ಜೋಗಿ ಪ್ರೇಮ್ ಸಾರಥ್ಯದಲ್ಲಿ ಒಂದೊಳ್ಳೆ ಕೆಲಸ!

ಜೋಗಿ ಪ್ರೇಮ್ ದಿ ವಿಲ್ ಚಿತ್ರದ ನಂತರ ನಿರ್ದೇಶನ ಮಾಡುತ್ತಿರುವ ಚಿತ್ರ ಏಕ್ ಲವ್ ಯಾ. ಈ ಬಾರಿ ಎಲ್ಲ ರೀತಿಯಲ್ಲಿಯೂ ವಿಭಿನ್ನವಾಗಿಯೇ ಮುಂದಡಿಯಿಡುತ್ತಿರೋ ಪ್ರೇಮ್ ಸದರಿ ಸಿನಿಮಾ ಮೂಲಕ ಮತ್ತೆ ಹಳೇ ಹಂಗಾಮಾವನ್ನು ಚಾಲ್ತಿಗೆ ತರುವ ಪಣ ತೊಟ್ಟು ಮುಂದುವರೆಯುತ್ತಿರುವಂತಿದೆ. ತಮ್ಮ ಪಾಡಿಗೆ ತಾವು ಚಿತ್ರೀಕರಣ ಮುಂದುವರೆಸುತ್ತಿರುವ ಚಿತ್ರತಂಡ ಆಗಾಗ ಒಂದಷ್ಟು ಕ್ರಿಯಾಶೀಲ ಕೆಲಸ ಕಾರ್ಯಗಳಿಂದಷ್ಟೇ ಸುದ್ದಿ ಮಾಡುತ್ತಿವೆ. ಪ್ರಚಾರದ ವರಸೆಯಲ್ಲಿಯೂ ಈ ಬಾರಿ ಅಚ್ಚರಿದಾಯಕ ಬದಲಾವಣೆ ಮಾಡಿಕೊಂಡಿರೋ ಪ್ರೇಮ್ ಇದೀಗ ಚಿತ್ರೀಕರಣದ ಸಂದರ್ಭದಲ್ಲಿಯೇ ಪರಿಸರ ಕಾಳಜಿ ತೋರಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.


ಇದೀಗ ಏಕ್ ಲವ್ ಯಾ ಚಿತ್ರದ ಚಿತ್ರೀಕರಣ ಊಟಿಯಲ್ಲಿ ನಡೆಯುತ್ತಿದೆ. ಕೊರೆಯುವ ಚಳಿಯಲ್ಲಿಯೂ ಚಿತ್ರತಂಡ ಅತ್ಯುತ್ಸಾಹದಿಂದಲೇ ಕಾರ್ಯ ನಿರ್ವಹಿಸುತ್ತಿದೆ. ಇಲ್ಲಿ ನೀರಿನಿಂದ ಸಮೃದ್ಧವಾಗಿರೋ ಪ್ರದೇಶವೊಂದರಲ್ಲಿ ಇದರ ಚಿತ್ರೀಕರಣ ನಡೆಯುತ್ತಿತ್ತು. ಚಿತ್ರೀಕರಣ ಮುಗಿಸಿ ಹಿಂತಿರುಗುವಾಗ ಆ ವಾತಾವರಣದ ತುಂಬೆಲ್ಲ ಪ್ಲಾಸ್ಟಿಕ್ ತ್ಯಾಜ್ಯಗಳು ಪಿತಗುಡುತ್ತಿರೋದು ಚಿತ್ರತಂಡದ ಗಮನಕ್ಕೆ ಬಂದಿದೆ. ಇದನ್ನು ಮನಗಂಡ ಪ್ರೇಮ್ ಅದೆಲ್ಲವನ್ನೂ ಆರಿಸಿ ಸ್ವಚ್ಛಗೊಳಿಸೋ ನಿರ್ಧಾರಕ್ಕೆ ಬಂದಿದ್ದಾರೆ. ಇಡೀ ತಂಡವೇ ಇದಕ್ಕೆ ಸಾಥ್ ಕೊಟ್ಟು ಆ ವಾತಾವರಣವನ್ನು ಸ್ವಚ್ಛ ಮಾಡಲಾಗಿದೆ.


ಇದರದ್ದೊಂದು ವಿಡಿಯೋವನ್ನು ಪ್ರೇಮ್ ಜಾಹೀರು ಮಾಡಿದ್ದಾರೆ. ಸಾಮಾನ್ಯವಾಗಿ ಚಿತ್ರತಂಡಗಳ ಮೇಲೆ ಪ್ರಕೃತಿಯ ಮಡಿಲಲ್ಲಿ ಚಿತ್ರೀಕರಣ ಮಾಡಿಕೊಂಡ ನಂತರ ಸುತ್ತಲ ವಾತಾವರಣ ಹಾಳುಗೆಡವಿದ ಆರೋಪಗಳು ಕೇಳಿ ಬರುತ್ತವೆ. ಆದರೆ ಏಕ್ ಲವ್ ಯಾ ಚಿತ್ರತಂಡ ಮಾತ್ರ ತಾನು ಚಿತ್ರೀಕರಣ ನಡೆಸಿದ ಸ್ಥಳದಲ್ಲಿ ಯಾರೋ ಎಸೆದು ಹೋಗಿದ್ದ ತ್ಯಾಜ್ಯಗಳನ್ನು ವಿಲೇವಾರಿ ಮಾಡಿ ಪರಿಸರ ಪ್ರೇಮ ಪ್ರದರ್ಶಿಸಿದೆ. ಜೊತೆಗೆ ಹೀಗೆ ಪ್ರಕೃತಿಯನ್ನು ಕಲುಷಿತಗೊಳಿಸದೆ ಎಲ್ಲರೂ ಪರಿಸರ ಪ್ರೇಮ ರೂಢಿಸಿಕೊಳ್ಳುವಂತೆಯೂ ಕರೆ ನೀಡಿದೆ. ಪ್ರೇಮ್ ಸಾರಥ್ಯದಲ್ಲಿ ನಡೆದಿರುವ ಈ ಒಂದೊಳ್ಳೆ ಕೆಲಸ ನಿಜಕ್ಕೂ ಮೆಚ್ಚಿಕೊಳ್ಳುವಂಥಾದ್ದು.

LEAVE A REPLY

Please enter your comment!
Please enter your name here