ಮಂಕಿಟೈಗರ್ ಆಗಮನಕ್ಕೆ ಮುಹೂರ್ತ ಫಿಕ್ಸ್!

ಡಾಲಿ ಧನಂಜಯ್ ಹಾಗೂ ದುನಿಯಾ ಸೂರಿ ಕಾಂಬಿನೇಷನ್ನಿನ ಪಾಪ್‌ಕಾರ್ನ್ ಮಂಕಿ ಟೈಗರ್ ಯಾವಾಗ ಬಿಡುಗಡೆಯಾಗುತ್ತ? ಇಂಥಾದ್ದೊಂದು ಪ್ರಶ್ನೆ ಕಳೆದ ವರ್ಷದ ಕಡೇಯ ಘಲಿಗೆಯಿಂದಲೇ ಪ್ರೇಕ್ಷಕರನ್ನೆಲ್ಲ ಕಾಡುತ್ತಿತ್ತು. ಇದೀಗ ಅದಕ್ಕೆ ಉತ್ತರ ಸಿಗುವ ಕಾಲ ಬಂದಿದೆ. ವೇಗವಾಗಿ ಎಲ್ಲ ಕೆಲಸ ಕಾರ್ಯಗಳನ್ನು ಮುಗಿಸಿಕೊಂಡಿರುವ ಸೂರಿ, ಪ್ರೇಕ್ಷಕರಿಗೆ ಹೆಚ್ಚು ನಿರಾಸೆ ಮಾಡಬಾರದೆಂಬ ಸದುದ್ದೇಶದಿಂದ ಇದೇ ಫೆಬ್ರವರಿ ಇಪ್ಪತ್ತೊಂದರಂದು ಈ ಚಿತ್ರವನ್ನು ತೆರೆಗಾಣಿಸಲು ತೀರ್ಮಾನಿಸಿದ್ದಾರೆ. ಇದರೊಂದಿಗೆ ಹೆಚ್ಚೂ ಕಮ್ಮಿ ವರ್ಷದಿಂದೀಚೆಗೆ ಪಡಿಮೂಡಿಕೊಂಡಿದ್ದ ಡಾಲಿ ಅಭಿಮಾನಿಗಳ ತಪನೆ ಕೈಗೂಡುವ ಕ್ಷಣಗಳು ವಾರದೊಪ್ಪತ್ತಿನಲ್ಲಿಯೇ ಅವತರಿಸಲಿವೆ. ಇದುವರೆಗೆ ಮಂಕಿ ಟೈಗರ್ ಬಗ್ಗೆ ಹುಟ್ಟಿಕೊಂಡಿರೋ ಕ್ರೇಜ್ ಅದನ್ನು ಈ ವರ್ಷದ ಸೂಪರ್ ಹಿಟ್ ಚಿತ್ರವಾಗಿ ನೆಲೆಗಾಣಿಸೋ ಎಲ್ಲ ಲಕ್ಷಣಗಳನ್ನೂ ಧ್ವನಿಸುತ್ತಿದೆ.


