ಬರಡು ಬದುಕಿಗೆ ಅದೆಲ್ಲಿಂದ ಹರಿದು ಬಂದೆಯೇ ಅಘನಾಶಿನಿ? ನದಿಯೂರಿನ ಹುಡುಗಿ,

[adning id="4492"]

ನದಿಯೂರಿನ ಹುಡುಗಿ,
ಕಾಡು ಹಾದಿಯಲ್ಲಿ ದಿಕ್ಕೆಟ್ಟು ಬಾಯಾರಿ ಅಂಡಲೆಯುವವನ ಮುಂದೆ ಇದ್ದಕ್ಕಿದ್ದ ಹಾಗೆ ಸಾಕ್ಷಾತ್ತು ನದಿಯೇ ಪ್ರತ್ಯಕ್ಷವಾಗಿ ಬಿಟ್ಟರೆ ಆದೀತಲ್ಲ ಮಧುರಾನಂದ? ಅಕ್ಷರಶಃ ಅದೇ ರೀತಿಯ ಅಚ್ಚರಿಯಂತೆ  ನನ್ನೆದುರು ಹಾದು ಹೋದವಳು ನೀನು. ಆ ಕ್ಷಣದಿಂದಲೇ ಎದೆನೆಲದಲ್ಲಿ ಎಲೆಯುದುರಿಸಿ ಬೋಳು ಬೋಳಾಗಿ ನಿಂತಿದ್ದ ಕನಸಿನ ವೃಕ್ಷಕ್ಕೆ ಹೊಸಾ ಚಿಗುರು ಮೂಡಿದಂತಾಗಿದೆ. ಚಿಂತೆಯ ಕಟಾಂಜನದಂತಾಗಿದ್ದ ಮನಸೊಳಗೆ ಉಲ್ಲಾಸದ ಹಕ್ಕಿ ರೆಕ್ಕೆ ಪಟ ಪಟಿಸಿದ ಸದ್ದು. ಅಕ್ಷರಶಃ ಮಸಣವಾಗಿದ್ದ ಎದೆಯಲ್ಲಿ ನಾನೇ ಪೇರಿಸಿಟ್ಟ ಚಿತೆಗೆ ಬೆಂಕಿ ತಗುಲಿ ಹತಾಶೆ, ನೋವು, ವಿಷಾದಗಳ ಕಳೇಬರ ಸುಟ್ಟು ವಿಲೇವಾರಿಯಾದ ಕುರುಹು. ಮನಸೆಂಬೋ ಮನಸ್ಸು ಯಾರೋ ಪುಣ್ಯಾತ್ಮರು ಕಸಬರಿಕೆ ಹಿಡಿದು ಶ್ರದ್ಧೆಯಿಂದ ಗುಡಿಸಿ, ಸಾರಿಸಿದಂತೆ ಶುಭ್ರ ಶುಭ್ರ!


