ಸಂಯುಕ್ತಾ ಹೊರನಾಡ್ ಪಾಲಿಗೂ ಇವನು ಪ್ರೀತಿಯ ಗುಂಡ!

[adning id="4492"]

ಟೈಟಲ್ಲು ಹುಟ್ಟಿದ್ದರ ಹಿಂದಿದೆ ತೀವ್ರ ಶ್ವಾನ ಪ್ರೇಮ!
ಸಿನಿಮಾ ಎಂಬುದು ಇಂದು ಒಂದು ಉದ್ಯಮವಾಗಿ ಬದಲಾಗಿರೋದರಿಂದ ಕಮರ್ಶಿಯಲ್ ಚೌಕಟ್ಟಿನ ಸಿದ್ಧಸೂತ್ರದ ಆಚೀಚಿಗಿನ ಕಥೆಗಳು ಹುಟ್ಟಿದಲ್ಲಿಯೇ ಉಸಿರು ಚೆಲ್ಲುವಂಥಾ ವಿಷಮ ವಾತಾವರಣವಿದೆ. ಹಾಗಿರುವಾಗ ಶ್ವಾನವೊಂದರ ಮೂಲಕ ತೆರೆದುಕೊಳ್ಳುವ ಮನುಷ್ಯ ಪ್ರೇಮದ ಕಥೆಯನ್ನು ಸಿನಿಮಾ ಮಾಡೋದು ಅದೆಂಥಾ ಸಾಹಸ ಎಂಬ ಬಗ್ಗೆ ಯಾರಿಗಾದರೂ ಅರಿವಾಗುತ್ತದೆ. ಶ್ರೀನಿವಾಸ್ ತಿಮ್ಮಯ್ಯ ರೆಡಿಮಾಡಿಕೊಂಡಿದ್ದ ಕಥೆ ರಘು ಹಾಸನ್ ಎಂಬ ಸದಭಿರುಚಿಯ ನಿರ್ಮಾಪಕ ಸಿಗದೇ ಹೋಗಿದ್ದರೆ ಬಹುಶಃ ಮತ್ತದೇ ಲಿಸ್ಟು ಸೇರಿಕೊಳ್ಳುತ್ತಿತ್ತು. ಹಾಗೆ ವ್ಯವಹಾರದಾಚೆಗಿನ ಸಿನಿಮಾ ಪ್ರೀತಿಯಿಂದ ಅಣಿಗೊಂಡಿರುವ ನಾನು ಮತ್ತು ಗುಂಡ ಚಿತ್ರ ಈ ವಾರ ಬಿಡುಗಡೆಗೊಳ್ಳುತ್ತಿದೆ.


ಈ ಸಿನಿಮಾದ ಕಥೆಯೇ ವಿಶೆಷಸವಾಗಿದೆ ಅನ್ನೋ ವಿಚಾರ ಪ್ರತೀ ಪ್ರೇಕ್ಷಕರಿಗೂ ಈಗಾಗಲೇ ಮನದಟ್ಟಾಗಿದೆ. ಈ ಚಿತ್ರದ ಶೀರ್ಷಿಕೆ ಹುಟ್ಟಿಕೊಂಡಿದ್ದರ ಹಿಂದೆಯೂ ಅಂಥಾದ್ದೇ ತೀವ್ರವಾದ ಶ್ವಾನ ಪ್ರೇಮದ ಕಥಾನಕವಿದೆ. ಮತ್ತದಕ್ಕೆ ಇದರ ನಾಯಕಿಯಾಗಿ ನಟಿಸಿರುವ ಸಂಯುಕ್ತಾ ಹೊರನಾಡ್ ಅವರೇ ಕೇಂದ್ರಬಿಂದುವಂತಿದ್ದಾರೆ. ಶ್ವಾನವೇ ಪ್ರಧಾನವಾಗಿರೋ ಈ ಸಿನಿಮಾದ ಮುಖ್ಯ ಪಾತ್ರಗಳಲ್ಲಿ ಅಭಿನಯಿಸೋ ಕಲಾವಿದರಿಗೂ ಬೇರೆಯದ್ದೇ ಥರದ ಮನಸ್ಥಿತಿ ಇರಬೇಕಾಗುತ್ತದೆ. ಹೇಗೋ ಶಿವರಾಜ್ ಕೆ ಆರ್ ಪೇಟೆಯವರನ್ನು ಮುಖ್ಯ ಪಾತ್ರಕ್ಕೆ ಆಯ್ಕೆ ಮಾಡಿಕೊಂಡಿದ್ದ ನಿರ್ದೇಶಕ ಶ್ರೀನಿವಾಸ್ ತಿಮ್ಮಯ್ಯನವರಿಗೆ ನಾಯಕಿ ಯಾರಾಗಬಹುದೆಂಬ ಹುಡುಕಾಟದಲ್ಲಿ ಹೊಳೆದ ಹೆಸರು ಸಂಯುಕ್ತಾ ಹೊರನಾಡ್ ಅವರದ್ದು.


