ಜಂಟಲ್ ಮನ್‌ಗೆ ಬೇಸ್ ವಾಯ್ಸ್ ಹಾಡಿನ ಬಲ!

[adning id="4492"]

ಕತ್ತಿ ಮಸೆಯುತಾರೆ ಇಲ್ಲಿ ಅನುಮಾನವೇಕೆ? ಸುರಿದು ಹೋದ ರಕ್ತಕಿಲ್ಲಿ ಅಳತೆ ಬೇಕೆ?
ಪ್ರಜ್ವಲ್ ದೇವರಾಜ್ ಅಭಿನಯದ ಜಂಟಲ್ ಮನ್ ಚಿತ್ರದ ಲಿರಿಕಲ್ ವೀಡಿಯೋ ಸಾಂಗ್ ಬಿಡುಗಡೆಯಾಗಿದೆ. ಗುರು ದೇಶಪಾಂಡೆ ಜಿ ಸಿನಿಮಾಸ್ ಬ್ಯಾನರಿನಡಿಯಲ್ಲಿ ನಿರ್ಮಾಣ ಮಾಡಿರುವ ಈ ಚಿತ್ರ ತನ್ನ ವಿಶೇಷವಾದ ಕಥೆಯ ಜಾಡು ಬಿಟ್ಟು ಕೊಡುತ್ತಲೇ ಈ ವರೆಗೂ ಕುತೂಹಲ ಕಾಯ್ದಿಟ್ಟುಕೊಂಡಿತ್ತು. ಅದನ್ನು ಗಾಢವಾದ ನಿರೀಕ್ಷೆಯಾಗಿ ಬದಲಾಗುವಂತೆ ಮಾಡುವ ರೀತಿಯಲ್ಲಿ ಈ ಹಾಡು ಮೂಡಿ ಬಂದಿದೆ. ಗುರು ದೇಶಪಾಂಡೆ ತಾವು ನಿರ್ದೇಶನ ಮಾಡುವ ಸಿನಿಮಾಗಳಲ್ಲಿಯೂ ಹಾಡುಗಳಿಗೆ ತುಸು ಹೆಚ್ಚೇ ಪ್ರಾಶಸ್ತ್ಯ ಕೊಡುತ್ತಾರೆ. ಅವರು ನಿರ್ಮಾಣ ಮಾಡಿರುವ ಜಂಟಲ್ ಮನ್ ಚಿತ್ರದ ಮೂಲಕವೂ ಆ ರೂಢಿ ಅನೂಚಾನವಾಗಿ ಮುಂದುವರೆದಿದೆ.
ಈ ಲಿರಿಕಲ್ ವಿಡಿಯೋ ಹಾಡಿನ ಮೂಲಕ ಜಂಟಲ್ ಮನ್‌ಗೆ ನಟ ವಸಿಷ್ಟ ಸಿಂಹರ ಬೇಸ್ ವಾಯ್ಸ್ ಬಲ ಬಂದಂತಾಗಿದೆ. ಇದರೊಂದಿಗೆ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಮತ್ತು ವಸಿಷ್ಟ ಜೋಡಿಯ ಹಾಡಿನ ಹಂಗಾಮಾ ಮತ್ತೊಮ್ಮೆ ಬಲವಾಗಿಯೇ ಮೇಳೈಸಿದೆ. ‘ನಡುಗುತಿದೆ ಎದೆಗೂಡು ಸುಡುಗಾಡು ಬರಿ ಮೌನ. ತೆವಳುತಿದೆ ವಾತ್ಸಲ್ಯ ಬರಿ ಮೋಸ ದ್ವೇಷ ಇದೇ ಜಮಾನ’ ಎಂಬಂಥಾ ಸಾಲುಗಳಿರುವ ಈ ಹಾಡು ವಸಿಷ್ಟ ಸಿಂಹ ಧ್ವನಿಯಲ್ಲಿ ರಗಡ್ ಆಗಿಯೇ ಕಳೆಗಟ್ಟಿಕೊಂಡಿದೆ. ಧನಂಜಯ್ ಬರೆದಿರುವ ಈ ಹಾಡು ಒಂದೇ ಸಲಕ್ಕೆ ಸೆಳೆಯವಂಥಾ ಸಾಲುಗಳೊಂದಿಗೆ ಅಜನೀಶ್ ಲೋಕನಾಥ್ ಸಂಗೀತದಿಂದ ಶೃಂಗರಿಸಿಕೊಂಡು ರೂಪುಗೊಂಡಿದೆ.