ಇತ್ತಿತ್ತಲಾಗಿ ಕೆಲ ವರ್ಷಗಳಿಂದ ಹೊಸತು ಹಳತರ ನಡುವಿನ ಗೆರೆ ನನ್ನ ಬದುಕಿನ ಭೂಮಿಕೆಯಲ್ಲಿ ಅರ್ಥ ಕಳೆದುಕೊಂಡಿತ್ತು. ಯಾರೋ ಹಗ್ಗ ಕಟ್ಟಿ ಎಳೆದಂತೆ ನಿತ್ರಾಣನಾಗಿ ಒಂದಿಡೀ ವರ್ಷದ ಅಂಚಿಗೆ ಬಂದು ನಿಂತರೆ ಪ್ಯಾದೆ ನಗೆಯ ಹೊರತಾಗಿ ಬೇರ‍್ಯಾವ ಭಾವವೂ ಹೊಮ್ಮುತ್ತಿರಲಿಲ್ಲ. ಹಳೇ ವರ್ಷದ ನಡು ರಾತ್ರಿ ಹನ್ನೆರಡರ ಹೊತ್ತಿಗೆ ಇಡೀ ಜಗತ್ತು ಸನ್ನಿ ಹಿಡಿದಂತೆ ಕುಣಿದಾಡುವಾಗ, ಸಿಡಿಮದ್ದಿನ ಶಬ್ಧ, ಕಣ್ಣು ಕೋರೈಸುವ ಬೆಳಕಿಂದ ತಲೆ ತಪ್ಪಿಸಿಕೊಂಡು ಕತ್ತಲಲ್ಲಿ ಕೂತು ಅತ್ತು ಬಿಡಬೇಕೆನ್ನಿಸುತ್ತಿತ್ತು. ಎದೆಯ ತುಂಬಾ ಹೊಸಾ ವರ್ಷ ಬಂತೆಂಬುದಕ್ಕಿಂತಲೂ ಹಳೇ ವರ್ಷ ತೊಲಗಿತ್ತಲ್ಲಾ ಎಂಬ ಸಂತಸವೇ ಕೇಕೆ ಹಾಕುತ್ತಿತ್ತು. ಜಗತ್ತೆಲ್ಲ ಕುಣಿದು, ದಣಿದು ಗಡದ್ದಾಗಿ ಮಲಗಿ ಗೊರಕೆ ಹೊಡೆಯುವಾಗ ನಾನೊಬ್ಬನೇ ಎದ್ದು ದೈನೇಸಿಯಂತೆ ಸರಿದು ಹೋದ ಕಾಲದ ಜರಡಿಗೆ ಕೈ ಹಾಕಿದರೆ ಅದ್ಯಾವುದೋ ನೋವು, ಹತಾಶೆ, ವಿಷಾದಗಳೇ ಬೆರಳು ಸೋಕುತ್ತಿದ್ದವು. ಈ ಬದುಕು ಕಳೆದ ವರ್ಷದ ಯಥಾವತ್ತು ಜೆರಾಕ್ಸ್ ಕಾಪಿ ಅಂತಲೇ ಅನ್ನಿಸುತ್ತಿತ್ತು.
ಆದರೆ ಈ ಬಾರಿ ತುಂಬಾ ಕಾಲದ ಬಳಿಕ ನಾನಿನ್ನೂ ಬದುಕಿದ್ದೇನೆಂಬ ಜ್ಞಾನೋದಯವಾದಂತಿದೆ. ನನ್ನ ಪಾಲಿಗೀಗ ಪ್ರತಿ ದಿನವೂ ಹೊಸಾ ವರ್ಷ. ಪ್ರತಿ ಮುಂಜಾನೆ ಕಣ್ಣು ಪಿಳುಕಿಸುವ ಸೂರ್ಯನೂ ನನ್ನ ಪಾಲಿಗೀಗ ಹೊಸಬ. ವರ್ಷಾಂತರಗಳ ಕಾಲ ಅವುಡುಗಚ್ಚಿ ಪಳಗಿಸಿಕೊಂಡ ಹಳೇ ಕೆಲಸಕ್ಕೂ ನಾನೀಗೆ ಹೊಸಾ ಹುಡುಗ. ನೆತ್ತಿಯಿಂದ ಉಂಗುಷ್ಠದವರೆಗೆ ಆವರಿಸಿಕೊಂಡಿದ್ದ ಅಕಾಲ ವೈರಾಗ್ಯ ತೊಲಗಿ ಹೋಗಿ ಮನದ ತುಂಬಾ ಸಕಾಲ ಸುಗ್ಗಿ. ಒಟ್ಟಾರೆಯಾಗಿ ಈಗ ನನಗೆ ನಾನೇ ಹೊಸಬ. ಜಡ ಹಿಡಿದ ಬದುಕಲ್ಲಿ ಈ ಪಾಟಿ ಪವಾಡ ಸಂಭವಿಸಲು ಕಾರಣ ನೀನು ಮತ್ತು ನೀನೊಬ್ಬಳೇ!


