ಹುಲಿರಾಯ ಬಾಲು ನಾಗೇಂದ್ರನ ಕಪಟ ನಾಟಕ!

ಹೀರೋ ಆಗೋದೆಂದರೆ ಬಿಟ್ಟಿ ಬಿಲ್ಡಪ್ಪಿನ ಪ್ರಭೆಯಲ್ಲಿ ಕೈಕಾಲು ಆಡಿಸಿ ಶಿಳ್ಳೆ, ಚಪ್ಪಾಳೆ ಗಿಟ್ಟಿಸಿಕೊಳ್ಳೋದೆಂದೇ ಬಹುತೇಕರು ಅಂದುಕೊಂಡಿದ್ದಾರೆ. ಮುಖದ ನೆರಿಗೆ ಸಡಿಲಿಸಲೂ ಬಾರದವರೂ ಕೂಡಾ ಇಂಥಾ ಬಿಲ್ಡಪ್ಪುಗಳ ಸಂತೆಯಲ್ಲಿ ಹೀರೋಗಳಾಗಿ ಮಿಂಚೋದಿದೆ. ಆದರೆ ಅದ್ಯಾವುದರ ಹಂಗೂ ಇಲ್ಲದೇ ಕೇವಲ ನಟನೆಯಿಂದ ಮಾತ್ರವೇ ಹೀರೋ ಅನ್ನಿಸಿಕೊಳ್ಳೋದು, ಪ್ರೇಕ್ಷಕರಲ್ಲಿ ಅಂಥಾದ್ದೊಂದು ಫೀಲ್ ಹುಟ್ಟಿಸೋದು ನಿಜಕ್ಕೂ ಸವಾಲಿನ ಕೆಲಸ. ತಮಿಳಿನಂಥಾ ಭಾಷೆಗಳಲ್ಲಿ ಈ ಸಾಲಿನಲ್ಲಿ ವಿಜಯ್ ಸೇತುಪತಿಯಂಥಾ ಅನೇಕ ನಟರು ಕಾಣಸಿಗುತ್ತಾರೆ. ಕನ್ನಡದಲ್ಲಿ ಮಾತ್ರ ಅಂಥವರ ಸಂಖ್ಯೆ ತೀರಾ ಕಡಿಮೆ. ಅಂಥಾ ವಿರಳರ ಸಾಲಿನಲ್ಲಿ ಮುಂಚೂಣಿಯಲ್ಲಿರುವವರು ಪ್ರತಿಭಾವಂತ ನಟ ಬಾಲು ನಾಗೇಂದ್ರ.


ಈ ಹಿಂದೆ ಹುಲಿರಾಯ ಚಿತ್ರದ ಮೂಲಕ ವಿಭಿನ್ನ ಪಾತ್ರದೊಂದಿಗೆ ನಾಯಕನಾಗಿ ಬಡ್ತಿ ಪಡೆದುಕೊಂಡಿದ್ದವರು ಬಾಲು ನಾಗೇಂದ್ರ. ಅವರ ನಟನೆಯ ಶಕ್ತಿ ಎಂಥಾದ್ದೆಂಬುದಕ್ಕೆ ಅದಕ್ಕಿಂತಲೂ ಬೇರೆ ಉದಾಹರಣೆ ಬೇಕಿಲ್ಲ. ಇಂಥಾ ಬಾಲು ಹುಲಿರಾಯ ನಂತರದಲ್ಲಿ ಯಾವ ಚಿತ್ರದಲ್ಲಿ ನಟಿಸುತ್ತಾರೆಂಬ ಬಗ್ಗೆ ಎಲ್ಲರಲ್ಲಿಯೂ ಒಂದು ಕುತೂಹಲ ಇದ್ದೇ ಇತ್ತು. ಅದಕ್ಕೆ ಉತ್ತರವಾಗಿ ಶುರುವಾಗಿದ್ದ ಕಪಟ ನಾಟಕ ಪಾತ್ರಧಾರಿ ಹಾಡು ಮತ್ತು ಟ್ರೇಲರ್ ಮೂಲಕ ಸದ್ದು ಮಾಡುತ್ತಾ ಈ ವಾರ ತೆರೆಗಾಣುತ್ತಿದೆ. ಶೀರ್ಷಿಕೆಯಲ್ಲಿಯೇ ಇದರಲ್ಲೊಂದು ವಿಶಿಷ್ಟ ಕಥೆ ಇದೆ ಎಂಬಂಥಾ ಸಂದೇಶ ರವಾನಿಸಿರೋ ಕಪಟ ನಾಟಕ ಪಾತ್ರಧಾರಿ ಪ್ರೇಕ್ಷಕರೆದುರು ಪ್ರತ್ಯಕ್ಷವಾಗಲು ಕ್ಷಣ ಗಣನೆ ಆರಂಭವಾಗಿದೆ.


