ನಾನು ಮತ್ತು ಗುಂಡ: ಎದೆಯ ಮಿದುವಿಗೆ ಮುತ್ತಿಕ್ಕೋ ಕಥೆಗೆ ಕ್ಷಣಗಣನೆ!

[adning id="4492"]

ಕಾಮಿಡಿ ಕಿಲಾಡಿಗಳು ಶೋ ವಿನ್ನರ್ ಶಿವರಾಜ್ ಕೆ ಆರ್ ಪೇಟೆ ಪ್ರಧಾನ ಪಾತ್ರ ನಿರ್ವಹಿಸಿರೋ ಚಿತ್ರ ನಾನು ಮತ್ತು ಗುಂಡ. ಶ್ರೀನಿವಾಸ್ ತಿಮ್ಮಯ್ಯ ನಿರ್ದೇಶನ ಮಾಡಿರೋ ಈ ಸಿನಿಮಾ ಮೆಲುದನಿಯಿಂದಲೇ ಆರಂಭದಿಂದ ಈವರೆಗೂ ಸೃಷ್ಟಿಸುತ್ತಾ ಬಂದ ಸಂಚಲನವೇ ಪುಷ್ಕಳ ಗೆಲುವೊಂದರ ಮೈಲಿಗಲ್ಲಿನಂತೆ ಭಾಸವಾಗುತ್ತಿದೆ. ಜನಪ್ರಿಯ ಜಾಡಿನಾಚೆಗಿನ ಕಥೆ, ನಿರೂಪಣೆಯ ಸುಳಿವಿನೊಂದಿಗೆ ಸಮಸ್ತ ಪ್ರೇಕ್ಷಕರನ್ನೂ ಸೆಳೆದುಕೊಂಡಿರೋ ಈ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈ ಮೂಲಕ ಒಂದಷ್ಟು ಕಾಲದಿಂದ ಪ್ರೇಕ್ಷಕರನ್ನು ಕಾಡುತ್ತಾ ಬಂದಿರುವ ಸಮ್ಮೋಹಕ ಸೆಳೆತ ಅವರ ಮುಂದೆ ಅವತರಿಸಲು ಕ್ಷಣಗಣನೆಯೂ ಆರಂಭವಾಗಿದೆ.


ರಘು ಹಾಸನ್ ನಿರ್ಮಾಣ ಮಾಡಿರೋ ಈ ಚಿತ್ರದ ಕಥೆಯೇ ಶುರುವಾತಿನಿಂದ ಜನರನ್ನೆಲ್ಲ ಸೂಜಿಗಲ್ಲಿನಂತೆ ಸೆಳೆಯುತ್ತಿದೆ. ಮನುಷ್ಯ ಮನುಷ್ಯರ ನಡುವಿನ ನಂಬಿಕೆಗಳೇ ಸಾಯುತ್ತಿರುವ ಈ ದಿನಮಾನದಲ್ಲಿ, ಆಸುಪಾಸಿನವರನ್ನು ಯಾವ್ಯಾವ ಆಂಗಲ್ಲುಗಳಿಂದ ಹಿಂಡಿಕೊಳ್ಳಲು ಸಾಧ್ಯವೋ ಹಾಗೆಲ್ಲ ಹಿಂಡಿಕೊಂಡು ತಿಪ್ಪೆಗೆಸೆಯೋ ಜಾಯಮಾನದವರೇ ತುಂಬಿಕೊಂಡಿರೋ ಈ ದುನಿಯಾದಲ್ಲಿ ಮೂಕ ಮನಸಿನ ಪ್ರಾಣಿಗಳ ಪ್ರಾಂಜಲ ಪ್ರೇಮವೇ ಬಹುತೇಕರಿಗೆ ಅಪ್ಯಾಯಮಾನವೆನ್ನಿಸುತ್ತೆ. ಯಾರೇ ದೋಖಾಬಾಜಿ, ದಗಲ್ಬಾಜಿಗಳನ್ನು ಮಾಡಿದರೂ ಮೂಕ ಮನಸುಗಳಿಗೆ ಮಾತ್ರ ಪ್ರೀತಿಯ ಹೊರತಾಗಿ ಬೇರ‍್ಯಾವುದರ ಪರಿವೆಯೂ ಇರುವುದಿಲ್ಲ.


ನಾನು ಮತ್ತು ಗುಂಡ ಚಿತ್ರವೂ ಇಂಥಾ ನವಿರು ಭಾವಗಳ ಅಪರೂಪದ ಕಥೆಯನ್ನೊಳಗೊಂಡಿದೆ. ಈ ಹಿಂದೆ ಟೀಸರ್ ಮತ್ತು ಪೋಸ್ಟರ್ ಮೂಲಕವೇ ಪ್ರೇಕ್ಷಕರನ್ನೆಲ್ಲ ಮ,ಎಲುವಾಗಿ ತಾಕಿದ್ದ ಈ ಸಿನಿಮಾದ ಟ್ರೇಲರ್ ಅಂತೂ ಅತ್ಯಂತ ಪರಿಣಾಮಕಾರಿಯಾಗಿ ಮೂಡಿ ಬಂದಿದೆ. ತೀರಾ ಕಡಿಮೆ ಅವಧಿಯಲ್ಲಿಯೇ ಇದಕ್ಕೆ ಸಿಗುತ್ತಿರುವ ವೀಕ್ಷಣೆ ಮತ್ತು ಪ್ರತಿಕ್ರಿಯೆಗಳೇ ಮಹಾ ಗೆಲುವನ್ನು ನಿಚ್ಚಳವಾಗಿಸಿದಂತಿದೆ. ಈ ವರ್ಷಾರಂಭವನ್ನು ವಿಶಿಷ್ಟ ಕಥೆಯೊಂದಿಗೆ, ಮೈಲಿಗಲ್ಲಿನಂಥಾ ಗೆಲುವಿನೊಂದಿಗೆ ಸಂಪನ್ನಗೊಳಿಸುವ ಕಥಾನಕವನ್ನು ಹೊಂದಿರೋ ಈ ಚಿತ್ರದತ್ತ ಪ್ರೇಕ್ಷಕರೆಲ್ಲ ಮೋಹಗೊಂಡಿದ್ದಾರೆ. ಎದೆಯ ಮಿದುವಿಗೆ ಮುತ್ತಿಕ್ಕುವಂಥಾ ಮಧುರ ಕಥೆಗೆ ಕಣ್ಣಾಗುವ ಕ್ಷಣಗಳು ಹತ್ತಿರಾಗಲಾರಂಭಿಸಿವೆ.

[adning id="4492"]

LEAVE A REPLY

Please enter your comment!
Please enter your name here