ಪ್ರೇಮಕಥೆಯೊಂದಿಗೆ ಹೃದಯ ಕದಿಯಲಿದ್ದಾಳೆ ದಿಯಾ!

ಒಂದು ಸಿನಿಮಾ ಯಶ ಕಂಡಾಕ್ಷಣ ಅದೇ ಧಾಟಿಯ ಮತ್ತೊಂದಷ್ಟು ಸಿನಿಮಾಗಳು ರೆಡಿಯಾಗೋದು ಕನ್ನಡ ಚಿತ್ರರಂಗದಲ್ಲಿ ಮಾಮೂಲು. ಆದರೆ ಇದೆಲ್ಲವನ್ನು ಹೊರತಾಗಿಸಿ ಯಶಸ್ವೀ ಸಿನಿಮಾವೊಂದನ್ನು ಕೊಟ್ಟ  ನಂತರದಲ್ಲಿ ಅದರ ನಿರ್ದೇಶಕ ಆ ಹ್ಯಾಂಗೋವರಿನಿಂದ ಹೊರ ಬಂದು ಮತ್ತೊಂದು ಬಗೆಯ ಚಿತ್ರ ನಿರ್ದೇಶನ ಮಾಡಲು ಬಹಳಷ್ಟು ತಯಾರಿ ಬೇಕಾಗುತ್ತದೆ. ಈ ಕಾರಣದಿಂದಲೇ ಅನೇಕರು ಸುದೀರ್ಘ ಕಾಲಾವಧಿ ತೆಗೆದುಕೊಂಡು ಮತ್ತೊಂದು ಬಗೆಯ ಭಿಮ್ಮ ಮಾದರಿಯ ಸಿನಿಮಾ ಸೃಷ್ಟಿಸುತ್ತಾರೆ. ವರ್ಷಗಳ ಹಿಂದೆ ೬-೫=೨ ಎಂಬ ಸೂಪರ್ ಹಿಟ್ ಚಿತ್ರ ನಿರ್ದೇಶನ ಮಾಡಿದ್ದ ಅಶೋಕ್ ಕೆ ಎಸ್ ದಿಯಾ ಎಂಬ ಪ್ರೇಮ ಕಾವ್ಯದತ್ತ ಹೊರಳಿಕೊಲ್ಳಲು ಸಾಕಷ್ಟು ತಯಾರಿ ನಡೆಸಿದ್ದಾರೆ. ಪರಿಶ್ರಮ ಪಟ್ಟಿದ್ದಾರೆ.


ದಿಯಾ ಚಿತ್ರ ಈ ವಾರವೇ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಯಾವುದೇ ಸಿನಿಮಾಗಳು ತೆರೆಕಂಡು ಗೆದ್ದಾಗ ಆ ಯಶಸ್ಸು ಮಾತ್ರವೇ ಕಣ್ಣು ಕೋರೈಸುತ್ತದೆ. ಆದರೆ ಅದರ ಹಿಂದಿರೋ ಅದೆಷ್ಟೋ ವರ್ಷಗಳ ಏಳು ಬೀಳುಗಳ ಹಾದಿ ಅಜ್ಞಾತವಾಗುಳಿಯುವುದೇ ಹೆಚ್ಚು. ಹಠಾತ್ತನೆ ಬಿಡುಗಡೆಯಾಗಿ ಪ್ರೇಕ್ಷಕರನ್ನೆಲ್ಲ ಚಕಿತಗೊಳಿಸಿದ್ದ, ಈ ಮಾದರಿಯಲ್ಲಿಯೂ ಒಂದು ಚಿತ್ರವನ್ನು ಸರ್‌ಪ್ರೈಸ್ ಎಂಬಂತೆ ಪ್ರೇಕ್ಷಕರೆದುರು ನಿಲ್ಲಿಸಬಹುದೆಂಬುದನ್ನು ಸಾಬೀತುಗೊಳಿಸಿದ್ದ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದವರು ಅಶೋಕ್. ಹಾರರ್ ಶೈಲಿಯ ಆ ಚಿತ್ರದ ನಂತರದಲ್ಲಿ ಮತ್ತೊಂದು ಚಿತ್ರ ನಿರ್ದೇಶನ ಮಾಡಲು ವಿಪುಲ ಅವಕಾಸಗಳಿದ್ದರೂ ಸುದೀರ್ಘ ಕಾಲ ಪ್ರೇಮ ಕಥೆಯೊಂದಕ್ಕೆ ಕಾವು ಕೊಡುವುದರಲ್ಲಿಯೇ ಅವರು ತಲ್ಲೀನರಾಗಿದ್ದರು.


ಅದರ ಫಲವಾಗಿಯೇ ಸೃಷ್ಟಿಯಾದ ಚಿತ್ರ ದಿಯಾ. ಪ್ರೇಮದ ಹೊರತಾಗಿ ಆಚೀಚೆ ಕದಲದ, ಅದರೊಂದಿಗೇ ಅನೂಹ್ಯವಾದುದೇನನ್ನೋ ಹೇಳ ಹೊರಟಿರುವ ಈ ಚಿತ್ರದ ಬಗ್ಗೆ ಈಗಾಗಲೇ ಪ್ರೇಕ್ಷಕರು ಬಗೆ ಬಗೆಯ ನಿರೀಕ್ಷೆಗಳನ್ನಿಟ್ಟುಕೊಂಡು ಕಣ್ತುಂಬಿಕೊಳ್ಳಲು ಕಾದು ಕೂತಿದ್ದಾರೆ. ಅಶೋಕ್ ಅವರು ಮೊದಲ ಚಿತ್ರದಲ್ಲಿಯೇ ಮಾಡಿದ್ದ ಮೋಡಿಯ ಅರಿವಿರುವ ಯಾರೇ ಆದರೂ ದಿಯಾ ಚಿತ್ರದ ಬಗ್ಗೆ ಮೋಹಗೊಳ್ಳದಿರಲು ಸಾಧ್ಯವೇ ಇಲ್ಲ. ಹಾಗೊಂದು ರಸವತ್ತಾದ ಪ್ರೇಮ ಕಥೆಯನ್ನಿಲ್ಲಿ ಹೇಳಲಾಗಿದೆಯಂತೆ. ಅಂದಹಾಗೆ ಈ ಚಿತ್ರದ ಕಥಾ ನಾಯಕಿಯ ಹೆಸರು ದಿಯಾ. ಆ ಪಾತ್ರವನ್ನು ಖುಷಿ ನಿರ್ವಹಿಸಿದ್ದಾರೆ. ಫೃಥ್ವಿ ಅಂಬರ್ ಮತ್ತು ದೀಕ್ಷಿತ್ ನಾಯಕರಾಗಿ ನಟಿಸಿದ್ದಾರೆ.

LEAVE A REPLY

Please enter your comment!
Please enter your name here