ಈ ಹಿಂದೆ ದುನಿಯಾ ಸೂರಿ ನಿರ್ದೇಶನದ ಕಡ್ಡಿಪುಡಿ ಚಿತ್ರದಲ್ಲಿ ವಿಲನ್ ರೋಲಿನಲ್ಲಿ ಅಬ್ಬರಿಸಿದ್ದವರು ಬಾಲು ನಾಗೇಂದ್ರ. ಆ ನಂತರ ಅವರ ಪ್ರತಿಭೆಗೆ ಸಾಣೆ ಹಿಡಿದದ್ದು ಅರವಿಂದ ಕೌಶಿಕ್ ನಿರ್ದೇಶನದ ಹುಲಿರಾಯ. ಹುಲಿರಾಯ ಸಕ್ಸಸ್ ಆದ ನಂತರದಲ್ಲಿ ಅವರ ಮುಂದೆ ಅವಕಾಶಗಳ ಜಾತ್ರಯೇ ನೆರೆದಿತ್ತು. ಆದರೆ ರಂಗಭೂಮಿ ಹಿನ್ನೆಲೆಯಿಂದ ಬಂದಿರೋ ಅವರಿಗೆ ತಾನೆಂಥಾ ಕಥೆಯನ್ನು ಆಯ್ಕೆ ಮಾಡಿಕೊಳ್ಳಬೇಕೆಂಬ ಕ್ಲಾರಿಟಿ ಇದೆ. ಈ ಕಾರಣದಿಂದಲೇ ಕೊಂಚ ನಿಧಾನಿಸಿದ್ದ ಬಾಲು ಪಾಲಿಗೆ ತಾನೇ ತಾನಾಗಿ ಒಲಿದು ಬಂದಿದ್ದ ಅವಕಾಶ ಕಪಟ ನಾಟಕ ಪಾತ್ರಧಾರಿಯದ್ದು. ಈ ಚಿತ್ರದ ಕಥೆಯನ್ನೆಲ್ಲ ಸಿದ್ಧಪಡಿಸಿಕೊಂಡು ಇದರ ಪ್ರಧಾನ ಪಾತ್ರವನ್ನು ಯಾರು ನಿರ್ವಹಿಸುತ್ತಾರೆಂಬ ಬಗ್ಗೆ ನಿಕಷಕ್ಕೆ ಬಿದ್ದಿದ್ದ ನಿರ್ದೇಶಕ ಕ್ರಿಶ್‌ಗೆ ಅದಾಗ ತಾನೇ ಬಿಡುಗಡೆಯಾಗಿದ್ದ ಹುಲಿರಾಯ ಚಿತ್ರದ ಮೂಲಕ ಉತ್ತರ ಸಿಕ್ಕಿತ್ತು. ಅದನ್ನು ನೋಡಿದ ದಿನವೇ ತಮ್ಮ ಚಿತ್ರಕ್ಕೆ ಬಾಲು ನಾಗೇಂದ್ರ ಅವರೇ ಫಿಕ್ಸು ಅಂದುಕೊಂಡಿದ್ದರಂತೆ.


ಬಳಿಕ ಅವರ ಮುಂದೆ ಕಥೆ ಹೇಳಿದಾಗ ಖುಷಿಯಿಂದಲೇ ಒಪ್ಪಿಗೆ ನೀಡಿದ್ದರಂತೆ. ಆ ಬಳಿಕ ಈ ಪಾತ್ರವನ್ನವರು ನುಂಗಿಕೊಂಡು ನಟಿಸಿದ ರೀತಿ ಕಂಡು ಚಿತ್ರತಂಡವೆಲ್ಲ ಥ್ರಿಲ್ ಆಗಿದೆ. ಅವರಿಲ್ಲಿ ಯಾವ ಉದ್ಯೋಗಕ್ಕೂ ಫಿಕ್ಸಾಗದೆ, ಯಾವ ಘನಂಧಾರಿಕೆಲಸ ಮಾಡೋ ಇರಾದೆಯೂ ಇಲ್ಲದೆ ಅಂಡಲೆಯುತ್ತಾ ಕಡೆಗೂ ಆಟೋ ಡ್ರೈವರ್ ವೃತ್ತಿ ಆರಂಭಿಸೋ ಹುಡುಗನ ಪಾತ್ರ. ಅದಕ್ಕೆ ನಾನಾ ಶೇಡುಗಳಿವೆ. ನಿಖರವಾಗಿ ಹೇಳಬೇಕೆಂದರೆ ಅದು ಸವಾಲಿನಂಥಾ ಪಾತ್ರ. ಅದನ್ನು ಬಾಲು ಲೀಲಾಜಾಲವಾಗಿ ನಿರ್ವಹಿಸಿದ್ದಾರಂತೆ. ಈ ಸಿನಿಮಾ ತೆರೆಗಂಡ ನಂತರದಲ್ಲಿ ಬಾಲು ಅವರ ವೃತ್ತಿ ಬದುಕು ಮತ್ತೊಂದು ದಿಕ್ಕಿನತ್ತ ಹೊರಳಿಕೊಂಡು ಮತ್ತಷ್ಟು ಬ್ಯುಸಿಯಾಗೋದರಲ್ಲಿ ಸಂದೇಹವೇನಿಲ್ಲ. ಅದು ನಿಜವಾಗೋ ಘಳಿಗೆ ಹತ್ತಿರದಲ್ಲಿದೆ.

LEAVE A REPLY

Please enter your comment!
Please enter your name here