ನೆಲದ ಘಮಲಿನ ಕಥೆಯೇ ರಣಹೇಡಿಯ ಕಸುವು!

[adning id="4492"]

ತ್ತೀಚಿನ ದಿನಮಾನದಲ್ಲಿ ಹೊಸಾ ಆಲೋಚನೆ, ಪ್ರಯೋಗಾತ್ಮಕ ಸಿನಿಮಾಗಳ ಬರುವಿಕೆಯಿಂದ ಕನ್ನಡ ಚಿತ್ರರಂಗ ಸಮೃದ್ಧಗೊಳ್ಳುತ್ತಿದೆ. ಪ್ರೇಕ್ಷಕರು ಬಹು ಕಾಲದಿಂದ ಒಳಗೊಳಗೇ ಬಯಸುತ್ತಾ ಬಂದಿದ್ದ ಚಿತ್ರಗಳೇ ಸಾಲು ಸಾಲಾಗಿ ತೆರೆಗಾಣುತ್ತಿವೆ. ಒಂದೆಡೆ ಪಕ್ಕಾ ಕಮರ್ಶಿಯಲ್ ಸಿನಿಮಾಗಳ ಅಬ್ಬರ, ಅವುಗಳ ನಡು ನಡುವೆಯೇ ಹೊಸಾ ಪ್ರಯೋಗಗಳ ಹ್ಞೂಂಕಾರ… ಇದು ಯಾವುದೇ ಭಾಷೆಯ ಚಿತ್ರರಂಗದ ಪಾಲಿಗಾದರೂ ಸಕಾರಾತ್ಮಕ ಬೆಳವಣಿಗೆ. ಕನ್ನಡದಲ್ಲಿ ಅದು ಶುರುವಾಗಿ ಬಹಳಷ್ಟು ಕಾಲವೇ ಸಂದು ಹೋಗಿದೆ. ಅದರ ಮುಂದುವರಿಕೆಯಂತೆ, ನೆಲದ ಘಮಲಿನ ಕಥೆಯನ್ನು ಒಡಲೊಳಗಿಟ್ಟುಕೊಂಡಿರುವ ರಣಹೇಡಿ ಚಿತ್ರ ಈ ವಾರ ತೆರೆಗಾಣಲು ರೆಡಿಯಾಗಿದೆ.


ಸುರೇಶ್ ನಿರ್ಮಾಣ ಮಾಡಿರುವ ಈ ಚಿತ್ರವನ್ನು ಮನು ಕೆ ಶೆಟ್ಟಿಹಳ್ಳಿ ನಿರ್ದೇಶನ ಮಾಡಿದ್ದಾರೆ. ರಣಹೇಡಿ ಎಂಬ ಶೀರ್ಷಿಕೆ, ಅದಕ್ಕೆ ತದ್ವಿರುದ್ಧವಾಗಿ ಕಾಣಿಸುವ ಕಥಾ ಹಂದರದ ಸುಳಿವುಗಳ ಜೊತೆ ಜೊತೆಗೇ ಈ ಸಿನಿಮಾ ಯಾವ ಸ್ಟಾರ್ ಸಿನಿಮಾಗಳಿಗೂ ಸರಿಸಮವಾಗುವಂತೆ ಸದ್ದು ಮಾಡುತ್ತಿದೆ. ಈ ಮೂಲಕ ಪ್ರೇಕ್ಷಕರಲ್ಲಿ ಸದಾ ರೈತ ಸಂಕುಲದ ಕಷ್ಟ ಕಾರ್ಪಣ್ಯಗಳಿಗೆ ಧ್ವನಿಯಾಗೋ ಚಿತ್ರಗಳ ಬಗೆಗಿನ ಪ್ರೀತಿ ಹಾಗೇ ಇರುತ್ತದೆಂಬುದೂ ಸಾಬೀತಾಗಿದೆ. ಇದುವರೆಗೂ ಚಿತ್ರತಂಡ ರಣಹೇಡಿಯ ಕಥೆಯ ಬಗ್ಗೆ ಒಂದಷ್ಟು ಕುತೂಹಲಕರ ವಿಚಾರಗಳನ್ನು ಜಾಹೀರು ಮಾಡಿದೆ. ಆದರೆ ಕಥೆಯ ಆಂತರ್ಯವನ್ನು ಮಾತ್ರ ಯಾವ ಕಾರಣಕ್ಕೂ ತೆರೆದಿಟ್ಟಿಲ್ಲ.


