ಮಾರಿಕೊಂಡ ಮಾರಿಗಳನ್ನು ಮನೆಗೆ ಕಳಿಸದಿದ್ದರೆ…

[adning id="4492"]

ಅನರ್ಹ ಅಯೋಗ್ಯರು ಗೆದ್ದರೆ ಪ್ರಜಾಪ್ರಭುತ್ವ ಸೋತಂತೆ!
ಚುನಾವಣೆಗೆ ಖರ್ಚಾಗೋ ಹಣ ಇವರಪ್ಪನದ್ದಾ?
ರ್ನಾಟಕ ಇತ್ತೀನ ವರ್ಷಗಳಲ್ಲಿ ಥರ ಥರದ ರಾಜಕೀಯ ಮೇಲಾಟಗಳನ್ನು ಕಂಡಿದೆ. ವಿಧಾನಸೌಧವನ್ನು ಇಡೀ ರಾಜ್ಯದ ಸ್ಥಿತಿಗತಿ ಸುಧಾರಿಸೋ ಶಕ್ತಿ ಕೇಂದ್ರವೆಂದು ನಂಬಿರುವ ರಾಜಕಾರಣಿಗಳ ಸಂಖ್ಯೆಯೇ ಕ್ಷೀಣಿಸುತ್ತಿದೆ. ವಿಧಾನಸೌಧವೀಗ ಒಂದರ್ಥದಲ್ಲಿ ಮಾರುಕಟ್ಟೆ. ಖೂಳ ರಾಜಕಾರಣಿಗಳು ಪ್ರಜಾಪ್ರಭುತ್ವದ ಮೌಲ್ಯಗಳನ್ನೇ ಅಲ್ಲಿ ಮಾರಾಟಕ್ಕಿಟ್ಟು ಅದೆಷ್ಟೋ ಕಾಲವಾಗಿದೆ. ತಿಪ್ಪರಲಾಗ ಹೊಡೆದಾದರೂ ಅಧಿಕಾರ ಅನುಭವಿಸಬೇಕು, ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲ ಉಂಡೆದ್ದು ತೇಗಬೇಕೆಂಬುದೇ ಬಹುತೇಕ ರಾಜಕಾರಣಿಗಳ ಮೂಲ ಧ್ಯೇಯ. ಆನಪರತೆ, ರೈತಪರ ಕಾಳಜಿಗಳೆಲ್ಲ ಕೊಳ್ಳೆ ಹೊಡೆಯಲೊಂದು ನೆಪವಷ್ಟೇ. ಅಂಥಾ ದರಿದ್ರ ಸ್ಥಿತಿಯೊಂದು ರಾಜಕೀಯವನ್ನು ಆಳದೇ ಇದ್ದಿದ್ದರೆ ಹದಿನೈದು ಮಂದಿ ಶಾಸಕರು ಹಣದಾಸೆಗೆ ತಮ್ಮನ್ನು ತಾವು ಮಾರಿಕೊಳ್ಳುತ್ತಿರಲಿಲ್ಲ. ರಾಜ್ಯದ ಜನತೆ ಮತ್ತೊಮ್ಮೆ ಚುನಾವಣೆ ಎದುರಿಸುವಂಥಾ ವಾತಾವರಣವೂ ಸೃಷ್ಟಿಯಾಗುತ್ತಿರಲಿಲ್ಲ.


ಈ ಹದಿನೇಳು ಮಂದಿ ಶಾಸಕರು ಬಿಜೆಪಿಗೆ ಮಾರಿಕೊಂಡಿದ್ದಾರೆಂಬುದು ಅದೇನೇ ನಾಟಕ ಮಾಡಿದರೂ ಜನರಿಗೆ ಸ್ಪಷ್ಟವಾಗಿಯೇ ಗೊತ್ತಾಗಿದೆ. ಒಂದು ವೇಳೆ ಇಂಥಾ ಖೂಳುಬಾಕರು ಕಾಂಗ್ರೆಸ್ಸಿಗೆ ಮಾರಿಕೊಂಡಿದ್ದರೂ, ಜೆಡಿಎಸ್‌ಗೆ ಸೇಲಾಗಿದ್ದರೂ ಅದು ಪ್ರಜಾಪ್ರಭುತ್ವಕ್ಕೆ ಎಸಗುವ ಮಹಾ ದ್ರೋಹ ಎಂಬುದರಲ್ಲಿ ಎರಡು ಮಾತಿಲ್ಲ. ಈಗ ಉಪ ಚುನಾವಣೆ ಎದುರಾಗಿರೋ ಎಲ್ಲ ಕ್ಷೇತ್ರಗಳ ಮತದಾರರು ರಾಜಕೀಯ ಪಕ್ಷ ಪಾರ್ಟಿಗಳಾಚೆಗೆ ಚಿಂತನೆ ನಡೆಸಿ ಅನರ್ಹ ಅಯೋಗ್ಯರಿಗೆ ಸರಿಯಾದೊಂದು ಪಾಠ ಕಲಿಸಿದರೆ ಪ್ರಜಾ ಪ್ರಭುತ್ವದ ಬೇರು ಒಂದಷ್ಟಾದರೂ ಗಟ್ಟಿಯಾಗುತ್ತೆ. ಯಾವುದೇ ಆಮಿಷಗಳಿಗೀಡಾಗಿ ಅನರ್ಹರನ್ನೇ ಗೆಲ್ಲಿಸಿದರೆ ತಾವೇ ತಮ್ಮ ಕೈಯಾರೆ ಪ್ರಜಾಪ್ರಭುತ್ವದ ತಾಯಿ ಬೇರನ್ನೇ ಕತ್ತರಿಸಿ ಹಾಕಿದ ಮಹಾ ಪಾಪವೊಂದು ಖಂಡಿತಾ ಸುತ್ತಿಕೊಳ್ಳುತ್ತದೆ.


