾಡು. ಒಂದಷ್ಟು ಕಾಲದ ನಂತರ ಜಯಂತ್ ಕಾಯ್ಕಿಣಿ ಈ ಮೂಲಕ ಮತ್ತೆ ಮೋಡಿ ಮಾಡುವಂಥಾ ಸಾಹಿತ್ಯ ಒದಗಿಸಿದ್ದಾರೆ. ಮಿಂಚಿನ ಬಳ್ಳಿ ಬಣ್ಣವ ಚೆಲ್ಲಿ ಮೂಡಿದ ಹಾಗೆ ಎಂಬ ಈ ಹಾಡಿಗೆ ಗುಮ್ಮಿನೇನಿ ವಿಜಯ್ ಸಂಗೀತ ನೀಡಿದ್ದಾರೆ. ಅಶ್ವಿನ್ ಶರ್ಮಾ ಮತ್ತು ಸಂಗೀತಾ ರವೀಂದ್ರನಾಥ್ ಹಾಡಿದ್ದಾರೆ. ಮತ್ತೆ ಮತ್ತೆ ಕೇಳಬೇಕೆನಿಸುವ, ಪ್ರೀತಿಸಿ ದೂರವಾದ ಆತ್ಮಗಳ ಮರ್ಮರವನ್ನು ಬಚ್ಚಿಟ್ಟುಕೊಂಡಂತಿರುವ ಈ ಹಾಡೀಗ ಹೆಚ್ಚೆಚ್ಚು ವೀಕ್ಷಣೆಯೊಂದಿಗೆ ಟ್ರೆಂಡಿಂಗ್‌ನತ್ತ ಹೆಜ್ಜೆಯಿರಿಸುತ್ತಿದೆ. ಇದರಲ್ಲಿ ವಿಕಾಸ್ ಮತ್ತು ಸಿಮಧು ಲೋಕನಾಥ್ ಕೂಡಾ ಕಾಡುವಂತೆಯೇ ಕಾಣಿಸಿಕೊಂಡಿದ್ದಾರೆ.


ಕಾಣದಂತೆ ಮಾಯವಾದನು ಸೋಮ್ ಸಿಂಗ್ ನಿರ್ಮಾಣ ಮಾಡಿರುವ ಚಿತ್ರ. ಈ ಚಿತ್ರದಲ್ಲಿ ಪ್ರೇಕ್ಷಕರನ್ನು ಆವರಿಸಿಕೊಂಡು ಕಾಡುವಂಥಾ ಅನೇಕ ಅಂಶಗಳ ಹದಮುದವಾದ ಪಾಕದಂಥಾ ಕಥಾನಕವಿದೆ. ನಿರ್ದೇಶಕ ರಾಜ್ ಪತ್ತಿಪಾಟಿ ಅದನ್ನು ಅದೆಷ್ಟು ಸೊಗಸಾಗಿ ಹ್ಯಾಂಡಲ್ ಮಾಡಿದ್ದಾರೆಂಬುದಕ್ಕೆ ಟೀಸರ್, ಟ್ರೇಲರ್‌ನಂಥಾ ಸಾಕಷ್ಟು ಉದಾಹರಣೆಗಳು ಸಿಕ್ಕಿದ್ದವು. ಅದಕ್ಕೆ ತಕ್ಕುದಾಗಿ ಮೂಡಿ ಬಂದಿರೋ ಈ ಸಿನಿಮಾಗೆ ಪ್ರೇಕ್ಷಕರ ಕಡೆಯಿಂದ ಭರ್ಜರಿ ಬೆಂಬಲ ಸಿಗುತ್ತಿದೆ. ಈ ಹಿಂದೆ ಜಯಮ್ಮನ ಮಗ ಎಂಬ ಚಿತ್ರವನ್ನು ನಿರ್ದೇಶನ ಮಾಡಿ ಹೆಸರಾಗಿದ್ದ ವಿಕಾಸ್ ಕಾಣದಂತೆ ಮಾಯವಾದನು ಮೂಲಕ ನಾಯಕನಾಗಿಯೂ ಎಂಟ್ರಿ ಕೊಟ್ಟಿದ್ದಾರೆ. ಕಾಣದಂತೆ ಮಾಯವಾದನು ಬಿಡುಗಡೆಯಾಗಿ ವಾರ ಕಳೆಯುತ್ತಾ ಬಂದಿದೆ. ಈಗಾಗಲೇ ಹಂತ ಹಂತವಾಗಿ ರಾಜ್ಯದ ತುಂಬೆಲ್ಲ ಸಿನಿಮಾ ಮಂದಿರಗಳು ಹೌಸ್ ಫುಲ್ ಬೋರ್ಡಿನಿಂದ ಕಳೆಗಟ್ಟಿಕೊಳ್ಳುತ್ತಿವೆ. ಅದಕ್ಕೆ ಈ ವಿಡಿಯೋ ಸಾಂಗ್ ಮತ್ತಷ್ಟು ಆವೇಗ ನೀಡಿದೆ.

LEAVE A REPLY

Please enter your comment!
Please enter your name here