ನಾನು ಮತ್ತು ಗುಂಡ: ನಿರಾಸೆಯ ಕಡಲಲ್ಲಿ ತೇಲಿ ಬಂದ ಭರವಸೆಯ ಹಾಯಿದೋಣಿ!

[adning id="4492"]

ಒಂದು ಸಿನಿಮಾ ತಯಾರುಗೊಂಡು ಬಿಡುಗಡೆಯಾಗುವಲ್ಲಿಯವರೆಗೂ ನಾನಾ ರೀತಿಯಲ್ಲಿ ಸುದ್ದಿಗಳಾಗುತ್ತವೆ. ಹೊರ ಜಗತ್ತಿಗೆ ಅದೊಂದು ಝಗಮಗದಲ್ಲಿ ಗೋಚರಿಸೋ ರಂಗು ರಂಗಾದ ಕಹಾನಿಯಾಗಿ ಮಾತ್ರವೇ ಕಾಣಿಸುತ್ತದೆ. ಆದರೆ ಅದೇ ಸಿನಿಮಾ ರೂಪುಗೊಂಡಿದ್ದರ ಹಿಂದಿನ ಏಳು ಬೀಳು, ಎಡರುತೊಡರು, ನಿರಾಸೆ, ಬಿಕ್ಕಳಿಕೆಗಳೆಲ್ಲ ಬಣ್ಣದಾಚೆಯ ಅಗೋಚರ ನಕಾಶೆಗಳಾಗಿಯೇ ಉಳಿದು ಬಿಡುತ್ತವೆ. ಈ ವಾರ ಬಿಡುಗಡೆಯಾಗುತ್ತಿರುವ ನಾನು ಮತ್ತು ಗುಂಡ ಚಿತ್ರವನ್ನು ನಿರ್ದೇಶನ ಮಾಡಿ ತೆರೆಗಾಣಿಸುವವರೆಗೂ ನಿರ್ದೇಶಕ ಶ್ರೀನಿವಾಸ್ ತಿಮ್ಮಯ್ಯ ಅಂಥಾದ್ದೇ ಏಳು ಬೀಳುಗಳನ್ನು ಕಂಡುಂಡಿದ್ದಾರೆ. ನಾನು ಮತ್ತು ಗುಂಡ ಎಂಬುದು ಅವರ ಪಾಲಿಗೆ ನೂರು ನಿರಾಸೆಗಳ ಕಡಲಲ್ಲಿ ತೇಲಿ ಬಂದ ಭರವಸೆಯ ಹಾಯಿದೋಣಿಯಂಥಾ ಚಿತ್ರ!


ಶಿವರಾಜ್ ಕೆ ಆರ್ ಪೇಟೆ ಮತ್ತು ಸಂಯುಕ್ತಾ ಹೊರನಾಡು ಮುಖ್ಯ ಭೂಮಿಕೆಯಲ್ಲಿ ನಟಿಸಿರೋ ಈ ಚಿತ್ರ ಶ್ವಾನ ಮತ್ತು ಮನುಷ್ಯ ಸಂಬಂಧದ ನವಿರಾದ, ಮನಮಿಡಿಯುವ ಕಥಾನಕವನ್ನೊಳಗೊಂಡಿದೆ. ಅದರ ಭಾವ ತೀವ್ರತೆ ಏನೆಂಬುದು ಈಗಾಗಲೇ ಟೀಸರ್ ಮತ್ತು ಟ್ರೇಲರ್ ಮೂಲಕ ಅನಾವರಣಗೊಂಡಿದೆ. ಇಂಥಾದ್ದೊಂದು ಭಿನ್ನ ಕಥೆಯನ್ನು ಸಿನಿಮಾ ಮಾಡಲು ಹೊರಟಾಗ ಮೊದಲು ಎದುರಾಗೋದೇ ನಿರ್ಮಾಪಕರ ಸಮಸ್ಯೆ. ಈ ಹಾದಿಯಲ್ಲಿ ನಿರ್ದೇಶಕ ಶ್ರೀನಿವಾಸ್ ತಿಮ್ಮಯ್ಯ ಹಲವಾರು ನಿರಾಸೆಗಳನ್ನು ನುಂಗಿಕೊಂಡಿದ್ದರು. ಇನ್ನೇನು ಹತ್ತು ವರ್ಷದ ತಪಸ್ಸು ವ್ಯರ್ಥವಾಗಿ ಬಿಡುತ್ತದೆಂಬ ವಾತಾವರಣದಲ್ಲಿಯೇ ರಘು ಹಾಸನ್ ಎದುರಾಗದೇ ಹೋಗಿದ್ದರೆ ನಾನು ಮತ್ತು ಗುಂಡ ಯಾರ ಕಣ್ಣಿಗೂ ಬೀಳದ ಕಥೆಯಾಗಿ ಕಳೆದು ಹೋಗುತ್ತಿತ್ತೇನೋ…


