ಮರಳಿ ತವರು ಸೇರಲಿದ್ದಾರಾ ಎಸ್.ಎಂ ಕೃಷ್ಣ?

[adning id="4492"]

ಡಿಕೆಶಿ-ಎಸ್‌ಎಂಕೆ ಭೇಟಿಯ ರಹಸ್ಯವೇನು?
ಎಸ್.ಎಂ ಕೃಷ್ಣ ಕರ್ನಾಟಕ ಕಂಡ ವರ್ಣರಂಜಿತ ವ್ಯಕ್ತಿತ್ವದ ರಾಜಕಾರಣಿ. ಕಾಂಗ್ರೆಸ್ ಪಕ್ಷದಲ್ಲಿದ್ದುಕೊಂಡು ಅವರು ಪಕ್ಷ ಸಂಘಟನೆ ಮಾಡಿ ರಾಜ್ಯದಲ್ಲಿ ಕಾಂಗ್ರೆಸ್ ಬೇರುಗಳನ್ನು ಗಟ್ಟಿಗೊಳಿಸಿದ್ದದ್ದು ಎಷ್ಟು ಸತ್ಯವೋ, ಕಾಂಗ್ರೆಸ್‌ನಿಂದ ಕೃಷ್ಣ ಭರಪೂರ ಅಧಿಕಾರ ಅನುಭವಿಸಿದ್ದು ಕೂಡಾ ಅಷ್ಟೇ ಸತ್ಯ. ರಾಜ್ಯ ಮಟ್ಟಿಗೆ ಕಾಂಗ್ರೆಸ್ ಐಕಾನಿನಂತಿದ್ದ ಅವರು ಮುಂದೆಂದೋ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿಕೊಳ್ಳುತ್ತಾರೆಂದು ಯಾರೆಂದರೆ ಯಾರೂ ಸಹ ಕಲ್ಪಿಸಿಕೊಂಡಿರಲೂ ಸಾಧ್ಯವಿಲ್ಲ. ಆದರೆ ರಾಜಕಾರಣದ ಪಗಡೆಯಾಟದಲ್ಲಿ ಎಲ್ಲವೂ ಸಾಧ್ಯ ಎಂಬುದಕ್ಕೆ ಉದಾಹರಣೆಯಂತೆ ಎಸ್‌ಎಂಕೆ ಬಿಜೆಪಿ ಸೇರಿಕೊಂಡಿದ್ದು, ಸಂಧ್ಯಾ ಕಾಲದಲ್ಲಿ ಅವರು ಮೂಲೆಗುಂಪಾಗಿದ್ದೆಲ್ಲವೂ ಈಗ ಇತಿಹಾಸ. ಒಂದು ಕಾಲಕ್ಕೆ ಸಮರ್ಥ ನಾಯಕರಾಗಿದ್ದ ಕೃಷ್ಣರನ್ನು ಬಿಜೆಪಿ ಯಾವುದೋ ಕೆಲಸಕ್ಕೆ ಬಾರದ ಹಳೇ ವಸ್ತುವನ್ನು ಶೋಕಿಗೆ ಖರೀದಿಸಿ ಶೋಕೇಸಲ್ಲಿಟ್ಟಂತೆ ಮಾಡಿತೇ ಹೊರತು ಮತ್ಯಾವ ಘನಂಧಾರಿ ಕೆಲಸವೂ ಆಗಲಿಲ್ಲ.