ಅಧಿಕಾರ ಮತ್ತು ಹಣಕ್ಕಾಗಿ ತಮ್ಮನ್ನು ತಾವು ಮಾರಿಕೊಂಡ ಅನರ್ಹ ಅಯೋಗ್ಯರು ಆ ನಂತರ ಪ್ರಜೆಗಳನ್ನು ಮರುಳು ಮಾಡಲು ಕಟ್ಟಿದ ಆಟಗಳೇನು ಸಾಮಾನ್ಯದವುಗಳಾ? ತಮ್ಮ ಕ್ಷೇತ್ರಕ್ಕಾಗುತ್ತಿದ್ದ ಅನುದಾನ ವ್ಯತ್ಯಯದ ಅನ್ಯಾಯದಿಂದ ಬೇಸತ್ತು ಬಿಜೆಪಿಗೆ ಬೆಂಬಲ ಸೂಚಿಸಿದ್ದಾಗಿ ಹೇಳಿದವರೆಷ್ಟು, ತನ್ನನ್ನು ಗೆಲ್ಲಿಸಿದ ಮತದಾರರ ಹಿತಕ್ಕಾಗಿಯೇ ಇಂಥಾ ಕೆಲಸ ಮಾಡಿದ್ದಾಗಿ ಮೊಸಳೆ ಕಣ್ಣೀರು ಸುರಿಸಿದವರೆಷ್ಟು… ಸುದೈವವೆಂದರೆ ಹಲವಾರು ಕ್ಷೇತ್ರಗಳಲ್ಲಿ ಮತ ಯಾಚನೆಗೆ ಹೋದ ಈ ಅನರ್ಹ ಅಯೋಗ್ಯರನ್ನು ಮತದಾರರು ಭಿಕ್ಷುಕರಿಗಿಂತಲೂ ಕಡೆಯಾಗಿ ನಡೆಸಿಕೊಂಡಿದ್ದಾರೆ. ಬಾಯ್ತುಂಬ ತಾಂಬೂಲ ತುಂಬಿಕೊಂಡು ತುಬುಕ್ಕನೆ ಮುಖಕ್ಕುಗಿದಿದ್ದಾರೆ. ಇಂಥಾದ್ದೇ ಸ್ವಾಭಿಮಾನದ ಆಕ್ರೋಶ ಮತದಾನದವರೆಗೂ ಮನಸಲ್ಲಿದ್ದರೆ ಖಂಡಿತಾ ಪಕ್ಷಾಂತರದಂಥಾ ಬಿಕರಿ ದಂಧೆಗೆ ತಕ್ಕ ಪಾಠ ಕಲಿಸುವಂಥಾ ಫಲಿತಾಂಶವೊಂದು ಈ ಚುನಾವಣೆಯಲ್ಲಿ ಹೊರ ಬೀಳಲಿದೆ.


