ಇದು ಪ್ರೇಕ್ಷಕರಿಗೆ ಸಿಗಲಿರೋ ಅಪರೂಪದ ಸುವರ್ಣಾವಕಾಶ!

[adning id="4492"]

ಸಿಂಪಲ್ ಸುನಿ ನಿರ್ದೇಶನದಲ್ಲಿ ಬಂದಿದ್ದ ಆಪರೇಷನ್ ಅಲಮೇಲಮ್ಮ ಚಿತ್ರದ ಮೂಲಕವೇ ನಾಯಕನಾಗಿ ಪಾದಾರ್ಪಣೆ ಮಾಡಿದ್ದವರು ರಿಷಿ. ಆ ನಂತರದಲ್ಲಿಯೂ ಒಂದಷ್ಟು ಸಿನಿಮಾಗಳು, ನಾನಾ ಚಹರೆಯ ಪಾತ್ರಗಳ ಮೂಲಕವೇ ಪ್ರತಿಭಾವಂತ ನಟನಾಗಿ ಗುರುತಿಸಿಕೊಂಡಿದ್ದ ರಿಷಿ ಇದೀಗ ಬಹುಬೇಡಿಕೆಯ ನಟನಾಗಿಯೂ ಹೊರಹೊಮ್ಮಿದ್ದಾರೆ. ಕವಲು ದಾರಿಯಂಥಾ ಚಿತ್ರದ ಮೂಲಕ ಗೆಲುವು ದಕ್ಕಿಸಿಕೊಂಡಿರೋ ಅವರೀಗ ಸಾರ್ವಜನಿಕರಿಗೆ ಸುವರ್ಣಾವಕಾಶ ಎಂಬ ಚಿತ್ರದಲ್ಲಿ ನಟಿಸಿದ್ದಾರೆ. ಇದು ಈ ವಾರವೇ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.


ಇದು ಅನೂಪ್ ರಾಮಸ್ವಾಮಿ ನಿರ್ದೇಶನದಲ್ಲಿ ಮೂಡಿ ಬಂದಿರುವ ಚಿತ್ರ. ದೇವರಾಜ್, ಪ್ರಶಾಂತ್ ರೆಡ್ಡಿ ಮತ್ತು ಜನಾರ್ದನ್ ಚಿಕ್ಕಣ್ಣ ಸೇರಿಕೊಂಡು ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಅಷ್ಟಕ್ಕೂ ಈ ಚಿತ್ರದಲ್ಲಿ ಸಾರ್ವಜನಿಕರಿಗೆ ಅಂಥಾ ಸುವರ್ಣಾವಕಾಶ ಏನಿದೆ ಎಂಬ ಪ್ರಶ್ನೆಯೊಂದು ಬಹು ಕಾಲದಿಂದಲೂ ಪ್ರೇಕ್ಷಕರನ್ನು ಕಾಡುತ್ತಿದೆ. ಆದರೆ ಇದುವರೆಗೂ ಕಥೆಯ ಬಗ್ಗೆ ಯಾವ ಮಾಹಿತಿಗಳನ್ನೂ ಬಿಟ್ಟು ಕೊಡದಂತೆ ಗೌಪ್ಯತೆ ಕಾಪಾಡಿಕೊಂಡು ಬರಲಾಗುತ್ತಿದೆ. ಇತ್ತೀಚೆಗೆ ಬಿಡುಗಡೆಯಾಗಿದ್ದ ಟ್ರೇಲರ್ ಸೂಪರ್ ಹಿಟ್ ಆದರೂ ಕೂಡಾ ಅದರಲ್ಲಿಯೂ ಕಥೆಯನ್ನು ಅವುಸಿಟ್ಟೇ ದೃಷ್ಯಗಳು ಚಲಿಸುವಂತೆ ಮಾಡುವಂಥಾ ಕಲಾತ್ಮಕ ಜಾಣ್ಮೆಯನ್ನೂ ಚಿತ್ರತಂಡ ಅನುಸರಿಸಿದೆ.


