ಶರದೃತುವಿನ ಕೊರೆವ ಚಳಿಯಲ್ಲಿ ಉಗುರು ಬೆಚ್ಚಗಿನ ನೆನಪು ಬಚ್ಚಿಟ್ಟುಕೊಂಡು…

[adning id="4492"]

ಯಾವ ಋತುಮಾನದಲ್ಲಿಯೂ ಸಿಗದ ಬೆರಗುಗಳನ್ನು ಕಣ್ಣುಗಳಲ್ಲೇ ಬಚ್ಚಿಟ್ಟುಕೊಂಡವಳೇ… ನೀನು ಶರದೃತುವಿನ ಹೊಸ್ತಿಲಲ್ಲಿಯೇ ನನಗೆದುರಾದದ್ದು ಈ ಜೀವಿತದ ಪರ್ಮನೆಂಟು ಅಚ್ಚರಿ. ಬಹುಶಃ ಅದರಿಂದಲೇ ಇರಬೇಕು; ನಿನ್ನ ನೆನಪುಗಳೆಲ್ಲ ಈ ಚಳಿಗಾಲದ ಹಿಮ್ಮೇಳದಲ್ಲಿ ಅಗ್ಗಿಷ್ಠಿಕೆಯಂತೆ ನನ್ನನ್ನಾವರಿಸಿಕೊಳ್ಳುತ್ತವೆ. ದೀಪಾವಳಿಯ ಆಜೂಬಾಜಲ್ಲಿಯೇ ದೇವತೆಯಂತೆ ಎದುರಾದ ನೀನು ನನ್ನನ್ನು ಕಾಡಿಸಿದ, ಕಾಡಿಸುತ್ತಿರುವ ಪರಿಯನ್ನು ವಿವರಿಸಲು ಕೂತರೆ ಇದು ಪತ್ರವಾಗುವುದಿಲ್ಲ, ಕಾದಂಬರಿಯಾದೀತು. ನೀನು ಈ ಬದುಕಿನ ಖಾಯಂ ಶರದೃತು. ನಿತ್ಯವೂ ಕಾಡಿ ಕಂಗಾಲು ಮಾಡುತ್ತಲೇ ಜೀವಂತವಾಗಿರಿಸೋ ಮಾಯೆ. ಜಗತ್ತಿನ ಪಾಲಿಗೊಂದು ವಿಷಯವೇ ಅಲ್ಲದ ಅಚ್ಚರಿಗಳತ್ತಲೂ ಮಗುವಿನಂತೆ ಕಣ್ಣರಳಿಸಿ ನೋಡುವಂಥಾ ನವಿರು ಭಾವದ ಬೀಜವನ್ನು ಎದೆಗೆ ಬಿತ್ತಿದವಳೂ ನೀನೇ…


ಇದೇ ಶರದೃತುವಿನ ಒಂದು ಮಧುರ ಮುಂಜಾವದಲ್ಲಿ ನಿನ್ನ ಮನೆಯ ಬಾಲ್ಕನಿಯಿಂದ ಮೆಟ್ಟಿಲಿಳಿದು ಬರುವಾಗ ನೀ ನನ್ನೆಡೆಗೊಂದು ಕಿರುನೋಟ ಸೂಸಿದೆಯಲ್ಲಾ, ಆ ಕ್ಷಣದಿಂದ ಮನಸ್ಸು ಕಳೆದು ಹೋಗಿದೆ. ಮಲೆನಾಡಿನ ಹಳ್ಳಿಮೂಲೆಯೊಂದರಿಂದ ಬಂದು ಬೆಂಗಳೂರಿನ ಬಿಡಾರ ಸೇರಿಕೊಂಡವನು ನಾನು. ಮೊದಲ ಬಾರಿ ಈ ನೆಲಕ್ಕೆ ಕಾಲಿರಿಸಿ ಮೆಜೆಸ್ಟಿಕ್ಕಿನ ಪ್ಲೈಓವರಿನ ಮೇಲೆ ನಿಂತು ದಿಟ್ಟಿಸಿದಾಗ ಬೆಂಗಳೂರೆಂಬುದು ಗಗನಚುಂಬಿ ಕಟ್ಟಡಗಳ ಸುಂದರ ಗೋರಿಯಂತೆ ಕಾಣಿಸಿ ಕಂಗಾಲಾಗಿದ್ದೆ. ಇಲ್ಲಿ ಬದುಕೋದು ಹೇಗೆ ಅಂತ ತಲ್ಲಣಿಸಿದ್ದೆ. ಆದರೆ ಬೆಂಗಳೂರು ರಮಣೀಯವಾಗಿ ಕಾಣಿಸಿದ್ದು, ಸೋಲಿನ ಹೊಡೆತಕ್ಕೆ ಸಿಕ್ಕು ಕಂಗಾಲಾಗಿದ್ದ ಮನಸ್ಸಿಗೆ ಬದುಕುವುದಕ್ಕೂ ಒಂದು ಕಾರಣವಿದೆ ಅನ್ನಿಸಿದ್ದು ನಿನ್ನ ಮನೆಯೆದುರಿನ ಫುಟ್ಪಾತು ಸೇರಿಕೊಂಡಾಗಲೆ. ಅದರೆದುರಿನ ಬಾಲ್ಕನಿಯಲ್ಲೇ ನೀನಿದ್ದೆ; ಬೆಳದಿಂಗಳಂಥಾ ನಗುವಿನ ಒಡತಿ!