ಇದು ರೈತಾಪಿ ವರ್ಗದ ಬದುಕು, ಬವಣೆಗಳ ಮೇಲೆ ಬೆಳಕು ಚೆಲ್ಲುವ ಕಥೆ ಹೊಂದಿರುವ ಚಿತ್ರ. ಇದುವರೆಗೂ ರೈತಾಪಿ ವರ್ಗದ ಸಮಸ್ಯೆಗಳನ್ನು ತೆರೆದಿಟ್ಟ ಒಂದಷ್ಟು ಸಿನಿಮಾಗಳು ಬಣಂದಿವೆ. ಆದರೆ ಇತ್ತೀಚಿನ ದಿನಗಳಲ್ಲಿ ಆ ಸಂಖ್ಯೆ ಗಣನೀಯವಾಗಿ ಇಳಿಮುಖ ಕಂಡಿದೆ. ಆದರೆ ರಣಹೇಡಿ ಅದೆಲ್ಲವುಗಳಿಗಿಂತಲೂ ಭಿನ್ನವಾದ ಕಥೆ ಹೊಂದಿರೋ ಚಿತ್ರ. ಇಲ್ಲಿನ ನಾಯಕ ರೈತ. ಆತ  ಬರೀ ಮಣ್ಣಿನ ಮಕ್ಕಳ ಸಮಸ್ಯೆಗಳಿಗೆ ಕಣ್ಣಾಗುವು ಮಾತ್ರವಲ್ಲದೇ, ಅವುಗಳಿಗೆ ಪರಿಹಾರವನ್ನೂ ಸೂಚಿಸಲಿದ್ದಾನಂತೆ. ಇಲ್ಲಿ ರೈತನಾಗಿ ಕರ್ಣ ಕುಮಾರ್ ಮಹತ್ವದ ಪಾತ್ರವನ್ನು ನಿರ್ವಹಿಸಿದ್ದಾರೆ. ಒಂದಷ್ಟು ಶೇಡುಗಳನ್ನು ಹೊಂದಿರೋ ಈ ಪಾತ್ರದಲ್ಲಿ ಅವರ ಮನದುಂಬಿ ನಟಿಸಿದ್ದಾರಂತೆ. ಇನ್ನು ಐಶ್ವರ್ಯಾ ರಾವ್ ಡಿ ಗ್ಲಾಮ್ ಲುಕ್ಕಿನಲ್ಲಿ ನಾಯಕಿಯಾಗಿ ನಟಿಸಿದ್ದಾರೆ.


ಹಾಗೆಂದಾಕ್ಷಣ ಈ ಕಥೆ ಬರೀ ಹೊಲ ಗದ್ದೆಗಳ ಸುತ್ತಲೇ ಸುತ್ತುತ್ತದೆ ಅಂದುಕೊಳ್ಳಬೇಕಿಲ್ಲ. ಒಂದಿಡೀ ಗ್ರಾಮ್ಯ ವಾತಾವರಣವನ್ನು ಆರಂಭದಿಂದ ಕಡೆಯವರೆಗೂ ಇಲ್ಲಿ ಕಣ್ಣಿಗೆ ಹಬ್ಬವಾಗುವಂತೆ ಕಟ್ಟಿ ಕೊಡಲಾಗುತ್ತದೆಯಂತೆ. ಅದರ ಜೊತೆಗೇ ನಾಯಕ ನಾಯಕಿಯ ಸೊಗಸಾದ ಪ್ರೇಮಕಥೆ ಮತ್ತು ವಾಸ್ತವಕ್ಕೆ ಹತ್ತಿರಾದ ನೈಜ ಸಾಹಸ ಸನ್ನಿವೇಶಗಳೂ ಇಲ್ಲಿವೆ. ಎಲ್ಲಿಯೂ ಮನೋರಂಜನೆಗೆ ಕೊರತೆಯಾಗದಂತೆ ಕಥೆಯಲ್ಲಿಯೇ ಕಾಮಿಡಿಯನ್ನೂ ಬೆರೆಸಲಾಗಿದೆಯಂತೆ. ಕೃಷಿ ಮತ್ತು ಪ್ರೇಮಕ್ಕೆ ಸೈ ಅನ್ನುವ ನಾಯಕ ಅಗತ್ಯ ಬಿದ್ದರೆ ಹೊಡೆದಾಟಕ್ಕೂ ಜೈ ಅನ್ನುವ ಮನಸ್ಥಿತಿಯವನು. ಈ ಎಲ್ಲ ಅಂಶಗಳೊಂದಿಗೆ ಅಪರೂಪದ ಚಿತ್ರವಾಗಿ ಮೂಡಿ ಬಂದಿರುವ ರಣಹೇಡಿ ಈ ವಾರ ಪ್ರೇಕ್ಷಕರೆದುರು ಪ್ರತ್ಯಕ್ಷವಾಗಲಿದ್ದಾನೆ.

[adning id="4492"]

LEAVE A REPLY

Please enter your comment!
Please enter your name here