ನಾನ್ಸೆನ್ಸ್ ಏಜಿನ ಹುಡುಗನ ಆಕ್ಷನ್ ಅಚ್ಚರಿ!

[adning id="4492"]

ತ್ಸಾಹವೆಂಬುದು ಹುಚ್ಚು ಕುದುರೆಯಂತೆ ಕೆನೆಯುವ ಮನಸ್ಥಿತಿ ಮತ್ತು ಬಂಡೆಗಲ್ಲೇ ಎದುರಾದರೂ ಡಿಚ್ಚಿ ಹೊಡೆದು ಛಿದ್ರಗೊಳಿಸಬಲ್ಲೆ ಎಂಬಂಥಾ ಭಂಡತನ… ಇಂಥಾ ಗುಣಲಕ್ಷಣಗಳೊಂದಿಗೆ ಖಾಸಾ ನೆಂಟಸ್ತಿಕೆ ಹೊಂದಿರುವ ಮಾಯೆ ಹತ್ತೊಂಬತ್ತರ ಹರೆಯ. ಇಂಥಾ ಅಮಿತೋತ್ಸಾಹ ಮತ್ತು ವಾಸ್ತವಗಳು ಯಾವತ್ತಿದ್ದರೂ ವಿರುದ್ಧಾರ್ಥಕ ಪದಗಳಿದ್ದಂತೆ. ವಾಸ್ತವತೆಯ ಪಸೆಯಿಲ್ಲದ ಇಂಥಾ ಏಜಿನಲ್ಲಿ ಯಡವಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಂಭವವೇ ಹೆಚ್ಚು. ಆದ್ದರಿಂದಲೇ ಹಿರೀಕರು ಈ ವಯಸ್ಸನ್ನು ನಾನ್ಸೆನ್ಸ್ ಏಜ್ ಎಂದೇ ಗುರುತಿಸುತ್ತಾ ಬಂದಿದ್ದಾರೆ. ಕಾಲ ಸರಿದರೂ ಅದಕ್ಕೆ ಪೂರಿಕವಾದ ಕುರುಹುಗಳು ಈ ವಯೋಮಾನದಿಂದ ಮರೆಯಾಗಿಲ್ಲ. ಅಂಥಾ ವಯಸ್ಸಿನ ಆವೇಗದ ಆಂತರ್ಯವನ್ನು ಹೊಂದಿರುವ ‘೧೯ ಏಜ್ ಈಸ್ ನಾನ್ಸೆನ್ಸ್’ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಗೊಳ್ಳುತ್ತಿದೆ.


ಇದು ಲೋಕೇಶ್ ನಿರ್ಮಾಣ ಮಾಡಿರುವ ಚಿತ್ರ. ಆರಂಭ ಕಾಲದಿಂದಲೂ ಅಪರಿಮಿತವಾದ ಸಿನಿಮಾಸಕ್ತಿ ಹೊಂದಿದ್ದ ಅವರು ಹಂತ ಹಂತವಾಗಿ ಮೇಲೇರಿ ಬಂದು ಸ್ಟೋನ್ ಕ್ಲಾರ್ಡಿಂಗ್ ವುದ್ಯಮದಲ್ಲಿ ನೆಲೆ ಕಂಡುಕೊಂಡಿದ್ದಾರೆ. ಹೀಗೆ ಒಂದು ಹಂತ ತಲುಪಿಕೊಂಡ ನಂತರ ಸಿನಿಮಾ ನಿರ್ಮಾಣ ಮಾಡಲೇ ಬೇಕೆಂದುಕೊಂಡ ಲೋಕೇಶ್ ಒಂದೊಳ್ಳೆ ಕಥೆಗಾಗಿ ಅರಸುತ್ತಿದ್ದಾಗಲೇ ನಿರ್ದೇಶಕ ಸುರೇಶ್ ಎಂ ಗಿಣಿ ಹೇಳಿದ್ದ ಕಥೆ ಅವರಿಗೆ ಇಷ್ಟವಾಗಿ ಬಿಟ್ಟಿತ್ತು. ಆ ಕಥೆಯ ಸಾರ, ನಾಯಕನ ಪಾತ್ರದ ಚಹರೆ ಗಮನಿಸಿದ ಲೋಕೇಶ್ ಓದಿಗಿಂತಲೂ ಸಿನಿಮಾವನ್ನೇ ಹೆಚ್ಚಾಗಿ ಹಚ್ಚಿಕೊಂಡಿದ್ದ ತಮ್ಮ ಮಗ ಮನುಷ್ ಸೂಕ್ತ ಎಂಬ ನಿರ್ಧಾರಕ್ಕೆ ಬಂದಿದ್ದರಂತೆ. ಅದರ ಫಲವಾಗಿಯೇ ಹತ್ತೊಂಬತ್ತರ ಹರೆಯದ ಹುಡುಗ ಮನುಷ್ ಈ ಸಿನಿಮಾ ಮೂಲಕ ನಾಯಕನಾಗಿ ಎಂಟರಿ ಕೊಡುತ್ತಿದ್ದಾನೆ.


