ಮುಗಿಲ್ ಪೇಟೆ ಮುಹೂರ್ತ ನೆರವೇರಿಸಲಿದ್ದಾರೆ ದರ್ಶನ್!

ಕ್ರೇಜಿಸ್ಟಾರ್ ರವಿಚಂದ್ರನ್ ಹೇಗಾದರೂ ಮಾಡಿ ತಮ್ಮ ಮಕ್ಕಳಿಬ್ಬರನ್ನು ನೆಲೆಗಾಣಿಸೋ ಸಂಕಲ್ಪ ತೊಟ್ಟಿದ್ದಾರೆ. ಇಬ್ಬರನ್ನೂ ಒಟ್ಟುಗೂಡಿಸಿ ಒಂದು ಸಿನಿಮಾ ನಿರ್ದೇಶನ ಮಾಡೋದರ ಬಗ್ಗೆಯೂ ಕ್ರೇಜಿಸ್ಟಾರ್ ಇತ್ತೀಚೆಗಷ್ಟೇ ಕನಸು ಹಂಚಿಕೊಂಡಿದ್ದರು. ಅದಾಗಲೇ ಅವರ ಮೊದಲ ಮಗ ಮನೋರಂಜನ್ ಹೊಸಾ ಸಿನಿಮಾಗೆ ರೆಡಿಯಾಗಿದ್ದಾರೆ. ಪ್ರೇಮಕಥಾನಕವನ್ನಾಧರಿಸಿ ಮುಗಿಲ್‌ಪೇಟೆ  ಚಿತ್ರದಲ್ಲಿ ಮನೋರಂಜನ್ ನಾಯಕನಾಗಿ ನಟಿಸುತ್ತಿದ್ದಾರೆ. ಈ ಸಿನಿಮಾದ ಮುಹೂರ್ತ ಸಮಾರಂಭವನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ನೆರವೇರಿಸಲಿದ್ದಾರೆ.


ಈ ಸಿನಿಮಾದಲ್ಲಿ ಮನೋರಂಜನ್ ಬೇರೆಯದ್ದೇ ಥರದ ಲುಕ್ಕಿನಲ್ಲಿ ಕಂಗೊಳಿಸಲಿದ್ದಾರಂತೆ. ಹೇರ್ ಸ್ಟೈಲ್‌ನಿಂದ ಮೊದಲ್ಗೊಂಡು ಎಲ್ಲದರಲ್ಲಿಯೂ ಅವರು ಡಿಫರೆಂಟ್ ಲುಕ್ಕಿನಲ್ಲಿ ಕಂಗೊಳಿಸಲಿದ್ದಾರೆ. ಅದಕ್ಕೆಲ್ಲ ಮನೋರಂಜನ್ ಈಗಾಗಲೇ ಸಾಧ್ಯಂತವಾಗಿ ತಯಾರಿ ಮುಗಿಸಿಕೊಂಡಿದ್ದಾರೆ.  ಇದೇ ಹದಿನೈದನೇ ತಾರೀಕಿನಂದು ಮುಗಿಲ್ ಪೇಟೆಯ ಮುಹೂರ್ತ ಸಮಾರಂಭ ನಡೆಯಲಿದೆ. ರವಿಚಂದ್ರನ್ ಮೇಲೆ ಅಗಾಧ ಪ್ರೀತಿ, ಗೌರವ ಹೊಂದಿರುವ ದರ್ಶನ್ ಅದೆಷ್ಟೇ ಬ್ಯುಸಿಯಾಗಿದ್ದರೂ ಈ ಮುಹೂರ್ತ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ.


ಮನೋರಂಜನ್ ನಾಯಕನಾಗಿ ಒಂದು ಬ್ರೇಕ್‌ಗೆ ಕಾಯುತ್ತಿದ್ದಾರೆ. ಅದು ಸಿಕ್ಕೇ ಸಿಗುತ್ತದೆ ಎಂಬಂಥಾ ಭರವಸೆಯೊಂದಿಗೇ ಈ ಸಿನಿಮಾವನಮ್ನು ಒಪ್ಪಿಕೊಂಡಿದ್ದಾರೆ. ಅದಕ್ಕೆ ಬೇಕಾದಂತೆ ತಯಾರಿಯನ್ನೂ ಮಾಡಿಕೊಂಡಿದ್ದಾರೆ. ಇದೊಂದು ನವಿರಾದ ಪ್ರೇಮಕಾವ್ಯದಂಥಾ ಸಿನಿಮಾ. ಬ್ರೇಕಪ್ ಆಗಿ ಎರಡು ವರ್ಷಗಳ ನಂತರದಲ್ಲಿ ನಾಯಕಿಯನ್ನು ಹುಡುಕಿ ಹೊರಡುವ ಕಥೆಯನ್ನು ಈ ಸಿನಿಮಾ ಒಳಗೊಂಡಿದೆ. ಇದಕ್ಕಾಗಿ ಈಗಾಗಲೇ ಕುಂದಾಪುರ ಸೀಮೆಯಲ್ಲಿ ಲೊಕೇಶನ್ನುಗಳನ್ನು ಹುಡುಕಿ, ಸೆಟ್ ಅನ್ನೂ ಹಾಕಲಾಗಿದೆಯಂತೆ. ಇನ್ನುಳಿದಂತೆ ಮಲೆನಾಡಿನ ಸುಂದರ ಪ್ರದೇಶಗಳಲ್ಲಿ ಚಿತ್ರೀಕರಣ ನಡೆಯಲಿದೆ. ಇದೇ ತಿಂಗಳ ಕಡೇಯ ಹೊತ್ತಿಗೆಲ್ಲ ಚಿತ್ರೀಕರಣ ಚಾಲೂ ಆಗಲಿದೆ.

LEAVE A REPLY

Please enter your comment!
Please enter your name here