ಸಂಸ ಬಯಲು ರಂಗಮಂದಿರದಲ್ಲಿ ಕಥಾ ಸಂಗಮದ ಸಂಗೀತ ಜಾತ್ರೆ!

ಆಮಂತ್ರಣ ಪತ್ರಿಕೆಯಲ್ಲಿಯೇ ಹೊಸತನದ ಪರಿಮಳ!
ರಿಷಬ್ ಶೆಟ್ಟಿ ಎಂಥಾ ಒಳನೋಟಗಳನ್ನು ಹೊಂದಿರುವ ಪ್ರತಿಭಾವಂತ ನಿರ್ದೇಶಕ ಅನ್ನೋದಕ್ಕೆ ಸರ್ಕಾರಿ ಶಾಲೆ ಕಾಸರಗೋಡು ಚಿತ್ರಕ್ಕಿಂತಲೂ ಬೇರೆ ಉದಾಹರಣೆ ಬೇಕಿಲ್ಲ. ಸದಾ ಹೊಸಾ ಪ್ರಯೋಗದತ್ತ ತುಡಿಯುವ ಮನಸ್ಥಿತಿ ಹೊಂದಿರೋ ರಿಷಬ್ ಈ ಬಾರಿ ಕನ್ನಡ ಚಿತ್ರರಂಗದ ಪಾಲಿನ ಹೆಮ್ಮೆಯಂಥಾ ಪ್ರಯೋಗಕ್ಕೆ ಕೈ ಹಾಕಿದ್ದಾರೆ. ದಶಕಗಳ ಹಿಂದೆ ಪುಟ್ಟಣ್ಣ ಕಣಗಾಲರು ಸೃಷ್ಟಿಸಿದ್ದ ಕಥಾ ಸಂಗಮವೆಂಬ ಚಿತ್ರವನ್ನು ಕನ್ನಡಿಗರ‍್ಯಾರೂ ಮರೆಯಲು ಸಾಧ್ಯವಿಲ್ಲ. ಅದು ಒಂದೇ ಚಿತ್ರದಲ್ಲಿ ಏಳು ಕಥೆ ಹೇಳಿದ್ದ ಚಿತ್ರ. ಎಷಬ್ ಶೆಟ್ಟಿ ಈಗ ಏಳು ಮಂದಿ ಬರೆದ ಏಳು ಕಥೆಗಳನ್ನಿಟ್ಟುಕೊಂಡು ಕಥಾ ಸಂಗಮವನ್ನು ರೂಪಿಸಿದ್ದಾರೆ. ಇದರ ವೈಶಿಷ್ಟ್ಯಕ್ಕೆ ತಕ್ಕುದಾಗಿಯೇ ಧ್ವನಿಸುರುಳಿ ಬಿಡುಗಡೆ ನಡೆಸಲು ಚೆಂದದ ಕಾರ್ಯಕ್ರಮವೊಂದನ್ನು ಆಯೋಜಿಸಿದ್ದಾರೆ.


ಇಂಥಾ ಧ್ವನಿ ಸುರುಳಿ ಬಿಡುಗಡೆ ಸಮಾರಂಭಗಳು ಹೆಚ್ಚಾಗಿ ಸ್ಟಾರ್ ಹೊಟೆಲುಗಳಲ್ಲಿ, ಹೈಟೆಕ್ ತಾಣಗಳಲ್ಲಿ ನೆರವೇರುತ್ತವೆ. ಆದರೆ ಕಥಾ ಸಂಗಮದ ಧ್ವನಿ ಸುರುಳಿ ಬಿಡುಗಡೆಯಾಗುತ್ತಿರೋದು ನಾಟಕ, ಸಾಹಿತ್ಯದ ಘಮ ಹೊದ್ದುಕೊಂಡಿರುವ ಸಂಸ ಬಯಲು ರಂಗಮಂದಿರದಲ್ಲಿ. ವಿಶೇಷವೆಂದರೆ ಇದು ಸಿದ್ಧಸೂತ್ರಗಳನ್ನು ಮೀರಿಕೊಂಡಿರೋ ಕಾರ್ಯಕ್ರಮ. ಸಿನಿಮಾ ಗುಂಗಿನಾಚೆಗೆ ಸಾಹಿತ್ಯಕ ಸಾಹಚರ್ಯದ ಚುಂಗು ಹಿಡಿದು ಹೊರಟಂತಿರೋ ರಿಷಬ್ ಮತ್ತವರ ತಂಡ ಆಡಿಯೋ ಲಾಂಚಿಂಗ್ ಪ್ರೋಗ್ರಾಮನ್ನೂ ಕೂಡಾ ಒಂದು ಅಪ್ಪಟ ಸಾಹಿತ್ಯಕ ಕಾರ್ಯಕ್ರಮದಂತೆ ಆಯೋಜಿಸಿದ್ದಾರೆ. ಈ ಆಮಂತ್ರಣ ಪತ್ರಿಕೆಯಲ್ಲಿಯೇ ಅಂಥಾ ಹೊಸತನದ ಪರಿಮಳವೊಂದು ಯಾರನ್ನಾದರೂ ಪುಳಕಗೊಳಿಸುವಂತಿದೆ.


