ವಾಸ್ತವಿಕ ಅಂಶಗಳೊಂದಿಗೆ ಮತ್ತೆ ಭರಪೂರ ಹಾಸ್ಯೋದ್ಭವ!

ನರ ಧಾರ್ಮಿಕ ನಂಬಿಕೆ ಮತ್ತು ಮುಗ್ಧತೆಯನ್ನೇ ಬಂಡವಾಳವಾಗಿಸಿಕೊಂಡು ನಡೆಸುವ ದಂಧೆ ದೋಖಾಬಾಜಿಗಳ ಮೇಲೆ ಆಗಾಗ ಸಿನಿಮಾ ಮಂದಿಯ ಕಣ್ಣು ಹೊರಳುತ್ತಿರುತ್ತದೆ. ಅಂಥಾದ್ದೇ ಕಥೆಯನ್ನು ಉದ್ಭವ ಎಂಬ ಸಿನಿಮಾ ಮೂಲಕ ತೊಂಭತ್ತರ ದಶಕದಲ್ಲಿ ಕಥೆಯಾಗಿಸಿ ಗೆಲುವು ಕಂಡಿದ್ದವರು ನಿರ್ದೇಶಕ ಕೋಡ್ಲು ರಾಮಕೃಷ್ಣ. ಇದೀಗ ಅವರು ಮತ್ತೆ ಉದ್ಭವ ಚಿತ್ರವನ್ನು ನಿರ್ದೇಶನ ಮಾಡಿ ತೆರೆಗಾಣಿಸಿದ್ದಾರೆ. ತೊಂಬತ್ತರ ದಶಕದಲ್ಲಿ ಬಂದಿದ್ದ ಕಥೆಯ ಮುಂದವರೆದ ಭಾಗವಾದ ಈ ಚಿತ್ರ ಧಾರ್ಮಿಕ ವಂಚನೆ, ರಾಜಕೀಯ ಮೇಲಟ ಮತ್ತು ಹೇಗಾದರೂ ಮಾಡಿ ಕಾಸು ಗೆಬರಿಕೊಳ್ಳುವ ಮೇಲಾಟದ ಭರ್ಜರಿ ಮನರಂಜನಾತ್ಮಕ ಕಥೆಯೊಂದಿಗೆ ಪ್ರೇಕ್ಷಕರ ಮುಂದೆ ಬಂದಿದೆ. ಇದರೊಂದಿಗೆ ವಾಸ್ತವಿಕ ಅಂಶಗಳೊಂದಿಗೆ ಭರಪೂರ ಹಾಸ್ಯೋದ್ಭವಾದಂಥಾ ಖುಷಿ ನೋಡುಗರನ್ನು ಆವರಿಸಿಕೊಂಡಿದೆ.


ತೊಂಬತ್ತರ ದಶಕಕ್ಕೂ ಈವತ್ತಿನ ಕಾಲಮಾನಕ್ಕೂ ಪ್ರೇಕ್ಷಕರ ಅಭಿರುಚಿಯೂ ಬದಲಾಗಿದೆ. ಚಿತ್ರಗಳ ಕಥನ ಕ್ರಮದಲ್ಲಿಯೂ ಕೂಡಾ ಅಮೂಲಾಗ್ರ ಬದಲಾವಣೆಗಳಾಗಿವೆ. ಅಪ್‌ಡೇಟ್ ಆಗದೇ ಹೋದರೆ ಈ ವರ್ಷ ಹವಾ ಸೃಷ್ಟಿಸಿದ್ದ ನಿರ್ದೇಶಕರೇ ಮುಂದಿನ ವರ್ಷದ ಹೊತ್ತಿಗೆಲ್ಲ ಔಟ್ ಡೇಟೆಡ್ ಅನ್ನಿಸಿಕೊಳ್ಳುವ ಅಪಾಯವಿದೆ. ಹಾಗಿರುವಾಗ ಹಿರಿಯ ನಿರ್ದೇಶಕ ಕೋಡ್ಲು ರಾಮಕೃಷ್ಣ ತೊಂಬತ್ತರ ದಶಕದ ಉದ್ಭವದ ಪ್ರಭೆಯಲ್ಲಿ ಮತ್ತೆ ಉದ್ಭವ ಚಿತ್ರವನ್ನು ಹೇಗೆ ರೂಪಿಸಿರಬಹುದೆಂಬ ಕುತೂಹಲ ಎಲ್ಲರಲ್ಲಿಯೂ ಇತ್ತು. ಅದೀಗ ಸಕಾರಾತ್ಮಕವಾಗಿಯೇ ತಣಿದಿದೆ. ಕೋಡ್ಲು ರಾಮಕೃಷ್ಣ ಈಗಿನ ಜನರೇಷನ್ನಿನ ಪ್ರೇಕ್ಷಕರೂ ಮೆಚ್ಚಿಕೊಳ್ಳುವಂತೆ ಮತ್ತೆ ಉದ್ಭವ ಚಿತ್ರವನ್ನು ಪೊರೆದಿದ್ದಾರೆ.


