ಕಪಟ ನಾಟಕ ಪಾತ್ರಧಾರಿ: ನಿರೀಕ್ಷೆಗಳ ಎಲ್ಲೆ ಮೀರಿ ತೆರೆಕೊಳ್ಳೋ ಭಿನ್ನ ದಾರಿ!

[adning id="4492"]

ಶಸ್ವೀ ಸಿನಿಮಾವೊಂದು ಯಾವ್ಯಾವ ದಿಕ್ಕಿನಿಂದ ಪ್ರೇಕ್ಷಕರನ್ನು ಆವರಿಸಿಕೊಳ್ಳಬಹುದೋ ಅದೆಲ್ಲ ರೀತಿಯಲ್ಲೂ ಸುದ್ದಿ ಮಾಡಿಕೊಂಡು ಸಾಗಿ ಬಂದಿದ್ದ ಚಿತ್ರ ಕಪಟ ನಾಟಕ ಪಾತ್ರಧಾರಿ. ಹುಲಿರಾಯ ಖ್ಯಾತಿಯ ಬಾಲು ನಾಗೇಂದ್ರ ನಾಯಕನಾಗಿ ನಟಿಸಿದ್ದೆಂಬುದೂ ಸೇರಿದಂತೆ ಈ ಸಿನಿಮಾದತ್ತ ಆಕರ್ಷಣೆ ಮೂಡಿಕೊಳ್ಳಲು ನಾನಾ ಕಾರಣಗಳಿದ್ದವು. ಇಂಥಾ ನಾನಾ ಭಾವಗಳ ಒಡ್ಡೋಲಗದಲ್ಲಿ ಕಪಟ ನಾಟಕ ಪಾತ್ರಧಾರಿ ಚಿತ್ರವೀಗ ತೆರೆ ಕಂಡಿದೆ. ನಿರ್ದೇಶಕ ಕ್ರಿಶ್ ಮಧ್ಯಮ ವರ್ಗದ ಹುಡುಗರೆಲ್ಲರ ಕನವರಿಕೆ, ಹಳವಂಡ, ಧಾವಂತಗಳನ್ನೆಲ್ಲ ಒಂದು ಕಥೆ ಚೌಕಟ್ಟಿಗೆ ಒಗ್ಗಿಸಿ ಎಲ್ಲರನ್ನೂ ಸೋಕುವಂಥಾ ದೃಷ್ಯ ಕಟ್ಟುವಲ್ಲಿ ಯಶ ಕಂಡಿದ್ದಾರೆ. ಎಲ್ಲ ನಿರೀಕ್ಷೆಗಳ ಎಲ್ಲೆ ಮೀರಿದ ಭಿನ್ನ ದಾರಿಯೊಂದು ಪ್ರೇಕ್ಷಕರ ಮುಂದೆ ತೆರೆದುಕೊಂಡು ಕಾಡುವ ಪರಿಯೇ ಅಚ್ಚರಿಯೆನಿಸುತ್ತೆ.


ಇಲ್ಲಿ ಪ್ರಧಾನವಾಗಿ ಗಮನ ಸೆಳೆಯೋದು ಬಾಲು ನಾಗೇಂದ್ರ ನಟನೆಯ ಕಸುವು. ಕೃಷ್ಣ ಎಂಬ ಪಾತ್ರಕ್ಕವರು ನ್ಯಾಯ ಸಲ್ಲಿಸಿದ ರೀತಿ, ಸಹಜಾಭಿನಯ ಯಾರನ್ನೇ ಆದರೂ ಸೆಳೆಯುವಂತಿದೆ. ಹಲವಾರು ಟಿಸಿಲುಗಳಿರೋ ಕಥೆ, ಅದನ್ನು ಎಲ್ಲಿಯೂ ಸಿಕ್ಕಾಗದಂತೆ ನಾಜೂಕಿನಿಂದ ಕೊಂಡೊಯ್ದಿರೋ ನಿರ್ದೇಶನದ ಕಸುಬುದಾರಿಕೆ, ಅದಕ್ಕೆ ಹೇಳಿ ಮಾಡಿಸಿದಂಥಾ ಪಾತ್ರವರ್ಗ ಮತ್ತು ತಾಂತ್ರಿಕ ವರ್ಗದ ಸಂಪೂರ್ಣ ಸಾಥ್‌ನೊಂದಿಗೆ ಕಪಟ ನಾಟಕ ಪಾತ್ರಧಾರಿ ಎಂಥವರನ್ನೂ ಬೆರಗಾಗಿಸುವಂತೆ ಮೂಡಿ ಬಂದಿದೆ. ಈ ಮೂಲಕ ಕ್ರಿಶ್ ಪ್ರಥಮ ಹೆಜ್ಜೆಯಲ್ಲಿಯೇ ತಾನೋರ್ವ ಸಮರ್ಥ ನಿರ್ದೇಶಕ ಎಂಬುದನ್ನು ಸಾಬೀತುಗೊಳಿಸಿದ್ದಾರೆ.