ನವೆಂಬರ್ ೨೧ರಂದು ಸಂಜೆ ೫.೩೦ಕ್ಕೆ ಈ ಕಾರ್ಯಕ್ರಮ ಶುರುವಾಗಲಿದೆ. ಪವರ್‌ಸ್ಟಾರ್ ಪುನೀತ್ ರಾಜ್ ಕುಮಾರ್ ಕಥಾಸಂಗಮದ ಧ್ವನಿಸುರುಳಿಯನ್ನು ಸಂಜೆ ಆರು ಘಂಟೆಗೆ ಬಿಡುಗಡೆಗೊಳಿಸಲಿದ್ದಾರೆ. ಆ ನಂತರ ೬.೧೫ರಿಂದ ಪ್ರದೀಪ್ ಬಿ.ವಿ ಮತ್ತು ಸಂಗಡಿಗರಿಂದ ಪುಟ್ಟಣ್ಣ ಕಣಗಾಲ್ ಚಿತ್ರಗಳಿಂದ ಆಯ್ದ ಗೀತೆಗಳ ಸಂಗೀತ ಸುಧೆ ಹರಿಯಲಿದೆ. ೭.೧೫ರಿಂದ ಕಥಾ ಸಂಗಮ ಚಿತ್ರದ ದೃಷ್ಯ ಗೀತೆ, ದೃಷ್ಯದ ತುಣುಕು ಮತ್ತು ತೆರೆಯ ಹಿಂದಿನ ಚಿತ್ರಗಳ ಪ್ರದರ್ಶನ ಕಾರ್ಯಕ್ರಮ ಜರುಗಲಿದೆ. ೭.೩೦ರಿಂದ ಎಂಟು ಗಂಟೆಯವರೆಗೆ ಸಂಗೀತಾ ಕಟ್ಟಿ, ವಾಸು ದೀಕ್ಷಿತ್, ಡಾಸ್ ಮೋಡ್, ರಾಜ್ ಬಿ ಶೆಟ್ಟಿ ಮತ್ತು ಅದಿತಿ ಸಾಗರ್ ಮುಂತಾದವರಿಂದ ಕಥಾ ಸಂಗಮ ಚಿತ್ರದ ಗೀತೆಗಳ ಗಾಯನ ಕಾರ್ಯಕ್ರಮ ನಡೆಯಲಿದೆ. ಈ ನೀಲನಕ್ಷೆಯೇ ಸದರಿ ಕಾರ್ಯಕ್ರಮದ ಅಚ್ಚುಕಟ್ಟುತನಕ್ಕೆ, ಹೊಸತನಕ್ಕೆ ಹಿಡಿದ ಕನ್ನಡಿಯಂತಿದೆ.


ರಿಷಬ್ ಶೆಟ್ಟಿ ಈ ಬಾರಿ ಕಥಾ ಸಂಗಮದ ಮೂಲಕ ಮ್ಯಾಜಿಕ್ಕು ಮಾಡುತ್ತಾರೆಂಬುದಕ್ಕೆ ಅದರ ವೆರೈಟಿ ವೆರೈಟಿ ಪೋಸ್ಟರ್‌ಗಳೇ ಸಾಕ್ಷಿ ಒದಗಿಸುತ್ತಿವೆ. ಏಳು ಮಮದಿ ಬರೆದ ಭಿನ್ನವಾದ ಕಥೆಯ ಸೂತ್ರ ಹಿಡಿದು ಈ ಸಿನಿಮಾವನ್ನು ರೂಪಿಸಿರುವ ರಿಷಬ್ ತಾವೇ ಮುಖ್ಯ ಪಾತ್ರವೊಂದಕ್ಕೆ ಬಣ್ಣ ಹಚ್ಚಿದ್ದಾರೆ. ಇನ್ನುಳಿದಂತೆ ರಿಷಬ್ ಶೆಟ್ಟಿ, ರಾಜ್ ಬಿ ಶೆಟ್ಟಿ, ಪ್ರಮೋದ್ ಶೆಟ್ಟಿ, ಹರಿಪ್ರಿಯಾ, ಯಜ್ಞಾ ಶೆಟ್ಟಿ, ಕಿಶೋರ್ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಒಂದು ಶಶಕ್ತ ತಾಂತ್ರಿಕ ವರ್ಗದೊಂದಿಗೆ, ಸಮರ್ಥವಾದ ತಂಡದೊಂದಿಗೆ ಕನ್ನಡ ಚಿತ್ರರಂಗದಲ್ಲಿ ಮೈಲಿಗಲ್ಲಾಗುವಂಥಾ ಪ್ರಯತ್ನವನ್ನು ರಿಷಬ್ ಶೆಟ್ಟಿ ಕಥಾ ಸಂಗಮದ ಮೂಲಕ ಮಾಡಿದ್ದಾರೆ. ಈ ಸಿನಿಮಾದತ್ತ ಸಮಸ್ತ ಪ್ರೇಕ್ಷಕರೂ ದೃಷ್ಟಿ ನೆಟ್ಟು ನಿಂತಿದ್ದಾರೆ. ಯಾಕೆಂದರೆ ಈಗಾಗಲೇ ರಿಷಬ್ ಶೆಟ್ಟಿ ನಿರ್ದೇಶಕನಾಗಿ ಅಂಥಾದ್ದೊಂದು ಅಲೆ ಸೃಷ್ಟಿಸಿದ್ದಾರೆ. ಈ ಧ್ವನಿ ಸುರುಳಿಯೊಂದಿಗೆ ಕಥಾ ಸಂಗಮ ಮತ್ತಷ್ಟು ಮಿರುಗಲಿದೆ.

LEAVE A REPLY

Please enter your comment!
Please enter your name here