ಹತ್ತೊಂಬತ್ತರ ಹರೆಯದಲ್ಲಿ ತೆಗೆದುಕೊಳ್ಳುವ ನಿರ್ಧಾರಗಳೆಲ್ಲ ನಾನ್ಸೆನ್ಸ್ ಅನ್ನೋ ಮಾತಿರೋದು, ಅದರ ಸಾರವನ್ನೇ ಈ ಸಿನಿಮಾ ಶೀರ್ಷಿಕೆಯಾಗಿಟ್ಟುಕೊಂಡಿರುವುದೆಲ್ಲ ಗೊತ್ತಿರುವ ವಿಚಾರವೇ. ಆದರೆ ಅಂಥಾದ್ದೇ ಏಜಿನ ಹುಡುಗ ನಾಯಕ ನಟನಾಗುವ ತೀರ್ಮಾನದ ಹಿಂದೆ ಮಾತ್ರ ಗಂಭೀರವಾದ ತಯಾರಿಯ ಹಿನ್ನೆಲೆ ಇದೆ. ಲೋಕೇಶ್ ಮಗನಿಗೆ ನಟನೆ ಸೇರಿದಂತೆ ನಾನಾ ವಿಚಾರಗಳಲ್ಲಿ ತರಬೇತಿ ಕೊಡಿಸಿ ಭರವಸೆ ಮೂಡಿದರೆ ಮಾತ್ರವೇ ನಾಯಕನನ್ನಾಗಿಸೋ ತೀರ್ಮಾನ ಹೊಂದಿದ್ದರು. ಆದರೆ ಈ ಹುಡುಗ ಮನುಷ್‌ನ ಶ್ರದ್ಧೆ, ಚುರುಕುತನ ಗಮನಿಸಿದ ತರಬೇತುದಾರರೇ ಈತನನ್ನು ಹೀರೋ ಆಗಿಸಬಹುದೆಂಬಂತೆ ಶಢಿಫಾರಸ್ಸು ಮಾಡಿದ್ದರಂತೆ. ಆ ಧೈರ್ಯದ ಮೇಲೆಯೇ ಮಗನನ್ನು ಹೀರೋ ಆಗಿಸಿದ್ದ ಲೀಕೇಶ್ ಮುಖದಲ್ಲೀಗ ಮಂದಹಾಸವಿದೆ.


ಮನುಷ್ ಈಗಿನ್ನೂ ಹತ್ತೊಂಬತ್ತರ ಹುಡುಗ. ಮೊದಲ ವರ್ಷದ ಬಿ ಕಾಂ ಪದವಿ ವ್ಯಾಸಂಗ ಮಾಡುತ್ತಿರೋ ಈತನಿಗೆ ಸಿನಿಮಾಸಕ್ತಿ ಎಂಬುದು ತಂದೆಯಿಂದ ಬಂದ ಬಳುವಳಿ. ಓದನ್ನು ಮೀರಿ ಸಿನಿಮಾಸಕ್ತಿ ಹೊಂದಿದ್ದ ಈತನಿಗೆ ಸರ್‌ಪ್ರೈಸ್ ಎಂಬಂತೆ ಹೀರೋ ಆಗುವ ಅವಕಾಶ ಒಲಿದು ಬಂದಿದೆ. ಅದನ್ನು ಮನುಷ್ ಸಮರ್ಪಕವಾಗಿಯೇ ಬಳಸಿಕೊಂಡಿದ್ದಾನೆಂಬುದಕ್ಕೆ ಟ್ರೇಲರ್‌ನಲ್ಲಿ ಒಂದಷ್ಟು ಸಾಕ್ಷಿಗಳು ಸಿಗುತ್ತವೆ. ಪಕ್ಕಾ ಆಕ್ಷನ್ ದೃಷ್ಯಾವಳಿಗಳಲ್ಲಿಯೂ ಈತ ನಟಿಸಿರೋ ರೀತಿಯೇ ಮನುಷ್ ನಡೆಸಿರುವ ತಯಾರಿಗೆ ಉದಾಹರಣೆಯಾಗಿ ನಿಲ್ಲುತ್ತದೆ. ಹತ್ತೊಂಬತ್ತರ ಹರೆಯದ ಸುತ್ತ ಘಟಿಸೋ ಕಥೆಯನ್ನೊಳಗೊಂಡಿದ್ದರೂ ಈ ಸಿನಿಮಾ ಪ್ರಧಾನವಾಗಿ ಕೌಟುಂಬಿಕ ಅಂಶಗಳನ್ನು ಬಳಸಿಕೊಂಡು ಸಾಗುತ್ತದೆಯಂತೆ. ಅದೆಲ್ಲವೂ ಈ ವಾರವೇ ಪ್ರೇಕ್ಷಕರ ಮುಂದೆ ತೆರೆದುಕೊಳ್ಳಲಿದೆ.

[adning id="4492"]

LEAVE A REPLY

Please enter your comment!
Please enter your name here