ಹೀಗೆ ರಾಜಕೀಯ ಪಗಡೆಯಾಟದಲ್ಲಿ ದಾಳವಾಗಿ, ಅಳಿಯ ಸಿದ್ಧಾರ್ಥನನ್ನು ಅಕ್ರಮಗಳ ಹುದುಲಿಂದ ಮೇಲಕ್ಕೆತ್ತಲೋಸ್ಕರವೇ ಬಿಜೆ ಸೇರಿದಂತಿದ್ದವರು ಎಸ್.ಎಂ ಕೃಷ್ಣ. ಇದರ ಹಿಂದೆ ಬಿಜೆಪಿಯ ಬ್ಲಾಕ್‌ಮೇಲ್ ತಂತ್ರಗಾರಿಕೆ ಕೆಲಸ ಮಾಡಿತ್ತೆಂಬುದು ಜಗತ್ತಿಗೇ ಗೊತ್ತಿರೋ ಸತ್ಯ. ಅಧಿಕಾರಕ್ಕೆ ಅಡಿಕ್ಟ್ ಆದಂತಿದ್ದ ಕೃಷ್ಣ ಎದ್ದು ನಡೆಯಲು ಊರುಗೋಲಿನ ಆಸರೆ ಬೇಕೆಂಬಂತಿದ್ದರೂ ಆಯಕಟ್ಟಿನ ಸ್ಥಾನಗಳತ್ತ ಕಣ್ಣಿಟ್ಟು ಸಾಧ್ಯವಾದರೆ ಮತ್ತೊಮ್ಮೆ ಕರ್ನಾಟಕದ ಮುಖ್ಯಮಂತ್ರಿ ಗಾದಿಯಲ್ಲಿ ಕುಕ್ಕರಿಸುವಂಥಾ ಕನಸು ಕಂಡಿದ್ದವರು. ಇಂಥಾ ಕೃಷ್ಣರನ್ನು ಸೈಡಿಗೆ ಸರಿಸಲು, ಗೌರವಯುತವಾಗಿಯೇ ವಿಶ್ರಾಂತಿ ನೀಡಲು ಕಾಂಗ್ರೆಸ್ ಹೈಕಮಾಂಡ್ ಪ್ರಯತ್ನಿಸುತ್ತಿರುವಾಗಲೇ ಅವರು ಬಿಜೆಪಿ ಸೇರಿಕೊಂಡಿದ್ದರು. ನಿಜವಾಗಿ ಹೇಳಬೇಕೆಂದರೆ ಕಾಂಗ್ರೆಸ್ ಒಂದು ಕಾಲದಲ್ಲಿ ಸಮರ್ಥ ನಾಯಕರಾಗಿದ್ದ ಮುತ್ಸದ್ಧಿಯನ್ನು ಕಳೆದುಕೊಂಡ ನೋವಿಗಿಂತಲೂ ಒಂದು ಸಮಸ್ಯೆ ಪರಿಹಾರವಾಯ್ತಲ್ಲಾ ಎಂಬಂಥಾ ನಿರಾಳ ಸ್ಥಿತಿಗೆ ಜಾರಿತ್ತು.


