ನಟಿ ಸಂಗೀತಾ ಭಟ್ ಗಾರ್ಮೇಂಟ್ಸ್ ಕೆಲಸಕ್ಕೆ ಸೇರಿಕೊಂಡಿದ್ದೇಕೆ?

[adning id="4492"]

ರಡನೇ ಸಲ ಚಿತ್ರದ ಅಮೋಘ ನಟನೆಯಿಂದಲೇ ನಟಿಯಾಗಿ ನೆಲೆ ಕಂಡುಕೊಂಡಿರುವವರು ಸಂಗೀತಾ ಭಟ್. ಇತ್ತೀಚಿನ ಕೆಲ ವಿದ್ಯಮಾನಗಳಿಂದ, ವೈಯಕ್ತಿಕ ಬದುಕಿನ ಅನಿವಾರ್ಯತೆಗಳಿಂದ ಸದ್ಯಕ್ಕೆ ಚಿತ್ರರಂಗದಿಂದ ಒಂದಂತರ ಕಾಯ್ದುಕೊಂಡಂತಿದ್ದ ಸಂಗೀತಾ ಸದ್ಯ ವಿದೇಶದಲ್ಲಿ ನೆಲೆಸಿದ್ದಾರೆ. ಈ ಹೊತ್ತಿನಲ್ಲಿಯೇ ಅವರು ನಟಿಸಿರೋ ಮಹತ್ವಾಕಾಂಕ್ಷೆಯ ಚಿತ್ರವಾದ ಕಪಟನಾಟಕ ಪಾತ್ರಧಾರಿ ಬಿಡುಗಡೆಗೆ ರೆಡಿಯಾಗಿದೆ. ಈ ವಾರ ಅಂದರೆ, ಎಂಟನೇ ತಾರೀಕಿನಂದು ಬಿಡುಗಡೆಗೊಳ್ಳಲಿರೋ ಈ ಸಿನಿಮಾದಲ್ಲಿ ಸಂಗೀತಾ ಇದುವರೆಗೆ ಎಂದೂ ನಟಿಸದ ಪಾತ್ರಕ್ಕೆ ಜೀವ ತುಂಬಿದ್ದಾರೆ. ಅದರಲ್ಲಿ ಅವರು ನಟಿಸಿರುವ ರೀತಿಯೇ ಸಂಗೀತಾ ಪಾಲಿಗೆ ಹೊಸಾ ಅವಕಾಶಗಳ ಹೆಬ್ಬಾಗಿಲು ತೆರೆಸಲಿದೆ ಎಂಬ ಗಾಢ ನಂಬಿಕೆ ಚಿತ್ರತಂಡದಲ್ಲಿದೆ.


ನಿರ್ದೇಶಕ ಕ್ರಿಶ್ ವರ್ಷಾಂತರಗಳ ಕಾಲ ಈ ಚೆಂದದ ಕಥೆಗೆ ಶ್ರದ್ಧೆಯಿಂದಲೇ ಜೀವ ತುಂಬಿ ನಂತರ ಅದೇ ಆಸ್ಥೆಯಿಂದ ಪಾತ್ರವರ್ಗದ ಆಯ್ಕೆ ಕಾರ್ಯದಲ್ಲಿಯೂ ತೊಡಗಿಸಿಕೊಂಡಿದ್ದರು. ಆಯಾ ಪಾತ್ರಕ್ಕೆ ಇವರಲ್ಲದೆ ಬೇರ‍್ಯಾರೂ ಸೂಟ್ ಆಗಲು ಸಾಧ್ಯವೇ ಇಲ್ಲ ಅಂತ ಪ್ರೇಕ್ಷಕರಿಗೆ ಅನ್ನಿಸುವಂಥಾ ಕಲಾವಿದರನ್ನೇ ಆಯ್ಕೆ ಮಾಡಿಕೊಂಡಿದ್ದರು. ಅದರನ್ವಯ ನಾಯಕನಾಗಿ ಬಾಲು ನಾಗೇಂದ್ರ ನಿಕ್ಕಿಯಾದರೂ ಸಹ ನಾಯಕಿ ಪಾತ್ರಕ್ಕೆ ಯಾರನ್ನು ಆಯ್ಕೆ ಮಾಡೋದೆಂಬ ಪ್ರಶ್ನೆ ಅವರನ್ನು ಬಿಟ್ಟೂ ಬಿಡದಂತೆ ಕಾಡುತ್ತಿತ್ತಂತೆ. ಕಡೆಗೂ ಒಂದಷ್ಟು ಹುಡುಕಾಟದ ನಂತರದಲ್ಲಿ ಎರಡನೇ ಸಲ ಖ್ಯಾತಿಯ ಸಂಗೀತಾ ಭಟ್ ನಾಯಕಿಯಾಗಲು ಒಪ್ಪಿಗೆ ಸೂಚಿಸಿದ್ದರು.


