ರಣಹೇಡಿಯ ಒಡಲಲ್ಲಿದೆ ಗ್ರಾಮ್ಯ ಸೊಗಡಿನ ಕಡಲು!

[adning id="4492"]

ನು ಕೆ. ಶೆಟ್ಟಿಹಳ್ಳಿ ನಿರ್ದೇಶನದ ರಣಹೇಡಿ ನಾಳೆ ಬೆಳಗ್ಗೆ ರಾಜ್ಯಾದ್ಯಂತ ತೆರೆಗಾಣುತ್ತಿದೆ. ಸುರೇಶ್ ನಿರ್ಮಾಣ ಮಾಡಿರುವ ರಣಹೇಡಿ ಬಿಡುಗಡೆಯ ಕಡೇ ಕ್ಷಣಗಳಲ್ಲಿ ವ್ಯಾಪಕ ನಿರೀಕ್ಷೆ ಮೂಡಿಸಿರೋದರ ಹಿಂದೆ ಅದ ಒಡಲಲ್ಲಿರೋ ಗ್ಯಾಮ್ಯ ಸೊಗಡಿನ ಕಡಲಿನಂಥಾ ಕಥೆಯ ಪಾತ್ರ ಪ್ರಧಾನವಾಗಿದೆ. ಸ್ಟಾರ್ ಸಿನಿಮಾ, ಜನಪ್ರಿಯ ಮಾದರಿಗಳ ಹೊರತಾಗಿಗೂ ಸಿನಿಮಾವೊಂದು ಪೂರ್ತಿಯಾಗಿ ಜನಮಾನಸವನ್ನು ಸೆಳೆದುಕೊಳ್ಳಬಹುದೆಂಬುದನ್ನು ರಣಹೇಡಿ ಸಾಧಿಸಿ ತೋರಿಸಿದೆ. ಈ ಕಥೆಯಲ್ಲಿ ಯಾವುದೇ ಬಿಲ್ಡಪ್ಪುಗಳಿಲ್ಲ, ನೈಜ ಸನ್ನಿವೇಶಗಳೇ ಇದರ ಜೀವಾಳ ಎಂಬುದನ್ನು ಸಾರುತ್ತಲೇ ಪ್ರೇಕ್ಷಕರನ್ನು ಸೆಳೆದುಕೊಳ್ಳುವಲ್ಲಿಯೂ ಚಿತ್ರತಂಡ ಯಶ ಕಂಡಿದೆ.


ಇದು ರೈತಾಪಿ ವರ್ಗದ ಸಮಸ್ಯೆಗಳನ್ನು ಬಿಚ್ಚಿಡುತ್ತಲೇ ಅದಕ್ಕೆ ಪರಿಹಾರವನ್ನೂ ಸೂಚಿಸಲಿರುವ ಅಪರೂಪದ ಚಿತ್ರ. ಹಾಗಂತ ಇದು ರೈತರ ಸಮಸ್ಯೆ, ಬದುಕು ಬವಣೆಗಳಿಗೆ ಮಾತ್ರವೇ ಸೀಮಿತವಾದ ಕಥೆಯ ಚಿತ್ರವಲ್ಲ. ಇದು ಪಕ್ಕಾ ಕಮರ್ಶಿಯಲ್ ಜಾಡಿನಲ್ಲಿಯೇ ನಿರ್ಮಾಣವಾಗಿದೆ. ನಿರ್ಮಾಪಕ ಸುರೇಶ್ ಯಾವ ಸ್ಟಾರ್ ಸಿನಿಮಾಗಳಿಗೂ ಕಮ್ಮಿಯಿಲ್ಲದಂತೆ ಇದನ್ನು ರೂಪಿಸಿದ್ದಾರಂತೆ. ಇದು ಕೇವಲ ಸಿನಿಮಾ ಆಗಿರದೆ, ನಮ್ಮ ಅಸಡ್ಡೆಯಿಂದ, ನಗರ ವ್ಯಾಮೋಹದಿಂದ ಗ್ರಾಮೀಣ ಪ್ರದೇಶದಿಂದ ಮರೆಯಾಗುತ್ತಿರೋ ಆಚಾರ ವಿಚಾರಗಳನ್ನು ಬಚ್ಚಿಟ್ಟುಕೊಂಡ ದಾಖಲೆಯಾಗಿಯೂ ಮನ ಸೆಳೆಯಲಿದೆ.