ಪಾಪ್ ಕಾರ್ನ್ ಮಂಕಿ ಟೈಗರ್ ಎಂಬ ಟೈಟಲ್ಲು ಹೊರಬಿದ್ದಾಕ್ಷಣವೇ ಪ್ರೇಕ್ಷಕರ ಮನದಲ್ಲಿನ ಕುತೂಹಲದ ಟ್ರಿಗರ್ ಅಮುಕಿದಂತಾಗಿತ್ತು. ಇತ್ತೀಚೆಗೆ ಬಿಡುಗಡೆಗೊಂಡಿರುವ ಟೀಸರ್ ಅದನ್ನು ಮತ್ತಷ್ಟು ತೀವ್ರವಾಗಿಸುವಂತಿತ್ತು. ಇಲ್ಲಿ ಬೇರೆ ಬೇರೆ ಪಾತ್ರಗಳ ಹೊಳಹು ಸಿಕ್ಕರೂ ಕೂಡಾ ಪ್ರಧಾನವಾಗಿ ಗಮನ ಸೆಳೆದಿರೋದು ಡಾಲಿಯ ರಗಡ್ ಅವತಾರ. ಈ ಹಿಂದೆ ಟಗರು ಚಿತ್ರದ ಡಾಲಿ ಎಂಬ ಪಾತ್ರದ ಮೂಲಕ ಧನಂಜಯ್ ಇಮೇಜನ್ನೇ ಬದಲಾಯಿಸಿದ್ದ ಸೂರಿ ಈ ಸಿನಿಮಾ ಮೂಲಕ ಮತ್ತೊಂದು ಬಗೆಯಲ್ಲಿ ಕಮಾಲ್ ಮಾಡಲು ಮುಂದಾಗಿದ್ದಾರೆಂಬುದು ಸ್ಪಷ್ಟವಾಗಿದೆ. ಹೀಗೆ ಟೀಸರ್ ಹವಾ ಹಬೆಯಾಡುತ್ತಿರುವಾಗಲೇ ಸೂರಿ ಈ ಚಿತ್ರವನ್ನು ಪ್ರೇಕ್ಷಕರ ಮುಂದೆ ತರಲು ಮುಂದಾಗಿದ್ದಾರೆ.


ಒಮದೊಂದು ಪಾತ್ರಗಳನ್ನೂ ಸೆನ್ಸೇಷನ್ ಕ್ರಿಯೇಟ್ ಮಾಡುವಂತೆ ಕಟ್ಟಿ ಕೊಡೋದರಲ್ಲಿ ಸೂರಿ ನಿಜಕ್ಕೂ ಮಾಸ್ಟರ್ ಪೀಸ್. ಚಿತ್ರವಿಚಿತ್ರ ಹಾವಭಾವಗಳ ವಿಕ್ಷಿಪ್ತ ಪಾತ್ರಗಳನ್ನು ಪ್ರೇಕ್ಷಕರಿಗೆ ಮುಖಾಮುಖಿಯಾಗಿಸುತ್ತಲೇ ಗೆಲ್ಲುತ್ತಾ ಬಂದಿರುವ ಸೂರಿ ಈ ಬಾರಿಯಂತೂ ಭೂಗತ ಜಗತ್ತಿನ ವಿಲಕ್ಷಣ ಪದರುಗಳನ್ನು ಪ್ರೇಕ್ಷಕರ ಮುಂದೆ ಹರವಲು ಮುಂದಾಗಿದ್ದಾರೆ. ನಿಜ, ಕನ್ನಡ ಚಿತ್ರರಂಗದಲ್ಲಿ ಭೂಗತ ಜಗತ್ತಿನ ಕಥೆಯ ಚಿತ್ರಗಳು ಹೊಸತೇನಲ್ಲ. ಆ ಬಗೆಯ ದಂಡಿ ದಂಡಿ ಚಿತ್ರಗಳು ಈಗಾಗಲೇ ತೆರೆ ಕಂಡಿವೆ. ಆದರೆ, ಸೂರಿ ಯಾವುದೇ ಕಥೆಯನ್ನು ಕಟ್ಟಿಕೊಡುವ ರೀತಿಯೇ ಡಿಫರೆಂಟಾಗಿರುತ್ತದೆ. ಎಲ್ಲರೂ ಓಡಾಡಿದ ದಾರಿಯ ಇಕ್ಕೆಲದಲ್ಲಿ ಯಾರೂ ಗಮನಿಸದಿರೋ ವಿಶೇಷ ಕಥಾ ವಸ್ತುವನ್ನು ಅವರು ಹುಡುಕಿ ತೆಗೆಯ ಬಲ್ಲರು. ಅಂತೆಯೇ ತಯಾರುಗೊಂಡಿರುವ ಪಾಪ್‌ಕಾರ್ನ್ ಮಂಕಿ ಟೈಗರ್ ತೆರೆಗಾಣಲು ಕ್ಷಣಗಣನೆ ಶುರುವಾಗಿದೆ.

LEAVE A REPLY

Please enter your comment!
Please enter your name here