ಆದ ಕಾರಣದಿಂದಲೇ ಅವರನ್ನು ಮತ್ತೆ ಕಾಂಗ್ರೆಸ್‌ಗೆ ಕರೆತರುವ ಪ್ರಯತ್ನಗಳಾಗಿರಲಿಲ್ಲ. ಆದರೀಗ ಬಿಜೆಪಿಯ ಶೆಡ್ಡು ಸೇರಿಕೊಂಡಂತಿರೋ ಎಸ್‌ಎಂಕೆ ಮತ್ತೆ ಕಾಂಗ್ರೆಸ್‌ಗೆ ಮರಳಲಿದ್ದಾರಾ ಅಂತೊಂದು ಗುಮಾನಿ ಬಲವಾಗಿಯೇ ಕಾಡಲಾರಂಭಿಸಿದೆ. ಅದಕ್ಕೆ ಕಾರಣವಾಗಿರುವುದು ತಿಹಾರ್ ಜೈಲಿಂದ ಬೇಲ್ ಮೇಲೆ ಬಿಡುಗಡೆಯಾಗಿ ಬಂದಿರುವ ಡಿ.ಕೆ ಶಿವಕುಮಾರ್ ಅವರ ಅನಿರೀಕ್ಷಿತ ಭೇಟಿ. ಡಿಕೆಶಿ ಪಾಲಿಗೆ ಕೃಷ್ಣ ರಾಜಕೀಯ ಗುರು ಮತ್ತು ಮಾರ್ಗದರ್ಶಕ. ಅವರು ಬಿಜೆಪಿ ಸೇರಿಕೊಂಡಿದ್ದರೂ ಕೂಡಾ ಡಿಕೆಶಿ ಗುರುವಿನೊಂದಿಗಿನ ಸಂಬಂಧ ಕಡಿದುಕೊಂಡಿರಲಿಲ್ಲ. ಈವತ್ತಿಗೆ ಬಿಜೆಪಿ ನಾಯಕರು ದ್ವೇಷದಿಂದ ಇಡಿಯನ್ನು ಛೂಬಿಟ್ಟು ತಮ್ಮ ವಿರುದ್ಧ ಸೇಡು ತೀರಿಸಿಕೊಂಡಿದ್ದಾರೆಂಬ ಕುದಿತ ಡಿಕೆಶಿಯೊಳಗಿದೆ. ಆದರೂ ಕೂಡಾ ಅದೇ ಬಿಜೆಪಿ ಭಾಗವಾಗಿರೋ ಎಸ್.ಎಂ ಕೃಷ್ಣರ ಮನೆಗೇ ತೆರಳಿ ಹೂಗುಚ್ಛ ನೀಡಿ ಅವರೊಂದಿಗೆ ಒಂದಷ್ಟು ಕಾಲ ಮಾತುಕತೆ ನಡೆಸಿದ್ದಾರೆ. ಇದುವೇ ಕೃಷ್ಣ ಮತ್ತೆ ಕಾಂಗ್ರೆಸ್‌ನತ್ತ ಮುಖ ಮಾಡಲಿದ್ದಾರಾ ಎಂಬಂಥಾ ಸಂಶಯವನ್ನೂ ಹುಟ್ಟು ಹಾಕಿರೋದು ಸುಳ್ಳಲ್ಲ.


ಅಷ್ಟಕ್ಕೂ ಎಸ್. ಎಂ ಕೃಷ್ಣರಿಗೂ ಈಗ ಬಿಜೆಪಿ ನಾಯಕತ್ವದ ವಿರುದ್ಧ ಅಸಮಾಧಾನವಿದೆ. ಯಾವ ಅಳಿಯ ಸಿದ್ಧಾರ್ಥನ ಸಾಮ್ರಾಜ್ಯ ಉಳಿಸಲು ಬಿಜೆಪಿ ಸೇರಿದ್ದರೋ ಅದು ತನ್ನ ಅಳಿಯನನ್ನೇ ಉಳಿಸಿಕೊಳ್ಳಲು ಸಾಧ್ಯವಾಗದ ಸ್ಥಿತಿ ತಲುಪಿಸಿತಲ್ಲಾ ಎಂಬಂಥಾ ಕೊರಗೂ ಅವರಲ್ಲಿ ಇದ್ದಂತಿದೆ. ಆದರೆ ಅವರಿಗಿಂದು ವಯಸ್ಸಾಗಿದೆ ಎಂಬುದರಾಚೆಗೂ ಅವರಲ್ಲೊಂದು ನಾಯಕತ್ವದ ಛಾರ್ಮ್ ಇರೋದು ಸುಳ್ಳಲ್ಲ. ಮುಂಬರುವ ರಾಜಕೀಯ ಪಲ್ಲಟಗಳನ್ನು ತನ್ನಿಚ್ಛೆಗನುಸಾರವಾಗಿ ಪಳಗಿಸಿಕೊಂಡು ಮುಖ್ಯಮಂತ್ರಿಯಾಗೋ ಇರಾದೆ ಡಿಕೆಶಿಗಿದೆ. ಅದು ಅವರ ಬಹು ಕಾಲದ ಕನಸು. ರಾಜಕಾರಣದ ಧ್ಯೇಯವೂ ಹೌದು. ಇಂಥಾ ಹೊತ್ತಲ್ಲಿ ತನ್ನ ರಾಜಕೀಯ ಗುರುವನ್ನು ಮತ್ತೆ ತವರು ಸೇರಿಸಿ ಅವರ ಮಾರ್ಗದರ್ಶನದಲ್ಲಿ ಮುಂದುವರೆಯೋ ಇಂಗಿತ ಡಿಕೆಶಿಯವರದ್ದಾಗಿದೆಯಾ? ಈ ಭೇಟಿಯ ಸಂದರ್ಭದಲ್ಲಿ ಆ ಬಗೆಗಿನ ಮಾತುಕತೆಗಳು ನಡೆದಿವೆಯಾ ಎಂಬಂಥಾ ಕುತೂಹಲ ರಾಜಕೀಯ ಪಡಸಾಲೆಯಲ್ಲಿ ಮಡುಗಟ್ಟಿಕೊಂಡಿದೆ.