ಈ ಲಿರಿಕಲ್ ವಿಡಿಯೋ ಹಾಡಿನ ಮೂಲಕವೇ ಜಂಟಲ್ ಮನ್ ಅವತಾರದ ಪ್ರಜ್ವಲ್ ದೇವರಾಜ್ ಪಾತ್ರದ ಹಲವು ಝಲಕ್ಕುಗಳನ್ನು ಹೊಳೆಯಿಸುವ ಪ್ರಯತ್ನವನ್ನೂ ಇಲ್ಲಿ ಮಾಡಲಾಗಿದೆ. ಪ್ರಜ್ವಲ್ ದೇವರಾಜ್ ಥರ ಥರದ ಚಹರೆಗಳಲ್ಲಿ ಕಾಣಿಸಿಕೊಳ್ಳುವುದರೊಂದಿಗೆ, ಥ್ರಿಲ್ಲರ್ ಕಥೆಯ ಸುಳಿವೂ ಕೂಡಾ ಈ ಹಾಡಿನ ಮೂಲಕವೇ ಜಾಹೀರಾಗಿದೆ. ಒಟ್ಟಾರೆಯಾಗಿ ಈ ಹಾಡನ್ನು ಇಡೀ ಕಥೆಯ ಸಾರವನ್ನು ಬಿಂಬಿಸುವಂತೆ, ಎಲ್ಲರಿಗೂ ಒಂದೇ ಸಲಕ್ಕೆ ಕನೆಕ್ಟಾಗುವಂತೆ ರೂಪಿಸಲಾಗಿದೆ. ವಿವರಿಸಲಾಗದಂಥಾ ಫೋರ್ಸ್‌ನೊಂದಿಗೆ ಮೂಡಿ ಬಂದಿರೋ ಈ ಹಾಡು ಮತ್ತಷ್ಟು ಪ್ರೇಕ್ಷಕರು ಜಂಟಲ್ ಮನ್‌ನತ್ತ ಆಕರ್ಷಿತರಾಗುವಂತೆ ಮಾಡುವಲ್ಲಿಯೂ ಸಫಲವಾದಂತಿದೆ.
ವಿಜಯಲಕ್ಷ್ಮಿ ಮುರುಗೇಶ್ ನಾಯ್ಡು ಅವರ ಆಶೀರ್ವಾದದೊಂದಿಗೆ, ಬಿ.ಟಿ ಮಂಜುನಾಥ್ ಅರ್ಪಿಸುವ ಈ ಚಿತ್ರವನ್ನು ಗುರು ದೇಶಪಾಂಡೆ ಜಿ ಸಿನಿಮಾಸ್ ಬ್ಯಾನರಿನಡಿಯಲ್ಲಿ ನಿರ್ಮಾಣ ಮಾಡಿದ್ದಾರೆ. ಒಂದಷ್ಟು ವರ್ಷಗಳಿಂದ ಗುರು ದೇಶಪಾಂಡೆ ಜೊತೆ ನಿರ್ದೇಶನ ವಿಭಾಗದಲ್ಲಿ ಕಾರ್ಯ ನಿರ್ವಹಿಸಿದ್ದ ಜಡೇಶ್ ಕುಮಾರ್ ಹಂಪಿ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಸ್ಲೀಪಿಂಗ್ ಬ್ಯೂಟಿ ಸಿಂಡ್ರೋಮ್ ಎಂಬ ಅತ್ಯಂತ ಅಪರೂಪದ ಕಾಯಿಲೆ ಬಾಧಿತ ಯುವಕನಾಗಿ ಪ್ರಜ್ವಲ್ ದೇವರಾಜ್ ನಟಿಸಿದ್ದಾರೆ. ಸಸ್ಪೆನ್ಸ್, ಥ್ರಿಲ್ಲರ್ ಶೈಲಿಯ ಕಥೆಯನ್ನೊಳಗೊಂಡಿರೋ ಈ ಚಿತ್ರವೀಗ ಬಿಡುಗಡೆಯ ಸನ್ನಾಹದಲ್ಲಿದೆ.

[adning id="4492"]

LEAVE A REPLY

Please enter your comment!
Please enter your name here