ಇಲ್ಲಿ ಹಳ್ಳಿಗಾಡುಗಳಿಂದ ಮರೆಯಾಗುತ್ತಿರೋ ಅದೆಷ್ಟೋ ಆಚರಣೆಗಳನ್ನು ಯಾವ ಡಾಂಭಿಕತನವೂ ಇಲ್ಲದೆ ನೈಜವಾಗಿ ಮರು ಸೃಷ್ಟಿಸಲಾಗಿದೆಯಂತೆ. ಹಳ್ಳಿಗಳೂ ಕೂಡಾ ನಗರದ ಗುಂಗಿಗೆ ಬಿದ್ದು ಮೂಲ ಬೇರುಗಳೇ ಸೊರಗುತ್ತಿರುವ ಸಂದಿಗ್ಧ ಕಾಲಘಟ್ಟವಿದು. ಈ ಮನಸ್ಥಿತಿಯಿಂದಲೇ ಅಲ್ಲಿನ ಆಚರಣೆಗಳನ್ನು ಪರಿಪಾಲಿಸುವವರು, ಅದರ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಂಡವರಿಗೂ ದಿಕ್ಕಿಲ್ಲದಂತಾಗಿದೆ. ಅಂಥಾ ಅದೆಷ್ಟೋ ಸಂಗತಿಗಳನ್ನು ಕಲೆ ಹಾಕಿ ಅದೆಲ್ಲವನ್ನೂ ಮರು ಸೃಷ್ಟಿಸೋ ಮೂಲಕ ರಣಹೇಡಿ ಎಲ್ಲರಿಗೂ ಆಪ್ತವಾಗಲಿದ್ದಾನೆ. ಒಟ್ಟಾರೆಯಾಗಿ ರೈತಾಪಿ ಬದುಕಿನ ಏರಿಳಿತಗಳೊಂದಿಗೆ ಗ್ರಾಮೀಣ ಬದುಕನ್ನು ತೆರೆದಿಡುವ ಪ್ರಯತ್ನ ಈ ಸಿನಿಮಾದಲ್ಲಿದೆಯಂತೆ.


ಕರ್ಣ ಕುಮಾರ್ ಮತ್ತು ಐಶ್ವರ್ಯಾ ರಾವ್ ಇಲ್ಲಿ ನಾಯಕ ನಾಯಕಿಯರಾಗಿ ನಟಿಸಿದ್ದಾರೆ. ಹಾಗೆಂದಾಕ್ಷಣ ಅವರ ಪಾತ್ರಗಳು ಗ್ಲಾಮರ್ ತುಂಬಿಕೊಂಡಿದೆ ಅಂದುಕೊಳ್ಳಬೇಕಿಲ್ಲ. ಅದು ಗ್ಲಾಮರ್‌ನ ವ್ಯಾಕರಣದ ಸೋಂಕಿಲ್ಲದ ಪಾತ್ರ. ಇಡೀ ಚಿತ್ರದಲ್ಲಿ ಎಲ್ಲ ಪಾತ್ರಗಳೂ ಇದೇ ಮಾದರಿಯಲ್ಲಿರಲಿವೆಯಂತೆ. ಇನ್ನೂ ವಿಶೇಷವೆಂದರೆ ಈ ಚಿತ್ರದಲ್ಲಿ ನಟನೆಯ ಬಗ್ಗೆ ಏನೂ ಗೊತ್ತಿಲ್ಲದ ಒಂದಷ್ಟು ಮಂದಿ ಗ್ರಾಮೀಣ ಭಾಗದ ಮಂದಿಯೂ ನಟಿಸಿದ್ದಾರೆ. ಈ ಕಾರಣದಿಂದ ನಮಗೆ ಪರಿಚಯವಿಲ್ಲದ ಗ್ರಾಮೀಣ ಜಗತ್ತಿನ ಕಥೆ ನಮ್ಮ ಸುತ್ತಲೇ ಬಿಚ್ಚಿಕೊಂಡಂತೆ ಫೀಲ್ ಹುಟ್ಟಿಸುವಷ್ಟು ನೈಜವಾಗಿ ಈ ಚಿತ್ರ ಮೂಡಿ ಬಂದಿದೆಯಂತೆ. ಅದೆಲ್ಲವೂ ನಾಳೆ ಬೆಳಗ್ಗೆಯೇ ಪ್ರೇಕ್ಷಕರೆದುರು ಬಿಒಚ್ಚಿಕೊಳ್ಳಲಿವೆ.

[adning id="4492"]

LEAVE A REPLY

Please enter your comment!
Please enter your name here