ನಾಯಕ ಕೃಷ್ಣ ಮಧ್ಯಮ ವರ್ಗದ ಕುಟುಂಬದ ಹುಡುಗ. ಯಾವ ಕೆಲಸವನ್ನೂ ಮಾಡಲಾಗದ, ಮಾಡಬೇಕೆಂದು ಹೋದರೂ ಏನಾದರೊಂದು ಅಡಚಣೆ ಎದುರಾಗೋ ನಕ್ಷತ್ರ ಆತನದ್ದು. ಆದರೆ ಇದೆಲ್ಲವನ್ನೂ ತನ್ನ ಲವಲವಿಕೆಯ ಭೋಳೇ ಮನಸ್ಥಿತಿಯೊಂದಿಗೇ ಎದುರುಗೊಂಡು ಬಿಂದಾಸಾಗಿ ಬದುಕೋ ಜಾಯಮಾನ ಆತನದ್ದು. ಆದರೆ ಕಡೆಗೊಂದು ದಿನ ಬದುಕಿಗಾಗಿ ಏನಾದರೊಂದು ಮಾಡಲೇ ಬೇಕಾದ ಅನಿವಾರ್ಯತೆ ಎದುರಾದಾಗ ಆತ ಆಟೋ ಓಡಿಸಿಕೊಂಡು ಜೀವನ ಮಾಡೋ ತೀರ್ಮಾನಕ್ಕೆ ಬರುತ್ತಾನೆ. ಯಾವಾಗ ಈತ ಆಟೋ ಖರೀದಿಸಿ ರಸ್ತೆಗಿಳಿಯುತ್ತಾನೋ ಆ ಕ್ಷಣದಿಂದಲೇ ಸಸ್ಪೆನ್ ಕಮ್ ಹಾರರ್ ಕಥನದ ಗಾಲಿಗಳು ಕದಲಲಾರಂಭಿಸುತ್ತವೆ. ಈ ಹಾದಿಯಲ್ಲಿ ಕಥೆಯ ದಿಕ್ಕು ಎಣಿಸಲಾಗದ ಜಗತ್ತಿನತ್ತ ಯಾನ ಆರಂಭಿಸುತ್ತೆ.


ಇಲ್ಲಿರೋದು ಸಸ್ಪೆನ್ಸ್ ಕಥನ. ಅದರಲ್ಲಿ ಹಾರರ್ ಅಂಶಗಳೂ ಇದ್ದಾವೆ. ಆಟೋ ಚಾಲಕನಾದ ಕೃಷ್ಣ ತಾನೇ ಸೂತ್ರಧಾರಿ ಎಂಬ ಮನಸ್ಥಿತಿಯೊಂದಿಗೆ ಯಾರದ್ದೋ ಸೂತ್ರಧಾರಿಕೆಯ ಪಾತ್ರಧಾರಿಯಾಗಿ ಬಿಟ್ಟಿರುತ್ತಾನೆ. ಈ ಎಲ್ಲದರ ಹಿಂದಿರೋ ಸೂತ್ರಧಾರಿ ಓರ್ವ ಮನುಷ್ಯನಾ, ವಿಧಿಯಾ ಮತ್ತು ಹಾರರ್ ಅನುಭವಗಳ ಹಿಂದೆ ನಿಜಕ್ಕೂ ದೆವ್ವ ಭೂತದ ಚೇಷ್ಠೆ ಇದೆಯಾ ಎಂಬ ಕುತೂಹಲ ನಿಮ್ಮಲ್ಲಿದ್ದರೆ ಅರೆಕ್ಷಣವೂ ತುದಿ ಸೀಟಿನಿಂದ ಆಚೀಚೆ ಕದಲಲು ಬಿಡದಂಥಾ ರೋಚಕ ಉತ್ತರ ನಿಮಗಾಗಿ ಕಾದಿದೆ. ಬಾಲು ನಾಗೇಂದ್ರ, ಸಂಗೀತಾ ಭಟ್ ಸೇರಿದಂತೆ ಇಡೀ ತಾರಾಗಣವೇ ಕಥೆಗೆ ಪೂರಕವಾಗಿ ತಂತಮ್ಮ ಪಾತ್ರಗಳಿಗೆ ಜೀವ ತುಂಬಿದೆ. ಛಾಯಾಗ್ರಹಣ, ಹಿನ್ನೆಲೆ ಸಂಗೀತ, ಹಾಡುಗಳೆಲ್ಲವೂ ಇದರ ಪ್ಲಸ್ ಪಾಯಿಂಟುಗಳಾಗಿ ದಾಖಲಾಗುತ್ತವೆ. ಒಟ್ಟಾರೆಯಾಗಿ ಇದು ಎಲ್ಲ ವರ್ಗದ ಪ್ರೇಕ್ಷಕರಲ್ಲಿಯೂ ಭಿನ್ನ ಅನುಭೂತಿ ಮೂಡಿಸುವ ವಿಶಿಷ್ಟ ಚಿತ್ರ.

ರೇಟಿಂಗ್: 3.5/5

[adning id="4492"]

LEAVE A REPLY

Please enter your comment!
Please enter your name here