ಆ ನಂತರದ್ದೆಲ್ಲ ನಿನಗೇ ಗೊತ್ತಿದೆ ಅಂದುಕೊಳ್ಳುತ್ತೇನೆ. ಅಲ್ಲಿಂದಾಚೆಗೆ ನನ್ನ ಬದುಕಿನ ಟೈಂ ಟೇಬಲ್ಲೇ ಬದಲಾಗಿ ಹೋಗಿತ್ತು. ದಿನಕ್ಕೆರಡು ಬಾರಿ ನಿನ್ನ ಮುಖ ನೋಡದಿದ್ದರೆ, ನಿನ್ನ ಕಣ್ಣ ಕೀಟಲೆ, ತುಟಿಯಂಚಿನ ಕಿರುನಗುವನ್ನು ಎದೆತುಂಬಿಕೊಳ್ಳದಿದ್ದರೆ ಜೀವ ನಿತ್ರಾಣ. ‘ದುಡ್ಡು ಕಣೋ ದುಡ್ಡು. ಅದೊಂದಿದ್ರೆ ಎಂಥಾ ಹುಡುಗೀರೂ ಬೀಳ್ತಾರೆ’ ಅಂತ ಗೆಳೆಯರೊಂದಿಷ್ಟು ಮಂದಿ ಆಡಿಕೊಳ್ಳುತ್ತಿದ್ದುದನ್ನು ಕೇಳಿದ್ದೆ. ಬೆಂಗಳೂರಿಗೆ ಬಂದ ಮೇಲಂತೂ ಪಡ್ಡೆ ಹುಡುಗರ ನಡುವೆ ಅದೇ ಫಿಲಾಸಫಿ ಭಾಷೆ ಬದಲಿಸಿಕೊಂಡು ಹರಿದಾಡುತ್ತಿರುವುದನ್ನು ಗಮನಿಸಿದ್ದೆ. ಅಂಥಾದ್ದರಲ್ಲಿ  ನನ್ನಲ್ಲಿ ಅದ್ಯಾವ ಸೆಳೆತವಿದ್ದರಬಹುದು ನಿಂಗೆ. ಆ ಮುಗುಳ್ನಗೆ, ಕಣ್ಣ ಸನ್ನೆಗಳಲ್ಲಿ ಪ್ರೀತಿ ಇರಬಹುದಾ ಅಥವಾ ಅದೆಲ್ಲ ಟೈಂಪಾಸಿನ ಸುಳ್ಳೇ ಕನವರಿಕೆಗಳಾ… ಹೀಗೆ ನಿನ್ನನ್ನು ಕಂಡ ಮೊದಲ ದಿನದಿಂದಲೇ ಎದೆಯೊಳಗೆ ಪ್ರಶ್ನೆಗಳ ಗುದ್ದಾಟ.