ಪದೇ ಪದೆ ಚಾವಟಿಗೆ ಬೀಸಿ ಎದ್ದು ನಿಲ್ಲಲೂ ಶಕ್ತಿಯಿಲ್ಲದಂತೆ ಬಡಿದು ಬಿಸಾಡುವ ಬದುಕು ಕೆಲಮೊಮ್ಮೆ ಯಾಮಾರಿ ಕನಿಕರಿಸೋದಿದೆ. ಹಾಗೆಯೇ ಬದುಕು ನನ್ನಡೆಗೆ ತೋರಿದ ಜೀವಂತ ಕನಿಕರ ನೀನು. ನಿನ್ನದೊಂದು ಮುಗುಳ್ನಗು, ಕಣ್ಣೋಟ, ಅದ್ಯಾವುದೋ ದೂರ ತೀರದಿಂದ ಬೀಸಿ ಬಂದ ಮಂದ್ರ ಮಾರುತದಂಥಾ ಇನಿದನಿಗಳೇ ನನ್ನನ್ನು ಈ ರೀತಿ ಬದಲಾಯಿಸಿದೆ ಎಂದಾದ ಮೇಲೆ ಬದುಕು ಪೂರ್ತಿ ನೀ ಜೊತೆಗಿದ್ದರೆ ಮತ್ಯಾವ ಸ್ವರ್ಗವೂ ಬೇಕಿಲ್ಲ.


ಆದರೂ ದುರಾದೃಷ್ಟಕ್ಕೆ ನನ್ನ ಮೇಲಿರುವ ಪ್ರೀತಿ ಬತ್ತಿದಂತಿಲ್ಲ. ಆದುದರಿಂದಲೇ ಒಂದಷ್ಟು ಕಾಲ ನೀ ಕಣ್ಣೆದುರೇ ಸುಳಿದಾಡುತ್ತಿದ್ದರೂ ಮಾತು ಮಥಿಸುವ ಸುಂಸಂದರ್ಭ ಕೂಡಿ ಬರಲೇ ಇಲ್ಲ. ಆಡಲೇ ಬೇಕಿರುವ ಮಾತುಗಳೆಲ್ಲವೂ ಎದೆಯೊಳಗೆ ಸಿಕ್ಕು ಸದಾ ನರಳುತ್ತಿವೆ. ಆದರೆ ಎಂದಾದರೊಂದು ದಿನ ಆ ಮಾತುಗಳನ್ನೆಲ್ಲ ನಿನ್ನ ಪುಟ್ಟ ಬೊಗಸೆಗೆ ಹಾಕಿ ಶರಣಾಗಿ ಬಿಡುತ್ತೇನೆ. ಎಂದೋ ಘಟಿಸಬಹುದಾಹ ಆ ದಿವ್ಯ ಘಳಿಗೆಯೇ ಶಾಶ್ವತ ಸಂಭ್ರಮವಾಗಿ ನನ್ನದೆಯಲ್ಲಿ ನೆಲೆ ನಿಂತಿದೆ. ಅದುವೇ ಪ್ರತೀ ಕ್ಷಣ ನನ್ನನ್ನು ಜೀವಂತವಾಗಿರಿಸಿದೆ. ಆ ಘಳಿಗೆಗಾಗಿಯೇ ಜೀವವುಳಿಸಿಕೊಂಡವನಂತೆ ಉಸಿರಾಡುತ್ತಿದ್ದೇನೆ.


ಜೀವವೇ… ಈ ಬದುಕು ಭರವಸೆಗಳನ್ನೇ ಕಿತ್ತುಕೊಂಡಾಗ, ನಂಬಿಕೆಯೇ ಚೂರಿಯಾಗಿ ಎದೆಗಿರಿದಾಗ, ಈ ಜಗತ್ತಿನಲ್ಲಿ ನನ್ನ ಸಂಕಟಕ್ಕೆ ಯಾರೂ ಇಲ್ಲ ಅನ್ನಿಸಿ ಉಸಿರುಗಟ್ಟಿದಂತಾದಾಗ, ಸೈರಣೆ ಮೀರಿ ದುಃಖ ಒತ್ತರಿಸಿ ಬಂದಾಗ ನಿನ್ನನ್ನು ಹುಡುಕಿ ಬಂದು ನಿನ್ನ ಪುಟ್ಟ ಮಡಿಲಲ್ಲಿ ಭೋರಿಟ್ಟು ಅತ್ತು ಬಿಡಬೇಕನಿಸುತ್ತದೆ. ಆದರೆ ಅಂಥಾ ಕ್ಷಣಗಳಲ್ಲೆಲ್ಲ ನಿನ್ನ ನೆನಪಿನ ಪತಂಗ ಎದೆಯ ಮಿದುವಲ್ಲಿ ಬಂದು ಕೂತು ಆಹ್ಲಾದ ಹುಟ್ಟಿಸುತ್ತದೆ. ಅದರ ಪರಾಗ, ರೆಕ್ಕೆಯ ಮೇಲಿನ ಬಣ್ಣದ ಹುಡಿ ಮನಸಿಗೆ ಮೆತ್ತಿಕೊಂಡು ಹಾಯೆನಿಸುತ್ತದೆ.