ಇಲ್ಲಿ ಉದ್ಭವ ಗಣೇಶ ದೇವಸ್ಥಾನದ ಟ್ರಸ್ಟಿಯಾಗಿ ರಂಗಾಯಣ ರಘು ನಟಿಸಿದರೆ, ಆತನ ಮಗನಾಗಿ ಪ್ರಮೋದ್ ಕಾಣಿಸಿಕೊಂಡಿದ್ದಾರೆ. ಇವರಿಬ್ಬರೂ ಕಿಲಾಡಿ ಜೋಡಿಯಂತಿರೋ ಅಪ್ಪ ಮಗ. ಇಬ್ಬರ ಉದ್ದೇಶವೂ ಯಾವ ಆಟ ಕಟ್ಟಿಯಾದರೂ ಸರಿ ಕಾಸು ಮಾಡಿಕೊಳ್ಳಬೇಕೆಂಬುದೊಂದೇ. ಅಂಥಾ ನವರಂಗಿಯಾಟಗಳ ಸುತ್ತ ಈ ಕಥೆ ಜರುಗುತ್ತದೆ. ಆನ ಸಾಮಾನ್ಯರ ನಂಬಿಕೆಯನ್ನೇ ದಾಳವಾಗಿಸಿಕೊಂಡು, ಸ್ವಾಜಿಯೋರ್ವನನ್ನೂ ಆ ದಂಧೆಯಲ್ಲಿ ಭಾಗಿಯಾಗಿಸಿ, ನಟೀಮಣಿಯೊಬ್ಬಳಿಗೆ ರಾಜಕಾರಣಿಯ ಪೋಶಾಕು ತೊಡಿಸುವವರೆಗೂ ಈ ಅಪ್ಪ ಮಗನ ಆಟಗಳು ಮುಂದುವರೆಯುತ್ತವೆ. ಅದೆಲ್ಲವನ್ನೂ ಕೂಡಾ ಇತ್ತೀಚೆಗೆ ನಡೆದಿದ್ದ ಸತ್ಯಘಟನೆಗಳಿಗೆ ಹತ್ತಿರವಾದಂಥಾ ಕಥಾ ಸ್ಪರ್ಶ ನೀಡಿರುವುದು ಮತ್ತು ಅದೆಲ್ಲವನ್ನೂ ಮನರಂಜನೆಗೆ ತತ್ವಾರವಾಗದಂತೆ ನಿರೂಪಿಸಿರೋದೇ ಮತ್ತೆ ಉದ್ಭವ ಚಿತ್ರದ ಪ್ಲಸ್ ಪಾಯಿಂಟ್.


ಈ ಚಿತ್ರವನ್ನು ಪಕ್ಕಾ ಕಮರ್ಶಿಯಲ್ ವೇನಲ್ಲಿ ಕಟ್ಟಿ ಕೊಡಬೇಕೆಂದು ಪಣ ತೊಟ್ಟವರಂತೆ ನಿರ್ದೇಶಕರು ಅದಕ್ಕೆ ಬೇಕಾದಂಥಾ ಎಲ್ಲ ಅಂಶಗಳನ್ನು ಬೆರೆಸಿದ್ದಾರೆ. ಅದರ ಭಾಗವಾಗಿ ಇಲ್ಲಿ ಆಕ್ಷನ್ ಸನ್ನಿವೇಶಗಳೂ ಇವೆ. ಪಂಚಿಂಗ್ ಡೈಲಾಗುಗಳ ಹಿಮ್ಮೇಳವೂ ಅದಕ್ಕಿದೆ. ಲವ್ ಸೆಂಟಿಮೆಂಟ್ ಸೇರಿದಂತೆ ಎಲ್ಲ ಅಂಶಗಳನ್ನೂ ಬೆರೆಸಿಯೇ ಈ ಕಥೆಯನ್ನು ಸಿದ್ಧಪಡಿಸಲಾಗಿದೆ. ರಂಗಾಯಣ ರಘು, ಪ್ರಮೋದ್ ಸೇರಿದಂತೆ ಎಲ್ಲ ಕಲಾವಿದರೂ ತಂತಮ್ಮ ಪಾತ್ರಗಳನ್ನು ತನ್ಮಯರಾಗಿಯೇ ನಿರ್ವಹಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ತೆರೆಗಂಡಿದ್ದ ಸಿನಿಮಾಗಳ ಸಾಲಿನಲ್ಲಿ ಬೇರೆಯದ್ದೇ ಸ್ಥಾನ ಗಿಟ್ಟಿಸಿಕೊಳ್ಳುವ ಗುಣ ಲಕ್ಷಣಗಳನ್ನು ಹೊಂದಿರೋ ಈ ಚಿತ್ರ ತುಂಬ ಮನರಂಜನೆಯನ್ನು ಖಂಡಿತಾ ನೀಡುತ್ತದೆ.

ರೇಟಿಂಗ್: 3.5/5

LEAVE A REPLY

Please enter your comment!
Please enter your name here