ಫಸ್ಟ್ ನೈಟಲ್ಲಿ ಫೇಲ್ಯೂರ್ ದಾಖಲೆಯಲ್ಲಿ ಟಾಪರ್ ಬ್ರಹ್ಮಚಾರಿ!

ನಾಳೆ ಬಿಡುಗಡೆಯಾಗಲಿರೋ ಹಾಡು ಬೆರಗು ಮೂಡಿಸಲಿದೆ!
ಸಿನಿಮಾವನ್ನು ವ್ಯವಹಾರದ ಹೊರತಾಗಿ ಪ್ರೀತಿಸುವ, ಧ್ಯಾನಿಸುವ ನಿರ್ಮಾಪಕರಿದ್ದಲ್ಲಿ ಒಂದೊಳ್ಳೆ ಕಂಟೆಂಟಿನ ಹೊಸತನಗಳಿಂದ ಕೂಡಿದ ಚಿತ್ರಗಳು ರೂಪುಗೊಳ್ಳುತ್ತವೆ. ಇಂಥಾ ಮನಸ್ಥಿತಿಯಿಂದಲೇ ಪ್ರತೀ ಚಿತ್ರಗಳಲ್ಲಿಯೂ ಅದ್ದೂರಿತನದೊಂದಿಗೆ ಹೊಸತನದ ಛಾಪು ಮೂಡಿಸುತ್ತಿರುವವರು ನಿರ್ಮಾಪಕ ಉದಯ್ ಮೆಹ್ತಾ. ಸದ್ಯ ಅವರು ನಿರ್ಮಾಣ ಮಾಡಿರೋ ಬ್ರಹ್ಮಚಾರಿ ಥರ ಥರದಲ್ಲಿ ಸುದ್ದಿ ಮಾಡುತ್ತಿದೆ. ಫಸ್ಟ್ ನೈಟ್ ಟೀಸರ್, ಮತ್ತೊಂದು ಹಾಡು ಹಾಗೂ ಟ್ರೇಲರ್‌ನೊಂದಿಗೆ ಈ ಸಿನಿಮಾ ಸೃಷ್ಟಿಸಿರೋ ಹಂಗಾಮ ನಿಜಕ್ಕೂ ಬೆರಗಾಗಿಸುವಂಥಾದ್ದು. ಟ್ರೇಲರ‍್ನಲ್ಲಿ ಫಸ್ಟ್ ನೈಟಲ್ಲಿ ಫೇಲ್ಯೂರ್ ಆದಂತಿದ್ದ ಬ್ರಹ್ಮಚಾರಿ ದಾಖಲೆ ಸೃಷ್ಟಿಸೋ ವಿಚಾರದಲ್ಲಿ ಮಾತ್ರ ಪಕ್ಕಾ ಟಾಪರ್ ಆಗಿ ಹೊರ ಹೊಮ್ಮಿದ್ದಾನೆ!


ಈ ಹಿಂದೆ ಬಿಡುಗಡೆಯಾಗಿದ್ದ ಹಿಡ್ಕ ಒಸಿ ತಡ್ಕ ಹಾಡಂತೂ ಸೂಪರ್ ಹಿಟ್ ಆಗಿದೆ. ಅದೇ ಪ್ರಭೆಯಲ್ಲೀಗ ಚಿತ್ರತಂಡ ಮತ್ತೊಂದು ಹಾಡನ್ನು ಲಾಂಚ್ ಮಾಡಲು ತಯಾರಾಗಿದೆ. ಅದಕ್ಕಾಗಿ ತೀರಾ ಹೊಸತೆನ್ನುವಂಥಾ ದಾರಿಯನ್ನೇ ಆಯ್ದುಕೊಂಡಿದೆ. ಸಾಮಾನ್ಯವಾಗಿ ಆಡಿಯೋ, ಹಾಡುಗಳ ಬಿಡುಗಡೆ ಎಂದರೆ ಅದಕ್ಕಾಗಿ ಒಂದಷ್ಟು ಜನಪ್ರಿಯ ಮಾದರಿಗಳಿದ್ದಾವೆ. ಇತ್ತೀಚೆಗಂತೂ ನೇರವಾಗಿ ಯೂಟ್ಯೂಬಲ್ಲಿ ಅಪ್‌ಲೋಡ್ ಮಾಡೋ ಮೂಲಕ ಹಾಡುಗಳ ಬಿಡುಗಡೆ ಕಾರ್ಯ ಸಾಂಗವಾಗಿಯೇ ನೆರವೇರುತ್ತಿದೆ. ಆದರೆ, ಬ್ರಹ್ಮಚಾರಿ ಚಿತ್ರದ್ದು ಮಾತ್ರ ಅದನ್ನು ಮೀರಿದ, ಕನ್ನಡ ಚಿತ್ರರಂಗದಲ್ಲಿಯೇ ಮೊದಲ ಹೆಜ್ಜೆಯಾಗಿ ಮಿರುಗಬಲ್ಲಂಥಾ ಹಾದಿಯನ್ನು!