ಬಂಧವೊಂದನ್ನು ದುಡ್ಡಿನ ಮೂಲಕವೇ, ಐಶ್ವರ್ಯ ಅಂತಸ್ತುಗಳ ಮೂಲಕವೇ ಅಳೆಯೋದಾದರೆ ನನಗೂ ನಿನಗೂ ಯಾವ ಕೋನದಿಂದಲೂ ಮ್ಯಾಚ್ ಆಗುವುದಿಲ್ಲ. ನೀನು ಬಡತನದ ಬಿಸಿ ಕಿರುಬೆರಳಿಗೂ ಸೋಕದಂತೆ ಬೆಳೆದವಳು. ನನಗೋ, ಬಡತನ ಬೆನ್ನಿಗೆ ಹುಟ್ಟಿದ ಬಂಧು. ಆದರೆ ಹುಡುಗಿ, ಬಡತನ-ಶ್ರೀಮಂತಿಕೆಗಳ ತಕ್ಕಡಿಗೆ ಪ್ರೀತಿಸೋ ಮನಸ್ಸಿನಲ್ಲಿ ಜಾಗವಿಲ್ಲ. ನೀನು ಮೊದಲ ಬಾರಿ ಕಣ್ಣೆದುರು ಬಂದು ನಗು ಸೂಸಿದಾಗ ನನಗೆ ನಿನ್ನ ಹಿನ್ನೆಲೆಯೂ ಗೊತ್ತಿರಲಿಲ್ಲ. ಆದರೆ ಆ ಕ್ಷಣವೇ ಮನಸ್ಸನ್ನು ನಿಂಗ್‌ನಿಂಗೇ ಕೊಟ್ಟುಬಿಟ್ಟಿದ್ದೆ. ನಿನ್ನದೊಂದು ಆಪ್ಯಾಯ ನೋಟದೆದುರು ಬಡತನದ ಬೇಗೆಯೆಲ್ಲಾ ಕರಗಿ ಹೋಗುತ್ತಿತ್ತು. ನಿನ್ನ ಮುಗುಳ್ನಗೆಯ ಬೆಳದಿಂಗಳಲ್ಲಿ  ಸಂಕಟಗಳೆಲ್ಲಾ ಕರಗಿ ಮನಸ್ಸು ಹಗುರಾದಂತೆನಿಸುತ್ತಿತ್ತು. ಅಷ್ಟು ಹೊತ್ತಿಗೆ ಎಷ್ಟು ತಿಂಗಳು ಸರಿದು ಹೋಗಿದ್ದವೋ ಗೊತ್ತಿಲ್ಲ. ಮನದ ತುಂಬಾ ನೀನೇ ಆವರಿಸಿಕೊಂಡಿದ್ದೆ. ನೀನು ನನ್ನವಳೇ ಆಗಿ ಹೋಗಿದ್ದೆ.


ಬದುಕು ಎಂತೆಂಥಾ ಸಂದಿಗ್ಧಗಳನ್ನು ಸೃಷ್ಟಿಸುತ್ತದೆಯೆಂದರೆ, ಇನ್ನೇನು ಏನಾದರಾಗಲಿ ಪ್ರಪೋಸ್ ಮಾಡೇ ಬಿಡಬೇಕೆಂಬಷ್ಟರಲ್ಲಿ ಅದ್ಯಾವುದೋ ವಂಚನೆಯ ಎಳೆ ಇಡೀ ಬದುಕನ್ನೇ ಎತ್ತಿ ವಗಾಯಿಸಿತ್ತು. ನಿನಗೊಂದು ಮಾತು ಹೇಳಲೂ ಅವಕಾಶವಿಲ್ಲದಂತೆ ನಿನ್ನ ಏರಿಯಾದಿಂದ ಮತ್ತೆಲ್ಲಿಗೋ ಹೋಗಲೇಬೇಕಾಯ್ತು.  ಆ ಕ್ಷಣ ಮಹಾಮೋಸವೊಂದು ಬದುಕನ್ನೇ ಬಳಿದುಕೊಂಡು ಹೋದಂತಾ ಸ್ಥಿತಿ. ಸಾವಿರ ಕನಸುಗಳ ಕಳೇಬರದ ನಡುವೆ ಪರದೇಸಿಯಂತೆ ನಾ ನಿಂತಿದ್ದೆ. ನನ್ನ ಬದುಕಿನ ಜೀವಂತ ಕನಸಿನಂತಿದ್ದ ನಿನಗೊಂದು ಮಾತೂ ಹೇಳದೆ ಹೊರಟು ಬಂದೆ. ಎದೆಯೊಳಗೆ ದುಃಖದ ಸಾಗರ. ಅದು ಬದುಕು ಹಾಳಾಗಿದ್ದಕ್ಕೋ, ನಿನ್ನನ್ನು ಅಗಲಿರಬೇಕಾದುದಕ್ಕೋ ಗೊತ್ತಿಲ್ಲ. ಆದರೆ ಆ ದಿನ ಕಡೆಯ ಬಾರಿ ನೀ ನನ್ನತ್ತ ನೋಡಿದೆಯಲ್ಲಾ, ಆ ನೋಟ ಇನ್ನೂ ಎದೆಯಲ್ಲಿ ಹಸಿರಾಗಿದೆ ಕಣೇ ಹುಡುಗಿ.


