ಮದಗಜನ ಸಮ್ಮುಖದಲ್ಲಿ ಪ್ರಶಾಂತ್ ನೀಲ್!

ರೋರಿಂಗ್ ಸ್ಟಾರ್ ಶ್ರೀಮುರುಳಿ ಭರಾಟೆ ಚಿತ್ರದ ಯಶದ ಖುಷಿಯಲ್ಲಿದ್ದಾರೆ. ಊರೂರಲ್ಲಿ ಅಭಿಮಾನಿಗಳನ್ನು ಭೇಟಿಯಾಗುತ್ತಾ ಈ ಭರಪೂರ ಗೆಲುವನ್ನು ಆಘ್ರಾಣಿಸುತ್ತಿದ್ದಾರೆ. ಇದೆಲ್ಲದರ ಪ್ರಭೆಯಲ್ಲಿಯೇ ಅವರ ಮುಂದಿನ ಚಿತ್ರಕ್ಕಾಗಿ ಭರ್ಜರಿ ತಯಾರಿ ಆರಂಭವಾಗಿದೆ. ಭರಾಟೆಯಿನ್ನೂ ಚಿತ್ರೀಕರಣದ ಹಂತದಲ್ಲಿರುವಾಗಲೇ ಶ್ರೀಮುರುಳಿಯ ಮುಂದಿನ ಚಿತ್ರ ’ಮದಗಜ’ ಸದ್ದು ಮಾಡಿತ್ತು. ಆರಂಭಿಕವಾಗಿ ಟೈಟಲ್ ವಿಚಾರದಲ್ಲಿ ವಿವಾದದ ಛಾಯೆ ಹಬ್ಬಿಕೊಂಡು ಆ ನಂತರದಲ್ಲಿ ಎಲ್ಲವೂ ಸುಖಾಂತ್ಯವಾಗಿ ಈ ಸಿನಿಮಾ ಹಾದಿ ಸುಗಮವಾಗಿತ್ತು. ಇದೀಗ ಮದಗಜ ಚಿತ್ರೀಕರಣಕ್ಕೆ ಭರದಿಂದ ತಯಾರಿ ನಡೆಯುತ್ತಿದೆ. ವಿಶೇಷವೆಂದರೆ, ಇದೀಗ ಕೆಜಿಎಫ್ ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ ಮದಗಜನ ಬೆನ್ನಿಗೆ ನಿಂತಿದ್ದಾರೆ.


ಪ್ರಶಾಂತ್ ನೀಲ್ ಶ್ರೀಮುರುಳಿಗೆ ಮರುಜೀವ ನೀಡಿದ ನಿರ್ದೇಶಕ. ಹಿಟ್ ಚಿತ್ರ ಕೊಟ್ಟ ನಂತರವೂ ಸೋಲಿನ ಕಮರಿಗೆ ಬಿದ್ದು ಕಂಗೆಟ್ಟಿದ್ದ ಶ್ರೀಮುರುಳಿಯನ್ನು ಉಗ್ರಂ ಮೂಲಕ ಕೈ ಹಿಡಿದೆತ್ತಿದ್ದವರು ಇದೇ ನೀಲ್. ಈ ಕಾರಣದಿಂದಲೇ ಮುರುಳಿ ಯಾವುದೇ ಸಿನಿಮಾ ಒಪ್ಪಿಕೊಂಡರೂ ನೀಲ್‌ರ ಸಲಹೆ, ಸೂಚನೆಗಳನ್ನು ಪಡೆದುಕೊಳ್ಳುತ್ತಾರೆ. ಅವರ ಮಾರ್ಗದರ್ಶನದಲ್ಲಿಯೇ ಮುಂದುವರೆಯುತ್ತಾರೆ. ಉಗ್ರಂ ನಂತರ ಮತ್ತೊಂದು ಸಿನಿಮಾ ಮೂಲಕ ಜೊತೆಯಾಗಬೇಕೆಂಬ ಇರಾದೆ ಇದ್ದರೂ ಅದು ಈ ವರೆಗೂ ಸಾಧ್ಯವಾಗಿಲ್ಲ. ಆದರೆ ಇವರಿಬ್ಬರ ನಡುವಿನ ಸ್ನೇಹ ಸಂಬಂಧಕ್ಕೆ ಮಾತ್ರ ಯಾವ ಧಕ್ಕೆಯೂ ಉಂಟಾಗಿಲ್ಲ.


ಈ ಸ್ನೇಹದ ಕಾರಣದಿಂದಲೇ ಪ್ರಶಾಂತ್ ನೀಲ್ ಮದಗಜ ಚಿತ್ರದ ಸ್ಕ್ರಿಫ್ಟ್ ವರ್ಕ್‌ನಲ್ಲಿ ಭಾಗಿಯಾಗಿದ್ದಾರೆ. ಅಯೋಗ್ಯದಂಥಾ ಸೂಪರ್ ಹಿಟ್ ಚಿತ್ರ ಕೊಟ್ಟಿರೋ ಮಹೇಶ್ ಕುಮಾರ್ ನಿರ್ದೇಶನದಲ್ಲಿ ಮೂಡಿ ಬರಲಿರೋ ಚಿತ್ರ ಮದಗಜ. ಅದಾಗಲೇ ರೆಡಿಯಾಗಿದ್ದ ಸ್ಕ್ರಿಫ್ಟ್‌ಗೆ ತುಂಬಾ ಕಡಿಮೆ ಅವಧಿಯಲ್ಲಿಯೇ ಹೊಸಾ ಸ್ಪರ್ಶ ನೀಡಿದ್ದಾರೆ. ಆರಂಭಿಕವಾಗಿ ಇದ್ದ ಕಥೆಗೂ ಈಗ ಅದು ನೀಲ್ ಸಾರಥ್ಯದಲ್ಲಿ ಹೊಳಪು ಪಡೆದುಕೊಂಡಿದ್ದಕ್ಕೂ ಅಜ ಗಜಾಂತರ ವ್ಯತ್ಯಾಸಗಳಿವೆಯಂತೆ. ಪ್ರಶಾಂತ್ ನೀಲ್ ಇದೀಗ ಕೆಜಿಎಫ್ ೨ ಚಿತ್ರೀಕರಣದಲ್ಲಿ ಬ್ಯುಸಿಯಿದ್ದಾರೆ. ಅದರ ಜೊತೆಗೇ ತೆಲುಗು ಸಿನಿಮಾಗೂ ಅಣಿಗೊಳ್ಳುತ್ತಿದ್ದಾರೆ. ಇದರ ನಡುವೆಯೂ ಅವರು ಶ್ರೀಮುರುಳಿ ಸ್ನೇಹಕ್ಕೆ ಕಟ್ಟು ಬಿದ್ದು ಮದಗಜ ಮತ್ತಷ್ಟು ಮದವೇರಿಸಿಕೊಂಡು ಘೀಳಿಡುವಂತೆ ರೂಪಿಸಿದ್ದಾರಂತೆ.

LEAVE A REPLY

Please enter your comment!
Please enter your name here