ನಾಳೆ ಈ ಹಾಡಿಂನ ಲಾಂಚಿಂಗ್ ಪ್ರೋಗ್ರಾಮು ಬೆಂಗಳೂರಿನ ಮಂತ್ರಿ ಮಾಲ್‌ನಲ್ಲಿ ನಡೆಯಲಿದೆ. ಸಂಚಿತ್ ಹೆಗ್ಡೆ ಮತ್ತು ಸುಪ್ರಿಯಾ ಲೈವ್ ಆಗಿಯೇ ಹಾಡೋ ಮೂಲಕ ಈ ಹಾಡು ಲಾಂಚ್ ಆಗಲಿದೆ. ಸಾವಿರಾರು ಜನರ ಸಮ್ಮುಖದಲ್ಲಿ ನಡೆಯಲಿರೋ ಈ ದಾಖಲೆಯಂಥಾ ಕಾರ್ಯಕ್ರಮದಲ್ಲಿ ನೀವೂ ಕೂಡಾ ಭಾಗಿಯಾಗಬಹುದು. ನಾಳೆ ಸಂಜೆ ಆರು ಘಂಟೆಗೆ ನಡೆಯಲಿರೋ ಈ ಕಾರ್ಯಕ್ರಮದಲ್ಲಿ ಹಾಜರಿದ್ದು ಅದನ್ನು ಕವರೇಜ್ ಮಾಡಿಕೊಳ್ಳಬಹುದು. ಇಂಥಾದ್ದೊಂದು ಅಮೋಘ ಅವಕಾಶವನ್ನು ಪ್ರೇಕ್ಷಕರಿಗೆ ಚಿತ್ರತಂಡ ಕಲ್ಪಿಸಿದೆ. ಅಂದಹಾಗೆ ಈ ಹಾಡನ್ನು ಡಾ ವಿ ನಾಗೇಂದ್ರ ಪ್ರಸಾದ್ ಬರೆದಿದ್ದಾರೆ. ಅದು ಯಾವ ಬಗೆಯ ಹಾಡು ಮತ್ತು ಅದರ ರೂಪುರೇಷೆಗಳೇನೆಂಬುದು ನಾಳೆ ನಿಮ್ಮೆಲ್ಲರ ಮುಂದೆ ಲೈವ್ ಆಗಿಯೇ ಜಾಹೀರಾಗಲಿದೆ.


ಇದು ನಿರ್ದೇಶಕ ಚಂದ್ರ ಮೋಹನ್, ಸಂಗೀತ ನಿರ್ದೇಶಕ ಧರ್ಮವಿಶ್ ಮತ್ತು ನಿರ್ಮಾಪಕ ಉದಯ್ ಮೆಹ್ತಾರ ಜುಗಲ್ಭಂಧಿ ಸಾಹಸ. ಹೊಸತನದ ಯಾವ ಕೆಲಸಕ್ಕಾದರೂ ಧಾರಾಳವಾಗಿಯೇ ಖರ್ಚು ಮಾಡುವ ಉದಯ್ ಮೆಹ್ತಾ ಅದೇ ಮನಸ್ಥಿತಿಯೊಂದಿಗೆ ಈ ದಾಖಲೆಗೆ ಶ್ರೀಕಾರ ಹಾಕಿದ್ದಾರೆ. ಈ ಹಾಡಿನ ಮೂಲಕವೇ ಬ್ರಹ್ಮಚಾರಿ ಮತ್ತಷ್ಟು ಕಳೆಗಟ್ಟಿಕೊಳ್ಳಲಿದ್ದಾನೆ. ಇದೊಂದು ಅಪರೂಪದ ಚಿತ್ರವಾಗಿ ದಾಖಲಾಗುತ್ತದೆಂಬ ಭರವಸೆ ಚಿತ್ರತಂಡದಲ್ಲಿದೆ. ಅದಕ್ಕೆ ಟೀಸರ್, ಹಾಡು ಮತ್ತು ಟ್ರೇಲರ್ ಸಾಕ್ಷಿಯಾಗಿದೆ. ಇದೀಗ ಈ ಹಾಡೂ ಕೂಡಾ ಆ ಸಾಲಿಗೆ ಸೇರ್ಪಡೆಗೊಳ್ಳಲಿದೆ.

LEAVE A REPLY

Please enter your comment!
Please enter your name here