ಈ ಅನರ್ಹ ಶಾಸಕರು ಬಿಕರಿಯಾಗಿದ್ದರಿಂದ ಅವರ ರಾಜಕೀಯ ಭವಿಷ್ಯ ಏನಾಗುತ್ತದೋ ಗೊತ್ತಿಲ್ಲ. ಆದರೆ ತಿಜೋರಿಯಂತೂ ಸರಿಕಟ್ಟಾಗಿಯೇ ತುಂಬಿಕೊಂಡಿದೆ. ಆದರೆ ಅತ್ತ ಈ ಕೃತಘ್ನರಿಂದ ತಮ್ಮ ಕ್ಷೇತ್ರ ಅಭಿವೃದ್ಧಿಯೂ ಆಗದೆ, ಮತ್ತೊಂದೆಡೆ ಅವಧಿಗಿಂತ ಮುನ್ನವೇ ಚುನಾವಣೆ ಎದುರಿಸೋ ಕರ್ಮವಂತೂ ಪ್ರಜೆಗಳ ಪಾಲಿಗೆ ಬಂದೊದಗಿದೆ. ಇದು ಹದಿನೈದು ಮಂದಿಯ ಕ್ಷೇತ್ರಗಳಿಗೆ ಮಾತ್ರವೇ ಸೀಮಿತ ಅಂದುಕೊಳ್ಳಬೇಕಿಲ್ಲ. ಈ ಹದಿನೈದೂ ಮಂದಿ ತಮ್ಮ ಆಟಕ್ಕಾಗಿ ಇಡೀ ಕರ್ನಾಟಕದ ಜನತೆಯ ತೆರಿಗೆ ಹಣವನ್ನೇ ಪಣಕ್ಕಿಟ್ಟಿದ್ದಾರೆ. ಈ ಹದಿನೈದೂ ಕ್ಷೇತ್ರಗಳಲ್ಲಿ ಚುನಾವಣೆ ನಡೆಸಲು ಏನಿಲ್ಲವೆಂದರೂ ಮೂವತ್ತು ಕೋಟಿಗೂ ಹೆಚ್ಚು ಹಣ ಚುನಾವಣಾ ಆಯೋಗದ ಕಡೆಯಿಂದ ಖರ್ಚಾಗುತ್ತದೆ. ಅದೇನು ಅನರ್ಹ ಶಾಸಕರ ಅಪ್ಪ ಕೂಡಿಟ್ಟಿದ್ದ ಇಡುಗಂಟಲ್ಲ. ಅದು ನಮ್ಮ ಬೆವರಿನ ಫಲವಾದ ತೆರಿಗೆ ಹಣ!


ಇದು ಎಲ್ಲರೂ ಗಂಭೀರವಾಗಿ ಆಲೋಚಿಸಲೇ ಬೇಕಾದ ವಿಚಾರ. ಆದರೆ ಬಹುತೇಕರು ಇದನ್ನು ಉಡಾಫೆಯ ಮನಸ್ಥಿತಿಯಿಂದಲೇ ಸ್ವೀಕರಿಸುತ್ತಿರೋದು ಮಾತ್ರ ದುರಂತ. ಹೇ ರಾಜಕಾರಣಿಗಳೆಲ್ಲ ದಗಲ್ಬಾಜಿಗಳು. ಅವರ ವಿಚಾರ ನಮಗೇಕೆ ಎಂಬಂಥಾ ಸಿನಿಕರ ಸಂಖ್ಯೆಯೂ ಇಲ್ಲಿ ಅತಿಯಾಗಿದೆ. ಆದರೆ ಅವರ‍್ಯಾರೂ ಇಂಥಾ ಪಕ್ಷಾಂತರಿಗಳ ಹಾವಳಿಯಿಂದಾಗೋ ಸೈಡ್ ಎಫೆಕ್ಟುಗಳಿಂದ ಹೊರತಾಗಿಲ್ಲ ಅನ್ನೋದು ದುರಂತ ಸತ್ಯ. ಯಾಕೆಂದರೆ ಇವರ ಖಾಸಗೀ ತಿಜೋರಿ ತುಂಬಿಸುವ ಹಳವಂಡಕ್ಕೆ ಬಲಿ ಬೀಳುತ್ತಿರೋದು ಪ್ರಜೆಗಳೇ. ಈ ಬಾರಿ ಪ್ರಜಾ ಪ್ರಭುತ್ವದ ನಿಜವಾದ ಮೌಲ್ಯವನ್ನು ಎತ್ತಿ ಹಿಡಿಯುವ ಜವಾಬ್ದಾರಿ ಈ ಹದಿನೈದೂ ಕ್ಷೇತ್ರಗಳ ಮತದಾರರಲ್ಲಿದೆ. ನೀವು ಯಾವ ಪಕ್ಷದ ನಿಷ್ಠರಾಗಿದ್ದರೂ ಸರಿ. ಈ ಬಾರಿಯ ಮತದಾನದ ಸಂದರ್ಭದಲ್ಲಿ ಆ ಹ್ಯಾಂಗೋವರಿನಿಂದ ಹೊರ ಬನ್ನಿ. ಪ್ರಜಾ ಪ್ರಭುತ್ವದ ಮೌಲ್ಯ ಉಳಿಸೋ ಸೇನಾನಿಗಳೆಂಬಂತೆ ಅನರ್ಹ ಅಯೋಗ್ಯರ ವಿರುದ್ಧ ಮತದಾನ ಮಾಡಿ. ಇಲ್ಲದಿದ್ದರೆ ಮುಂದೊಂದು ದಿನ ಕ್ಷೇತ್ರಕ್ಕೆ ಕ್ಷೇತ್ರವನ್ನೇ ಈ ಮಾರಿಗಳು ಮಾರಿಕೊಂಡರೂ ಅಚ್ಚರಿಯೇನಿಲ್ಲ!

[adning id="4492"]

LEAVE A REPLY

Please enter your comment!
Please enter your name here