ಸದಾ ಭಿನ್ನ ಕಥೆ, ಪಾತ್ರಗಳಿಗೆ ಹಾತೊರೆಯುವ ಮನಸ್ಥಿತಿಯ ಸಂಯುಕ್ತ ಒಂದೇ ಗುಕ್ಕಿಗೆ ಕಥೆ ಕೇಳಿ ತುಂಬಾ ಇಷ್ಟಪಟ್ಟು ಈ ಪಾತ್ರವನ್ನು ಒಪ್ಪಿಕೊಂಡಿದ್ದರಂತೆ. ಆ ನಂತರದಲ್ಲಿ ಕಥೆಗೆ ಪೂರಕವಾಗಿ ತಮ್ಮ ಬದುಕಿಗೆ ಹತ್ತಿರಾದ ಒಂದಷ್ಟು ವಿಚಾರಗಳನ್ನವರು ನಿರ್ದೇಶಕರ ಬಳಿ ಹಂಚಿಕೊಂಡಿದ್ದರು. ಅದುವೇ ಸಂಯುಕ್ತಾರ ಪ್ರೀತಿಯ ಶ್ವಾನದ ಕಥೆಯನ್ನು ಪ್ರಚುರಪಡಿಸಿತ್ತು. ಅವರ ಪ್ರೀತಿಪಾತ್ರ ಶ್ವಾನದ ಹೆಸರೂ ಕೂಡಾ ಗುಂಡ ಎಂದಿದ್ದರಿಂದ ನಿರ್ದೇಶಕರು ಈ ಚಿತ್ರಕ್ಕೆ ನಾನು ಮತ್ತು ಗುಂಡ ಎಂಬ ಹೆಸರನ್ನು ಫೈನಲ್ ಮಾಡಿದ್ದರಂತೆ. ಹೀಗೆ ಶ್ವಾನವೊಂದು ಮುಖ್ಯ ಪಾತ್ರವಾಗಿರೋ ಚಿತ್ರಕ್ಕೆ ಪ್ರಾಣಿಪ್ರೇಮ ಹೊಂದಿರುವವರೇ ಒಂದು ಕಡೆ ಸೇರಿಕೊಂಡಿದ್ದು ಬಹುಶಃ ಕಾಕತಾಳೀಯವಿರಲಿಕ್ಕಿಲ್ಲವೇನೋ…


ಅಷ್ಟಕ್ಕೂ ಪ್ರತೀ ಹಂತದಲ್ಲಿಯೂ ಒಂದಷ್ಟು ಸವಾಲುಗಳನ್ನು ಸಮರ್ಥವಾಗಿ ಎದುರಿಸುವ ಮೂಲಕವೇ ನಿರ್ದೇಶಕ ಶ್ರೀನಿವಾಸ್ ತಿಮ್ಮಯ್ಯ ಈ ಸಿನಿಮಾವನ್ನು ರೂಪಿಸಿದ್ದಾರೆ. ಶ್ವಾನವನ್ನೇ ಒಂದು ಪಾತ್ರವಾಗಿ ಚಿತ್ರದುದ್ದಕ್ಕೂ ಕಾಣಿಸೋದು ಅದೆಷ್ಟು ಕಷ್ಟದ ಸಂಗತಿ ಅನ್ನೋದು ಯಾರಿಗಾದರೂ ಅರ್ಥವಾಗುತ್ತದೆ. ಆದರೆ ಅದೆಲ್ಲವನ್ನೂ ಚಿತ್ರತಂಡ ಇಷ್ಟಪಟ್ಟು ಎದುರಿಸಿದೆ. ನಿರ್ಮಾಪಕ ರಘು ಹಾಸನ್ ಅವರ ಸಂಪೂರ್ಣ ಸಹಕಾರದೊಂದಿಗೆ ಕನ್ನಡ ಚಿತ್ರರಂಗದ ಇಹಿಹಾಸದಲ್ಲಿ ಚಿರಸ್ಥಾಯಿಗಾಗಬಲ್ಲಂಥಾ ಚೆಂದದ ದೃಷ್ಯಕಾವ್ಯವನ್ನು ರೂಪಿಸಿದೆ. ಅದರ ಅಸಲೀ ಸ್ವಾದ ಪ್ರೇಕ್ಷಕರ ಆವಗಾಹನೆಗೆ ಸಿಗಲು ಇನ್ನೆರಡು ದಿನ ಮಾತ್ರ ಬಾಕಿ ಉಳಿದಿದೆ.

[adning id="4492"]

LEAVE A REPLY

Please enter your comment!
Please enter your name here