ಯಾವುದೇ ಒಂದು ಸಿನಿಮಾ ಬಗ್ಗೆ ಆರಂಭದಿಂದಲೂ ಪ್ರೇಕ್ಷಕರು ಕಾತರರಾಗಿರುತ್ತಾರೆ. ಅದರಲ್ಲಿ ಮಹತ್ತರವಾದುದೇನನ್ನೋ ಪ್ರತೀ ಪ್ರೇಕ್ಷಕರೂ ತಮ್ಮ ಆಸಕ್ತಿ, ಅಭಿರುಚಿಗನುಗುಣವಾಗಿ ಬಯಸುತ್ತಾರೆ. ಅಂಥಾ ಕಾತರವನ್ನು ಮನಸಲ್ಲಿಟ್ಟುಕೊಂಡು ಚಿತ್ರ ಮಂದಿರ ತಲುಪಿಕೊಂಡವರ ಮುಂದೆ ಕಲ್ಪಿಸಿಕೊಂಡಿರದ ದೃಷ್ಯಗಳು ಕದಲಲಲಾರಂಭಿಸಿದರೆ ಅದನ್ನು ಕಣ್ತುಂಬಿಕೊಳ್ಳೋದಕ್ಕಿಂತಲೂ ದೊಡ್ಡ ಸುವರ್ಣಾವಕಾಶ ಬೇರ‍್ಯಾವುದಿದೆ? ಈ ಚಿತ್ರದಲ್ಲಿಯೂ ಅಂಥಾ ಬೆರಗುಗಳಿದ್ದಾವೆ. ಅನೂಪ್ ರಾಮಸ್ವಾಮಿ ಮನೋರಂಜನೆಯನ್ನೇ ಮೂಲ ಉದ್ದೇಶವಾಗಿಟ್ಟುಕೊಂಡು ಗಟ್ಟಿ ಕಥೆಯೊಂದಿಗೇ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.


ಈ ಚಿತ್ರದಲ್ಲಿ ಮುಕ್ಕಾಲು ಭಾಗದಷ್ಟು ಕಾಮಿಡಿ ಅಂಶಗಳೇ ತುಂಬಿ ತುಳುಕಿವೆಯಂತೆ. ಅದರ ಜೊತೆ ಜೊತೆಗೇ ಬದುಕಿಗೆ ಹತ್ತಿರಾಗುವಂಥಾ ಅಂಶಗಳು, ಎಂಥವರೂ ಕಣ್ಣೀರಾಗುವಂಥಾ ಸನ್ನಿವೇಷಗಳೂ ಇಲ್ಲಿವೆಯಂತೆ. ಇಲ್ಲಿನ ಪ್ರತೀ ಪಾತ್ರಗಳೂ ನೋಡುಗರನ್ನು ಆವರಿಸಿಕೊಂಡು ಕಾಡುವಂತೆ. ಸಿನಿಮಾ ಮಂದಿರದಾಚೆಗೂ ಜೊತೆ ಸಾಗುವಂತೆ ಕಟ್ಟಿ ಕೊಡಲಾಗಿದೆ ಎಂಬ ಭರವಸೆ ಚಿತ್ರತಂಡದಲ್ಲಿದೆ. ಇದೆಲ್ಲವೂ ನಿಮ್ಮೆಲ್ಲರ ಮುಂದೆ ಅನಾವರಣಗೊಳ್ಳಲು ಕ್ಷಣಗಣನೆ ಶುರುವಾಗಿದೆ. ಸಿದ್ದು ಮೂಲಿಮನಿ, ರಂಗಾಯಣ ರಘು, ದತ್ತಣ್ಣ ಪ್ರಧಾನ ಪಾತ್ರಗಳನ್ನು ನಿರ್ವಹಿಸಿರೋ ಈ ಸಿನಿಮಾದಲ್ಲಿ ಧನ್ಯಾ ರಿಷಿಗೆ ಜೋಡಿಯಾಗಿ ನಟಿಸಿದ್ದಾರೆ. ಈ ಹಿಂದೆ ಕವಲು ದಾರಿ ಎಂಬ ಸಿನಿಮಾ ಮೂಲಕ ದೊಡ್ಡ ಮಟ್ಟದಲ್ಲಿಯೇ ಗೆಲುವು ದಾಖಲಿಸಿದ್ದ ರಿಷಿ ಸಾರ್ವಜನಿಕರಿಗೆ ಸುವರ್ಣಾವಕಾಶದ ಮೂಲಕ ಮತ್ತೊಂದು ಗೆಲುವು ದಕ್ಕಿಸಿಕೊಳ್ಳುವ ನಿರೀಕ್ಷೆಯಿಟ್ಟುಕೊಂಡಿದ್ದಾರೆ.

[adning id="4492"]

LEAVE A REPLY

Please enter your comment!
Please enter your name here