ಇದು ಹೇಳಿಕೇಳಿ ಮಧ್ಯಮ ವರ್ಗದ ಸುತ್ತಲೇ ಸುತ್ತೋ ಕಥೆ. ಆಟೋ ಡ್ರೈವರನ ಸಖಿಯಾದ ನಾಯಕಿ ಗಾರ್ಮೆಂಟ್ಸ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುವಾಕೆ. ಇದು ನಟನೆಗೆ ಭಾರೀ ಅವಕಾಶ ಇರುವಂಥಾ ಪಾತ್ರ. ಆದ್ದರಿಂದಲೇ ಕಥೆ ಕೇಳಿದಾಗ ಆ ಪಾತ್ರ ಸಂಗೀತಾರನ್ನು ಗಾಢವಾಗಿ ತಟ್ಟಿತ್ತಂತೆ. ಆ ಖುಷಿಯಿಂದಲೇ ಒಪ್ಪಿಕೊಂಡು, ಹೆಜ್ಜೆ ಹೆಜ್ಜೆಗೂ ಚಿತ್ರತಂಡಕ್ಕೆ ಸಾಥ್ ನೀಡುತ್ತಾ ಆ ಪಾತ್ರಕ್ಕವರು ಜೀವ ತುಂಬಿರೋ ರೀತಿಯ ಬಗ್ಗೆ ಚಿತ್ರತಂಡದಲ್ಲೊಂದು ಮೆಚ್ಚುಗೆ ಇದ್ದೇ ಇದೆ. ಸಂಗೀತಾ ಭಟ್ ಆ ಪಾತ್ರದಲ್ಲಿ ನಟಿಸಿಲ್ಲ, ಬದಲಾಗಿ ಪಾತ್ರವೇ ಅವರಾಗಿದ್ದಾರೆಂಬಷ್ಟು ತನ್ಮಯತೆಯಿಂದ, ಸಹಜವಾಗಿ ನಟಿಸಿದ್ದಾರಂತೆ. ಕಥೆಯಲ್ಲಿಯೂ ಮಹತ್ವ ಹೊಂದಿರೋ ಈ ಪಾತ್ರ ಕಪಟ ನಾಟಕ ಪಾತ್ರಧಾರಿಯ ಪ್ರಧಾನ ಆಕರ್ಷಣೆಗಳಲ್ಲೊಂದಾಗಿ ಮೂಡಿ ಬಂದಿದೆಯಂತೆ.


ಕ್ರಿಶ್ ನಿರ್ದೇಶನದಲ್ಲಿ ಮೂಡಿ ಬಂದಿರೋ ಕಪಟ ನಾಟಕ ಪಾತ್ರಧಾರಿಯನ್ನು ಹತ್ತು ಮಂದಿ ಗೆಳೆಯರು ಸೇರಿಕೊಂಡು ನಿರ್ಮಾಣ ಮಾಡಿದ್ದಾರೆ. ಹೊಸಾ ತಂಡವೆಂದ ಮೇಲೆ ಅಲ್ಲೊಂದಷ್ಟು ಗೊಂದಲಗಳಿರೋದು ಸಾಮಾನ್ಯ ಸಂಗತಿ. ಆದರೆ ಸಂಗೀತಾ ಭಟ್ ಕೇವಲ ತನ್ನ ಪಾತ್ರ, ನಟನೆ ಮಾತ್ರವಲ್ಲದೇ ಇಡೀ ಚಿತ್ರತಂಡಕ್ಕೆ ಹುಮ್ಮಸ್ಸು, ಮಾರ್ಗದರ್ಶನ ನೀಡೋ ಮೂಲಕವೂ ಸಹಕಾರ ನೀಡಿದ್ದರಂತೆ. ಈವತ್ತಿಗೆ ಅವರು ವಿದೇಶದಲ್ಲಿ ನೆಲೆಸಿದ್ದಾರೆ. ಅಲ್ಲಿಂದಲೇ ಅವರು ಸಾಮಾಜಿಕ ಜಾಲತಾಣಗಳ ಮೂಲಕ ಚಿತ್ರದ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಒಟ್ಟಾರೆಯಾಗಿ ಕಪಟ ನಾಟಕ ಪಾತ್ರಧಾರಿ ಚಿತ್ರದ ಪಾತ್ರ ಸಂಗೀತಾ ಭಟ್ ಅವರನ್ನು ಮತ್ತೊಂದು ತೆರನಾಗಿ ಮಿಂಚುವಂತೆ ಮಾಡಲಿದೆ ಎಂಬ ನಂಬಿಕೆ ಚಿತ್ರತಂಡದ್ದು. ಈ ಮೂಲಕವೇ ಅವರು ಮತ್ತೆ ನಾಯಕಿಯಾಗಿ ಸಕ್ರಿಯರಾಗಬಹುದೆಂಬ ನಿರೀಕ್ಷೆಗಳೂ ಇವೆ.

[adning id="4492"]

LEAVE A REPLY

Please enter your comment!
Please enter your name here