ಶ್ರೀನಿವಾಸ್ ತಿಮ್ಮಯ್ಯ ಸಿನಿಮಾ ಮಾಡಲು ಪಡುತ್ತಿರೋ ಪಡಿಪಾಟಲನ್ನು ಗಮನಿಸುತ್ತಾ ಬಂದಿದ್ದ ರಘು ಹಾಸನ್ ತಾವಾಗಿಯೇ ಅವರನ್ನು ಕರೆದು ಮಾತಾಡಿಸಿದ್ದರು. ಈ ಕಥೆಗೆ ಮನಸೋತು, ಕಡೇಯವರೆಗೂ ಯಾವುದಕ್ಕೂ ಕೊರತೆಯಾಗದಂತೆ ಜೊತೆಯಾಗಿರೋದಾಗಿ ಭರವಸೆ ನೀಡಿಯೇ ನಿರ್ಮಾಪಕರಾಗಲು ಒಪ್ಪಿಕೊಂಡಿದ್ದರು. ಮೂಲತಃ ನಿರ್ದೇಶಕರಾಗಿರುವ ರಘು ಹಾಸನ್ ನಿರ್ದೇಶನದ ಪಡಿಪಾಟಲುಗಳನ್ನು ಸರಿಯಾಗಿಯೇ ಅರ್ಥೈಸಿಕೊಂಡವರು. ಈ ಕಾರಣದಿಂದಲೇ ಯಾವುದಕ್ಕೂ ಕಡಿಮೆಯಾಗದಂತೆ, ಚಿಂತೆಯ ಭಾರದಿಂದ ಸಿನಿಮಾ ಮುಕ್ಕಾಗದಂತೆ ಎಚ್ಚರ ವಹಿಸುತ್ತಲೇ ಬಲು ಕಾಳಜಿಯಿಂದ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.


ಕಂಟೆಂಟ್ ಓರಿಯಂಟೆಡ್ ಸಿನಿಮಾ ಮಾಡಬೇಕೆಂಬ ತಹತಹವನ್ನು ಆರಂಭ ಕಾಲದಿಂದಲೂ ಸಾಕಿಕೊಂಡು ಬಂದಿದ್ದ ಶ್ರೀನಿವಾಸ್ ತಿಮ್ಮಯ್ಯ, ರಘು ಹಾಸನ್ ಅವರ ಸಾಥ್‌ನೊಂದಿಗೆ ಅದರಲ್ಲಿ ಯಶ ಕಂಡಿದ್ದಾರೆ. ನಂತರದಲ್ಲಿ ಶಿವರಾಜ್ ಕೆ ಆರ್ ಪೇಟೆ, ಸಂಯುಕ್ತಾ ಹೊರನಾಡ್ ಸೇರಿದಂತೆ ನೈಜ ಸಿನಿಮಾಸಕ್ತಿಯ ಕಲಾವಿದರು ಮತ್ತು ತಂತ್ರಜ್ಞರೇ ಸಿನಿಮಾ ತಂಡಕ್ಕೆ ಸೇರಿಕೊಂಡಿದ್ದರಿಂದ ನಾನು ಮತ್ತು ಗುಂಡ ಮತ್ತಷ್ಟು ಪರಿಣಾಮಕಾರಿಯಾಗಿ ಮೂಡಿ ಬಂದಿದೆ ಎಂಬ ಧನ್ಯತಾ ಭಾವ ಶ್ರೀನಿವಾಸ್ ಅವರಲ್ಲಿದೆ. ಈ ಮೂಲಕ ಅವರ ಹತ್ತು ವರ್ಷಗಳ ಪರಿಶ್ರಮ ಸಾರ್ಥಕಗೊಳ್ಳುವ ಕ್ಷಣಗಳು ಹತ್ತಿರಾಗಿವೆ.

[adning id="4492"]

LEAVE A REPLY

Please enter your comment!
Please enter your name here