ಈಗ ಜೀವನವೆಂಬುದು ಗುರಿಯ ನೇರಕ್ಕೆ ಬಂದು ನಿಂತಿದೆ. ಕಣ್ಣೆದುರಿಗೆ ನೀನಿಲ್ಲವೆಂಬ ಕೊರಗನ್ನು ಹೊರತು ಪಡಿಸಿದರೆ ಎಲ್ಲವೂ ಚೆಂದಗಿದೆ. ಆದರೆ ಜೀವವೇ, ನೀ ಸಿಗದೇ ಹೋದರೆ ಎಲ್ಲ ಚೆಂದಗಿದ್ದರೂ ನಾ ನೆಮ್ಮದಿಯಿಂದಿರಲು ಸಾಧ್ಯವಿಲ್ಲ. ಸರಿಯಾಗಿ ನೆಲೆ ಕಂಡುಕೊಂಡ ದಿನವೇ ನಿನ್ನೆದುರು ಪ್ರೀತಿ ಹೇಳಬೇಕಂತ ಆಗಾಗ ಅನ್ನಿಸುತ್ತಿದ್ದುದುಂಟು. ಆದುದರಿಂದಲೇ ಈ ಎರಡು ವರ್ಷಗಳಲ್ಲಿ ಯಾವತ್ತೂ ನಿನ್ನ ಮುಂದೆ ಕಾಣಿಸಿಕೊಳ್ಳದೆ ಅವುಡುಗಚ್ಚಿಕೊಂಡು ಬದುಕುತ್ತಿದ್ದೇನೆ. ಇದೀಗ ತಾನೇ ತಾನಾಗಿ ಆ ಕಾಲ ಕೂಡಿ ಬಂದಿದೆ. ಶರದೃತುವಿನ ಕೊರೆವ ಚಳಿಯಲ್ಲಿ ಉಗುರು ಬೆಚ್ಚಗಿನ ನೆನಪುಗಳನ್ನು ಎದೆಯಲ್ಲಿ ಬಚ್ಚಿಟ್ಟುಕೊಂಡು ನಿನಗಾಗಿಯೇ ಕಾಯುತ್ತಿದ್ದೇನೆ.
ಇಂಥಾ ಧ್ಯಾನದಲ್ಲಿಗೇ ಬರೋಬ್ಬರಿ ಎರಡು ಚಳಿಗಾಲ ಅನ್ಯಾಯವಾಗಿ ಸರಿದು, ಸವೆದು ಹೋಗಿವೆ. ಇದು ಮೂರನೆಯದ್ದು. ಈ ಶರದೃತುವಿನಲ್ಲಿ ಮತ್ತೆ ಅಚ್ಚರಿಯಂತೆ ನೀನೆದುರಾಗುತ್ತಿಯೆಂಬೋ ನಿರೀಕ್ಷೆಯೊಂದಿಗೆ…
– ನಿನ್ನವನು

[adning id="4492"]

LEAVE A REPLY

Please enter your comment!
Please enter your name here