ಕೆಂಡದಂತಾದ ಕೌರವನಿಗೆ ಸಿಕ್ಕಿದ್ದು ಕೃಷಿ ಖಾತೆ!

ಡಿಯೂರಪ್ಪ ಕಡೆಗೂ ಸಂಪುಟ ವಿಸ್ತರಣೆಯನ್ನು ಸುಸೂತ್ರವಾಗಿ ಮಾಡಿ ಮುಗಿಸಿದ್ದಾರೆ. ಬಹುಕಾಲದಿಂದ ಸವಾಲಾಗಿ ಪರಿಣಮಿಸಿದ್ದ ಈ ಕೆಲಸ ಮಾಡಿ ಮುಗಿಸಿದ ನಂತರ ಯಡ್ಡಿ ನಿರಾಳವಾಗಿದ್ದಾರೆಂದು ಯಾರಾದರೂ ಅಂದುಕೊಂಡಿದ್ದರೆ ಅದು ಶುದ್ಧ ಸುಳ್ಳು. ಯಾಕೆಂದರೆ ಈ ಸಂಪುಟ ವಿಸ್ತರಣೆಯ ನಂತರದಲ್ಲಿ ಯಡ್ಡಿಗೆ ಮತ್ತೊಂದಷ್ಟು ಸಂಕಟಗಳು ಸುತ್ತಿಕೊಂಡಿವೆ. ಅತ್ತ ವಲಸಿಗರಿಗೆ ಮಣೆ ಹಾಕಿದ್ದರಿಂದ ಮೂಲ ಬಿಜೆಪಿಗರು ಮುನಿಸಿಕೊಂಡು ಒಂದು ಬಣವಾಗಿ ಒಗ್ಗೂಡಿದ್ದಾರೆ. ಇತ್ತ ಅನರ್ಹರಾಗಿ ಗೆದ್ದ ಎಲ್ಲರಿಗೂ ಸಚಿವ ಸ್ಥಾನ ಕೊಟ್ಟಿಲ್ಲವೆಂಬ ಅಸಮಾಧಾನ ಹೊಗೆಯಾಡುತ್ತಿದೆ. ಇದೆಲ್ಲ ಸಾಲದೆಂಬಂತೆ ಹೇಗೋ ಹರಸಾಹಸ ಪಟ್ಟು ಇಡಿಯೂರಪ್ಪ ಕೊಟ್ಟಿದ್ದ ಖಾತೆಗಳ ಬಗ್ಗೆಯೇ ಅನೇಕರಿಗೆ ಅತೃಪ್ತಿ ಇದೆ.


ಹಾಗೆ ಸಚಿವ ಸ್ಥಾನ ಸಿಕ್ಕರೂ ಧುಮುಗುಡುತ್ತಾ ಕೆಂಡದಂತಾಗಿರುವವರಲ್ಲಿ ಬಿಸಿ ಪಾಟೀಲ ಮೊದಲಿಗರು. ಆರಂಭದಿಂದಲೂ ಗೃಹ ಖಾತೆಯಂಥಾ ಆಯಕಟ್ಟಿನ ಜಾಗೆಯತದ್ತ ಕಣ್ಣಿಟ್ಟು ಕಾಯುತ್ತಿದ್ದವರು ಬಿ. ಸಿ ಪಾಟೀಲ. ಅದಕ್ಕಾಗಿ ಕಡೇ ಕ್ಷಣದವರೆಗೂ ಅವರು ಲಾಬಿ ನಡೆಸಿದ್ದರು. ಥರ ಥರದಲ್ಲಿ ಯಡಿಯೂರಪ್ಪನಿಗೆ ದುಂಬಾಲು ಬಿದ್ದಿದ್ದರು. ಸರ್ಕಾರ ರಚಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ಕಾರಣಕ್ಕಾದರೂ ಯಡ್ಡಿಗೆ ಕನಿಕರ ಬಂದು ತಾನು ಬಯಸಿದ ಖಾತೆಯನ್ನೇ ಕೊಡಬಹುದೆಂಬ ನಿರೀಕ್ಷೆ ಪಾಟೀಲಗೆ ಕಡೇ ಕ್ಷಣದವರೆಗೂ ಇತ್ತು. ಆದರೆ ಅವರಿಗೆ ಕಡೆಗೂ ಸಿಕ್ಕಿದ್ದದ್ದು ಅರಣ್ಯ ಖಾತೆ. ಇದರಿಂದಾಗಿ ಕೌರವ ಕೆರಳಿ ಕೆಂಡವಾಗಿದ್ದ.


ಹೀಗೆ ಖಾತೆ ಹಂಚಿಕೆಯಲ್ಲಿ ಅಸಮಾಧಾನ ಭುಗಿಲೇಳುವ ಎಲ್ಲ ಲಕ್ಷಣಗಳೂ ಕಾಣಿಸಿದ್ದರಿಂದಲೇ ಯಡ್ಡಿ ಇಂದು ಪರಿಷ್ಕರಣೆ ನಡೆಸಿದ್ದಾರೆ. ಕೆಲ ಮಂದಿಗೆ ಹೆಚ್ಚುವರಿ ಖಾತೆ ಕೊಟ್ಟು ಥಂಡಾ ಹೊಡೆಸುವ ಪ್ರಯತ್ಬ ಮಾಡಿದ್ದಾರೆ. ಅದರನ್ವಯ ಅರಣ್ಯ ಖಾತೆಯಿಂದ ಅಸಮಾಧಾನಗೊಂಡಿದ್ದ ಬಿ. ಸಿ ಪಾಟೀಲರಿಗೀಗ ಕೃಷಿ ಖಾತೆ ಸಿಕ್ಕಿದೆ. ಹಾಗಂತ ಇದರಿಂದಾಗಿ ಪಾಟೀಲ ಖುಷಿಗೊಂಡಿದ್ದಾರೆಂದುಕೊಳ್ಳುವಂತಿಲ್ಲ. ಅಷ್ಟಕ್ಕೂ ಅವರು ಬಡಪೆಟ್ಟಿಗೆ ಯಾವ ಖಾತೆ ಸಿಕ್ಕರೂ ಸಮಾಧಾನ ಪಟ್ಟುಕೊಳ್ಳುವುದೂ ಇಲ್ಲ. ಯಾಕೆಂದರೆ ಹದಿನೈದು ವರ್ಷಗಳ ಕಾಲ ಪೊಲೀಸ್ ಆಗಿ ಕಾರ್ಯ ನಿರ್ವಹಿಸಿದ್ದ ಅವರು ಹೇಗಾದರೂ ಮಾಡಿ ಗೃಹ ಖಾತೆ ದಕ್ಕಿಸಿಕೊಳ್ಳುವ ಹಠಕ್ಕೆ ಬಿದ್ದಿದ್ದಾರೆಂಬ ಮಾತುಗಳೂ ಹರಿದಾಡುತ್ತಿವೆ.

LEAVE A REPLY

Please enter your comment!
Please enter your name here