ನೀನೊಬ್ಬಳು ಹಾಗೆ ಅಚಾನಕಾಗಿ ಬರದೇ ಹೋಗಿದ್ದಿದ್ದರೆ ಈ ಬದುಕಿಗೊಂದು ಅರ್ಥವೇ ಇರುತ್ತಿರಲಿಲ್ಲ. ಅದೇನೇ ಸಾಹಸ ಮಾಡಿ ಹೆಜ್ಜೆ ಮುಂದಿಟ್ಟರೂ ಯಾತಕ್ಕಾಗಿ ಬದುಕಿರಬೇಕೆಂಬ ಪ್ರಶ್ನೆಯೇ ಕಗ್ಗಂಟಾಗಿ ಎದುರು ನಿಲ್ಲುತ್ತಿತ್ತು. ಆದರೆ ನಿನ್ನದೊಂದು ಮುಗುಳು ನಗುವೀಗ ಅದೆಲ್ಲವನ್ನೂ ಅದಲು ಬದಲಾಗಿಸಿದೆ.


ಹೆಚ್ಚೇನೂ ಅಲ್ಲ,  ವರ್ಷಗಳ ಹಿಂದೆ ಈ ಬದುಕು ಅಪ್ಪಟ ಬರಡು ನೆಲ. ಅಂಥಾ ನಿಸ್ತೇಜ ಘಳಿಗೆಯಲ್ಲಿ ಅದೆಲ್ಲಿಂದ ಹರಿದು ಬಂದೆಯೋ ನೀನು ಅಘನಾಶಿನಿ? ಯಾತನೆಗಳ ಇರುಕಲಿನಲ್ಲಿ ಮಲೆತು ನಿಂತಿದ್ದ ಜೀವನಕ್ಕೆ ಹರಿಯುವ ಮನಸಾಯಿತು. ಹರಿಯಲು ಕಸುವು ಸಿಕ್ಕಿತ್ತು. ಹಾಗೆ ಹರಿಯುತ್ತಾ ಎಂದಾದರೊಮ್ಮೆ ನಿನ್ನ ಪುಟ್ಟ ಪಾದಗಳ ಬಳಿ ಬರುತ್ತೇನೆ. ಆ ವರೆಗೆ ಕಾಯುತ್ತೀಯೆಂಬ ನಂಬುಗೆಯನ್ನೇ ಎದೆ ತುಂಬಿಸಿಕೊಂಡು ಬದುಕುತ್ತೇನೆ. ನಾ ಬರುವ ಹೊತ್ತಿಗೆ ನೀನು ಮತ್ತೆಲ್ಲಿಗೋ ಹರಿದು ಹೋದೆಯಾದರೆ ನನ್ನ ಬದುಕಿನ ನದಿ ನಿನ್ನ ಪಾದದ ಕುರುಹಿನ ಮೇಲೆಯೇ ಹರಿವು ನಿಲ್ಲಿಸುತ್ತದೆ.
ಚೂರೇ ಚೂರು ಸೈರಣೆಯಿಂದ ಕಾಯೇ ಹುಡುಗಿ… ನಾ ಬೇಗನೆ ನಿನ್ನಲ್ಲಿಗೆ ಬರುತ್ತೇನೆ. ಬದುಕಿಡೀ ಒಂದಾಗಿ ಝರಿಯಾಗಿ ಹರಿಯೋಣ!
      – ನಿನ್ನವನು…

[adning id="4492"]

LEAVE A REPLY

Please enter your comment!
Please enter your name here