ಇದಕ್ಕೆಲ್ಲ ಉತ್ತರ ಸಿಗಲು ಹೆಚ್ಚು ಕಾಲವೇನೂ ಬೇಕಾಗಿಲ್ಲ. ಮತ್ತೆ ಕೃಷ್ಣ ಕಾಂಗ್ರೆಸ್ ಪಾಳೆಯ ಸೇರಿಕೊಂಡು ವಯೋ ಸಹಜ ಕಾಯಿಲೆ ಕಸಾಲೆಗಳನ್ನು ಮೀರಿಕೊಂಡು ರಾಜಕೀಯದಲ್ಲಿ ಮಿರುಗಿದರೂ ಅಚ್ಚರಿಯೇನಲ್ಲ. ಯಾಕೆಂದರೆ ಕೃಷ್ಣ ಓರ್ವ ಚಾಲಾಕಿ ರಾಜಕಾರಣಿ. ಪ್ರಧಾನಿ ಮೋದಿ ಹೇಗೆ ಜನರನ್ನು ಮರುಳು ಮಾಡಿ ಅಧಿಕಾರ ನಡೆಸೋ ಚಾಕಚಕ್ಯತೆ ಹೊಂದಿದ್ದಾರೋ, ಅದನ್ನು ಮುಖ್ಯಮಂತ್ರಿಯಾಗಿದ್ದ ಹಿಂಚುಮುಂಚಲ್ಲಿಯೇ ಎಸ್‌ಎಂಕೆ ಪ್ರದರ್ಶಿಸಿದ್ದರು. ಬೆಂಗಳೂರಿನ ನಾಗರಿಕರೆಲ್ಲರೂ ಹರುಕು ಫುಟ್ಪಾತುಗಳಲ್ಲಿ ನಿಂತು ಸಿಂಗಾಪುರದ ಕನಸು ಕಾಣುವಂತೆ ಮಾಡಿದ್ದ ಮಹಾ ಕೀರ್ತಿಯೂ ಕೃಷ್ಣರಿಗಲ್ಲದೇ ಬೇರ‍್ಯಾರಿಗೂ ಸಲ್ಲಲು ಸಾಧ್ಯವಿಲ್ಲ. ಹೈಟೆಕ್ ಕೃಷ್ಣ ಅಂತಲೇ ಖ್ಯಾತರಾಗಿದ್ದ ಅವರು ಬೆಂಗಳೂರನ್ನು ಸಿಂಗಾಪುರ ಮಾಡುತ್ತೇನೆಂಬ ಕನಸು ಬಿತ್ತುತ್ತಾ, ಅದನ್ನು ಕರ್ನಾಟಕವಿಡೀ ವ್ಯಾಪಿಸುವಂತೆ ನೋಡಿಕೊಂಡು ಅದರಿಂದಲೇ ಸದಾ ಸುದ್ದಿಯಲ್ಲಿರುತ್ತಿದ್ದ ಪಳಗಿದ ರಾಜಕಾರಣಿ. ಇಂಥಾ ಕೃಷ್ಣ ಶಿಷ್ಯನ ಸಾರಥ್ಯದಲ್ಲಿಯೇ ಕಾಂಗ್ರೆಸ್ ಸೇರಿಕೊಳ್ಳೋ ಎಲ್ಲ ಲಕ್ಷಣಗಳೂ ಗೋಚರಿಸುತ್ತಿವೆ!

[adning id="4492"]

LEAVE A REPLY

Please enter your comment!
Please enter your name here